
ರಮಾಕಾಂತ್ ಆರ್ಯನ್, ಸುವರ್ಣನ್ಯೂಸ್
ಧೋನಿ..ಆಡಿದ್ದೇ ದಾಖಲೆಯಂತೆ....
ವಿದಾಯಗಳು ಹಾಗೇ ಇರಬೇಕು. ಛೇ ಅವನಿರಬೇಕಿತ್ತು ಎಂದು ಹಂಬಲಿಸುವಂತೆ..ದಾಖಲೆಗಾಗಿ ಆಡುತ್ತಾ ಆಡುತ್ತಾ ವಿಆರ್ ಎಸ್ ಕೊಡುವವರೆಗೂ ಆಡಬಾರದು.
ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಮುಗಿದ ಮೇಲೆ ಸ್ಟಂಪ್ ಕಿತ್ತುಕೊಂಡು ಬಂದಾಗಲೂ ಧೋನಿ, ಟೆಸ್ಟ್ ನಿಂದ ರಿಟೈರ್ಡ್ ಆಗುತ್ತಾನೆ ಅಂತ ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ. ಸುಮ್ಮನೇ ಟೆಸ್ಟ್ ಸಾಕು ಎಂದುಬಿಟ್ಟಿದ್ದ..ನಿನ್ನೆಯೂ ಹಾಗೆಯೇ ಇನ್ಸ್ಟಾಗ್ರಾಮ್ ನಲ್ಲಿ ವಿದಾಯ ಹೇಳಿದ್ದಾನೆ. ಇನ್ಮೇಲೆ ಬ್ಲೂ ಜೆರ್ಸಿ ಹಾಕಲ್ಲ ಅಂತಾ . ಊಹೆಗಳನ್ನ ದಾಟಿದವನಿಗೆ ಅಂತಹ ಗೆಲುವುಗಳು ಅಡಿಯಾಳಾಗುತ್ತವಾ ? ಗೊತ್ತಿಲ್ಲ..
"
ಆಟದಲ್ಲಿ ಸೆಹ್ವಾಗ್, ನೋಟದಲ್ಲಿ ತೆಂಡುಲ್ಕರ್; ಶಫಾಲಿ ಆಟಕ್ಕೆ ಎದುರಾಳಿ ಪಂಚರ್!.
ಏಳು ವರ್ಷಗಳೇ ಕಳೆದು ಹೋಯಿತು ಭಾರತ ಐಸಿಸಿ ನಡೆಸುವ ಟ್ರೋಫಿಯೊಂದನ್ನ ಗೆದ್ದು. ಧೋನಿ ಗೆಲ್ಲಿಸಿದ ಚಾಂಪಿಯನ್ಸ್ ಟ್ರೋಫಿಯೇ ಕೊನೆ. ಆಮೇಲೆ ಒಂದೇ ಒಂದು ಐಸಿಸಿ ಟ್ರೋಫಿ ಭಾರತಕ್ಕೆ ಆಗಿ ಬರಲಿಲ್ಲ. ಧೋನಿ ಇಲ್ಲದ ಖಾಲಿತನ ಈ ಪರಿ ಕಾಡಬೇಕೆ?
ಲಂಕಾ ವಿರುದ್ಧದ ಆ ಅವಿಸ್ಮರಣೀಯ ಸಿಕ್ಸರ್ ಭಾರತದ ಕ್ರಿಕೆಟ್ ಚರಿತ್ರೆಯನ್ನೇ ಬೆಳಕಾಗಿಸಿತ್ತು...ಆ ಬೆಳಕಾಗಿ ಬಂದವನು ರಾಂಚಿಯ ಕಟ್ಟುಮಸ್ತಾದ ಹುಡುಗ ಮಹೇಂದ್ರ ಬಾಹುಬಲಿ...
ಅಪ್ಪ ತರಕಾರಿ ವ್ಯಾಪಾರಿ, ಮಗಳು ಭಾರತ ಕ್ರಿಕೆಟ್ ತಂಡದ ವೀರ ನಾರಿ!...
ಅಷ್ಟು ಹೊತ್ತಿಗೆ ಭಾರತ ವಿಶ್ವಕಪ್ ಇಲ್ಲದ 28 ವರ್ಷಗಳನ್ನ ಕಳೆದಿತ್ತು...ಪಾಕಿಸ್ತಾನ , ಲಂಕಾ ತಂಡಗಳೂ ಕಪ್ ಗೆದ್ದಿದ್ದವು. ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದೂ ಗೆದ್ದೂ ಕಣ್ಣಲ್ಲೇ ಚಿತ್ ಮಾಡುತ್ತಿತ್ತು...
ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಕ್ರಿಕೆಟ್ ಗೆ ಹೊಸ ಖದರ್ ತಂದುಕೊಟ್ಟ ಗಂಗೂಲಿ ಇದ್ದೂ ಭಾರತ ವಿಶ್ವಕಪ್ ಚುಂಬಿಸಲಿಲ್ಲ...
ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್ ವಿರುದ್ಧ ಹೊಡೆದಿದ್ದು ಸೆಂಚುರಿ..!
2007 ರ ದಿನಗಳವು...ಟಿ-20 ವಿಶ್ವಕಪ್ ನಿಂದ ಬೇಕೆಂದೇ ಹಿರಿ ತಲೆಗಳು ದೂರವುಳಿದಿದ್ದವು. ಯಾರಿಗೂ ಬೇಡವಾಗಿದ್ದ ನಾಯಕತ್ವ ಧೋನಿಯ ಹೆಗಲೇರಿತ್ತು. ಮಾಯೆಯಂತೆ, ಮಿಂಚಂತೆ ಕಪ್ ಗೆಲ್ಲಿಸಿಕೊಟ್ಟಿದ್ದ ಧೋನಿ. ಅವನು ಅನೂಹ್ಯ....
ಆ ಒಂದು ವಿಜಯ ಹಿರಿತಲೆಗಳ ಅಸ್ತಿತ್ವವನ್ನೇ ಅಲುಗಾಡಿಸಹುದೆಂದು ಖುದ್ದು ಅವರೇ ಕನವರಿಸಿರಲಿಲ್ಲ.
ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ
ಧೋನಿಯ ಮುಂದೆ ಅಷ್ಟು ಹೊತ್ತಿಗೆ 2011ರ ವಿಶ್ವಕಪ್ ತಿರುಗುತ್ತಿತ್ತು..ಮುಂದಿನ ವಿಶ್ವಕಪ್ ಗೆ ಹಿರಿತಲೆಗಳು ಬೇಡವೆಂದೇ ವಾದಿಸಿದ್ದ. ತನ್ನ ನಿರ್ಧಾರವೇ ಸರಿ ಎಂಬಂತೆ ಭಾರತದ ಭಾಗ್ಯವಿಧಾತನಂತೆ ಕಪ್ ಗೆಲ್ಲಿಸಿಕೊಟ್ಟಿದ್ದ. ಇತಿಹಾಸಕ್ಕೆ ಗೆಲುವುಗಳ ಚಪಲ..ಉಳಿದದ್ದು ಖಾಲಿ ಟೀಕೆ.
ಒಪ್ಪಿಕೊಳ್ಳುತ್ತೇನೆ..ಜೀವಮಾನವಿಡೀ ಕಾದರೂ ಗುಂಡಪ್ಪ ವಿಶ್ವನಾಥ್ ಅಥವಾ ರಾಹುಲ್ ದ್ರಾವಿಡ್ ರಂತಹ ಒಂದೇ ಒಂದು square cut ಹೊಡೆಯಲಾರ..ಅಸಲಿಗೆ ಅವನು ಶಾಸ್ತ್ರೋಕ್ತವಾಗಿ ಕ್ರಿಕೆಟ್ ಕಲಿತವನೇ ಅಲ್ಲ.
ಹಾಗಂತ ಬರಿಯ ಕಣ್ಣು ಮತ್ತು ಕೈನ ತಾಳಮೇಳದಲ್ಲೇ ಕ್ರಿಕೆಟ್ ಆಡಿ ಬಿಡಬಹುದಾದ ಸೆಹ್ವಾಗ್ ಕೂಡಾ ಅಲ್ಲ.
ಆದರೆ ಅವನು ಸಮಯ ಬಂದರೆ ಅದಕ್ಕೂ ಮೇಲೆ ಎಂಬಂತಹ Gladiator..ಪೂರ್ತಿ ಭುಜಬಲವನ್ನೇ ನೆಚ್ಚಿಕೊಂಡು ಕೆಚ್ಚಿನಿಂದ ಚೆಂಡನ್ನ ಕುಕ್ಕಿಬಿಡುವ ಕಲಿ...
ಎಷ್ಟೋ ಬಾರಿ ಕ್ರಿಕೆಟ್ ನಲ್ಲಿ ಸ್ಕೋರ್ ಬೋರ್ಡ್ ಮಾತ್ರ ಮ್ಯಾಟರ್ ಆಗುತ್ತದೆ..
ಕಾಲಿನ ಅಷ್ಟೂ ಬೆರಳನ್ನ ಚಚ್ಚಿ ರಕ್ತ ಕುಡಿಯಲೆಂದೇ ಬರುವ 140 ಕಿಮೀ ವೇಗದ ಯಾರ್ಕರ್ ಅನ್ನ ಅವನಷ್ಟು ಸೊಗಸಾಗಿ ಸಿಕ್ಸರ್ ಎತ್ತಿದ ಇನ್ನೊಬ್ಬ ಆಟಗಾರ ಸಮಕಾಲೀನ ಜಗತ್ತಲ್ಲಿ ಇಲ್ಲ.
ಹೆಲಿಕಾಪ್ಟರ್ ಶಾಟ್ !...ಇಂಗ್ಲೆಂಡ್ ನ ಯಾವ ಆಸ್ಪತ್ರೆಯಲ್ಲೂ ಹುಟ್ಟಿರಲಿಲ್ಲ.
ಕ್ರಿಕೆಟ್ ಜಗತ್ತಿಗೆ ಧೋನಿ ಒಂದು ಅಧ್ಯಯನದ ವಸ್ತುವೇ ಆಗಿ ಹೋದ..ಜಾರ್ಖಂಡ್ ನ ಕ್ರಿಕೆಟ್ ಬೀದಿಗಳು ಅವನನ್ನ ತುಂಬ ಸ್ಮಾರ್ಟ್ ಆಗಿ ಬೆಳೆಸಿಬಿಟ್ಟಿದ್ದವು..ಅಂತ ರಾಜ್ಯಗಳಲ್ಲಿ ಹುಟ್ಟುವ ಮಕ್ಕಳು ಬದುಕಲು ಎದುರಿಸುವ ಸವಾಲುಗಳು ಮತ್ತು ಕಂಡುಕೊಳ್ಳುವ ಉಪಾಯಗಳು ಅವರನ್ನ ತುಂಬಾನೇ ಸ್ಮಾರ್ಟ್ ಮಾಡುತ್ತವೆ..ಪರಿಸ್ಥಿತಿಯ ಶಿಶುಗಳು!
ಮಹೀ ಮಾರ್ ರಹೇ ಹೇ....ನಿಂದ ಹಿಡಿದು..ಧೋsssನಿ, ಧೋssssನಿ ಎಂದು ಕಿರುಚುವವರೆಗೆ ..ಧೋನಿ ಸರ್ವಾಂತರ್ಯಾಮಿ ಆಗಿಬಿಟ್ಟ..ಚರಿತ್ರೆಗೆ ಗೆದ್ದವರೆಂದರೆ ಇಷ್ಟ..
ಲೆದರ್ಬಾಲ್ ಅನ್ನೂ ಟೆನಿಸ್ ಬಾಲ್ ನಂತೆಯೇ ಚಚ್ಚಿದ ಇನ್ನೊಬ್ಬ ಕ್ರಿಕಟರ್ ಅನ್ನ ನಾನು ನೋಡಿಲ್ಲ.
ಜೀವನ ಪೂರ್ತಿ ಟೀಕೆಯನ್ನ ನಗುಮೊಗದಿಂದಲೇ ಎದುರಿಸಿದವನು ಧೋನಿ.
ಕಳೆದ ವಿಶ್ವಕಪ್ ನಲ್ಲಿ ಭಾರತ ಸೋತ ಮೇಲೆ ಧೋನಿ ನಿವೃತ್ತಿ ಪ್ರಶ್ನೆ ಎದ್ದಿತ್ತು. ವಿದೇಶಿ ಪತ್ರಕರ್ತನೊಬ್ಬ ಕೇಳಿಯೂ ಕೇಳಿದ್ದ..ನಾನು ನಿವೃತ್ತಿಯಾದರೆ ನಿಮ್ಮ ಸಹೋದರ ರೆಡಿಯಿದ್ದಾನಾ ನನ್ನ ಪ್ಲೇಸ್ ತುಂಬಲು ಎಂದಿದ್ದ. ಹಾಗೇ ನಯವಾಗಿ , ಲಘು ಹಾಸ್ಯದ ರೂಪದಲ್ಲಿ ಟೀಕೆಯನ್ನ ಎದುರಿಸುವುದು ಅವನಿಗೆ ಕರಗತ..
ಕೀಪಿಂಗ್ ಸ್ಕಿಲ್
ಇಡೀ ದೇಹವನ್ನ ಬಳಸಿಕೊಂಡು ಕೀಪಿಂಗ್ ಮಾಡುವ ಕಲೆ ಧೋನಿಗಿತ್ತು..ವಿಕೆಟ್ ಕೀಪರ್ ಒಬ್ಬ ಇರಬೇಕಿದ್ದುದೇ ಹಾಗೆ...ವಿಕೆಟ್ ಹಿಂದಿನ ಬ್ರಹ್ಮರಾಕ್ಷಸನಂತೆ..ಕಣ್ಗಳಲ್ಲಿ ಹದ್ದಿನ ತೀಕ್ಷ್ಣತೆ, ಕೈಗಳಲ್ಲಿ ಮಿಂಚಿನಂತ ಚುರುಕು. ಕಣ್ಣಿಗೆ ಬಟ್ಟೆ ಕಟ್ಟಿ ನಿಲ್ಲಿಸಿದರೂ ಧೋನಿ ಕೀಪಿಂಗ್ ಮಾಡಬಲ್ಲ. ಅಷ್ಟು ಪಳಗಿದ್ದ.
ನಿಂತ ನಿಲುವಲ್ಲೇ ಬ್ಯಾಟ್ಸ್ ಮನ್ ಒಬ್ಬ ಹೆಲ್ಮೆಟ್ ಸಮೇತ ಮುಳುಗುವಂತೆ ಏಳು ಅಡಿ ಖೆಡ್ಡಾ ತೋಡಿರುತ್ತಿದ್ದ.
ಬ್ಯಾಟ್ಸ್ ಮನ್ ನ Foot moment , Shot selection, ಪ್ಲೇಸ್‌ಮೆಂಟ್ ಎಲ್ಲವನ್ನೂ ಮೊದಲೇ ಎಣಿಸಿಬಿಡುತ್ತಿದ್ದ. ಬೌಲರ್ ಗೆ ಕಣ್ಣ ಸನ್ನೆಯಲ್ಲಿಯೇ ಯಾವ ಚೆಂಡು ಎಸೆಯಬೇಕೆಂದು ಹೇಳಿರುತ್ತಿದ್ದ. ಮಿಸ್ಬಾಗೆ ಚಳ್ಳೆಹಣ್ಣು ತಿನ್ನಿಸಿದ್ದು ಹಾಗೆಯೇ... ಉಳಿದದ್ದು ಔಪಚಾರಿಕ...
ಇಂತಹ ಇನ್ನೊಬ್ಬ ನಾಯಕನನ್ನ ನಾನು ನೋಡಿದ್ದು ಇಂಗ್ಲೆಂಡ್ ನ ನಾಸಿರ್ ಹುಸೇನ್ ರಲ್ಲಿ...
ಕ್ರಿಕೆಟರ್ ಆಗಿರದಿದ್ದರೆ ಧೋನಿ ಏನಾಗುತ್ತಿದ್ದ..
ಅತ್ಯದ್ಭುತ ಬ್ಯಾಡ್ಮಿಂಟನ್ ಆಟಗಾರನಾಗುತ್ತಿದ್ದ. ಕನಿಷ್ಠ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗುತ್ತಿದ್ದ. ನಂಬಿ ಇವತ್ತಿಗೂ ಟೀಂ ಇಂಡಿಯಾದಲ್ಲಿ ಧೋನಿಯನ್ನ ಮೀರಿಸುವ ಬ್ಯಾಡ್ಮಿಂಟನ್ ಆಟಗಾರ ಇನ್ನೊಬ್ಬನಿಲ್ಲ.
ಅಕಸ್ಮಾತ್ ಫುಟ್ ಬಾಲ್ ಆಯ್ಕೆ ಮಾಡಿಕೊಂಡಿದ್ದರೆ ಭಾರತ ತಂಡವನ್ನೇ ಆಡಿಸಿಬಿಡುತ್ತಿದ್ದ..ಅದು ಧೋನಿ ಎಂಬ ಭರವಸೆಗೆ ಮಾತ್ರ ಸಾಧ್ಯವಿದ್ದ ಕೆಲಸ...
ಸರಳತೆ. ದೂರದೃಷ್ಟಿ.....
ನಾಯಕನಾಗಿದ್ದಾಗಲೂ ಟೀಮ್ ಮೀಟಿಂಗ್ ಗಳಲ್ಲಿ ಕುರ್ಚಿ ಇಲ್ಲದಿದ್ದರೆ ನೆಲದ ಮೇಲೆ ಕುಳಿತೇ ಭಾಗವಹಿಸುತ್ತಿದ್ದ.
ಇಡಿಯ ಮೀಟಿಂಗ್ನಲ್ಲಿ ಹಾಗೇಯೇ ತಲ್ಲೀನನಾಗಿಬಿಡುತ್ತಿದ್ದ. ಅದು ಧೋನಿಗೆ ಮಾತ್ರ ಸಾಧ್ಯ. ನಾಯಕನೆಂದ ಕೂಡಲೇ ಒಂದು ಅತೀತ ಗತ್ತು ನೆತ್ತಿಹೊಕ್ಕಿಬಿಡುತ್ತದೆ. ಒಬ್ಬ ಮನುಷ್ಯನ ಯೋಗ್ಯತೆ ಅಳೆಯಬೇಕೆಂದರೆ ನಾಯಕತ್ವ ಕೊಟ್ಟು ನೋಡು ಎಂಬ ಮಾತೇ ಇದೆ...ಧೋನಿ ನಾಯಕತ್ವವನ್ನೇ ಗೆದ್ದವನು.
ಮ್ಯಾನ್ ಮೇನೆಜ್ ಮೆಂಟ್...
ಧೋನಿಗೆ ಗಂಗೂಲಿ, ದ್ರಾವಿಡ್ , ಸಚಿನ್ ರಂತಹ ಹಿರಿಯ ಆಟಗಾರರೊಂದಿಗೆ ಹೇಗೆ ಆಡಬೇಕೆಂಬುದು ಗೊತ್ತಿತ್ತು..ಕಿರಿಯರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದು ಗೊತ್ತಿತ್ತು. ಗ್ರೆಗ್ ಚಾಪೆಲ್ ನಂತ ಕೋಚ್ ಕೂಡಾ ಧೋನಿಯ ಮುಂದೆ ಮಂಡಿಯೂರಿ ಪಾಠ ಕಲಿಯಬೇಕು.
ರೋಹಿತ್ ಶರ್ಮಗೆ ಕ್ರಿಕೆಟ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಅಂತ ಏನಾದರೂ ಸಿಕ್ಕಿದ್ದರೆ ಅದು ಧೋನಿಯಿಂದ. ಮುಗಿದೇ ಹೋಗಿದ್ದ ರೋಹಿತ್ ಕ್ರಿಕೆಟ್ ಕೆರಿಯರ್ ಗೆ ಇಂಗ್ಲೆಂಡ್ ಪ್ರವಾಸದ ಚಾನ್ಸ್ ಕೊಡಿಸಿದವನು ಧೋನಿ.
ರೋಹಿತ್ ಹೇಳಿ ಕೇಳಿ ಬ್ಯಾಕ್ ಫುಟ್ ಪುಲ್ ಮತ್ತು ಕಟ್ ಗೆ ಹೆಸರಾದವನು. ಇಂಗ್ಲೆಂಡ್ ನಂತ ವೇಗದ ನೆಲದಲ್ಲಿ ರೋಹಿತ್ ಹೇಳಿ ಮಾಡಿಸಿದ ಹುಡುಗನಂತೆ ಆಡಿದ್ದ. ರೋಹಿತ್ ಗೆ ಧೋನಿ, ಸೂರ್ಯನಂತೆ ಕಂಡಿದ್ದ. ಒಬ್ಬನ ಆಟವನ್ನ ನೋಡಬೇಕಿದ್ದುದೆ ಹಾಗೆ.
ಒಬ್ಬ ಅಪ್ಪಟ ರಾಜಕಾರಣಿಯಾ?
ಒಮ್ಮೊಮ್ಮೆ ಹೌದೆನಿಸಿಬಿಡುತ್ತಾನೆ. 16 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಅವನು ಕ್ರಿಷ್ ಶ್ರೀಕಾಂತ್, ಶ್ರೀನಿವಾಸನ್ , ಗ್ಯಾರಿ ಕರ್ಸ್ಟನ್, ಚೆನ್ನೈ ಹುಡುಗರು ಮುಂತಾದವರನ್ನ ಹ್ಯಾಂಡಲ್ ಮಾಡಿದ ರೀತಿಯೇ ಅದ್ಭುತ..ಚೆನ್ನೈಯಂತೂ ರಜನೀಕಾಂತ್ ಬಿಟ್ಟರೆ ಧೋನಿಯನ್ನೇ ತಲೈವಾ ಎಂದಿದ್ದು....
ಪಿಚ್ ರೀಡಿಂಗ್
ಧೋನಿಯಷ್ಟು ನಿಖರವಾಗಿ ಪಿಚ್ ರೀಡ್ ಮಾಡಬಲ್ಲ ಇನ್ನೊಬ್ಬ ಕ್ರಿಕೆಟರ್ ಸದ್ಯ ಆಡುತ್ತಿಲ್ಲ. ಸೆಕೆಂಡ್ ಬೆಸ್ಟ್ ರೋಹಿತ್ ಶರ್ಮ.
ಪಿಚ್ ನ ಎರಡಿಂಚಿನ ಆಳದಲ್ಲಿ ಏನಾಗುತ್ತಿದೆ ಎಂದು ಧೋನಿಗೆ ಮಾತ್ರ ಗೊತ್ತಿರುತ್ತಿತ್ತು. ಧೋನಿ ಪಾಲಿಗೆ ಟಾಸ್ ಗೆಲ್ಲುವುದೂ ಅದೃಷ್ಟವಲ್ಲ. ಕಲೆ. ಗೆದ್ದ ಮೇಲೆ ಯಾವುದು ಆಯ್ಕೆ ಮಾಡಿಕೊಂಡರೆ ಪಂದ್ಯ ಗೆಲ್ಲುತ್ತೇವೆ ಎಂಬುದು ಅವನ ಅನುಭವ ಹೇಳಿಕೊಡುತ್ತಿತ್ತು.
ಅಪ್ಪಟ ಧೈರ್ಯವೇ ಅವನ ಗೆಲುವು.
ಧೋನಿ ಪಂದ್ಯವೊಂದರಲ್ಲಿ ಎಲ್ಲವನ್ನ ಕಳೆದುಕೊಂಡರೂ ಧೈರ್ಯ ಕಳೆದುಕೊಳ್ಳುತ್ತಿರಲಿಲ್ಲ. ಎದುರಾಳಿಯನ್ನ ಅವನು ಕನ್ಫ್ಯೂಸ್ ಮಾಡುತ್ತಿದ್ದುದೇ ಹಾಗೆ..ಸಹ ಆಟಗಾರರಿಗೆ ಅವನು ಧೈರ್ಯಕ್ಕೆ ರೂಪ ಬಂದವನಂತೆ ಕಾಣಿಸುತ್ತಿದ್ದ. ಗೆಲುವಿನ ಗುಟ್ಟುಗಳು ಹೀಗೂ ಇರುತ್ತವೆ.
ನೆಟ್ ಪ್ರಾಕ್ಟೀಸ್ ನಲ್ಲೂ ಅಷ್ಟೇ ವೇಗದ ಅಷ್ಟೂ ಎಸೆತಗಳಿಗೆ ಪಕ್ಕೆಲುಬಿನ ಎಲ್ಲ ಮೂಳೆಗಳನ್ನೂ ಒಡ್ಡಿ ನಿಲ್ಲುತ್ತಿದ್ದ. ಅದು ಕೆಲ ಎದೆಗಾರರಿಗೆ ಮಾತ್ರ ಸಾಧ್ಯವಿರುವ ಛಾತಿ.
ಧೋನಿ ಟೇಲರ್ ಮೇಡ್ ಸೂಟ್ ನಂತೆ ಕಂಪ್ಲೀಟ್ ಮ್ಯಾನ್ ಅಲ್ಲ. ಆದರೆ ಟಿ-20, ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ನಲ್ಲಿ ಟೀಂ ಇಂಡಿಯಾಗೆ ನಂಬರ್ ಒನ್ ಪಟ್ಟವನ್ನ ಕೊಡಿಸಿದನಷ್ಟೇ.. ಅವನು ಕಂಪ್ಲೀಟ್ ಅಲ್ಲ...ಕಂಪ್ಲೀಟ್ ಮ್ಯಾನ್ ಎಂದು ಕರೆಸಿಕೊಂಡವರಿದ್ದರೆ ಇನ್ನೊಮ್ಮೆ ಇದೇ ಸಾಧನೆಯನ್ನ ರಿಪೀಟ್ ಮಾಡಲಿ....
ಮಧ್ಯಮ ಕ್ರಮಾಂಕದಲ್ಲಿಳಿದು 10000 ರನ್ ದಾಟುವುದು ಸುಮ್ಮನೇ ಮಾತಲ್ಲ. ಎಂಟೇ ಸೆಕೆಂಡ್ ಗಳಲ್ಲಿ ಮೂರು ರನ್ ಅವನು ಈಗಲೂ ಓಡಬಲ್ಲ. ಒಂದು ಕ್ಷಣದ ಎಂಟನೇ ಭಾಗ ಮುಗಿಯುವಷ್ಟರಲ್ಲಿ ಅವನು ಬೇಲ್ಸ್ ಹಾರಿಸಬಲ್ಲ. ಹೆಸರಿಗೆ ಅವನ ಮುಂದೆ ಇಂತ ದಾಖಲೆಗಳಿವೆ..ಅವನು ಇದಕ್ಕೂ ಮಿಗಿಲಾದವನು...
ಐಪಿಎಲ್ ನಲ್ಲಿ ಕಾಣಿಸುತ್ತಾನೆ..ಕೆಲ ವರ್ಷಗಳು ಈ ದಂತಕತೆ ಹಾಗೆ ಆಡುತ್ತಿರಲಿ...ಆಟ ಸಾಕು...ಯೂನಿಫಾರ್ಮ್ ಚೇಂಜ್ ಇದ್ದರೂ ಓಕೆ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.