ಕೇಸರಿ ಬಣ್ಣದಿಂದ ಭಾರಿ ವಿವಾದಕ್ಕೆ ಸಿಲುಕಿರುವ ಬಹು ನಿರೀಕ್ಷಿತ ಪಠಾಣ್ ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಗೊಂಡಿದೆ. ಮುಂದೇನು?
ವಿವಾದಗಳಿಗೆ ಸಿಲುಕಿ ನಲುಗಿ ಹೋಗಿರುವ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅವರ ಬಹು ನಿರೀಕ್ಷಿತ ಪಠಾಣ್ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಆ್ಯಕ್ಷನ್ ಹೀರೋ ಶಾರುಖ್ ಖಾನ್ ಈ ಟ್ರೇಲರ್ನಲ್ಲಿಯೂ ಅಬ್ಬರಿಸುತ್ತಾ ಆ್ಯಕ್ಷನ್ ಮಾಡಿದ್ದು, ಫ್ಯಾನ್ಸ್ಗಳ ಮನ ಗೆದ್ದಿದ್ದಾರೆ. ಟ್ರೇಲರ್ನ ಉದ್ದಕ್ಕೂ ಆ್ಯಕ್ಷನ್ ದೃಶ್ಯಗಳೇ ತುಂಬಿಹೋಗಿವೆ. ಹೇಳಿಕೇಳಿ ಇದು ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರ ಚಿತ್ರ. ಆಕ್ಷನ್ ಸಿನಿಮಾಗಳನ್ನು ಮಾಡುವುದರಲ್ಲಿ ಪಳಗಿರುವ ಸಿದ್ಧಾರ್ಥ್, ಇಲ್ಲಿ ಇದರ ಪ್ರಯೋಜನ ಸಾಕಷ್ಟು ಪಡೆದುಕೊಂಡಿದ್ದಾರೆ. ಸಾಹಸ ಸನ್ನಿವೇಶಗಳಿಗೆ ಪ್ರಾಧಾನ್ಯ ನೀಡಲಾಗಿದೆ.
'ಬ್ಯಾಂಗ್ ಬ್ಯಾಂಗ್', 'ವಾರ್' ಸಿನಿಮಾಗಳಂತೆಯೇ ಸಿದ್ಧಾರ್ಥ್ ಅವರು ಇಲ್ಲಿಯೂ ಸಾಕಷ್ಟು ಆ್ಯಕ್ಷನ್ ಮೂಡಿಸಿದ್ದಾರೆ. ಶಾರುಖ್ ಖಾನ್ ಮಾತ್ರವಲ್ಲದೇ, ಇನ್ನು ಕೇಸರಿ ಬಣ್ಣದ ಬಿಕಿನಿ(Bikini)ಯಿಂದಾಗಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಕೂಡ ಇಲ್ಲಿ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಅವರ ಸ್ಟಂಟ್ಗಳಿಗೂ ಕಮ್ಮಿಯೇನಿಲ್ಲ. ಅಚ್ಚರಿ ಮೂಡಿಸುವಷ್ಟು ಸ್ಟಂಟ್ (Stunt) ಮಾಡಿದ್ದಾರೆ. ಮೈನವಿರೇಳಿಸುವಂತಹ ಸಾಕಷ್ಟು ಆಕ್ಷನ್ ಸೀನ್‌ಗಳು ಈ ಸಿನಿಮಾದಲ್ಲಿವೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿ. 'ಬೇಷರಂ ರಂಗ್' (Besharam Rang) ಹಾಡಿನಿಂದಾಗಿ ಬೈಕಾಟ್ ಬಿಸಿ ಅನುಭವಿಸುತ್ತಿರುವ ನಡುವೆಯೇ ಪಠಾಣ್ ಟ್ರೇಲರ್ ಭರ್ಜರಿ ಸದ್ದು ಮಾಡಿದೆ. ‘ಪಠಾಣ್ ವನವಾಸ (Vanavasa) ಮುಗಿಸಿ ಬರುವ ಟೈಮ್ ಆಯಿತು’ ಎಂಬ ಸಿನಿಮಾದ ಡೈಲಾಗ್ನಿಂದ ಟ್ರೇಲರ್ ಶುರುವಾಗುತ್ತದೆ. ಅಸಲಿಗೆ ಇದು ನಿಜಕ್ಕೂ ಈಗಿನ ಪಠಾಣ್ ಸ್ಥಿತಿಗೆ ಸರಿಹೊಂದುತ್ತದೆ ಎನ್ನುವುದು ನೆಟ್ಟಿಗರ ಮಾತು.
'ಬೇಶರಂ ರಂಗ್'ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?
ಸಿನಿಮಾದ ಟ್ರೇಲರ್ (Trailer) ಸಾಕಷ್ಟು ಅದ್ದೂರಿಯಾಗಿ ಮೂಡಿಬಂದಿದೆ. ರಿಲೀಸ್ ಆದ ಕೆಲವೇ ನಿಮಿಷಕ್ಕೆ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡು ದಾಖಲೆ ಮಾಡಿದೆ. 'ಪಠಾಣ್' ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಟ್ರೇಲರ್ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 25 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ. 5 ಲಕ್ಷಕ್ಕೂ ಅದಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಇದರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರುತ್ತಲೇ ಇದೆ. ಇದು ಫ್ಯಾನ್ಸ್ಗಳು (Fans) ಚಿತ್ರದ ಮೇಲಿಟ್ಟಿರುವ ನಿರೀಕ್ಷೆ ತೋರಿಸುತ್ತದೆ.
'ಜೈ ಹಿಂದ್...' (Jai Hind) ಎನ್ನುತ್ತ ಶಾರುಖ್ ಖಾನ್ ಅಬ್ಬರಿಸುವ ದೃಶ್ಯ ಚಿತ್ರದಲ್ಲಿದೆ. ಇದು ಚಿತ್ರದಲ್ಲಿ ಶಾರುಖ್ ಖಾನ್ ಅವರಿಗೆ ದೇಶದ ಮೇಲೆ ಇರುವ ಪ್ರೀತಿಯ ಸಂಕೇತವಾಗಿದೆ. ಚಿತ್ರದಲ್ಲಿ ಇವರು ರಾ ಏಜೆಂಟ್ (Raw Agent) ಆಗಿ ಮಿಂಚಿದ್ದಾರೆ. ದೇಶದ ಮೇಲೆ ದಾಳಿ ಮಾಡಲು ಸಂಚು ರೂಪಿಸುವ ಉಗ್ರನ ವಿರುದ್ಧ ಹೋರಾಡುವ ರಾ ಏಜೆಂಟ್ ಪಾತ್ರದಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಾಹಂ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲೇ ಹೇಳಿದ ಹಾಗೆ ಟ್ರೇಲರ್ ಪೂರ್ತಿ ಆ್ಯಕ್ಷನ್ನಿಂದ ತುಂಬಿದ್ದು, ಶಾರುಖ್ ಹಾಗೂ ಜಾನ್ ಅಬ್ರಾಹಂ ಮುಖಾಮುಖಿ ಫೈಟಿಂಗ್ ದೃಶ್ಯ, ಕಾರ್ ಚೇಸಿಂಗ್ ದೃಶ್ಯ ರೋಮಾಂಚನಗೊಳ್ಳುವಂತಿದೆ.
ನಾಳೆ ಪಾರ್ನ್ ಸಿನಿಮಾನೂ ಮಾಡ್ತೀರಿ; ಶಾರುಖ್ 'ಪಠಾಣ್' ವಿರುದ್ಧ 'ಶಕ್ತಿಮಾನ್' ಮುಖೇಶ್ ಖನ್ನಾ ಕಿಡಿ
ಅಂದಹಾಗೆ ಈ ಚಿತ್ರದ ಕಥೆ ದೇಶಪ್ರೇಮಕ್ಕೆ ಸಂಬಂಧಿಸಿದ್ದು. ವಿಲನ್ ಆಗಿ ನಟಿಸಿರುವ ಜಾನ್ ಅಬ್ರಾಹಂ (Jahn Abrahim) ಔಟ್ಪುಟ್ ಎಕ್ಸ್ ಎಂಬ ಹೆಸರಿನ ಉಗ್ರ ಸಂಘಟನೆ ನಡೆಸುತ್ತಿರುತ್ತಾರೆ. ದಾಳಿ ನಡೆಸಲು ಇವರು ಗುತ್ತಿಗೆ ಪಡೆದುಕೊಳ್ಳುತ್ತಿರುತ್ತಾರೆ. ಈ ಸಂಘಟನೆ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತದೆ. ಈ ದಾಳಿಯನ್ನು ತಪ್ಪಿಸಲು ಶಾರುಖ್ ಹೇಗೆ ಹೋರಾಡುತ್ತಾರೆ, ಅದರಲ್ಲಿ ಅವರು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎನ್ನುವುದು ಸಿನಿಮಾದ ಕಥೆ. ಶಾರುಖ್ ಖಾನ್ ಅವರು 2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಕ ಕೆಲ ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ‘ಪಠಾಣ್’ ಮೂಲಕ ವಾಪಸ್ ಬಂದಿದ್ದಾರೆ. ವಾಪಸ್ ಬರುತ್ತಲೇ ಬೈಕಾಟ್ ಬಿಸಿಯನ್ನೂ ಅನುಭವಿಸುತ್ತಿದ್ದಾರೆ. ಜನವರಿ 25ರಂದು ‘ಪಠಾಣ್’ ರಿಲೀಸ್ ಆಗಲಿದ್ದು ಟ್ರೇಲರ್ನಷ್ಟೇ ಉತ್ಸಾಹದಲ್ಲಿ ಅಭಿಮಾನಿಗಳು ಚಿತ್ರ ನೋಡುತ್ತಾರೆಯೇ ಎಂದು ಕಾದುನೋಡಬೇಕಿದೆ.
ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ (Salman Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಷ್ಯಾದ ಸೈನ್ಯದಿಂದ ನಾಯಕ ಶಾರುಖ್ ಖಾನ್ ಅವರನ್ನು ರಕ್ಷಿಸಲು ಸಲ್ಮಾನ್ ಖಾನ್ ವೀರೋಚಿತವಾಗಿ ಆಗಮಿಸುವ ಪಾತ್ರ ಈ ಚಿತ್ರದಲ್ಲಿದೆ. ಅಶುತೋಷ್ ರಾಣಾ, ಗೌತಮ್ ರೊಡೆ, ಡಿಂಪಲ್ ಕಪಾಡಿಯಾ, ಸಿದ್ದಾರ್ಥ್ ಘೆಗ್ದಾಮಾಲ್, ಶಾಜಿ ಚೌಧರಿ ಮುಂತಾದವರು ನಟಿಸಿದ್ದಾರೆ.