ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪತ್ನಿಯನ್ನೇ ಪತಿ ಹತ್ಯೆಗೈದಿರುವ ಘಟನೆ ಮೈಸೂರು ತಾಲೂಕಿನ ಚೆಟ್ಟನಹಳ್ಳಿಯಲ್ಲಿ ಸಂಭವಿಸಿದೆ. ಮತ್ತೊಂದೆಡೆ ಮಹಿಳೆಯೊಬ್ಬಳು ಆರು ಮತ್ತು ನಾಲ್ಕು ವರ್ಷದ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಎರಡು ಸುದ್ದಿಯ ವಿವರ ಈ ಕೆಳಗಿನಂತಿದೆ
ಮೈಸೂರು, (ಜೂನ್. 28): ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿ ತಲೆಯನ್ನೇ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ವರುಣ ಹೋಬಳಿಯ ಚಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ (40) ಕೊಲೆಯಾದ ದುರ್ದೈವಿ. ದೇವರಾಜು ಹತ್ಯೆ ಮಾಡಿದ ಪಾಪಿ ಪತಿ.
ದೇವರಾಜುಗೆ ಪುಟ್ಟಮ್ಮ 2ನೇ ಹೆಂಡತಿಯಾಗಿದ್ದಳು. ಇದೇ ರೀತಿ ಮೊದಲನೇ ಹೆಂಡತಿಯನ್ನು ಕೊಲೆ ಮಾಡಲು ಯತ್ನಿಸಿದ್ದ. ಗಂಡನ ಕಾಟಕ್ಕೆ ಆಕೆ ದೂರವಾಗಿದ್ದಾರಂತೆ. ಅದಾದ ಬಳಿಕ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ಮದುವೆಯಾಗಿದ್ದ. ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳ ನೀಡುತ್ತಿದ್ದ. ಇವರಿಗೆ 20 ವರ್ಷದ ಮಗಳೂ ಕೂಡ ಇದ್ದಾಳೆ ಎನ್ನಲಾಗಿದೆ.
Crime News: ಪತಿ, ಅತ್ತೆಗೆ ಮತ್ತು ಬರುವ ಔಷಧಿ ಕುಡಿಸಿ, ಚಿನ್ನಾಭರಣ ಕದ್ದು ಪ್ರೇಮಿಯೊಂದಿಗೆ ಮಹಿಳೆ ಪರಾರಿ
ನಿನ್ನೆ(ಸೋಮವಾರ) ಮಗಳು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಪುಟ್ಟಮ್ಮನ ಜತೆ ಗಲಾಟೆ ಮಾಡಿ ಆಕೆಯ ತಲೆಯನ್ನೇ ಕತ್ತರಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಗಳು ಪವಿತ್ರಾ ವರುಣಾ ಠಾಣೆಯಲ್ಲಿ ತಂದೆಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ದೇವರಾಜನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇಬ್ಬರು ಮಕ್ಕಳೊಮದಿಗೆ ತಾಯಿ ಆತ್ಮಹತ್ಯೆ
ಇಬ್ಬರು ಮಕ್ಕಳ ಜೊತೆ ತಾಯಿ (Mother) ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ.
ಕೌಟುಂಬಿಕ ಕಲಹ ಹಿನ್ನೆಲೆ 32 ವರ್ಷದ ಸರೋಜ ತನ್ನ 6 ಮತ್ತು 4 ವರ್ಷದ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೀತಾ ಮತ್ತು ಕುಸುಮಾ ಮೃತ ಮಕ್ಕಳು. ಕೆಲ ದಿನಗಳ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರಕ್ಕೆ ಆಗಮಿಸಿದ್ದ ಸರೋಜ, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಈ ಪ್ರಕರಣ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.