‘ತಾನಾ ಬಾನಾ’ ಇದು ಜರ್ಮನ್‌ನಲ್ಲಿ ನೆಲೆಸಿರುವ ಕನ್ನಡತಿ ಸೌಮ್ಯಾ ರೆಡ್ಡಿ ಬರೆದಿರುವ ಸೀರೆಗಳ ಕೈಪಿಡಿ. ಈ ಕಾಫಿ ಟೇಬಲ್ ಬುಕ್‌ನಲ್ಲಿ ದೇಶದ ಸುಮಾರು 50 ಪಾರಂಪರಿಕ ಸೀರೆಗಳ ಕುರಿತ ವಿವರಣೆ ಇದೆ. ಗಾಂಧೀಜಿ ಅವರ 150ನೇ ಜನ್ಮಾಚರಣೆಯ ಪ್ರಯುಕ್ತ ಈ ಪುಸ್ತಕ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯ್ತು.
ಸೀರೆ ಅಂದರೆ ಅದಕ್ಕೊಂದು ಲಾಲಿತ್ಯ ಇದೆ. ಯಾರೇ ಆದರೂ ಸೀರೆ ಉಟ್ಟುಕೊಂಡರೆ ನಮ್ಮ ವ್ಯಕ್ತಿತ್ವಕ್ಕೇ ಘನತೆ ಬರುತ್ತೆ ಅಂತ ಅನಿಸುತ್ತೆ ಎಷ್ಟೋ ಸಲ..’
ತಮ್ಮ ‘ತಾನಾ ಬಾನಾ’ ಪುಸ್ತಕದ ಬಿಡುಗಡೆಗಾಗಿಯೇ ಬೆಂಗಳೂರಿಗೆ ಬಂದಿದ್ದರು ಸೌಮ್ಯಾ ರೆಡ್ಡಿ. ತಾಜ್ ವೆಸ್ಟ್ ಎಂಡ್ ಹೊಟೇಲ್‌ನ ಹಸಿರು ಪರಿಸರದಲ್ಲಿ ಪುಸ್ತಕ ಬಿಡುಗಡೆಗೂ ಮೊದಲು ಅವರು ಈ ಪುಸ್ತಕದ ಬಗ್ಗೆ ಒಂದಿಷ್ಟುಮಾತಾಡಿದರು. ಆ ಮಾತುಗಳು ಇಲ್ಲಿವೆ.
ಮಾಡ್ರನ್ ಡ್ರೆಸ್ ಹಿಂದಿಕ್ಕಿದ ಪಾರಂಪರಿಕ ಸೀರೆಗಳ ಟ್ರೆಂಡ್!
- ನಾನು ಜರ್ಮನಿಗೆ ಹೋಗಿ 30 ವರ್ಷ ಆಯ್ತು. ಭಾರತದ ಜೊತೆಗೆ ಒಡನಾಟ ಇದ್ದೇ ಇತ್ತು. ಇಲ್ಲಿಗೆ ಬಂದು ವಾಪಾಸ್ ಹೋಗುವಾಗ ಒಂದಾದರೂ ಹೊಸ ಸೀರೆ ನನ್ನ ಜೊತೆಗಿದ್ದರೇ ಸಮಾಧಾನ.
- ಸೀರೆ ಕಲೆಕ್ಷನ್‌ನ ಆಸಕ್ತಿ ಆರಂಭದಿಂದಲೂ ಇತ್ತು. ಅಮ್ಮನ, ಅಜ್ಜಿಯ ಪಾರಂಪರಿಕ ವಿನ್ಯಾಸ ಸೀರೆಗಳು, ಅದರಲ್ಲಿರುವ ಪ್ರಿಂಟ್‌ಗಳು, ಜರಿ, ಸೂಕ್ಷ್ಮ ಕುಸುರಿ ಇವುಗಳನ್ನೆಲ್ಲ ಮತ್ತೆ ಮತ್ತೆ ಗಮನಿಸುತ್ತಿದ್ದೆ. ಅವರಿಂದ ಬಂದ ಹಳೆಯ ಸೀರೆಗಳನ್ನು ಬಹಳ ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದೆ.
- ಆದರೆ ನಮ್ಮ ಸೀರೆಗಳ ಬಗ್ಗೆ ಒಂದು ಕಾಫಿ ಟೇಬಲ್ ಪುಸ್ತಕ ಬರೆಯಬೇಕು ಅನ್ನುವ ಯೋಚನೆ ಬಂದದ್ದು ಕೆಲವು ವರ್ಷಗಳ ಕೆಳಗೆ. ಈ ಕಾಲದವರಿಗೆ ಸೀರೆ ಅಂದರೆ ಕಿರಿಕಿರಿ, ಅದನ್ನು ಉಡುವುದು ಕಷ್ಟ, ಉಟ್ಟರೆ ಮೈಂಟೇನ್ ಮಾಡೋದು ಕಷ್ಟ, ಸೀರೆಯಲ್ಲಿ ಉಳಿದ ಡ್ರೆಸ್‌ಗಳ ಹಾಗೆ ಫ್ರೀಯಾಗಿರಕ್ಕಾಗಲ್ಲ ಇತ್ಯಾದಿ ಕಂಪ್ಲೇಂಟ್‌ಗಳಿವೆ. ಹಾಗಾಗಿ ಈ ಜನರೇಶನ್‌ನಿಂದ ಸೀರೆ ಮಾಯವಾಗ್ತಿದೆ. ಇದಾಗಬಾರದು, ಈ ಕಾಲದವರಿಗೂ ಸೀರೆಯ ಮಹತ್ವ ಗೊತ್ತಾಗಬೇಕು ಅಂತ ತೀವ್ರವಾಗಿ ಅನಿಸಿದಾಗ, ಯಾಕೆ ನಮ್ಮ ಪಾರಂಪರಿಕ ಸೀರೆಗಳ ಬಗ್ಗೆ ನಾನೊಂದು ಪುಸ್ತಕ ಬರೆಯಬಾರದು ಎಂಬ ಯೋಚನೆ ಬಂತು.
2020 ಗೆ ಈ ಸೀರೆಗಳು ನಿಮ್ಮ ವಾರ್ಡ್‌ರೋಬ್ ತುಂಬಲಿ!
- ಹಾಗೊಂದು ಯೋಚನೆ ಬಂದದ್ದೇ ಸೀರೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡೆ. ಆಗ ಗೊತ್ತಾಯ್ತು, ನಮ್ಮ ದೇಶದಲ್ಲಿ 125ಕ್ಕೂ ಹೆಚ್ಚು ವೆರೈಟಿ ಸೀರೆಗಳಿವೆ. ಆದರೆ ನಮಗೆ ಗೊತ್ತಿರೋದು ಕೆಲವೇ ಕೆಲವು ಸೀರೆಗಳ ಬಗ್ಗೆ ಮಾತ್ರ.
- ಹಳೆಯ ಸಂಗ್ರಹಗಳನ್ನೆಲ್ಲ ಹುಡುಕಿ ನೋಡಿದಾಗ ನನ್ನ ಬಳಿಯೇ ಸುಮಾರು 50 ವೆರೈಟಿ ಪಾರಂಪರಿಕ ಸೀರೆಗಳಿದ್ದವು. ಅಮ್ಮ, ಅಜ್ಜಿ ಸಂಗ್ರಹದ ಸೀರೆಗಳೂ ಸಿಕ್ಕವು.
- ಈ ಪುಸ್ತಕ ಬರೆಯಲು ಹೆಚ್ಚಿನ ಮಾಹಿತಿ ಇಂಟರ್‌ನೆಟ್‌ನಲ್ಲೇ ಸಿಕ್ಕಿತು. ಈ ಬಗ್ಗೆ ಜ್ಞಾನ ಇರುವ ಗೆಳತಿಯರು, ಬಂಧುಗಳು ಒಂದಿಷ್ಟುವಿವರ ಕೊಟ್ಟರು.
- ಈ ಪುಸ್ತಕಕ್ಕಾಗಿನ ಫೋಟೋಶೂಟ್‌ನಲ್ಲಿ ನಮ್ಮ ಬಂಧುಗಳೇ ರೂಪದರ್ಶಿಗಳಾದದ್ದು ವಿಶೇಷ. ನಾನೂ ಕೆಲವೊಂದು ಸೀರೆಗಳಿಗೆ ರೂಪದರ್ಶಿಯಾಗಿದ್ದೇನೆ.
- ಎರಡು ಸೂಟ್‌ಕೇಸ್‌ಗಳಲ್ಲಿ ಸೀರೆಗಳನ್ನು ಹೊತ್ತು ಮೂರು ದಿನಗಳ ಕಾಲ ಫೋಟೋ ಶೂಟ್ ಮಾಡಿದ್ದು ಬದುಕಿನಲ್ಲಿ ಮರೆಯಲಾಗದ ಅನುಭವ.
- ಸೀರೆ ಅಂದರೆ ಮಹಿಳೆಯರು ಮಾತ್ರ ಉಟ್ಟುಕೊಳ್ಳೋದು ಅನ್ನುವ ಪೂರ್ವಾಗ್ರಹ ಇದೆ. ಆದರೆ ಸೀರೆಗಳನ್ನು ಉಡಲು ಲಿಂಗಭೇದವಿಲ್ಲ. ಇತ್ತೀಚೆಗೆ ಈ ಪೂರ್ವಾಗ್ರಹ ಬ್ರೇಕ್ ಆಗಿದೆ. ಪುರುಷರೂ ಸೀರೆ ಉಡುತ್ತಿರೋದು ನನ್ನ ಗಮನಕ್ಕೆ ಬಂದಿದೆ. ಇದು ಉತ್ತಮ ಬೆಳವಣಿಗೆ.