
ಈಗಿನ ಲೈಫ್ ಸ್ಟೈಲ್, ಕಲುಷಿತ ವಾತಾವರಣ, ನೀರಿನಿಂದಾಗಿ ಕೂದಲಿನ ಬಣ್ಣ ಬಿಳಿಯಾಗೋದು ಸಾಮಾನ್ಯ ಎನ್ನುವಂತಾಗಿದೆ. ನಲವತ್ತು, ನಲವತ್ತೈದಕ್ಕೆ ಬದಲಾಗ್ತಿದ್ದ ಕೂದಲಿನ ಬಣ್ಣ ಈಗ ಇಪ್ಪತ್ತು – ಮೂವತ್ತರಲ್ಲೇ ಕಾಣಿಸಿಕೊಳ್ತಿದೆ. ತಲೆ ಕೂದಲು ಅಲ್ಲಲ್ಲಿ ಬೆಳ್ಳಗೆ ಕಾಣಿಸಿದ್ರೆ ಏನೋ ಮುಜುಗರ. ಸೌಂದರ್ಯಕ್ಕೆ ಇದು ಕಳಂಕ ಎನ್ನುವ ಭಾವನೆ ಜನರಲ್ಲಿದೆ. ಬಿಳಿ ಕೂದಲನ್ನು ಕಪ್ಪಗೆ ಮಾಡುವ ನಿರಂತರ ಪ್ರಯತ್ನ ನಡೆಯುತ್ತಿರುತ್ತದೆ. ಕೆಲವರು ತಲೆ ಕೂದಲಿಗೆ ಬಣ್ಣ ಬಳಿದು, ಬಿಳಿ ಕೂದಲನ್ನು ಮರೆ ಮಾಚುತ್ತಾರೆ. ಮತ್ತೆ ಕೆಲವರು ಬಣ್ಣದಲ್ಲಿ ಕೆಮಿಕಲ್ ಇರುತ್ತೆ ಎನ್ನುವ ಕಾರಣ ಹೇಳಿ ಮೆಹಂದಿ ಬಳಸುತ್ತಾರೆ. ವಾರದಲ್ಲಿ ಒಂದು ದಿನ ತಲೆಗೆ ಮೆಹಂದಿ ಹಾಕುವ ಜನರಿದ್ದಾರೆ. ಮೆಹಂದಿ ತಲೆಗೆ ತಂಪು, ಅದು ನೈಸರ್ಗಿಕ, ಅದ್ರಿಂದ ಬಿಳಿ ಬಣ್ಣ ಕೆಂಪಾಗಿ ನಿಧಾನವಾಗಿ ಕಪ್ಪಾಗುತ್ತದೆ ಎನ್ನುವ ನಂಬಿಕೆಯಲ್ಲೇ ಬಹುತೇಕರು ಮೆಹಂದಿ ಬಳಸುತ್ತಾರೆ. ಆದ್ರೆ ನೀವು ಕುರುಡಾಗಿ ನಂಬಿರುವ ಈ ಮೆಹಂದಿ ಕೂಡ ನಿಮ್ಮ ತಲೆ ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತೆ ಎಂಬುದು ನಿಮಗೆ ಗೊತ್ತಾ?. ನಾವಿಂದು ಮೆಹಂದಿ ಸೈಡ್ ಇಫೆಕ್ಟ್ಸ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಅತಿಯಾಗಿ ಮೆಹಂದಿ ( Mehndi) ಬಳಸಿದ್ರೂ ನಿಮ್ಮ ಕೂದಲ (Hair) ಆರೋಗ್ಯ ಹಾಳಾಗುತ್ತೆ :
ಶುಷ್ಕವಾಗುವ ತಲೆಕೂದಲು : ನಿಯಮಿತವಾಗಿ ಮೆಹಂದಿ ಬಳಸುವ ಕಾರಣ ಕೂದಲು ಶುಷ್ಕವಾಗುತ್ತದೆ. ಮೊದಲೇ ಶುಷ್ಕ ಕೂದಲನ್ನು ಹೊಂದಿರುವ ಜನರಿಗೆ ಈ ಸಮಸ್ಯೆ ಹೆಚ್ಚು. ಅವರು ಅಪ್ಪಿತಪ್ಪಿಯೂ ಮೆಹಂದಿ ಬಳಸಬಾರದು.
ಹಾಟಪ್ಪ ಹಾಟ್ ಸಖತ್ ಹಾಟ್ ಕಿಚ್ಚನ ಆನ್‌ಸ್ಕ್ರೀನ್ ಮಗಳು ಜೆರುಶಾ
ಅಲರ್ಜಿ ಸಮಸ್ಯೆ : ಮೆಹಂದಿ ಅಲರ್ಜಿಗೆ ಕಾರಣವಾಗುತ್ತದೆ. ಮೆಹಂದಿ ಹಚ್ಚಿದ ನಂತ್ರ ನೀವು ಎಷ್ಟೇ ಸ್ವಚ್ಛಗೊಳಿಸಿದ್ರೂ ಅದ್ರ ಸ್ವಲ್ಪ ಕಣ ತಲೆಯಲ್ಲಿರುತ್ತದೆ. ಅದು ಅಲರ್ಜಿಯನ್ನುಂಟು ಮಾಡುತ್ತದೆ. ಇದ್ರಿಂದ ತಲೆ ತುರಿಕೆ, ಹೊಟ್ಟು, ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುವ ಸಾಧ್ಯತೆ ಇರುತ್ತದೆ.
ಬದಲಾಗುವ ಕೂದಲಿನ ಬಣ್ಣ : ಬಿಳಿ ಕೂದಲನ್ನು ಮರೆಮಾಚಲು ನೀವು ಕೂದಲಿಗೆ ಮೆಹಂದಿ ಹಚ್ಚಿಕೊಳ್ತೀರಿ. ಆದ್ರೆ ಈ ಮೆಹಂದಿ ಬರಿ ಬಿಳಿ ಕೂದಲು ಮಾತ್ರವಲ್ಲ ಕಪ್ಪು ಕೂದಲಿನ ಬಣ್ಣವನ್ನು ಕೂಡ ಬದಲಿಸುತ್ತದೆ. ಪದೇ ಪದೇ ಮೆಹಂದಿ ಬಳಸುವವರ ಎಲ್ಲ ಕೂದಲು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಈ ಬಣ್ಣವನ್ನು ಮತ್ತೆ ಬದಲಿಸಲು ಸಾಧ್ಯವಾಗೋದಿಲ್ಲ.
ಕೂದಲು ಉದುರುವ ಸಮಸ್ಯೆ (Hair Fall) : ಎಲ್ಲರ ದೇಹ ಪ್ರಕೃತಿಗೂ ಮೆಹಂದಿ ಆಗಿ ಬರೋದಿಲ್ಲ. ಮೆಹಂದಿ ಶುಷ್ಕವಾಗಿರುವ ಕಾರಣ ಅದನ್ನು ಬಳಸಿದ ನಂತ್ರ ನಿಮ್ಮ ಕೂದಲು ಸಿಕ್ಕಾಗುತ್ತದೆ. ಸಿಕ್ಕಾದ ಕೂದಲನ್ನು ಬಾಚಿದ್ರೆ ಅದು ಉದುರುತ್ತದೆ.
ತಲೆ ಹೊಟ್ಟಿನ ಸಮಸ್ಯೆ (Dandruff) : ವಾರದಲ್ಲಿ ಎರಡರಿಂದ ಮೂರು ದಿನ ನೀವು ಮೆಹಂದಿ ಬಳಸುತ್ತಿದ್ದರೆ ಬಹಳ ಎಚ್ಚರಿಕೆ ವಹಿಸಬೇಕು. ಈ ಮೆಹಂದಿ ತಲೆ ಹೊಟ್ಟಿಗೆ ಕಾರಣವಾಗುತ್ತದೆ. ಇದ್ರಿಂದ ತಲೆಯಲ್ಲಿ ವಿಪರೀತ ತುರಿಕೆ ಕಾಣಿಸಿಕೊಳ್ಳುವುದಲ್ಲದೆ, ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.
ಬೊಕ್ಕ ತಲೆಯವರಿಗೆ ಗುಡ್ ನ್ಯೂಸ್: ಉದುರಿದ ಕೂದಲು ವಾಪಸ್ ಬರತ್ತೆ! ಹೊಸ ಟ್ರೀಟ್ಮೆಂಟ್ ಸಂಶೋಧನೆ
ಮೆಹಂದಿ ಬಳಸುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ : ನೀವು ತಲೆ ಕೂದಲಿಗೆ ಮೆಹಂದಿ ಬಳಸುತ್ತಿದ್ದರೆ ತಿಂಗಳಿಗೊಮ್ಮೆ ಬಳಸುವ ಅಭ್ಯಾಸ ಮಾಡಿಕೊಳ್ಳಿ. ಮಾರುಕಟ್ಟೆಯಲ್ಲಿ ಸಿಗುವ ಮೆಹಂದಿ ಬಳಸುವ ಬದಲು, ಮನೆಯಲ್ಲಿರುವ ತಾಜಾ ಗಿಡದ ಎಲೆಯನ್ನು ಬಳಸಿ. ಮೆಹಂದಿ ಹಚ್ಚಿದ ನಂತ್ರ ಐದಾರು ಗಂಟೆ ಹಾಗೆಯೇ ಬಿಡಬೇಡಿ. ಒಂದು ಅಥವಾ ಒಂದುವರೆ ಗಂಟೆಯೊಳಗೆ ನೀವು ಕೂದಲನ್ನು ಸ್ವಚ್ಛಗೊಳಿಸಬೇಕು. ಅಲ್ಲದೆ ಮೆಹಂದಿಯಿಂದ ನಿಮ್ಮ ಕೂದಲು ಶುಷ್ಕವಾಗುವ ಕಾರಣ ಮೆಹಂದಿ ಹಚ್ಚಿದ ಮರುದಿನ ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವುದನ್ನು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.