ವಿಶ್ವ ಸುಂದರಿ ಸ್ಪರ್ಧೆ ನಾಳೆಯಿಂದ ಶುರುವಾಗಲಿದೆ. ಭಾರತವನ್ನು ಪ್ರತಿನಿಧಿಸಲಿರುವ ಕನ್ನಡತಿ ಸಿನಿ ಶೆಟ್ಟಿ ಭಾರತದ ಬಗ್ಗೆ ಹೇಳಿದ್ದೇನು? ಸ್ಪರ್ಧೆಯ ತಯಾರಿ ಹೇಗಿದೆ?
ಬರುವ ಮಾರ್ಚ್ 9ರಂದು ನಡೆಯಲಿರುವ ಮಿಸ್ ವರ್ಲ್ಡ್ 2023 ಸ್ಪರ್ಧೆಗೆ ಭರ್ಜರಿ ತಯಾರಿ ಶುರುವಾಗಿದೆ. 1996ರಲ್ಲಿ ಭಾರತ ಕೊನೆಯದಾಗಿ ವಿಶ್ವ ಸುಂದರಿ ಸ್ಪರ್ಧೆ ಆಯೋಜನೆ ಮಾಡಿತ್ತು. ಅದೂ ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಇದಾದ ಬಳಿಕ ಸುಮಾರು 3 ದಶಕಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸುತ್ತಿದೆ. ಮುಂಬೈನಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾರತದಿಂದ 21 ವರ್ಷದ ಸುಂದರಿ ಸಿನಿ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2022 ವಿಜೇತ ಸಿನಿ ಶೆಟ್ಟಿ ಮಿಸ್ ವರ್ಲ್ಡ್ 2023 ಸ್ಪರ್ಧೆಯಲ್ಲಿ ಇವರು ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದೀಗ ಸಿನಿ ಶೆಟ್ಟಿಯವರು ಸ್ಪರ್ಧೆಗಾಗಿ ತಯಾರಿ ನಡೆಸಿದ್ದು, ಅವರು ಮುಂಬೈಗೆ ಆಗಮಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ITDC) 71ನೇ ವಿಶ್ವ ಸುಂದರಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿ ಕೊಡಲಿದೆ. ನಾಳೆ, ಫೆಬ್ರವರಿ 20 ರಂದು ದೆಹಲಿಯ ಸ್ಟಾರ್ ಹೋಟೆಲ್ ದಿ ಅಶೋಕ್‌ನಲ್ಲಿ ಭರ್ಜರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಮತ್ತು ವಿವಿಧ ದೇಶಗಳ 120 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸಿನಿ ಶೆಟ್ಟಿ ಅವರು, ಮುಂಬೈನ ಕಾಲೇಜೊಂದರಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದು, 2ನೇ ವರ್ಷದ ಪದವಿಯಲ್ಲಿ ಓದುತ್ತಿದ್ದಾರೆ.
ಮಾಧುರಿ ದೀಕ್ಷಿತ್ಗೆ ಬಿಗ್ಬಾಸ್ ಅಂಕಿತಾ ಸೆಡ್ಡು- ಧಕ್ ಧಕ್ ಎಂದು ಕಿಚ್ಚು ಹೊತ್ತಿಸಿದ ಕಾಂಟ್ರವರ್ಸಿ ಕ್ವೀನ್!
ವಿಶೇಷ ಎಂದರೆ, ಸಿನಿ ಶೆಟ್ಟಿ ಅವರು ಕರ್ನಾಟಕದವರು. ಉಡುಪಿಯ ಇನ್ನಂಜೆ ಮೂಲದವರು ಇವರು. ವಿಶ್ವ ಸುಂದರಿ ಸ್ಪರ್ಧೆಗೆ ತಯಾರಿ ನಡೆಸಿರುವ ನಡುವೆಯೇ, ಕನ್ನಡತಿ ಸಿನಿ ಶೆಟ್ಟಿ ಕೆಲವೊಂದು ಮಹತ್ವಪೂರ್ಣ ಹೇಳಿಕೆಯನ್ನು ನೀಡಿದ್ದಾರೆ. ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ನನಗೆ ಈ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಸಿನಿ ಹೇಳಿದ್ದಾರೆ. ಹಿಂದೆಲ್ಲಾ ಭಾರತವನ್ನು ಹಾವಾಡಿಗರ ನಾಡು ಎಂದು ಕರೆಯಲಾಗುತ್ತಿತ್ತು. ವಿಶ್ವದ ದೃಷ್ಟಿಯಲ್ಲಿ ಭಾರತವನ್ನು ತೋರಿಸುವಾಗ ಹಾವಾಡಿಗರನ್ನೇ ತೋರಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಇಡೀ ವಿಶ್ವಕ್ಕೇ ಮೋಡಿ ಮಾಡುತ್ತಿದೆ ಭಾರತ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ನಮ್ಮ ಸಂಪ್ರದಾಯಗಳು, ನಮ್ಮ ಆತಿಥ್ಯದಿಂದ ಮೋಡಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಅಂದಹಾಗೆ ಸಿನಿ ಅವರಿಗೆ ಈಗ 21 ವರ್ಷ ವಯಸ್ಸು. ಈ ಬಾರಿ, ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಮತ್ತು ಮಾಜಿ ವಿಶ್ವ ಸುಂದರಿ ವಿಜೇತರಾದ ಭಾರತದ ಮಾನುಷಿ ಚಿಲ್ಲರ್, ಜಮೈಕಾದ ಟೋನಿ ಆನ್ ಸಿಂಗ್, ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್, ಮತ್ತು ಪೋರ್ಟೊ ರಿಕೊದ ಸ್ಟೆಫನಿ ಡೆಲ್ ವ್ಯಾಲೆ ಸೇರಿದಂತೆ ವಿಶ್ವ ಸುಂದರಿಗಳ ಅದ್ಭುತ ತಂಡವು ಗ್ರಾಂಡ್ ಫಿನಾಲೆಗೆ ವೇದಿಕೆಯನ್ನು ಸಿದ್ಧಪಡಿಸಲು ಮೊದಲ ಬಾರಿಗೆ ಒಂದುಗೂಡಿದ್ದಾರೆ. 71ನೇ ಆವೃತ್ತಿಯ ಸ್ಪರ್ಧೆ ಭಾರತದಲ್ಲಿ ಹಮ್ಮಿಕೊಳ್ಳುವುದು ತುಂಬಾ ಅರ್ಥಗರ್ಭಿತವಾಗಿದೆ ಮತ್ತು ಈ ಆವೃತ್ತಿಗಾಗಿ ನಾನು ಉತ್ತಮ ತಂಡ ರಚಿಸಿದ್ದೇನೆ ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿ ತಿಳಿಸಿದ್ದಾರೆ. ಗ್ರ್ಯಾಂಡ್ ಫಿನಾಲೆಯು ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಅಯೋಧ್ಯೆಯಲ್ಲಿ ನಟಿ ಹೇಮಾಮಾಲಿನಿ: 75ನೇ ವಯಸ್ಸಲ್ಲೂ ಭರತನಾಟ್ಯ ಕಂಡು ಮೂಕವಿಸ್ಮಿತರಾದ ಪ್ರೇಕ್ಷಕರು