ಟೈಗರ್ 3 ನಟ ಇಮ್ರಾನ್ ಹಶ್ಮಿ 10 ವರ್ಷಗಳ ಹಿಂದೆ ಇದೇ ದಿನ ತಮ್ಮ ಮಗನಿಗೆ ಕ್ಯಾನ್ಸರ್ ಪತ್ತೆಯಾಗಿತ್ತು ಎಂಬುದನ್ನು ನೆನೆಸಿಕೊಂಡು ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಇಮ್ರಾನ್ ಹಶ್ಮಿ ಬಾಲಿವುಡ್‌ನಲ್ಲಿ ಕಿಸ್ಸರ್ ಬಾಯ್ ಆಗಿ ಅನೇಕ ರೊಮ್ಯಾಂಟಿಕ್ ಚಿತ್ರಳಲ್ಲಿ ನಟಿಸಿದ್ದಾರೆ. ಅದರ ಹೊರತಾಗಿಯೂ ಅನೇಕ ಚಿತ್ರಗಳಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಆದರೂ ತಮ್ಮ ರೊಮ್ಯಾಂಟಿಕ್ ಮುತ್ತಿನಿಂದಲೇ ಜನಮಾನಸದಲ್ಲಿ ಉಳಿದಿದ್ದ ಹಶ್ಮಿಯ ಮತ್ತೊಂದು ವಿಭಿನ್ನ ಮುಖದ ಅರಿವಾಗಿದ್ದು, ಅವರ ಮಗನಿಗೆ ಕ್ಯಾನ್ಸರ್ ಪತ್ತೆಯಾದ ಸಂದರ್ಭದಲ್ಲಿ. ಕಳೆದ ವರ್ಷ ಟೈಗರ್ 3 ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ಇಮ್ರಾನ್ ಹಶ್ಮಿ ಇನ್ಸ್ಟಾಗ್ರಾಂನಲ್ಲಿ ತಮ್ಮ ಮಗನ ಕುರಿತು ಭಾವುಕ ಪೋಸ್ಟೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಮಗ ಅಯಾನ್ ಹಶ್ಮಿಗೆ 10 ವರ್ಷಗಳ ಹಿಂದೆ ಇದೇ ದಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಎಂಬುದನ್ನು ನೆನೆಸಿಕೊಂಡು ಮಗನಿಗಾಗಿ ಕೆಲ ಸಾಲುಗಳನ್ನು ಬರೆದಿದ್ದಾರೆ. ಜೊತೆಗೆ, ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿದ ತಮ್ಮ ಮಗನನ್ನು ಶ್ಲಾಘಿಸಿದ್ದಾರೆ.
2014ರ ಜನವರಿ 13ರಂದು ಅಯಾನ್‌ಗೆ ಈ ಕಾಯಿಲೆ ಪತ್ತೆಯಾಗಿತ್ತು. ಮತ್ತು 2019 ರಲ್ಲಿ ಆತನನ್ನು ಕ್ಯಾನ್ಸರ್ ಮುಕ್ತ ಎಂದು ಘೋಷಿಸಲಾಯಿತು. ಆದ್ದರಿಂದ, ಇಮ್ರಾನ್ ಹಶ್ಮಿ ತನ್ನ ಸ್ಟ್ರಾಂಗ್ ಮಗನಿಗಾಗಿ ಹೃತ್ಪೂರ್ವಕ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.
ಹಶ್ಮಿ ಅವರ ಭಾವನಾತ್ಮಕ ಪೋಸ್ಟ್
ಹಶ್ಮಿ ತಮ್ಮ ಮಗನೊಂದಿಗಿನ ಹಳೆಯ ಚಿತ್ರವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, 'ಈ ದಿನ ಅಯಾನ್‌ನ ರೋಗನಿರ್ಣಯವಾಗಿ ಹತ್ತು ವರ್ಷಗಳು ಕಳೆದಿವೆ. ನಮ್ಮ ಜೀವನದ ಅತ್ಯಂತ ಕಠಿಣ ಹಂತ, ಆದರೆ ನಂಬಿಕೆ ಮತ್ತು ಭರವಸೆಯಿಂದ ನಾವು ಅದನ್ನು ಜಯಿಸಿದೆವು. ಅದಕ್ಕಿಂತ ಮುಖ್ಯವಾಗಿ, ಅವನು ಅದನ್ನು ಜಯಿಸಿದನು ಮತ್ತು ಬಲವಾಗಿ ನಿಂತಿದ್ದಾನೆ. ಈ ಸಂದರ್ಭದಲ್ಲಿ ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ ನಮ್ಮೊಂದಿಗೆ ನಿಂತಿದ್ದಕ್ಕಾಗಿ ಅಪಾರ ಧನ್ಯವಾದಗಳು'
ಇಮ್ರಾನ್ ಹಶ್ಮಿ ಅವರು ತಮ್ಮ ಮಗನಿಗಾಗಿ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದು ನಟ ಹಂಚಿಕೊಂಡ ಇತ್ತೀಚಿನ ಚಿತ್ರ ಮತ್ತು ಒಂದು ಥ್ರೋಬ್ಯಾಕ್ ವೀಡಿಯೊವಾಗಿದೆ. ವೀಡಿಯೊದಲ್ಲಿ, ಅಯಾನ್ ತನಗಾಗಿ ಇಮ್ರಾನ್ ಬರೆದ ಪುಸ್ತಕದ ಶೀರ್ಷಿಕೆಯನ್ನು ಓದುತ್ತಿದ್ದಾನೆ. ಅಯಾನ್ ಓದುತ್ತಾನೆ, 'ಕಿಸ್ ಆಫ್ ಲೈಫ್: ಹೌ ಎ ಸೂಪರ್ ಹೀರೋ ಆ್ಯಂಡ್ ಮೈ ಸನ್ ಡಿಫೀಟೆಡ್ ದ ಕ್ಯಾನ್ಸರ್' ಇದನ್ನು ಹಂಚಿಕೊಂಡ ಇಮ್ರಾನ್, 'ಯಾವಾಗಲೂ ನಾನು ಒಲವು ತೋರಬಲ್ಲ ವ್ಯಕ್ತಿ. ನನ್ನ ಮಗ, ನನ್ನ ಸ್ನೇಹಿತ, ನನ್ನ ಸೂಪರ್ ಹೀರೋ - ಅಯಾನ್!!!' ಎಂದಿದ್ದಾರೆ.
ಈ ಪೋಸ್ಟ್‌ಗೆ ಹಲವರು ಮಗನ ಹೋರಾಟವನ್ನು ಮತ್ತು ಅದಕ್ಕೆ ಶಕ್ತಿಯಾಗಿ ನಿಂತ ತಂದೆಯನ್ನು ಹೊಗಳಿದ್ದಾರೆ. ಅಲ್ಲದೆ, ಕ್ಯಾನ್ಸರ್ ವಿರುದ್ಧದ ತಂದೆ ಮಗನ ಹೋರಾಟವನ್ನು ಚಲನಚಿತ್ರವಾಗಿಸಲು ಕೇಳಿದ್ದಾರೆ.