
ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿ ಮತ್ತು ಕೃಷ್ಣಮೃಗ... ಈ ಮೂರು ಶಬ್ದಗಳು ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ತಮ್ಮ ಆರಾಧ್ಯ ದೈವ ಕೃಷ್ಣಮೃಗವನ್ನು ಕೊಂದಿದ್ದಾರೆ ಎನ್ನುವುದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಆರೋಪ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇದಾಗಲೇ ಹಲವು ಬಾರಿ ಬೆದರಿಕೆ ಹಾಕಿದ್ದಾಗಿದೆ. ಅವರ ನಿಕಟವರ್ತಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಯೂ ಮಾಡಿಯಾಗಿದೆ. ಇಷ್ಟೆಲ್ಲಾ ಆದ ಮೇಲೆ ನಟ ಒಂದು ಕ್ಷಮೆ ಕೋರಬಾರದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಹಿಂದೂ ದೇವಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎನ್ನುವ ಗ್ಯಾಂಗ್ಸ್ಟರ್ಸ್ ಮಾತನ್ನು ಒಪ್ಪಲು ಸಲ್ಮಾನ್ ಆಗಲೀ ಅವರ ಅಪ್ಪ ಸಲೀಂ ಖಾನ್ ಆಗಲಿ ರೆಡಿ ಇಲ್ಲ.
ಇದೀಗ ಒಂದರ ಮೇಲೊಂದರಂತೆ ಕೊಲೆ ಬೆದರಿಕೆ ಬರುತ್ತಲೇ ಇದೆ. ಇದೇ ಸಮಯದಲ್ಲಿ, ಅವರ ‘ಸಿಕಂದರ್’ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿರುವ ಕಾರಣ, ರಶ್ಮಿಕಾ ಮಂದಣ್ಣಂಗೂ ಇದಾಗಲೇ ಬೆದರಿಕೆ ಬಂದಿದೆ. ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಶೂಟಿಂಗ್ಗಾಗಿ 2 ಸೆಟ್ ಹಾಕಲಾಗಿದ್ದು, ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ರಕ್ಷಣೆಗೆ 70 ಮಂದಿಯನ್ನು ನೇಮಕ ಮಾಡಲಾಗಿದೆ. ನಾಲ್ಕು ಲೇಯರ್ಗಳ ಭದ್ರತೆ ನೀಡಲಾಗಿದೆ. ಶೂಟಿಂಗ್ ಹೋಟೆಲ್ ಒಂದರಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಭದ್ರತಾ ಸಿಬ್ಬಂದಿ ಹೋಟೆಲ್ ಅನ್ನು ಸುಪರ್ದಿಗೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಬಾಲಿವುಡ್ಗೆ ಬಿಸಿತುಪ್ಪವಾದ ಸಲ್ಮಾನ್ ಖಾನ್! ನಟನಿಂದಾಗಿ ರಶ್ಮಿಕಾಗೂ ಜೀವ ಭಯ... ಭಾರಿ ಭದ್ರತೆ...
ಇದಾಗಲೇ ಸರ್ಕಾರದ ವಹಿತಿಯಿಂದ ಸಲ್ಮಾನ್ ಖಾನ್ ಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಅಂದರೆ ಸುಮಾರು 25 ಭದ್ರತಾ ಸಿಬ್ಬಂದಿ ಇಲ್ಲಿಯವರೆಗೆ ಅವರ ರಕ್ಷಣೆಗೆ ನಿಂತಿದ್ದರು. ಇದೀಗ ಆ ಸಂಖ್ಯೆಯನ್ನು 70ಕ್ಕೆ ಏರಿಸಲಾಗಿದೆ. ಸರ್ಕಾರದ ವತಿಯಿಂದ ಕೊಟ್ಟಿರುವ ರಕ್ಷಣೆಯಲ್ಲಿ 2 ರಿಂದ 4 ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಅವರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಈ ತಂಡವು ಬುಲೆಟ್ ಪ್ರೂಫ್ ಸೇರಿದಂತೆ ಎರಡರಿಂದ ಮೂರು ವಾಹನಗಳನ್ನು ಬಳಸುತ್ತದೆ. ಈ ಭದ್ರತೆಯ ವೆಚ್ಚ ಪ್ರತಿ ತಿಂಗಳು ಸುಮಾರು 12 ಲಕ್ಷ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ.
ಅಂದರೆ ವರ್ಷಕ್ಕೆ ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಪಾಯಿ ಸರ್ಕಾರದ ಬೊಕ್ಕಸದಿಂದ ಸಲ್ಮಾನ್ ರಕ್ಷಣೆ ನೀಡಲಾಗುತ್ತಿದೆ. ಇದನ್ನು ಹೊರತು ಪಡಿಸಿದರೆ, ಅವರ ವೈಯಕ್ತಿಕ ಸಿಬ್ಬಂದಿ ವೇತನ ಎಲ್ಲಾ ಸೇರಿದರೆ ಒಟ್ಟು ವೆಚ್ಚವು ಮೂರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿರುವ ಶೇರ ಅವರು ಅತ್ಯುತ್ತಮ ಬಾಡಿಗಾರ್ಡ್ಗಳನ್ನು ಆಯ್ಕೆ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸುದ್ದಿ ಆಗಿದೆ. ಎಲ್ಲೆಡೆ ಕಣ್ಗಾವಲು ಇಡಲಾಗಿದೆ. ನಟನ ಜೀವಕ್ಕೆ ಅಪಾಯ ಆಗದ ರೀತಿಯಲ್ಲಿ ಬಂದೋಬಸ್ತ್ ಮಾಡಲಾಗುತ್ತಿದೆ. ಈ ರಕ್ಷಣೆಯ ನಡುವೆ ಸಲ್ಮಾನ್ ಖಾನ್ ಶೂಟಿಂಗ್ ಮುಗಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.