S Janaki - Modi : ಮೇರು ಗಾಯಕಿ ಎಸ್ ಜಾನಕಿ ಅಗಲಿಕೆಗೆ ದೇಶಾದ್ಯಂತ ಕಂಬನಿ; ಪ್ರಧಾನಿ ಮೋದಿ ನುಡಿ ನಮನ

Published : Jul 12, 2026, 03:10 PM IST
Narendra Modi S Janaki

ಸಾರಾಂಶ

ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1957ರಲ್ಲಿ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್‌ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ ‘ಅಮ್ಮಪೂವಿನುಮ್’ ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿದೆ.

ಗಾನ ಕೋಗಿಲೆಯ ಮೌನ: ಸಂಗೀತದ ಒಂದು ‘ಅಪೂರ್ವ ಯುಗ’ದ ಅಂತ್ಯಕ್ಕೆ ಸಾಕ್ಷಿಯಾದ ಮೈಸೂರು!

ಸಂಗೀತ ಲೋಕದ ಅರಮನೆಯಲ್ಲಿ ಇಂದು ನೀರವ ಮೌನ. ಆರು ದಶಕಗಳ ಕಾಲ ತನ್ನ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಮಂತ್ರಮುಗ್ಧಗೊಳಿಸಿದ್ದ 'ಗಾನ ಕೋಗಿಲೆ' ಎಸ್‌ ಜಾನಕಿ (S Janaki) ಅಮ್ಮ ಇನ್ನಿಲ್ಲ. 88 ವರ್ಷಗಳ ಕಾಲ ಸಂಗೀತದ ಮೂಲಕವೇ ಉಸಿರಾಡಿದ್ದ ಈ ದಂತಕಥೆ, ಮೈಸೂರಿನ ಮಣ್ಣಿನ ಮಡಿಲಿನಲ್ಲಿ ಶನಿವಾರ ಶಾಶ್ವತ ನಿದ್ರೆಗೆ ಜಾರಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜಾನಕಮ್ಮನವರ ನಿರ್ಗಮನದೊಂದಿಗೆ ಭಾರತೀಯ ಚಿತ್ರರಂಗದ ಸಂಗೀತಲೋಕದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಿದೆ.

ಪ್ರಧಾನಿ ಮೋದಿಯವರ ಭಾವುಕ ನಮನ:

ಜಾನಕಿ ಅಮ್ಮನ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ (X) ದಲ್ಲಿ ಅತ್ಯಂತ ಭಾವುಕವಾಗಿ ಸಂತಾಪ ಸೂಚಿಸಿದ್ದಾರೆ. "ಜಾನಕಿ ಅಮ್ಮನವರ ಧ್ವನಿ ಕೇವಲ ಹಾಡಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. ಪ್ರತಿ ಭಾವನೆಗೂ ಅವರು ಅಪ್ರತಿಮ ಶೈಲಿಯಲ್ಲಿ ಜೀವ ತುಂಬುತ್ತಿದ್ದರು. ಅವರ ನಿಧನ ಸಂಗೀತ ಜಗತ್ತಿಗೆ ತುಂಬಲಾರದ ನಷ್ಟ" ಎಂದು ಪ್ರಧಾನಿ ಸ್ಮರಿಸಿದ್ದಾರೆ.

ಮೋದಿಯವರು ಪೋಸ್ಟ್‌ನಲ್ಲಿ ಏನು ಬರೆದಿದ್ದಾರೆ?

ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್‌ ಜಾನಕಿ ಅಮ್ಮ ಅವರ ನಿಧನವು ಸಂಗೀತ ಮತ್ತು ಸಂಸ್ಕೃತಿ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿನ ಅವರ ಹಾಡುಗಳು ತಲೆಮಾರುಗಳಿಂದಲೂ ಜನಪ್ರಿಯವಾಗಿವೆ. ಅವರು ಪ್ರತಿ ಭಾವನೆಗೂ ಅಪ್ರತಿಮ ಸೊಬಗು ಮತ್ತು ಬಹುಮುಖತೆಯೊಂದಿಗೆ ಧ್ವನಿ ನೀಡಿದರು. ಅವರ ಮಧುರ ಗೀತೆಗಳು ಮುಂಬರುವ ವರ್ಷಗಳಲ್ಲಿ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಲೇ ಇರುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಸ್ಥರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಮತ್ತು ಇಡೀ ಸಂಗೀತ ಲೋಕಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ." ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬರೆದುಕೊಂಡಿದ್ದಾರೆ.

ಸಂಗೀತ ಸಾಮ್ರಾಜ್ಯದ ‘ಜಾನಕಿ-ಬಾಲು’ ಮ್ಯಾಜಿಕ್:

ಜಾನಕಿ ಅಮ್ಮನ ಹೆಸರು ಕೇಳಿದ ಕೂಡಲೇ ನೆನಪಿಗೆ ಬರುವುದು ದಿವಂಗತ ಎಸ್‌.ಪಿ. ಬಾಲಸುಬ್ರಹ್ಮಣ್ಯಂ. ಎಸ್‌ಪಿಬಿ ನಿರ್ಗಮಿಸಿ ಆರು ವರ್ಷಗಳಾದ ಬೆನ್ನಲ್ಲೇ ಈಗ ಜಾನಕಮ್ಮ ಕೂಡ ಹೊರಟು ನಿಂತಿರುವುದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಈ ಜೋಡಿ ಸೃಷ್ಟಿಸಿದ ಯುಗಳ ಗೀತೆಗಳ ಮೋಡಿ ಅನನ್ಯ. ಭಾಷೆಯ ಗಡಿ ದಾಟಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಇವರು ಹಾಡಿದ ಸುಮಾರು 45 ಸಾವಿರಕ್ಕೂ ಹೆಚ್ಚು ಹಾಡುಗಳು ಇಂದಿಗೂ ಎವರ್‌ಗ್ರೀನ್. ಸಿನಿಮಾ ಗೀತೆಗಳು ಮಾತ್ರವಲ್ಲ, ಹಲವಾರು ಭಕ್ತಿಗೀತೆಗಳಿಗೂ ಎಸ್ ಜಾನಕಿಯವರು ಧ್ವನಿಯಾಗಿದ್ದಾರೆ. 'ಗಜಮುಖನೆ ಗಣಪತಿಯೆ ನಿನಗೆ ವಂದನೆ' ಎಂಬ ಹಾಡು ಅಂದು-ಇಂದು ಕೂಡ ಎಲ್ಲರ ಮನೆಗಳಲ್ಲಿ, ಅದರಲ್ಲೂ ಮುಖ್ಯವಾಗಿ 'ಗಣೇಶ ಚತುರ್ಥಿ' ಹಬ್ಬದ ಸಾರ್ವಜನಿಕ ವೇದಿಕೆಗಳಲ್ಲಿ ಕೇಳಿಬರುತ್ತಲೇ ಇರುತ್ತದೆ.

ಮೈಸೂರಿನ ತೋಟದ ಮನೆಯಲ್ಲಿ ಅಂತಿಮಯಾತ್ರೆ:

ಮೈಸೂರಿನ ಬೋಗಾದಿ ಮನೆಯಲ್ಲಿ ಪ್ರಸ್ತುತ ಜಾನಕಿ ಅಮ್ಮನವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮೈಸೂರಿನ ಕಣಿಯನಹುಂಡಿಯ ತೋಟದ ಮನೆಯಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನಗಳು ನೆರವೇರಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕಿಯನ್ನು ಕೊನೆಯ ಬಾರಿ ನೋಡಲು ಮೈಸೂರಿಗೆ ಆಗಮಿಸುತ್ತಿದ್ದಾರೆ. 'ದಕ್ಷಿಣ ಭಾರತದ ಗಾನ ಕೋಗಿಲೆ' ಎಸ್ ಜಾನಕಿಯವರು ತಮ್ಮ ಕೊನೆಯ ಆಸೆಯಂತೆ ಮೈಸೂರಿನಲ್ಲೆ ಪ್ರಾನ ತ್ಯಜಿಸಿ, ಅಲ್ಲೇ ಮಣ್ಣಾಗುತ್ತಿದ್ದಾರೆ.

60 ವರ್ಷಗಳ ಸುದೀರ್ಘ ಪಯಣ:

ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1950ರ ದಶಕದಲ್ಲಿಯೇ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್‌ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ ‘ಅಮ್ಮಪೂವಿನುಮ್’ ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿತ್ತು.

ಇಂದು ಜಾನಕಿ ಅಮ್ಮ ದೈಹಿಕವಾಗಿ ನಮ್ಮನ್ನು ಅಗಲಿರಬಹುದು, ಆದರೆ ಅವರ ‘ಗಗನವು ಎಲ್ಲೋ’, ‘ಬಾನಿಗೊಂದು ಎಲ್ಲೆ ಎಲ್ಲಿದೆ’, 'ಬಿಸಿಲಾದರೇನು ಮಳೆಯಾದರೇನು?' ಎಂಬಂತಹ ಸಾವಿರಾರು ಅಮರ ಗೀತೆಗಳ ಮೂಲಕ ಅವರು ಸದಾ ನಮ್ಮ ನಡುವೆಯೇ ಜೀವಂತವಾಗಿರುತ್ತಾರೆ. ಕರ್ನಾಟಕದ ಮನೆಮಗಳಾಗಿ, ಮೈಸೂರಿನ ಮಣ್ಣಿನಲ್ಲಿ ಲೀನವಾಗುತ್ತಿರುವ ಈ ಗಾನ ಮಾಂತ್ರಿಕೆಗೆ ಚಿತ್ರರಂಗದ ಗಣ್ಯರು ಹಾಗೂ ಸಿನಿರಸಿಕರು ಕಣ್ಣೀರಿನ ವಿದಾಯ ಹೇಳುತ್ತಿದ್ದಾರೆ.

ಚಿರಕಾಲ ಉಳಿಯಲಿದೆ ಜಾನಕಮ್ಮನವರ ಮಧುರ ಧ್ವನಿ ಹಾಗೂ ನೆನಪು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Hamsalekha: 'ಜಾನಕಿ ಅಂದ್ರೆ ಸೀತೆ.. ಸೀತೆ ಅಂದ್ರೆ ಗೀತೆ'- ಎಸ್ ಜಾನಕಿ ಸ್ಮಾರಕ ನಿರ್ಮಾಣ ಆಗಬೇಕು : ಹಂಸಲೇಖ ಭಾವುಕ ಮನವಿ
Khushbu Sundar ರೀತಿ ಅವ್ರ ಹೆಣ್ಣು ಮಕ್ಕಳು ನೋಡೋಕೆ ಚೆನ್ನಾಗಿಲ್ಲ ಎಂದವ್ರಿಗೆ ಚಳಿ ಬಿಡಿಸಿದ 'ರಣಧೀರ' ನಟಿ