ಟೀ ದೇಹಾರೋಗ್ಯಕ್ಕೆ ಒಳ್ಳೆಯದಾದರೆ, ಟೀ ಬ್ಯಾಗ್‌ಗಳು ಅಂದ ಹೆಚ್ಚಿಸಲು ಸಹಕಾರಿ. ಸೌಂದರ್ಯವರ್ಧಕವಾಗಿ ಟೀ ಬ್ಯಾಗ್‌ಗಳನ್ನು ಹೇಗೆಲ್ಲಾ ಬಳಸಬಹುದು ಎಂದು ತಿಳಿದರೆ ಆಶ್ಚರ್ಯಪಡುತ್ತೀರಿ.
ನೀವು ಬೆಳಗ್ಗೆ ಏಳುತ್ತಿದ್ದಂತೆಯೇ ತಾಜಾತನ ಫೀಲ್ ಮಾಡುವಂತೆ ಮಾಡುವ, ಎನರ್ಜೆಟಿಕ್ ಆಗಿಡುವ ಟೀ ಬ್ಯಾಗ್‌ಗಳ ಸಾಮರ್ಥ್ಯ ಅಷ್ಟಕ್ಕೇ ಮುಗಿಯುವುದಿಲ್ಲ. ಅವಕ್ಕೆ ನಿಮಗಾಗಿ ಇನ್ನೂ ಹೆಚ್ಚಿನ ಸೇವೆ ಮಾಡುವ ಬಯಕೆಯಿದೆ. ಹೌದು, ನಿಮ್ಮ ಅಂದ ಹೆಚ್ಚಿಸಿ ಆನಂದ ನೀಡುವ ಸಾಮರ್ಥ್ಯವೂ ಟೀ ಬ್ಯಾಗ್‌ಗಳಿಗಿದೆ. ಹಾಗಾಗಿ, ಬಳಕೆಯಾದ ಟೀ ಬ್ಯಾಗ್‌ಗಳನ್ನು ಡಸ್ಟ್‌ಬಿನ್‌ಗೆ ಹಾಕುವ ಬದಲು, ಅವನ್ನು ಮುಖದ ತ್ವಚೆಯ ಕಾಂತಿ ಹೆಚ್ಚಿಸಲು ಇಟ್ಟುಕೊಳ್ಳಿ.
ಚಹಾಕ್ಕೆ ಆ್ಯಂಟಿ ಏಜಿಂಗ್, ಆ್ಯಂಟಿ ಇನ್ಫ್ಲಮೇಟರಿ ಗುಣವಿದೆ. ಜೊತೆಗೆ ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ನಿಮ್ಮ ತ್ವಚೆ ಹಾಗೂ ಕೂದಲನ್ನು ಆರೋಗ್ಯಕರವಾಗಿಸಬಲ್ಲವು. ಜೊತೆಗೆ, ಅವು ತಮ್ಮಕೂಲಂಟ್ ಗುಣದಿಂದಾಗಿ ತ್ವಚೆಯನ್ನು ಟೋನ್ ಮಾಡಿ ಹೆಚ್ಚು ಮೃದುವಾಗಿ ಕಾಣುವಂತೆ ಮಾಡಬಲ್ಲವು. ಅವು ಮೊಡವೆಗಳ ವಿರುದ್ಧವೂ ಹೋರಾಡಬಲ್ಲವು. ಹಾಗಾಗಿ, ಟೀ ಬ್ಯಾಗ್‌ಗಳನ್ನು ಸೌಂದರ್ಯವರ್ಧಕವಾಗಿ ಹೇಗೆಲ್ಲ ಬಳಸಬಹುದು ಎಂಬುದು ಇಲ್ಲಿದೆ ನೋಡಿ.
ಅಮವಾಸ್ಯೆಗೆ ಗರ್ಭ ಧರಿಸಿದ್ರೆ ಮಗು ಅಂಗವಿಕಲವಾಗುತ್ತಾ?
ಕೆಲವರಿಗೆ ಕಣ್ಣುಗಳ ಬುಡಗಳು ಊದಿದಂತಿರುತ್ತವೆ. ಅದರಲ್ಲೂ ಹೆಚ್ಚು ಸ್ಕ್ರೀನ್ ನೋಡಿದಾಗ ಅಥವಾ ನಿದ್ದೆಯಿಂದ ಎದ್ದಾಗ ಅವು ಹೆಚ್ಚು ಊದಿರುತ್ತವೆ. ಅವನ್ನು ತಗ್ಗಿಸಿ ಕಣ್ಣುಗಳ ಸೌಂದರ್ಯ ಹೆಚ್ಚಿಸಲು ಹೀಗೆ ಮಾಡಿ. ಟೀ ಬ್ಯಾಗ್‌ಗಳನ್ನು ಕೆಲ ನಿಮಿಷಗಳ ಕಾಲ ಫ್ರೀಜರ್‌ನಲ್ಲಿಡಿ. ನಂತರ ಅದನ್ನು ಊತವಿದ್ದಲ್ಲಿ ಇಟ್ಟುಕೊಂಡು ಐದು ನಿಮಿಷ ಮಲಗಿ. ಇದರಲ್ಲಿರುವ ಕೆಫಿನ್ ಊದಿಕೊಂಡ ರಕ್ತನಾಳಗಳನ್ನು ರಿಲ್ಯಾಕ್ಸ್ ಮಾಡಿ ಕಣ್ಣ ಬುಡದ ಊತ ಹೋಗಿಸುತ್ತದೆ. ಇವುಗಳಲ್ಲಿರುವ ಟ್ಯಾನಿನ್ ಕಣ್ಣ ಸುತ್ತ ಕಪ್ಪಾಗಿದ್ದರೆ ಅದನ್ನು ನಿಯಂತ್ರಿಸಬಲ್ಲದು. ಇದಕ್ಕಾಗಿ ಟೀ ಬ್ಯಾಗನ್ನು ನೀರಿನಲ್ಲದ್ದಿ ಕಣ್ಣ ಮೇಲಿಟ್ಟುಕೊಳ್ಳಿ.
ಹೊಳೆವ ತ್ವಚೆಗಾಗಿ
ಟೀ ಬ್ಯಾಗ್‌ನೊಳಗಿರುವ ಎಲೆಗಳು ಉತ್ತಮ ಸ್ಕ್ರಬ್‌ನಂತೆ ವರ್ತಿಸಬಲ್ಲವು. ಬಳಸಿದ ಟೀ ಬ್ಯಾಗನ್ನು ಒಳಗಿಸಿ, ಒಣಗಿದ ಎಲೆಗಳನ್ನು ಸ್ಕ್ರಬ್ ಆಗಿ ಬಳಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಮುಖದ ಮೇಲೆ ಸ್ಕ್ರಬ್ ಮಾಡಿ. ಇದರ ಆ್ಯಂಟಿ ಆಕ್ಸಿಡೆಂಟ್ ಗುವು ತ್ವಚೆಗೆ ಹೊಳಪನ್ನು ಕೊಡುತ್ತದೆ.
ಮೊಡವೆಗಳನ್ನು ಹೋಗಿಸಲು
ಟೀ ಎಲೆಗಳಲ್ಲಿ ಕ್ಯಾಟೆಚಿನ್ ಇರುತ್ತದೆ. ಇವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬಲ್ಲವು. ಹಾಗಾಗಿ, ಮೊಡವೆಗಳು ಮತ್ತು ಮೊಡವೆಗಳಿಂದಾದ ಕಲೆಗಳಿದ್ದರೆ ಅವುಗಳ ಮೇಲೆ ಈ ಟೀ ಎಲೆಗಳನ್ನು ಕೆಲ ಸಮಯ ಇಡಿ. ಇದನ್ನು ಪುನರಾವರ್ತಿಸುವುದರಿಂದ ಮೊಡವೆಗಳಷ್ಟೇ ಅಲ್ಲ, ಕಲೆಗಳೂ ಮಾಯವಾಗುತ್ತವೆ.
ಒಡೆದ ತುಟಿಗಳನ್ನು ಒಂದುಗೂಡಿಸಲು
ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ. ಆಗ ಸಹಾಯಕ್ಕೆ ಬರುವುದು ಗ್ರೀನ್ ಟೀ ಬ್ಯಾಗ್. ಹೌದು, ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಿನಲ್ಲದ್ದಿ ತುಟಿಯ ಮೇಲೆ ಕೆಲ ಕಾಲ ಇಟ್ಟುಕೊಳ್ಳಿ. ಇವು ತುಟಿಗಳನ್ನು ಹೈಡ್ರೇಟ್ ಮಾಡಿ ಒಡೆದ ತುಟಿಯಿಂದಾಗುತ್ತಿದ್ದ ಉರಿಯನ್ನು ತಡೆಯುತ್ತವೆ. ಜೊತೆಗೆ ಒಡೆತವೂ ಕಡಿಮೆಯಾಗುತ್ತದೆ.
ಸನ್ಬರ್ನ್ ಹೋಗಲಾಡಿಸಲು
ಚರ್ಮ ಟ್ಯಾನ್ ಆಗಿದ್ದರೆ, ಸನ್‌ಬರ್ನ್ ಆಗಿದ್ದರೆ ಟೀಯನ್ನು ನೀರಿನಲ್ಲಿ ಕುದಿಸಿ. ಆ ನೀರನ್ನು ತಣ್ಣಗಾದ ಬಳಿಕ ಬಟ್ಟೆಯಲ್ಲಿ ಅದ್ದಿ ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ತೊಳೆಯಿರಿ. ಮುಖವು ಸುಟ್ಟು ಕೆಂಪಗಾದುದನ್ನು ತೆಗೆಯಲು ನೇರವಾಗಿಯೇ ಟೀ ಬ್ಯಾಗನ್ನು ಆ ಜಾಗಕ್ಕೆ ಇಟ್ಟುಕೊಳ್ಳಬಹುದು.
ಕ್ಲೆನ್ಸರ್
ಉಳಿದ ಟೀಗಳಿಗಿಂತ ವೈಟ್ ಟೀ ಕಡಿಮೆ ಪ್ರೊಸೆಸ್ ಮಾಡಿರುವಂಥದ್ದು. ಹಾಗಾಗಿ ಇದು ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ತ್ವಚೆಯನ್ನು ಸ್ವಚ್ಛವಾಗಿಸುವಲ್ಲಿ ವೈಟ್ ಟೀ ಒಳ್ಳೆಯದು. ಸ್ವಲ್ಪ ವೈಟ್ ಟೀಯನ್ನು ಕುದಿಸಿ ನಮತರ ಎಲೆಗಳನ್ನು ತೆಗೆದು ಮಿಕ್ಸರ್‌ಗೆ ಹಾಕಿ ಬ್ಲೆಂಡ್ ಮಾಡಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡು ಕೆಲ ಕಾಲ ಹಾಗೆಯೇ ಬಿಡಿ.
ಕೂದಲುದುರುವಿಕೆ ತಡೆಯುತ್ತದೆ
ಕೂದಲು ವಿಪರೀತ ಉದುರುತ್ತಿದ್ದರೆ ಬ್ಲ್ಯಾಕ್ ಟೀಯ ಸಹಾಯ ಪಡೆಯಿರಿ. ಸ್ವಲ್ಪ ಬ್ಲ್ಯಾಕ್ ಟೀಯನ್ನು ಕುದಿಸಿ. ನೀರು ತಣ್ಣಗಾಗಲು ಬಿಡಿ. ಬಳಿಕ ಅದನ್ನು ತಲೆಕೂದಲಿಗೆ ಹಾಗೂ ನೆತ್ತಿಗೆ ಸ್ಪ್ರೇ ಮಾಡಿ. ಕೆಲ ಸಮಯದ ಬಳಿಕ ಸ್ನಾನ ಮಾಡಿ.