
ಮೈಸೂರು: ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, ‘ಗಾನಕೋಗಿಲೆ’ ಎಸ್ ಜಾನಕಿ (88) ಅವರ ಅಂತ್ಯಸಂಸ್ಕಾರವು ಭಾನುವಾರ ಸಂಜೆ ಅವರ ಆಸೆಯಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಎಚ್.ಡಿ.ಕೋಟೆ ರಸ್ತೆಯ ಕಣಿಯನಹುಂಡಿಯಲ್ಲಿರುವ ಸಾಕುಮಗ ನವೀನ್ ಅವರ ‘ನವೀನ್ ಫಾರ್ಮ್ ಹೌಸ್’ನಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಯಿತು.
ತಮ್ಮ ಅಂತ್ಯಕ್ರಿಯೆ ಮೈಸೂರಿನಲ್ಲಿಯೇ ನಡೆಯಬೇಕು ಎಂಬುದು ಎಸ್.ಜಾನಕಿ ಅವರ ಕೊನೆಯ ಇಚ್ಛೆಯಾಗಿತ್ತು. ಅದರಂತೆ, ಅವರ ನೆಚ್ಚಿನ ಕಣಿಯನಹುಂಡಿ ತೋಟದಲ್ಲಿ ಅಗ್ನಿ ಸ್ಪರ್ಶದ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು. ಜಾನಕಿ ಅವರ ಏಕೈಕ ಪುತ್ರ ಕಳೆದ ಜನವರಿಯಲ್ಲಿ ನಿಧನರಾಗಿದ್ದರಿಂದ, ಮೊಮ್ಮಗಳು ಅಪ್ಸರಾ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ಜಿಲ್ಲಾಡಳಿತವು ಸಕಲ ಸರ್ಕಾರಿ ಗೌರವಗಳೊಂದಿಗೆ ಗಾಯಕಿಗೆ ವಿದಾಯ ನೀಡಿತು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಾವಿರಾರು ಗಣ್ಯರು, ಸಿನಿಮಾ ತಾರೆಯರು, ಅಭಿಮಾನಿಗಳು, ಸಂಗೀತ ಲೋಕದ ದಿಗ್ಗಜರು ಕಂಬನಿ ಮಿಡಿದರು.
ಸಂಜೆ 5 ಗಂಟೆಯ ಸುಮಾರಿಗೆ ಮಹಾರಾಜ ಕಾಲೇಜು ಮೈದಾನದಿಂದ ಪುಷ್ಪಾಲಂಕೃತ ವಾಹನದಲ್ಲಿ ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು.
ಜಾನಕಿ ಅವರ ಕೇರ್ ಟೇಕರ್ ಆಗಿದ್ದ ನವೀನ್ ಅವರನ್ನು ಅವರು ದತ್ತು ಪುತ್ರನಂತೆಯೇ ಪ್ರೀತಿಸುತ್ತಿದ್ದರು. ನವೀನ್ ಸ್ನೇಹಿತ ಧರ್ಮ ಅವರು ಜಾನಕಮ್ಮನವರನ್ನು ನೆನೆದು ಭಾವುಕರಾದರು. ಜಾನಕಮ್ಮ ಮಗುವಿನಂತಹ ಮನಸ್ಸಿನವರು. ನಾವೆಲ್ಲರೂ ಅವರ ಕೈತುತ್ತು ತಿಂದಿದ್ದೇವೆ. ಅವರು ನಮ್ಮ ಮನೆಗೆ ಬಂದಾಗಲೆಲ್ಲಾ ತುಂಬಾ ಖುಷಿಯಿಂದ ಮಾತನಾಡಿಸುತ್ತಿದ್ದರು. ಅವರು ಈಗ ಇಲ್ಲ ಎಂಬ ನೋವನ್ನು ಭರಿಸುವುದು ಕಷ್ಟ ಎಂದು ಅವರು ಕಣ್ಣೀರು ಹಾಕಿದರು.
ಜುಲೈ 11, 2026 ರಂದು ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದ ಜಾನಕಿ ಅವರು ಆರು ದಶಕಗಳ ಕಾಲ ಸಂಗೀತ ಲೋಕವನ್ನು ಆಳಿದ್ದರು. ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಗಾನಕೋಗಿಲೆಯ ಸ್ವರ ಇನ್ನು ನೆನಪು ಮಾತ್ರ. ಸಂಗೀತ ಲೋಕದ ಧ್ರುವತಾರೆ ಮೈಸೂರಿನ ಮಣ್ಣಿನಲ್ಲಿ ಲೀನವಾಗುವ ಮೂಲಕ ಒಂದು ಅದ್ಭುತ ಯುಗ ಅಂತ್ಯಗೊಂಡಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.