ಬಹಳ ಹಿಂದಿನಿಂದಲೇ ಮನುಷ್ಯರು ಬಣ್ಣವಿರುವ ಬಟ್ಟೆ ಹಾಕಲು ಆಸಕ್ತಿ ತೋರುತ್ತಿದ್ದರು. ಎಲ್ಲಕ್ಕಿಂತ ಮೊದಲು ಮನುಷ್ಯರು ಬಟ್ಟೆಗಳಿಗೆ ಬಳಸಿದ ಬಣ್ಣ ಯಾವುದು ಗೊತ್ತಾ?
ಗುಲಾಬಿ ಎಂದರೆ ಮಹಿಳೆಯರ ಬಣ್ಣ, ಫೆಮಿನಿಸ್ಟ್ ಬಣ್ಣ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ಬಣ್ಣ ಎಲ್ಲ ಹುಡುಗಿಯರ ಅಚ್ಚುಮೆಚ್ಚು. ಗಂಡಸರಿಗೆ ಗುಲಾಬಿ ಎಂದರೆ ಅಷ್ಟಕ್ಕಷ್ಟೇ. ಆದರೆ, ಫ್ಲೆಮಿಂಗೋಗಳಿಗೆ ಸೌಂದರ್ಯ ನೀಡಿದ, ಸ್ಟ್ರಾಬೆರಿಗಳನ್ನು ನೋಡಿ ಬಾಯಲ್ಲಿ ನೀರೂರುವಂತೆ ಮಾಡಿದ, ತಾವರೆಗಳನ್ನು ಸುಂದರ ಹೂವಾಗಿಸಿದ ಗುಲಾಬಿ ಬಣ್ಣವೇ ಜಗತ್ತಿನ ಅತ್ಯಂತ ಹಳೆಯ ಬಣ್ಣ ಎಂದರೆ ನಿಮಗೆ ಅಚ್ಚರಿಯಾದೀತು.
ಹೌದು, ಬಾರ್ಬಿಯ ಸಿಗ್ನೇಚರ್ ಬಣ್ಣ ಗುಲಾಬಿ ಪ್ರಪಂಚದ ಅತ್ಯಂತ ಹಳೆಯ ಬಣ್ಣ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಪಶ್ಚಿಮ ಆಫ್ರಿಕಾದ ಮೌರಿಟಾನಿಯಾದ ತೌಡೆನಿ ಜಲಾನಯನ ಪ್ರದೇಶದಲ್ಲಿ ಸಹಾರಾ ಮರುಭೂಮಿಯ ಕೆಳಗಿದ್ದ 1.1 ಶತಕೋಟಿ-ವರ್ಷ-ಹಳೆಯ ಬಂಡೆಗಳಲ್ಲಿ ಪುರಾತನ ಗುಲಾಬಿ ವರ್ಣದ್ರವ್ಯಗಳನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ ಮತ್ತು ಭೂವೈಜ್ಞಾನಿಕ ದಾಖಲೆಯ ಪ್ರಕಾರ ಇದು ಜಗತ್ತಿನ ಅತ್ಯಂತ ಪ್ರಾಚೀನ ಬಣ್ಣವಾಗಿದೆ.
ಪ್ರಕಾಶಮಾನವಾದ ಗುಲಾಬಿ ಬಣ್ಣವು ನಮಗೆ ತಿಳಿದಿರುವ ಇತರೆಲ್ಲ ಬಣ್ಣಗಳಿಗಿಂತ ಕನಿಷ್ಠ 500 ದಶಲಕ್ಷ ವರ್ಷಗಳಷ್ಟು ಹಳೆಯದಾಗಿದೆ ಮತ್ತು ಇದು ಪ್ರಾಚೀನ ಸಾಗರ ಜೀವಿಗಳಿಂದ ಉತ್ಪತ್ತಿಯಾಗಿತ್ತು.
ಗುಲಾಬಿ ಬಣ್ಣದ ಇತಿಹಾಸ
ಪ್ರಾಚೀನ ಕಾಲದಿಂದಲೂ ಮಾನವರು ತಮ್ಮ ಬಟ್ಟೆಗಳಿಗೆ ಬಣ್ಣ ಹಚ್ಚುತ್ತಿದ್ದರು ಮತ್ತು ತಮ್ಮನ್ನು ತಾವು ಅಲಂಕರಿಸಿಕೊಳ್ಳುತ್ತಿದ್ದರು. ಪ್ರಕೃತಿಯಲ್ಲಿನ ಗುಲಾಬಿ ಬಣ್ಣ ಮಾನವನಿಗೆ ಹೆಚ್ಚು ಆಕರ್ಷಕವೆನಿಸಿದ್ದು, ಆತ ಈ ಬಣ್ಣವನ್ನು ತನ್ನ ಬಟ್ಟೆಗಳಿಗೆ ಸೇರಿಸಲು ಪ್ರಾರಂಭಿಸಿದ. ಆಂಡಿಸ್ ಪರ್ವತದ ಬೇಟೆಗಾರರು ಮೊದಲು ತಮ್ಮ ಚರ್ಮದ ಉಡುಪುಗಳಲ್ಲಿ ಕೆಂಪು ಓಚರ್‌ನಿಂದ(ಪಿಂಕ್ ಬಣ್ಣದಲ್ಲಿ ಬರುವ ಮಣ್ಣು) ಪಡೆದ ಗುಲಾಬಿ ಬಣ್ಣವನ್ನು ಬಳಸಲಾರಂಭಿಸಿದರು. ನಂತರ, ಪ್ರಾಚೀನ ಈಜಿಪ್ಟಿನವರು ತಮ್ಮ ತುಟಿಗಳು ಮತ್ತು ಕೆನ್ನೆಗಳನ್ನು ಪಿಂಕ್ ಪಿಂಕಾಗಿ ಕಾಣುವಂತೆ ಮಾಡಲು ಇದನ್ನು ಬಳಸಿದರು. ಆಫ್ರಿಕನ್ನರು ಸುಮಾರು 2 ಲಕ್ಷ ವರ್ಷಗಳಿಂದಲೂ ಇದನ್ನೇ ಬಳಸಿ ಬಳಕೆಯ ವಸ್ತುಗಳಿಗೆ ಪಿಂಕ್ ಬಣ್ಣ ಪಡೆಯುತ್ತಿದ್ದರು. ಶೀಘ್ರದಲ್ಲೇ ಗುಲಾಬಿಯು ಪ್ರೀತಿ ಮತ್ತು ಸೌಂದರ್ಯದ ಬಣ್ಣವಾಗಿ ಗುರುತಿಸಿಕೊಂಡಿತು.
ಶೋಷಣೆಯ ಯುಗ
ಗುಲಾಬಿ ಬಣ್ಣ ಜನಪ್ರಿಯತೆ ಪಡಯುತ್ತಿದ್ದಂತೆಯೇ ಆ ಬಣ್ಣವನ್ನು ಪಡೆಯಲು ವಸಾಹತುಶಾಹಿ ಶಕ್ತಿಗಳು ಪ್ರಪಂಚದಾದ್ಯಂತ ಬೇರೆ ಬೇರೆ ನೈಸರ್ಗಿಕ ಸಂಪನ್ಮೂಲಗಳ ಮೊರೆ ಹೊಕ್ಕರು. ಪಿಂಕ್ ಬಣ್ಣ ಸಿಗುವ ಕೀಟಗಳು, ಮರಗಳು ಯಾವುದನ್ನೂ ಬಿಡದೆ ಬಳಸತೊಡಗಿದರು. ಇದು ಪರಿಸರ ನಾಶ ಮತ್ತು ಗುಲಾಮ ಕಾರ್ಮಿಕರ ಶೋಷಣೆಗೆ ಕಾರಣವಾಯಿತು.
ಒಂದು ಫ್ಯಾಷನ್ ಪ್ರವೃತ್ತಿ
ಪ್ರಪಂಚವು 18ನೇ ಶತಮಾನವನ್ನು ಪ್ರವೇಶಿಸುತ್ತಿದ್ದಂತೆ, ಮಧ್ಯಮ ವರ್ಗದಿಂದ ವಿಭಿನ್ನವಾಗಿ ಕಾಣಲು ಬಯಸುವ ಯುರೋಪಿಯನ್ ಶ್ರೀಮಂತರು ಗುಲಾಬಿ ಫ್ಯಾಷನ್ ಮೊರೆ ಹೋದದ್ದನ್ನು ಕಾಣಬಹುದು.
ಬಾರ್ಬಿ
1959ರ ಬಳಿಕ ಬಾರ್ಬಿಯು ಪಿಂಕ್ ಬಣ್ಣದಿಂದ ಜನರನ್ನು ಆಕರ್ಷಿಸತೊಡಗಿದಳು. ಆಕೆಯ ವಂಡರ್‌ಲ್ಯಾಂಡ್ ಕೂಡಾ ಪಿಂಕ್ ಆಗಿತ್ತು.