'ತಣ್ಣಗಾದ್ರೆ ಸೌದೆಗೆ ಏನ್‌ ಬೆಲೆ..' ಯೂಟ್ಯೂಬ್‌ನಲ್ಲಿ ಟೋಬಿ ಟ್ರೇಲರ್‌ ಬೆಂಕಿ!

By Santosh Naik  |  First Published Aug 4, 2023, 6:09 PM IST

ಗರುಡ ಗಮನ ವೃಷಭ ವಾಹನ ಚಿತ್ರದ ಬಳಿಕ ರಾಜ್‌ ಬಿ ಶೆಟ್ಟಿ ನಟನೆಯ ಟೋಬಿ ಚಿತ್ರದ ಬಗ್ಗೆ ಜನ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್‌ ರಿಲೀಸ್‌ ಆದ ಬೆನ್ನಲ್ಲಿಯೇ ಚಿತ್ರದ ಟ್ರೇಲರ್‌ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು.


ಬೆಂಗಳೂರು (ಆ.4): 'ತಣ್ಣಗಾದ್ರೆ ಸೌದೆಗೆ ಏನ್‌ ಬೆಲೆ.. ಬೆಂಕಿ ಬಿದ್ರೆ ತಾನೆ.. ದೊಡ್ಡವರ ಮೈ ಕಾಯೋದು...' 3 ನಿಮಿಷ 4 ಸೆಕೆಂಡ್‌ನ ಟೋಬಿ ಟ್ರೇಲರ್‌ನಲ್ಲಿ ಗಮನಸೆಳೆಯುವ ಡೈಲಾಗ್‌ ಇದು. 2015ರಲ್ಲಿ ರಾಜ್‌ ಬಿ ಶೆಟ್ಟಿ ಅವರ ಸಹಾಯಕರಾಗಿ ಕೆಲಸ ಮಾಡಿದ್ದ ಬಾಸಿಲ್‌ ಅಲ್ಚಲಕ್ಕಲ್ ನಿರ್ದೇಶನದ ಟೋಬಿ ಚಿತ್ರ ಇದೇ 25 ರಂದು ಬಿಡುಗಡೆಯಾಗಲಿದೆ. ಇದರ ಬಹುನಿರೀಕ್ಷಿತ ಟ್ರೇಲರ್‌ ಶುಕ್ರವಾರ ಬಿಡುಗಡೆಯಾಗಿದೆ. ಟ್ರೇಲರ್‌ ರಿಲೀಸ್‌ ಆದ ಒಂದೇ ಗಂಟೆಯಲ್ಲಿ 22 ಸಾವಿರಕ್ಕೂ ಅಧಿಕ ವೀವ್ಸ್‌ ಪಡೆದುಕೊಂಡಿದ್ದು, ಚಿತ್ರದ ಟ್ರೇಲರ್‌ನಲ್ಲಿ ರಾಜ್‌ ಬಿ ಶೆಟ್ಟಿ ಅವರ ಒಂದೇ ಒಂದು ಡೈಲಾಗ್‌ ಇಲ್ಲ. ಚಿತ್ರದ ಸೆಟ್ಟಿಂಗ್, ಮ್ಯೂಸಿಕ್‌, ಇಡೀ ಟ್ರೇಲರ್‌ ನೋಡುವಲ್ಲಿನ ವೈಬ್‌ ಗಮನಿಸುತ್ತಿದ್ದರೆ, ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಹವಾ ಎಬ್ಬಿಸುವ ಚಿತ್ರ ಎಂದು ಯಾರು ಬೇಕಾದರೂ ಅಂದುಕೊಳ್ಳಬಹುದು. ಟಿಕೆ ದಯಾನಂದ್‌ ಅವರ ಕಥೆಯನ್ನು ಮೂಲವಾಗಿಟ್ಟಿಕೊಂಡು ರಾಜ್‌ ಬಿ ಶೆಟ್ಟಿ ಈ ಚಿತ್ರದ ಕಥೆ ಬರೆದಿದ್ದಲ್ಲದೆ, ನಿರ್ಮಾಣ ಕೂಡ ಮಾಡಿದ್ದಾರೆ. ಸಾಮಾನ್ಯವಾಗಿ ರಾಜ್‌ ಬಿ ಶೆಟ್ಟಿ ಚಿತ್ರಗಳ ಮತ್ತೆರಡು ಪಿಲ್ಲರ್‌ಗಳಾದ ಮ್ಯೂಸಿಕ್‌ ಕಂಪೋಸರ್‌ ಮಿಧುನ್‌ ಮುಕುಂದನ್‌ ಹಾಗೂ ಸಿನಿಮಾಟೋಗ್ರಾಫರ್‌ ಪ್ರವೀಣ್‌ ಶ್ರೀಯನ್‌ ಇಲ್ಲೂ ಮುಂದುವರಿದಿದ್ದಾರ.ೆ ಚೈತ್ರಾ ಜೆ ಆಚಾರ್‌, ಸಂಯುಕ್ತಾ ಹೊರನಾಡ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಹರಕೆ ಕುರಿ ತಪ್ಪಿಸಿಕೊಂಡಿದೆ. ಆದ್ರೆ ಆ ಕುರಿ ಹಿಂದೆ ಬಂದ್ರೆ ಕುರಿ ಆಗಿರಲ್ಲ.. ಮಾರಿ ಆಗಿರುತ್ತೆ..'ಎನ್ನುವ ಡೈಲಾಗ್‌ ಮೂಲಕ ಆರಂಭವಾಗುವ ಟೋಬಿ ಟ್ರೇಲರ್‌ನಲ್ಲಿ, ತಮಾಷೆ, ಆಕ್ರೋಶ, ದ್ವೇಷ, ಸಮಾಜದ ದೊಡ್ಡವರಿಂದ ಆಗುವ ಅನ್ಯಾಯ, ಬಡವರನ್ನು ಹರಕೆಯ ಕುರಿ ಮಾಡುವ ಹಂತ ಎಲ್ಲವೂ ಕಾಣಸಿಗುತ್ತದೆ. ಅದರಲ್ಲೂ 'ತಣ್ಣಗಾದ್ರೆ ಸೌದೆಗೆ ಏನ್‌ ಬೆಲೆ.. ಬೆಂಕಿ ಬಿದ್ರೆ ತಾನೆ..ದೊಡ್ಡವರ ಮೈ ಕಾಯೋದು..' ಎನ್ನುವ ಡೈಲಾಗ್‌ ಟ್ರೇಲರ್‌ ವೀಕ್ಷಿಸಿದವರ ಗಮನಸೆಳೆದಿದೆ.

Tap to resize

Latest Videos

ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ನಟ ನಿರ್ದೇಶಕರಾದ ರಕ್ಷಿತ್‌ ಶೆಟ್ಟಿ, ರಿಷಭ್‌ ಶೆಟ್ಟಿ ಟ್ರೇಲರ್‌ಅನ್ನು ಮನಸಾರೆ ಹೊಗಳಿದ್ದಾರೆ. ಈಗಾಗಲೇ ಸ್ವತಃ ರಾಜ್‌ ಬಿ ಶೆಟ್ಟಿ ಹಲವಾರು ಸಂದರ್ಶನಗಳಲ್ಲಿ ಟೋಬಿ ಸಿನಿಮಾಗಾಗಿ ಪಟ್ಟಷ್ಟು ಕಷ್ಟವನ್ನು ಬೇರೆ ಯಾವ ಸಿನಿಮಾಕ್ಕೂ ಮಾಡಿರಲಿಲ್ಲ ಎಂದು ಹೇಳಿದ್ದರು. ಅವರು ಹೇಳಿದಂತೆ ಟ್ರೇಲರ್‌ನ ಪ್ರತಿ ಫ್ರೇಮ್‌ನಲ್ಲೂ ರಾಜ್‌ ಬಿ ಶೆಟ್ಟಿ ನಟನೆಯ ಹಲವು ಮಜಲುಗಳು ಕಾಣುತ್ತಾ ಹೋಗುತ್ತದೆ.

ಟ್ರೇಲರ್‌ನಲ್ಲಿ ರಾಜ್‌ ಬಿ ಶೆಟ್ಟಿ ಕಾಣುವ ಪ್ರತಿ ಹಂತದಲ್ಲಿ ಮುಗ್ಧ ಹಾಗೂ ಭೀಕರವಾಗಿ ಕಾಣುತ್ತಾರೆ. ಎರಡೂ ಶೇಡ್‌ನಲ್ಲಿನ ವ್ಯಕ್ತಿತ್ವಗಳಿಗೂ ಅವರು ಮನಸಾರೆ ಜೀವತುಂಬಿದ್ದಾರೆ ಎನ್ನುವುದು ಕಾಣುತ್ತದೆ.

 

ಟೋಬಿ ಚಿತ್ರದ ವಿತರಣೆ ಹಕ್ಕು ತೆಗೆದುಕೊಂಡ ಕೆವಿಎನ್‌ ಪ್ರೊಡಕ್ಷನ್

ಇನ್ನು ಯೂಟ್ಯೂಬ್‌ನಲ್ಲಿ ಟ್ರೇಲರ್‌ ವೀಕ್ಷಿಸಿದ ಬಹುತೇಕರು, ಚಿತ್ರದ ಮೇಕಿಂಗ್‌, ಡೈಲಾಗ್‌ ಅನ್ನು ಮೆಚ್ಚಿಕೊಂಡಿದ್ದು, ರಾಜ್‌ ಬಿ ಶೆಟ್ಟಿ ತಲೆಯಲ್ಲಿ ಕೂದಲು ಕಂಡು ಖುಷಿಯನ್ನೂ ಪಟ್ಟಿದ್ದಾರೆ. 'ಕನ್ನಡ ಚಿತ್ರರಂಗದ ಮತ್ತೊಂದು, ಮೈನವಿರೇಳಿಸುವ ನಟನೆಯಲ್ಲಿ ರಾಜ್ ಬಿ ಶೆಟ್ಟಿಯವರ ಟೋಬಿ ಚಿತ್ರತಂಡಕ್ಕೆ ಶುಭಕೋರುತ್ತೇನೆ, 25 ನೇ ತಾರಿಖಿನವರೆಗೂ ಈ ಟ್ರೈಲರ್ ಸಾಕು' ಎಂದು ಚಿತ್ರದ ಅಭಿಮಾನಿಯೊಬ್ಬರು ಬರೆದಿದ್ದಾರೆ.' ತಾಳ್ಮೆ ಇರೋರು ಮಾತ್ರ ಸಿನೆಮಾ ನೋಡಕ್ ಹೋಗಿ... ಯಾಕಂದ್ರ ರಾಜ್ ಬಿ ಶೆಟ್ಟಿ ಡೈರೆಕ್ಷನ್ ಅದಕ ಅರಗಸ್ಕೊಣಕ್ ವಾರ ಬೇಕ...' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಏನ್‌ ಸಾರ್‌ ಒಂದೊಂದು ಸೀನ್‌ ಕೂಡ ಮೈನವರೇಳಿಸೋ ಹಾಗೆ ಇದೆ. ಚಿತ್ರದ ಟ್ರೇಲರ್‌ ಸೂಪರ್‌ ಆಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ..' ಎಂದು ಇನ್ನೊಬ್ಬರು ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ 'ಟೋಬಿ'ಯ ರಕ್ತ- ಸಿಕ್ತ ಅವತಾರ ಫುಲ್ ವೈರಲ್: ಪಾತ್ರದ ಬಗ್ಗೆ ರಾಜ್.ಬಿ.ಶೆಟ್ಟಿ ಹೇಳಿದ್ದೇನು?

click me!