
ದೆಹಲಿಯಲ್ಲಿ ರಾಕಿಂಗ್ ಸ್ಟಾರ್ ಅಬ್ಬರ: ಸಾಯಿ ಪಲ್ಲವಿ ನಟನೆಗೆ ಫಿದಾ ಆದ ರಾವಣ ಯಶ್!
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅದ್ದೂರಿ ಮತ್ತು ಮಹತ್ವಾಕಾಂಕ್ಷೆಯ ಸಿನಿಮಾ ಎನಿಸಿಕೊಂಡಿರುವ 'ರಾಮಾಯಣ' (Ramayana) ಈಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ದೆಹಲಿಯಲ್ಲಿ ನಡೆದ ಈ ಚಿತ್ರದ ಭವ್ಯ 'ಪ್ರಥಮ ಸಂಕಲ್ಪ' ಕಾರ್ಯಕ್ರಮದಲ್ಲಿ 'ರಾಕಿಂಗ್ ಸ್ಟಾರ್' ಯಶ್ (Yash) ತಮ್ಮ ಎಂದಿನ ಖದರ್ ಹಾಗೂ ಗಾಂಭೀರ್ಯದ ಮೂಲಕ ಸಖತ್ ಸದ್ದು ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೇವಲ ರಾವಣನ ಪಾತ್ರವಷ್ಟೇ ಅಲ್ಲದೆ, ಸಹ-ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿರುವ ಯಶ್, ವೇದಿಕೆಯ ಮೇಲೆ ಅಕ್ಷರಶಃ ದರ್ಬಾರ್ ನಡೆಸಿದರು. ಯಶ್ ಮಾತಿಗೆ ಅಲ್ಲಿದ್ದವರು ಮಾತ್ರವಲ್ಲ, ನೆಟ್ಟಗರೂ ಕೂಡ ತಲೆದೂಗಿದರು.
ದೆಹಲಿಯಲ್ಲೂ ಮೊಳಗಿತು ಕನ್ನಡದ ಕಂಪು!
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಮಾರಂಭವಾದರೂ, ಯಶ್ ಅವರು ವೇದಿಕೆ ಏರುತ್ತಿದ್ದಂತೆ ಮೊದಲು ಮೊಳಗಿದ್ದು "ಎಲ್ಲರಿಗೂ ನಮಸ್ಕಾರ" ಎನ್ನುವ ಹೆಮ್ಮೆಯ ಕನ್ನಡದ ನುಡಿ. ಆನಂತರ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಮಾತನಾಡಿದ ಯಶ್, ಭಾರತೀಯ ಭಾಷೆಗಳ ಬಗೆಗಿನ ತಮ್ಮ ಗೌರವವನ್ನು ತೋರ್ಪಡಿಸಿದರು. ದೆಹಲಿಯಂತಹ ವೇದಿಕೆಯಲ್ಲಿ ಕನ್ನಡದ ಸೊಗಡನ್ನು ಹರಡಿದ ಯಶ್ ಅವರ ಈ ನಡೆಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಮತ್ತು ಅಭಿಮಾನಿಗಳು "ಇದು ನಮ್ಮ ಕನ್ನಡದ ಕಂದನ ಅಬ್ಬರ" ಎಂದು ಸಂಭ್ರಮಿಸುತ್ತಿದ್ದಾರೆ.
ಸಿನಿಮಾದಲ್ಲಿ ಸೀತೆಯ ಪಾತ್ರ ನಿರ್ವಹಿಸುತ್ತಿರುವ ಸಾಯಿ ಪಲ್ಲವಿ (Sai Pallavi) ಅವರ ಬಗ್ಗೆ ಯಶ್ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. "ಸಾಯಿ ಪಲ್ಲವಿ ಅವರ ಕಣ್ಣುಗಳೇ ಕಥೆ ಹೇಳುತ್ತವೆ. ಅವರ ನಟನೆ ಮತ್ತು ಈ ಪಾತ್ರಕ್ಕೆ ಅವರು ನೀಡಿದ ಜೀವ ತುಂಬುವಿಕೆ ಅದ್ಭುತ" ಎನ್ನುತ್ತಾ ಯಶ್ ಅವರು ಸಾಯಿ ಪಲ್ಲವಿ ಅವರ ಪ್ರತಿಭೆಗೆ ಮಾರುಹೋಗಿದ್ದಾರೆ. ಇನ್ನು ರಾಮನ ಪಾತ್ರಧಾರಿ ರಣಬೀರ್ ಕಪೂರ್ ಬಗ್ಗೆಯೂ ಮಾತನಾಡಿ, ಅವರು ಈ ಪಾತ್ರಕ್ಕಾಗಿ ಮಾಡಿರುವ ತ್ಯಾಗ ಮತ್ತು ಸೃಷ್ಟಿಸಿರುವ ಮ್ಯಾಜಿಕ್ ಅದ್ಭುತ ಎಂದು ಶ್ಲಾಘಿಸಿದರು.
ಟ್ರೇಲರ್ ಹವಾ: 'ಯು' ಸರ್ಟಿಫಿಕೇಟ್ ಜೊತೆ ಅದ್ದೂರಿ ಎಂಟ್ರಿ!
ಇನ್ನು ಚಿತ್ರದ ಕುರಿತಾದ ಅತಿದೊಡ್ಡ ಅಪ್‌ಡೇಟ್ ಎಂದರೆ, 'ರಾಮಾಯಣ' ಟ್ರೇಲರ್‌ಗೆ ಸೆನ್ಸಾರ್ ಮಂಡಳಿಯಿಂದ (CBFC) 'ಯು' (U) ಪ್ರಮಾಣಪತ್ರ ಲಭಿಸಿದೆ. ಇದರರ್ಥ ಈ ಚಿತ್ರವನ್ನು ಮನೆಯಲ್ಲಿರುವ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಜೊತೆಯಾಗಿ ವೀಕ್ಷಿಸಬಹುದು. ವಿಶೇಷವೆಂದರೆ, ಟ್ರೇಲರ್ ಬರೊಬ್ಬರಿ 4 ನಿಮಿಷ 15 ಸೆಕೆಂಡುಗಳಷ್ಟು ಉದ್ದವಿರಲಿದ್ದು, ದೃಶ್ಯಗಳ ವೈಭವಕ್ಕೆ ಪ್ರೇಕ್ಷಕರು ಮಂತ್ರಮುಗ್ಧರಾಗುವುದು ಖಚಿತ. ಜುಲೈ 24 ರಂದು ಜಾಗತಿಕ ಮಟ್ಟದಲ್ಲಿ ಈ ಟ್ರೇಲರ್ ಬಿಡುಗಡೆಯಾಗಲಿದ್ದು, ಅಲ್ಲಿಂದ 'ರಾಮಾಯಣ'ನ ಹವಾ ಅಧಿಕೃತವಾಗಿ ಶುರುವಾಗಲಿದೆ. ಈಗ ನಿರೀಕ್ಷೆ ಮುಗಿಲುಮುಟ್ಟಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ನಕ್ಷತ್ರ ಪುಂಜಗಳೇ ಇವೆ. ರಣಬೀರ್ ಕಪೂರ್ (ರಾಮ), ಸಾಯಿ ಪಲ್ಲವಿ (ಸೀತೆ), ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ), ರಾಕುಲ್ ಪ್ರೀತ್ ಸಿಂಗ್ (ಶೂರ್ಪಣಖಾ) ಮತ್ತು ರವಿ ದುಬೆ (ಲಕ್ಷ್ಮಣ) ಮುಖ್ಯ ಭೂಮಿಕೆಯಲ್ಲಿದ್ದಾರೆ. ಆಸ್ಕರ್ ವಿಜೇತ ಹ್ಯಾನ್ಸ್ ಜಿಮ್ಮರ್ ಮತ್ತು ಭಾರತದ ಹೆಮ್ಮೆ ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕೆ ದೈವಿಕ ಸ್ಪರ್ಶ ನೀಡಲಿದೆ.
ಒಟ್ಟಿನಲ್ಲಿ, ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಅವರ ಕನಸಿನ ಕೂಸು 'ರಾಮಾಯಣ', ಭಾರತದ ಸಂಸ್ಕೃತಿಯನ್ನು ವಿಶ್ವದ ಪ್ರತಿ ಮೂಲೆಯಲ್ಲೂ ಬೆಳಗಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಜಾಗತಿಕ ಪಯಣಕ್ಕೆ ಈಗಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ರಾಮಯಣದ ಅಬ್ಬರವನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.