ಡಿಫರೆಂಟ್ ಧೋನಿ.. ದಿಢೀರ್ ವಿದಾಯಕ್ಕೂ ಹೆಸರುವಾಸಿ..!

By Kannadaprabha NewsFirst Published Aug 16, 2020, 5:43 PM IST
Highlights

ಧೋನಿ ಏಕಾಏಕಿ ಪ್ಯಾಡ್ ಗ್ಲೌಸ್‌ಗಳನ್ನು ಕೆಳಗಿಟ್ಟು ಕ್ರಿಕೆಟ್ ಮೈದಾನದಿಂದ ಹೊರ ನಡೆದವರಲ್ಲ. ಬದಲಾದ ಕಾಲಘಟ್ಟದಲ್ಲಿ ಸಂದರ್ಭೋಜಿತ ನಿರ್ಧಾರ ತೆಗೆದುಕೊಂಡರು. ಯುವ ಆಟಗಾರರನ್ನು ತಯಾರು ಮಾಡಿದ್ದಷ್ಟೇ ಅಲ್ಲದೆ, ಹಂತಹಂತವಾಗಿ ಒಂದೊಂದೇ ಜವಾಬ್ದಾರಿಯನ್ನು ಕಿರಿಯರ ಹೆಗಲಿಗೆ ಹೊರಿಸುತ್ತಾ ಬಂದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಆ.16): ಧೋನಿಯ ಒಂದೂವರೆ ದಶಕದ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕೇ ಒಂದು ಅಚ್ಚರಿಯ ಮೂಟೆ. ಮೈದಾನದ ಒಳಗಿರಲಿ, ಹೊರಗಿರಲಿ ಸದಾ ಸಮಚಿತ್ತತೆಯಿಂದ ಕೂಡಿದ ಅವರ ನಡೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವತ್ತೂ ಕೌತುಕದ ಸಂಗತಿ. ಅಂದುಕೊಂಡದ್ದನ್ನು ದಕ್ಕಿಸಿಕೊಳ್ಳುವ ಜಾಣ್ಮೆ, ಚಾತುರ್ಯ ಧೋನಿಗೆ ಕರಗತ. ವಿದಾಯದ ಸಂದರ್ಭಗಳಲ್ಲೂ ಅದು ಗೋಚರಿಸಿದ್ದು ಸುಳ್ಳಲ್ಲ. 

ಯಾಕೆಂದರೆ ಮಹೇಂದ್ರ ಸಿಂಗ್ ಧೋನಿ ಏಕಾಏಕಿ ಪ್ಯಾಡ್ ಗ್ಲೌಸ್‌ಗಳನ್ನು ಕೆಳಗಿಟ್ಟು ಕ್ರಿಕೆಟ್ ಮೈದಾನದಿಂದ ಹೊರ ನಡೆದವರಲ್ಲ. ಬದಲಾದ ಕಾಲಘಟ್ಟದಲ್ಲಿ ಸಂದರ್ಭೋಜಿತ ನಿರ್ಧಾರ ತೆಗೆದುಕೊಂಡರು. ಯುವ ಆಟಗಾರರನ್ನು ತಯಾರು ಮಾಡಿದ್ದಷ್ಟೇ ಅಲ್ಲದೆ, ಹಂತಹಂತವಾಗಿ ಒಂದೊಂದೇ ಜವಾಬ್ದಾರಿಯನ್ನು ಕಿರಿಯರ ಹೆಗಲಿಗೆ ಹೊರಿಸುತ್ತಾ ಬಂದರು. ಟೆಸ್ಟ್‌ಗೆ ಏಕಾಏಕಿ ವಿದಾಯ ಸಾಮಾನ್ಯವಾಗಿ ವಯಸ್ಸು ಮಾಗಿದಂತೆ ಕ್ರಿಕೆಟಿಗರು ಸೀಮಿತ ಓವರುಗಳ ಕಣದಿಂದ ಹಿಂದೆ ಸರಿದು ಹಾಗೋ ಹೀಗೋ ಟೆಸ್ಟ್ ನಲ್ಲಿ ಕುಂಟುತ್ತಾ, ತೆವಳುತ್ತಾ ದಿನ ದೂಡುತ್ತಾರೆ. ಫೀಲ್ಡಿಂಗ್ ಮಾಡಲು ಮೈ ಬಗ್ಗುವುದಿಲ್ಲ, ಬ್ಯಾಟಿಂಗಿನಲ್ಲಿ ಲಯವಿರುವುದಿಲ್ಲ, ಬೌಲಿಂಗಿನಲ್ಲಿ ಮೊನಚಿರುವುದಿಲ್ಲ. ಆದರೂ ಯಾವುದೋ ಒಂದು ವಿಶ್ವದಾಖಲೆಯ ಮೈಲಿಗಲ್ಲು ತಲುಪುವ ಸಲುವಾಗಿ ತಂಡಕ್ಕೆ ಭಾರವಾಗಿರುತ್ತಾರೆ.ಇನ್ನು ಸಾಧ್ಯವೇ ಇಲ್ಲ ಎಂದಾಗಲೋ, ಕ್ರಿಕೆಟ್ ಮಂಡಳಿಯೇ ಸಾಕು ಎಂದಾಗಲೋ ಒಲ್ಲದ ಮನಸ್ಸಿನಿಂದ ನಿವೃತ್ತಿ ಘೋಷಿಸುತ್ತಾರೆ.

ಆದರೆ ಧೋನಿಗೆ 30 ವರ್ಷ ದಾಟಿ 8 ವರ್ಷಗಳಾದರೂ ಮಾತ್ರ ಇದ್ಯಾವುದಕ್ಕೂ ಅವಕಾಶ ನೀಡಿದವರಲ್ಲ. 2014ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಇರುವಂತೆಯೇ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದರು. ಆಗ ಅವರಿಗೆ 33 ವರ್ಷ. ಈ ವಿಚಾರವನ್ನು ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸದೆ, ತನ್ನ ಅಭಿಪ್ರಾಯವನ್ನು ನೇರ ಬಿಸಿಸಿಐಗೆ ರವಾನಿಸಿದ್ದರು. ಬಿಸಿಸಿಐಯೇ ಧೋನಿಯ ನಿರ್ಧಾರವನ್ನು ಪ್ರಕಟಿಸಿದಾಗ ಎಲ್ಲರೂ ದಂಗಾಗಿದ್ದರು.

ಧೋನಿ ಬ್ಯಾಟಿಂಗ್ ಬೆನ್ನೆಲುಬು, ವಿಕೆಟ್ ಹಿಂದಿನ ಮಾಂತ್ರಿಕ..!

2018ರಲ್ಲಿ ಏಕದಿನ, ಟಿ20 ನಾಯಕತ್ವಕ್ಕೂ ಗುಡ್ ಬೈ 2015ರ ವಿಶ್ವಕಪ್ ಟೂರ್ನಿಯೇ ಧೋನಿಯ ಕಡೆಯ ಟೂರ್ನಿಯಾಗಬಹುದು ಎಂಬ ಲೆಕ್ಕಾಚಾರ ಕ್ರಿಕೆಟ್ ಪಂಡಿತರಾದ್ದಾಗಿತ್ತು. ಆದರೆ 35ರ ಹರೆಯದಲ್ಲೂ ಫಿಟ್ನೆಸ್ ಕಾಯ್ದುಕೊಂಡಿದ್ದ ಧೋನಿ, ಬ್ಯಾಟಿಂಗ್‌ನಲ್ಲಾಗಲೀ, ಕೀಪಿಂಗ್ ನಲ್ಲಾಗಲಿ ಯುವಕರನ್ನೂ ನಾಚಿಸುವಂತಹ ಪ್ರದರ್ಶನ ಕಾಯ್ದುಕೊಂಡು ಬಂದಿದ್ದರು. ಹೀಗಾಗಿ 2019ರ ವಿಶ್ವಕಪ್‌ವರೆಗೂ ಅವರು ನಾಯಕತ್ವವನ್ನು ತನ್ನಲ್ಲೇ ಇರಿಸಿಕೊಳ್ಳಲು ಬಯಸಿದ್ದರೆ ಅದು ಸಾಧ್ಯವೂ ಇತ್ತೇನೋ. ಆದರೆ, 2018ರ ಇಂಗ್ಲೆಂಡ್ ಟೂರ್ನಿಯ ವೇಳೆ ದಿಢೀರ್ ಆಗಿ ಮತ್ತೊಮ್ಮೆ ದಿಢೀರ್ ನಿರ್ಧಾರ ಕೈಗೊಂಡಿದ್ದ ಧೋನಿ ಮುಂದಿನ ಪಂದ್ಯಗಳಿಗೆ ವಿಕೆಟ್‌ಕೀಪರ್ ಆಗಷ್ಟೇ ಮುಂದುವರಿಯುವುದಾಗಿ ಬಿಸಿಸಿಐಗೆ ತಿಳಿಸಿದ್ದರು.

ಇದೇನೂ ಅವಿವೇಕದ ನಿರ್ಧಾರವಾಗಿರಲಿಲ್ಲ. ಯಾಕೆಂದರೆ ಕೆಲವೊಂದು ಆಟಗಾರರು ನಾಯಕತ್ವ ಕಳೆದುಕೊಂಡರು ಎಂದಾದಲ್ಲಿ ತಂಡದಿಂದಲೇ ಗೇಟ್‌ಪಾಸ್ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಧೋನಿಗೆ ಯಾವತ್ತೂ ಆ ಪರಿಸ್ಥಿತಿ ಎದುರಿಸಿಲ್ಲ. ‘ವಿಶ್ವಕಪ್‌ಗೆ ಇನ್ನು ಒಂದೂವರೆ ವರ್ಷವಷ್ಟೇ ಇದ್ದುದರಿಂದ ಕೊಹ್ಲಿಗೆ ಹೊಂದಿಕೊಳ್ಳಲು ಸಮಯವೂ ಸಿಗುತ್ತದೆ ಎಂಬುದು ಲೆಕ್ಕಾಚಾರ. ಜೊತೆಗೆ ಹೊಸ ನಾಯಕನಿಗೆ ಸಾಕಷ್ಟು
ಸಮಯ ನೀಡದೆ ಬಲಿಷ್ಠ ತಂಡವೊಂದನ್ನು ಕಟ್ಟುವುದು ಅಸಾಧ್ಯ. ಹೀಗಾಗಿ ಸರಿಯಾದ ಸಮಯದಲ್ಲೇ ನಾಯಕತ್ವ ತ್ಯಜಿಸಿದ್ದೇನೆಂದು ನನ್ನ ಭಾವನೆ’ ಎಂದಿದ್ದರು.

ತಂಡದ ಬಗ್ಗೆ ಅತೀವ ಕಾಳಜಿ, ದೂರದೃಷ್ಟಿಗಳುಳ್ಳ ನಾಯಕ, ಇಂತಹ ಮಹತ್ವದ ನಿರ್ಧಾರಗಳನ್ನು ಯಾವುದೇ ಅಳುಕಿಲ್ಲದೆ ತೆಗೆದುಕೊಳ್ಳಬಲ್ಲ. ಅದಕ್ಕೇ ಧೋನಿ ವಿದಾಯದ ಸಂದರ್ಭದಲ್ಲೂ ಡಿಫರೆಂಟ್ ಆಗಿ ಗೋಚರಿಸಿದರು. ಧೋನಿ ನಿಂತದ್ದು ವಿಕೆಟ್ ಹಿಂದೆ ಮಾತ್ರ ಅಲ್ಲ, ಇಡೀ ಟೀಂ ಇಂಡಿಯಾದ ಹಿಂದೆ.
 

click me!