'ದೇವನಗರಿಯ ಬಗ್ಗೆ ಮೂರ್ಖರ ಹಾಗೆ ಮಾತನಾಡಬೇಡಿ..' ಕಾಂಗ್ರೆಸ್‌ ನಾಯಕ ಮಿಥುನ್‌ ರೈ ವಿರುದ್ಧ ರಕ್ಷಿತ್‌ ಶೆಟ್ಟಿ ಕಿಡಿ!

By Santosh NaikFirst Published Mar 11, 2023, 11:16 AM IST
Highlights

ಕೃಷ್ಣನಗರಿ, ದೇವನಗರಿ ಉಡುಪಿಯ ಕೃಷ್ಣಮಠಕ್ಕೆ ಮುಸ್ಲಿಂ ಅರಸರು ಜಾಗವನ್ನು ದಾನವಾಗಿ ನೀಡಿದ್ದರು ಎನ್ನುವ ಕೆಪಿಸಿಸಿ ಮುಖ್ಯ ಕಾರ್ಯದರ್ಶಿ ಮಿಥುನ್‌ ರೈ ಹೇಳಿಕೆಗೆ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಕಿಡಿಕಾರಿದ್ದಾರೆ. ಈ ಕುರಿತಾಗಿ ಅವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮಾ.11): ಉಡುಪಿಯಲ್ಲಿರುವ ವಿಶ್ವಪ್ರಸಿದ್ಧ ಕೃಷ್ಣಮಠಕ್ಕೆ ಮುಸ್ಲಿಂ ಅರಸರು ಭೂಮಿಯನ್ನು ದಾನವಾಗಿ ನೀಡಿದ್ದರು ಎಂದು ಕೆಪಿಸಿಸಿ ಮುಖ್ಯ ಕಾರ್ಯದರ್ಶಿ ಮಿಥುನ್‌ ರೈ ಅವರ ಹೇಳಿಕೆಗೆ ಸ್ಯಾಂಡಲ್‌ವುಡ್‌ ಹೀರೋ, ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಕಿಡಿಕಿಡಿಯಾಗಿದ್ದಾರೆ, ಈ ಕುರಿತಾಗಿ ಟ್ವಿಟರ್‌ನಲ್ಲಿ ಮಿಥುನ್‌ ರೈ ಅವರ ಹೆಸರನ್ನು ಬಳಸದೇ ಅವರು ಟ್ವೀಟ್‌ ಮಾಡಿದ್ದಾರೆ. 'ದೇವನಗರಿ ಉಡುಪಿಯ ಇತಿಹಾಸ ಸಾವಿರಾರು ವರ್ಷಗಳ ಹಿಂದಿನದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ ಎಂದ ಮೇಲೆ ಸಾರ್ವಜನಿಕ ವೇದಿಕೆಯಲ್ಲಿ ಮೂರ್ಖತನದ ಮಾತನಾಡುವುದೇಕೆ? ಎಂದು ಪ್ರಶ್ನೆ ಮಾಡಿ ಟ್ವೀಟ್‌ ಮಾಡಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಅವರು ಮಾಡಿರುವ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು,  ಅಂದಾಜು 58 ಸಾವಿರ ಮಂದಿ ಈ ಟ್ವೀಟ್‌ಅನ್ನು ನೋಡಿದ್ದಾರೆ.  244 ಮಂದಿ ರೀಟ್ವೀಟ್‌ ಮಾಡಿದ್ದರೆ,  31 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದಾರೆ.  ಅಂದಾಜು ಎರಡೂವರೆ ಸಾವಿರ ಮಂದಿ ಈ ಟ್ವೀಟ್‌ಅನ್ನು ಲೈಕ್‌ ಮಾಡಿದ್ದಾರೆ. ಇತ್ತೀಚೆಗೆ ಮೂಡಬಿದಿರೆ ತಾಲೂಕಿನ ಪುತ್ತಿಗೆಯಲ್ಲಿ ನೂರಾನಿ ಮಸೀದಿ ವತಿಯಿಂದ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಎನ್ನುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಿಥುನ್‌ ರೈ, ಪ್ರಸ್ತುತ ಉಡುಪಿಯಲ್ಲಿರುವ ಕೃಷ್ಣಮಠಕ್ಕೆ ಭೂಮಿಯನ್ನು ದಾನ ಮಾಡಿದ್ದು ಮುಸ್ಲಿಂ ಅರಸರು' ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಅವರ ಮಾತಿಗೆ ಕರಾವಳಿ ಭಾಗದಲ್ಲಿ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

 

The temple town of Udupi has written history of more than thousand years… Why talk nonsense on a public platform when you have no idea???

— Rakshit Shetty (@rakshitshetty)

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ ಆಪ್ತರಾಗಿ ಗುರುತಿಸಿಕೊಂಡಿರುವ ಮಿಥುನ್‌ ರೈ ಈ ಬಾರಿ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ  ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್, ಕಾಂಗ್ರೆಸ್ ನಾಯಕರು ಇಂತಹ ಆಧಾರ ರಹಿತ ಹೇಳಿಕೆಗಳನ್ನು ನೀಡುವ ಮುನ್ನ ಎರಡು ಬಾರಿ ಯೋಚಿಸಬೇಕು ಎಂದು ಹೇಳಿದ್ದಾರೆ. 800 ವರ್ಷಗಳ ಇತಿಹಾಸವಿರುವ ಶ್ರೀಕೃಷ್ಣ ದೇಗುಲಕ್ಕೆ ‘ಉಂಬಳಿ’ (ಭೂಮಿಯ ದತ್ತಿ) ಮೂಲಕ ಭೂಮಿ ದೊರೆತಿದೆ ಎಂದು ಶಾಸಕರು ಮಾಹಿತಿ ನೀಡಿದ್ದರು.

ಕೃಷ್ಣಮಠಕ್ಕೆ ಭೂಮಿ ಕೊಟ್ಟವರು ಮುಸ್ಲಿಂ ಅರಸರು, ಮಿಥುನ್ ರೈ ಹೇಳಿಕೆಗೆ ಸಿಡಿದೆದ್ದ ಕರಾವಳಿ

"ಅತ್ತೂರು ಚರ್ಚ್, ಸುಬ್ರಹ್ಮಣ್ಯ ದೇವಸ್ಥಾನಗಳು ಎಲ್ಲ ಧರ್ಮದ ಭಕ್ತರನ್ನು ಆಕರ್ಷಿಸುತ್ತಿದೆ ಮತ್ತು ಹಿಂದಿನಂತೆ ಒಗ್ಗಟ್ಟಾಗಿ ಉಳಿಯಬೇಕು ಎಂಬುದಕ್ಕೆ ನಾನು ಉದಾಹರಣೆಗಳನ್ನು ನೀಡಿದ್ದೇನೆ. ವೀಡಿಯೊ ಕ್ಲಿಪ್ ನನ್ನ ಹೇಳಿಕೆಯನ್ನು ತಿರುಚಿದೆ. ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ನಾಯಕರ ರೀತಿ ಈ ಪ್ರದೇಶದಲ್ಲಿ ಕೋಮು ದ್ವೇಷವನ್ನು ಹರಡುವ ಉದ್ದೇಶ ನನಗಿಲ್ಲ ಎಂದು ರೈ ತಮ್ಮ ಹೇಳಿಕೆಯ ಬಗ್ಗೆ ತಿಳಿಸಿದ್ದರು. ಮಿಥುನ್‌ ರೈ ಹೇಳಿಕೆ ವಿವಾದ ಎಬ್ಬಿಸಿದ್ದರೂ ತಮ್ಮ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದ್ದಾರೆ. 2017 ರಲ್ಲಿ ಮಾಡಿದ ಹಿರಿಯ ಪೇಜಾವರ ಶ್ರೀಗಳ ಭಾಷಣವನ್ನು ಆಧರಿಸಿ ಅವರು ತಮ್ಮ ಮಾತುಗಳನ್ನು ಹೇಳಿದ್ದಾಗಿ ತಿಳಿಸಿದ್ದರು.

ಕರಾವಳಿಯಲ್ಲಿ 'ಕೈ' ನಾಯಕನ ವಿವಾದಾತ್ಮಕ ಮಾತು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ರಕ್ಷಿತ್‌ ಶೆಟ್ಟಿ ಅವರ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. 'ಶೀಘ್ರದಲ್ಲಿಯೇ ಕಾಂಗಿಗಳು ನಿಮ್ಮನ್ನು ಸಂಘಿ ಎಂದು ಟೀಕಿಸಿ ದಾಳಿ ಮಾಡಲಿದ್ದಾರೆ. ಮತಕ್ಕಾಗಿ ಕೇವಲ ಮೂರ್ಖತನದ ಮಾತನ್ನಾಡುವ ವ್ಯಕ್ತಿಗಳ ವಿರುದ್ಧ ಕೊನೆಗೂ ಒಬ್ಬ ವ್ಯಕ್ತಿ ದನಿ ಎತ್ತಿದ್ದಾರೆ' ಎಂದು ಶರತ್‌ ಎನ್ನುವ ವ್ಯಕ್ತಿ ಬರೆದಿದ್ದಾರೆ. 'ರಕ್ಷಿತ್‌ ಶೆಟ್ಟಿ ಥ್ಯಾಂಕ್‌ ಯು, ಆದರೆ, ಕಾಂಗಿ ಟ್ರೋಲ್‌ಗಳು ನಿಮ್ಮನ್ನು ಸಂಘಿ, ಗೋಮೂತ್ರ ಕುಡಿಯುವವನು ಚಡ್ಡಿ ಎಂದು ಹೇಳುವ ಮೂಲಕ ನಿಮಗೆ ಲೇಬಲ್‌ ಕಟ್ಟುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಸಿದ್ಧರಾಗಿರಿ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಪ್ರೀತಿಯ ರಕ್ಷಿತ್‌ ಶೆಟ್ಟಿ ಅವರೇ ಈ ಮೂರ್ಖರ ಮಾತುಗಳಿಗೆ ಪ್ರತಿಕ್ರಿಯೆ ನೀಡಬೇಡಿ. ಪಬ್ಲಿಸಿಟಿ ಪಡೆಯುವ ಸಲುವಾಗಿ ಅವರು ಇಂಥ ಹೇಳಿಕೆ ನೀಡುತ್ತಿರುತ್ತಾರೆ. ಇಂಥವರ ಬಗ್ಗೆ ಎಚ್ಚರದಿಂದಿರಿ. ನೀವು ಸಂಸ್ಕೃತಿ ಇರುವಂಥ ವ್ಯಕ್ತಿ' ಎಂದು ಇನ್ನೊಬ್ಬರು ಬರೆದಿದ್ದಾರೆ.

 

click me!