ಚಂದ ಕಾಣುತ್ತೆ ಅಂತಾ ಪುಟಾಣಿ ಮಕ್ಕಳಿಗೆ ನೇಲ್ ಪಾಲಿಶ್ ಹಚ್ಬೇಡಿ

By Suvarna NewsFirst Published Nov 15, 2022, 5:29 PM IST
Highlights

ಯಾವುದೇ ಫಂಕ್ಷನ್ ಆದ್ರೂ ಉಗುರಿಗೆ ಒಂದಿಷ್ಟು ಆರೈಕೆ ಆಗುತ್ತೆ. ಉಗುರಿಗೆ ಸುಂದರ ಬಣ್ಣ ಬಳಿದುಕೊಳ್ತಾರೆ ಮಹಿಳೆಯರು. ತಾವಲ್ಲದೆ ತಮ್ಮ ಮಕ್ಕಳ ಕೈಗೂ ನೇಲ್ ಪಾಲಿಶ್ ಹಚ್ಚುತ್ತಾರೆ. ಇದು ಮಕ್ಕಳ ಆರೋಗ್ಯದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತೆ ಅನ್ನೋದನ್ನು ಮಾತ್ರ ಗಮನಿಸೋದಿಲ್ಲ. 
 

ನೇಲ್ ಪಾಲಿಶ್, ಕೈಗಳ ಸೌಂದರ್ಯ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆ ಕೂಡ ಕೈ ಮತ್ತು ಕಾಲಿನ ಉಗುರಿಗೆ ನೇಲ್ ಪಾಲಿಶ್ ಹಚ್ಚಿಕೊಳ್ತಾಳೆ. ಸಣ್ಣ ಮಕ್ಕಳ ಕೈ ಬೆರಳು ಚಿಕ್ಕದಾಗಿರುವ ಜೊತೆಗೆ ಸುಂದರವಾಗಿರುತ್ತದೆ. ಪುಟಾಣಿ ಕೈ ಬೆರಳಿಗೆ ನೇಲ್ ಪಾಲಿಶ್ ಹಚ್ಚಿದ್ರೆ ಸೌಂದರ್ಯ ಇಮ್ಮಡಿಯಾಗೋದು ನಿಜ. ಮಕ್ಕಳು ನೇಲ್ ಪಾಲಿಶ್ ಗೆ ಆಕರ್ಷಿತರಾಗ್ತಾರೆ. ಬಣ್ಣ ನೋಡಿದ್ರೆ ಓಡೋಡಿ ಬರ್ತಾರೆ. ಆದ್ರೆ ಅಂಬೆಗಾಲಿಡುವ ಮಕ್ಕಳಿಗೆ ನೇಲ್ ಪಾಲಿಶ್ ಹಚ್ಚೋದು ಒಳ್ಳೆಯದಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾರುಕಟ್ಟೆ (Market)ಯಲ್ಲಿ ನಾನಾ ರೀತಿಯ ನೇಲ್ ಪಾಲಿಶ್ (Nail Polish ) ಲಭ್ಯವಿದೆ. ಕಡಿಮೆ ಬೆಲೆಯ ನೇಲ್ ಪಾಲಿಶ್ ನಿಂದ ಹಿಡಿದು ದುಬಾರಿ ಬೆಲೆಯ ನೇಲ್ ಪಾಲಿಶ್ ಸಿಗುತ್ತದೆ. ಬಣ್ಣ (Color) ನೋಡಿ ನೇಲ್ ಪಾಲಿಶ್ ಖರೀದಿ ಮಾಡೋರು ಹೆಚ್ಚು. ಮತ್ತೆ ಕೆಲವರು ಅಗ್ಗದ ನೇಲ್ ಪಾಲಿಶ್ ಮನೆಗೆ ತರ್ತಾರೆ. ಅದನ್ನೇ ಮಕ್ಕಳಿಗೆ ಹಚ್ಚುತ್ತಾರೆ. ನೇಲ್ ಪಾಲಿಶ್ ನಲ್ಲಿರುವ ರಾಸಾಯನಿಕಗಳು ಮಗುವಿಗೆ ಹಾನಿ ಮಾಡುತ್ತದೆ. ಮಕ್ಕಳ ಬೆರಳಿಗೆ ನೇಲ್ ಪಾಲಿಶ್ ಹಚ್ಚುವ ಮೊದಲು ಕೆಲ ಸಂಗತಿ ತಿಳಿದಿರಿ. 

ನೇಲ್ ಪಾಲಿಶ್ ಹಾನಿಕಾರಕವೇ? : ಈ ಪ್ರಶ್ನೆಗೆ ಉತ್ತರ ನೇಲ್ ಪಾಲಿಶ್ ನಲ್ಲಿ ಯಾವೆಲ್ಲ ರಾಸಾಯನಿಕ ಬಳಸಲಾಗಿದೆ ಎಂಬುದನ್ನು ಅವಲಂಭಿಸಿದೆ. ಸ್ಟ್ಯಾಂಡರ್ಡ್ ನೇಲ್ ಪಾಲಿಷ್ ವಿಷಕಾರಿಯಾಗಿರುತ್ತದೆ. ಇದು ನರಮಂಡಲದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಇದಲ್ಲದೆ ಇನ್ನೂ ವಿವಿಧ ಸಮಸ್ಯೆಗಳನ್ನು ಉಂಟುಮಾಡುವ ಟೊಲುಯೆನ್‌ನಂತಹ ಪದಾರ್ಥಗಳನ್ನು  ಇದು ಹೊಂದಿರುತ್ತದೆ. ದೇಹಕ್ಕೆ ಹಾನಿ ಮಾಡುವ ಪ್ಲಾಸ್ಟಿಸೈಜರ್‌ಗಳು, ಹೈನಿಂಗ್ ಎಜೆಂಟ್ ಇದ್ರಲ್ಲಿರುತ್ತದೆ.

ಯಾವ ವಯಸ್ಸಿನಲ್ಲಿ ಮಗುವಿಗೆ ನೇಲ್ ಪಾಲಿಶ್ ಹಚ್ಚಬೇಕು ? : ಮಕ್ಕಳು ಕಂಡದ್ದೆಲ್ಲ ಬಾಯಿಗೆ ಹಾಕ್ತಾರೆ. ಕೈ ಬೆರಳುಗಳನ್ನು ಕೂಡ ಆಗಾಗ ಬಾಯಿಗೆ ಹಾಕ್ತಿರುತ್ತಾರೆ. ಇದ್ರಿಂದ ನೇಲ್ ಪಾಲಿಶ್ ಕೆಮಿಕಲ್ ದೇಹ ಸೇರುತ್ತದೆ. ಹಾಗಾಗಿ ಮಕ್ಕಳು ಕೈ ಬೆರಳುಗಳನ್ನು ಬಾಯಿಗೆ ಹಾಕುವ ಅಭ್ಯಾಸ ಬಿಟ್ಟ ನಂತ್ರ ನೇಲ್ ಪಾಲಿಶ್ ಹಚ್ಚುವುದು ಒಳ್ಳೆಯದು. ನಾಲ್ಕು ವರ್ಷ ಕೆಳಗಿನ ಮಕ್ಕಳಿಗೆ ನೇಲ್ ಪಾಲಿಶ್ ಹಚ್ಚಬಾರದು. ಹಾಗೆಯೇ ಎಂದೂ ಬಲಗೈನ ಬೆರಳಿಗೆ ನೇಲ್ ಪಾಲಿಶ್ ಹಾಕಬಾರದು.   

ಮೇಕಪ್ ಮಾಡ್ತೀರಾ ಸರಿ, ಮೇಕಪ್ ಬ್ರಷ್ ಬಗ್ಗೆ ತಿಳ್ಕೊಂಡಿದ್ದೀರಾ?

ನೇಲ್ ಪಾಲಿಶ್ ಹಚ್ಚಿಕೊಳ್ಳುವಾಗ ಇದನ್ನು ಗಮನಿಸಿ : ನೀವು ನೇಲ್ ಪಾಲಿಶ್ ಹಚ್ಚಿಕೊಳ್ತಿದ್ದರೆ ಮಕ್ಕಳ ಬಳಿ ಹಚ್ಚಿಕೊಳ್ಳಬೇಡಿ. ಅದ್ರ ವಾಸನೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಬಟ್ಟೆಯನ್ನು ಕೂಡ ನೇಲ್ ಪಾಲಿಶ್ ಗೆ ತಾಗಿಸಬೇಡಿ. ಮಕ್ಕಳನ್ನು ದೂರವಿಟ್ಟು ನೀವು ನೇಲ್ ಪಾಲಿಶ್ ಹಚ್ಚಿಕೊಳ್ಳಿ.  

ಆಕರ್ಷಕವಲ್ಲದ ಬಣ್ಣ ಆಯ್ಕೆ ಮಾಡಿ : ಕಣ್ಣಿಗೆ ಗಾಢ ಬಣ್ಣ ಬಿದ್ರೆ ಮಕ್ಕಳು ಆಕರ್ಷಿತರಾಗ್ತಾರೆ. ಕೈ ಬೆರಳನ್ನು ಬಾಯಿಗೆ ಹಾಕಿಕೊಳ್ತಾರೆ. ಅದೇ ನೀವು ಪಾರದರ್ಶಕ ಅಥವಾ ತಿಳಿ ಬಣ್ಣವನ್ನು ಮಕ್ಕಳಿಗೆ ಹಚ್ಚಿದ್ರೆ ಅವರು ಅದ್ರ ಬಗ್ಗೆ ಹೆಚ್ಚು ಉತ್ಸಾಹ ತೋರಿಸೋದಿಲ್ಲ.  

ಮಕ್ಕಳಿಂದ ದೂರವಿರಲಿ ನೇಲ್ ಪಾಲಿಶ್ :  ನೇಲ್ ಪಾಲಿಶ್ ನೋಡ್ತಿದ್ದಂತೆ ಮಕ್ಕಳು ಅದ್ರ ಬಳಿ ಬರ್ತಾರೆ. ಬಾಟಲಿಯನ್ನು ಕೈನಲ್ಲಿ ಹಿಡಿದು ಆಟವಾಡ್ತಾ ಅದನ್ನು ಒಡೆಯುವ ಸಾಧ್ಯತೆಯಿರುತ್ತದೆ. ಅದನ್ನು ಬಾಯಿಗೆ ಹಾಕುವ ಅಪಾಯವೂ ಇದೆ. ಹಾಗಾಗಿ ಯಾವಾಗ್ಲೂ ನೇಲ್ ಪಾಲಿಶ್ ಮಕ್ಕಳಿಂದ ದೂರವಿರಲಿ.  

ಹಣೆ ಮೇಲೆ ಸಣ್ಣ ದದ್ದುಗಳಿವೆಯೇ? ಈ ಮನೆಮದ್ದುಗಳನ್ನು, ಟ್ರೈ ಮಾಡಿ !

ನೇಲ್ ಪಾಲಿಶ್ ಹಚ್ಚಿದ ಮೇಲೆ ಅದು ಒಣಗುವವರೆಗೆ ಮಕ್ಕಳನ್ನು ಗಮನಿಸುತ್ತಿರಿ. ಹಾಗೆ ಹಾನಿಕಾರಕವಲ್ಲದ ನೇಲ್ ಪಾಲಿಶ್ ಆಯ್ಕೆ ಮಾಡಿ. ಮಕ್ಕಳಿಗೆ ಪದೇ ಪದೇ ನೇಲ್ ಪಾಲಿಶ್ ಹಚ್ಚಬೇಡಿ. ಇದು ಮಕ್ಕಳ ಚರ್ಮ ಹಾಗೂ ಉಗುರನ್ನು ಹಾಳು ಮಾಡುತ್ತದೆ.    
 

click me!