Rishab Shetty Meets Rajinikanth: ಕಾಂತಾರದ ಶಿವನಿಗೆ ಗೋಲ್ಡ್‌ ಚೈನ್‌ ಗಿಫ್ಟ್‌ ಆಗಿ ನೀಡಿದ ರಜನಿಕಾಂತ್‌?

By Santosh Naik  |  First Published Oct 29, 2022, 8:58 PM IST

ಕಾಂತಾರ ಚಿತ್ರದ ದೊಡ್ಡ ಮಟ್ಟದ ಯಶಸ್ಸಿನಿಂದ ಸಂಭ್ರಮದಲ್ಲಿರುವ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿಯವರಿಗೆ ಮತ್ತೊಂದು ಸಂಭ್ರಮ ಇತ್ತೀಚಗೆ ಮುಟ್ಟಿತ್ತು. ಚಿತ್ರವನ್ನು ನೋಡಿ ಭಾರತೀಯ ಚಿತ್ರರಂಗದ ಖ್ಯಾತ ಸೂಪರ್‌ ಸ್ಟಾರ್‌ ರಜನಿಕಾಂತ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದು ಮಾತ್ರವಲ್ಲದೆ, ರಿಷಬ್‌ ಶೆಟ್ಟಿ ಅವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ.


ಬೆಂಗಳೂರು (ಅ. 29): ಕಾಂತಾರ ಚಿತ್ರ ಬಾಕ್ಸಾಫೀಸ್‌ ಧೂಳೆಬ್ಬಿಸುತ್ತಿರುವ ಲೆಕ್ಕಾಚಾರ ನೋಡಿದರೆ, ಶೀಘ್ರದಲ್ಲಿಯೇ ಚಿತ್ರ 300 ಕೋಟಿಯ ಕ್ಲಬ್‌ ಸೇರುವ ಸಾಧ್ಯತೆ ಕಾಣುತ್ತಿದೆ. ಈಗಾಗಲೇ ಕೆಜಿಎಫ್‌-2 ಬಳಿಕ ಕನ್ನಡ ಚಿತ್ರರಂಗದಲ್ಲಿ ಗರಿಷ್ಠ ಗಳಿಕೆ ಕಂಡ ಚಿತ್ರ ಎನ್ನುವ ಹೆಗ್ಗಳಿಕೆ ಕಾಂತಾರ ಚಿತ್ರಕ್ಕೆ ಸೇರಿದೆ. ಚಿತ್ರವನ್ನು ನೋಡಿದ ಎಲ್ಲಾ ವರ್ಗದ ಜನರು ಮೆಚ್ಚಗೆಯ ಮಾತನ್ನಾಡುತ್ತಿದ್ದಾರೆ. ಚಿತ್ರದ ಸಂಗೀತ, ಕ್ಯಾಮೆರಾ ವರ್ಕ್‌, ಸ್ಥಳೀಯವಾಗಿರುವಂಥ ಕಥೆಯನ್ನು ಸಿನಿಮಾ ರೂಪಕ್ಕೆ ಮಾಡಿರುವ ರೀತಿ ಅದರೊಂದಿಗೆ ಕೊನೆಯ 20 ನಿಮಿಷದ ಕ್ಲೈಮಾಕ್ಸ್‌ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಾಳೆಗೆ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಪೂರೈಸಲಿದೆ. ಕಾಂತಾರದ ಈ ದೊಡ್ಡ ಯಶಸ್ಸಿನ ನಡುವೆ ಚಿತ್ರ ತಂಡಕ್ಕೆ ಸಂಭ್ರಮ ತಂದಿರುವ ಇನ್ನೊಂದು ವಿಚಾರವೆಂದರೆ,ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಈ ಚಿತ್ರದ ಬಗ್ಗೆ ಮಾತನಾಡಿರುವುದು. ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ರಜನಿಕಾಂತ್‌ ಅವರಿಗಾಗಿಯೇ ವಿಶೇಷ ಶೋ ಏರ್ಪಡಿಸಿ ಚಿತ್ರ ವೀಕ್ಷಣೆಯ ವ್ಯವಸ್ಥೆ ಮಾಡಿತ್ತು. ಚಿತ್ರವನ್ನು ನೋಡಿದ ಬಳಿಕ ರಜನಿಕಾಂತ್‌ ಇದು ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್‌ ಎಂದು ಹೊಗಳಿ ಟ್ವೀಟ್‌ ಮಾಡಿದ್ದರು.

👍😍

— Rishab Shetty (@shetty_rishab)


ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಮಾತನಾಡಿದ್ದು ಮಾತ್ರವಲ್ಲ ಸ್ವತಃ ರಿಷಬ್‌ ಶೆಟ್ಟಿಯವರಿಗೆ ಕರೆ ಮಾಡಿಯೂ ಮಾತನಾಡಿದ್ದರು. ಅಕ್ಟೋಬರ್‌ 26 ರಂದು ರಜನಿಕಾಂತ್‌ ಟ್ವೀಟ್‌ ಮಾಡಿದ್ದರೆ, ಆ ಬಳಿಕ ರಿಷಬ್‌ ಶೆಟ್ಟಿ ಚೆನ್ನೈನಲ್ಲಿರುವ ರಜನಿಕಾಂತ್‌ ನಿವಾಸಕ್ಕೆ ಹೋಗಿ ಅವರನ್ನು ಭೇಟಿ ಮಾಡಿದ್ದಾರೆ. ರಜನಿಕಾಂತ್‌ ಅವರನ್ನು ಭೇಟಿ ಮಾಡಿದ ಚಿತ್ರಗಳನ್ನು ಶನಿವಾರ ರಿಷಬ್‌ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಿಷಭ್‌ ಶೆಟ್ಟಿಯವರಿಗೆ ಈ ವೇಳೆ ರಜನಿಕಾಂತ್‌ ಸನ್ಮಾನ ಮಾಡಿದ್ದು ಮಾತ್ರವಲ್ಲ ಚಿನ್ನದ ಚೈನನ್ನು ಅವರ ಕುತ್ತಿಗೆಗೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಸ್ವತಃ ರಿಷಭ್‌ ಶೆಟ್ಟಿ ಹಂಚಿಕೊಂಡಿರುವ ಚಿತ್ರಗಳೇ ತಿಳಿಸಿಕೊಟ್ಟಿವೆ,

ರಜನಿಕಾಂತ್‌ ಚಿತ್ರಗಳನ್ನು ಹಂಚಿಕೊಳ್ಳುವ ವೇಳೆ, ಅವರದೇ ಚಿತ್ರದ ಡೈಲಾಗ್‌ಅನ್ನು ಸ್ವಲ್ಪ ಚೇಂಜ್ ಮಾಡಿ ರಿಷಬ್‌ ಶೆಟ್ಟಿ ಬರೆದಿದ್ದರು. ನಾನು ಒಂದು ಸಾರಿ ಹೇಳಿದ್ರೆ ನೂರು ಸಾರಿ ಹೇಳಿದ ಹಾಗೆ ಎನ್ನುವ ರಜನಿ ಡೈಲಾಗ್‌ಅನ್ನು, 'ನೀವು ಒಂದು ಸಲ ಹೊಗಳಿದ್ರೆ, ನೂರು ಸಲ ಹೊಗಳ್ದಂಗೆ ನಮಗೆ. ಧನ್ಯವಾದಗಳು ರಜನಿಕಾಂತ್‌ ಸರ್‌. ನಮ್ಮ ಕಾಂತಾರ ಚಿತ್ರ ನೋಡಿ ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ' ಎಂದು ಬರೆದಿರುವ ರಿಷಭ್‌ ಅದರೊಂದಿಗೆ ಕಾಂತಾರ ಚಿತ್ರದ ಹ್ಯಾಶ್‌ಟ್ಯಾಗ್‌, ನಿರ್ಮಾಪಕರಾದ ವಿಜಯ್‌ ಕಿರಗಂದೂರು, ಹೊಂಬಾಳೆ ಫಿಲ್ಮ್ಸ್‌, ನಾಯಕಿ ಸಪ್ತಮಿ ಗೌಡ, ನಿರ್ಮಾಪಕ ಕಾರ್ತಿಕ್‌ ಗೌಡ ಅವರನ್ನು ಟ್ಯಾಗ್‌ ಮಾಡಿದ್ದಾರೆ.

Tap to resize

Latest Videos

Rishab Shetty ರಜಿನಿಕಾಂತ್‌ ಭೇಟಿ ಮಾಡಿದ ಆಶೀರ್ವಾದ ಪಡೆದ ಕಾಂತಾರ ಶಿವ!

ಇವರು ಹಂಚಿಕೊಂಡಿರುವ ಒಂದು ಚಿತ್ರದಲ್ಲಿ ರಜನಿಕಾಂತ್‌ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಆ ಚಿತ್ರದಲ್ಲಿ ರಿಷಭ್‌ ಕುತ್ತಿಗೆಯಲ್ಲಿ ಚಿನ್ನದ ಸರವಿದ್ದಿರಲಿಲ್ಲ. ಉಳಿದ ನಾಲ್ಕೂ ಚಿತ್ರಗಳಲ್ಲಿ ಅವರ ಕುತ್ತಿಗೆಯಲ್ಲಿ ಸರವಿತ್ತು. ಇದನ್ನೇ ಅಭಿಮಾನಿಯೊಬ್ಬರು ಗಮನಿಸಿ ರಿಷಬ್‌ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಿಷಭ್‌ ಹೌದು ಎನ್ನುವಂಥೆ 'ಥಂಬ್‌' ಇಮೋಜಿ ಹಾಕಿ ಸಂಭ್ರಮಿಸಿದ್ದಾರೆ.

'ಭಾರತೀಯ ಸಿನಿಮಾದ ಮಾಸ್ಟರ್‌ ಪೀಸ್‌' ಕಾಂತಾರದ ಬಗ್ಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಮಾತು!

ಕನ್ನಡದಲ್ಲಿಯೇ ಮಾತನಾಡಿದ ರಜನಿಕಾಂತ್‌: ಇನ್ನು ರಿಷಬ್‌ ಶೆಟ್ಟಿ ಅವರೊಂದಿಗೆ ರಜನಿಕಾಂತ್‌ ಎಷ್ಟು ಹೊತ್ತು ಮಾತನಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಆದರೆ, ಅವರು ರಿಷಬ್‌ ಜೊತೆ ಸಂಪೂರ್ಣವಾಗಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಇದನ್ನು ಸ್ವತಃ ರಿಷಭ್‌ ಕೂಡ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. 'ರಜನಿಕಾಂತ್ ಸರ್ ನಿಮ್ಮ ಜೊತೆ ಕನ್ನಡದಲ್ಲಿ ಮಾತನಾಡಿದರ ಅಥವಾ ಇಂಗ್ಲಿಷ್ ಇಲ್ಲ ತಮಿಳೋ'  ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ಸ್ವತಃ ರಿಷಬ್‌, 'ಕನ್ನಡದಲ್ಲಿ' ಎಂದು ಟ್ವೀಟ್‌ ಮಾಡಿದ್ದಾರೆ.

click me!