ಯಶ್‌ ಜಡ್ಜ್‌ಮೆಂಟ್‌ ನಾನು ಪೂರ್ತಿ ನಂಬುತ್ತೇನೆ: ಪ್ರಶಾಂತ್‌ ನೀಲ್‌

By Anusha KbFirst Published Apr 10, 2022, 5:30 AM IST
Highlights
  • ಕೆಜಿಎಫ್‌ 2 ನಿರ್ದೇಶಕನ ಜೊತೆ ಮಾತುಕತೆ
  • ಏ.14ರಂದು ವಿಶ್ವಾದ್ಯಂತ ಕೆಜಿಎಫ್‌ 2 ಬಿಡುಗಡೆ
  • ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌  ಮಾತು 

ಬೆಂಗಳೂರು(ಏ.10): ಕೆಜಿಎಫ್‌ 1ರಲ್ಲಿ ಗರುಡ ಮತ್ತು ರಾಕಿ ಮಧ್ಯೆ ಹೋರಾಟ ಇತ್ತು. ಕೆಜಿಎಫ್‌ 2ರಲ್ಲಿ ತುಂಬಾ ಜನರ ಮಧ್ಯದ ಹೋರಾಟ ಇದೆ. ಕೆಜಿಎಫ್‌ ಎರಡು ಅಧ್ಯಾಯ ಮಾಡುವ ಉದ್ದೇಶ ಇರಲಿಲ್ಲ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್ ಹೇಳಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ಕೆಜಿಎಫ್‌ ಸಿನಿಮಾ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದರು. ಕೆಜಿಎಫ್‌ ಎರಡು ಭಾಗ ಎಂದು ನಿರ್ಧಾರ ಆದಾಗ ಕೆಜಿಎಫ್‌ 1ಕ್ಕೆ ಬೇಕಾದ ಕೆಲವು ಅಂಶಗಳನ್ನು ತುಂಬಿಸಬೇಕಾಯಿತು. ಆದರೆ ಕೆಜಿಎಫ್‌ 2ಗೆ ಆ ಅಗತ್ಯ ಬರಲಿಲ್ಲ. ನಾವು ಕೆಜಿಎಫ್‌ 1 ಬಿಡುಗಡೆಯಾಗುವ ಮೊದಲು ಏನಿತ್ತೋ ಅದೇ ಸ್ಕ್ರಿಪ್ಟ್‌ ಕೆಜಿಎಫ್‌ 2. ರಾವ್‌ ರಮೇಶ್‌ ಪಾತ್ರವನ್ನು ಕೆಲವು ಬದಲಾವಣೆ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಬದಲಾವಣೆ ಮಾಡಿಲ್ಲ

ನಿರ್ಮಾಪಕ ವಿಜಯ್‌ ಕಿರಗಂದೂರು ಇಲ್ಲದಿದ್ದರೆ ಈ ಪ್ರೊಜೆಕ್ಟ್ ಇಷ್ಟುದೊಡ್ಡದಾಗುತ್ತಿರಲಿಲ್ಲ. ಅವರು ಯಾವತ್ತೂ ಬಜೆಟ್‌ ಜಾಸ್ತಿಯಾಗುತ್ತಿದೆ ಎಂದು ನನ್ನನ್ನು ಕೇಳಲೇ ಇಲ್ಲ. ನಾನೇ ಅವರಿಗೆ ಹೇಳುತ್ತಿದ್ದೆ ಬಜೆಟ್‌ ಜಾಸ್ತಿಯಾಗುತ್ತಿದೆ ಅಂತ. ಅದಕ್ಕೆ ಅವರು ಅದಕ್ಕೇನಂತೆ, ಆಗ್ಲಿಬಿಡಿ ನೀವು ಮುಂದುವರೆಸಿ ಎನ್ನುತ್ತಿದ್ದರು. ಕೆಜಿಎಫ್‌ನಲ್ಲಿ ಸೆಟ್‌ಗಳೆಲ್ಲಾ ಬಿದ್ದು ಹೋಗಿದ್ದವು. ಅದಕ್ಕೆ 3-4 ಕೋಟಿ ರೂಪಾಯಿ ಖರ್ಚಾಗಿತ್ತು. ಆ ಸೆಟ್‌ ಬಿದ್ದು ಹೋಯಿತು ಅಂತ ಹೇಳಿದಾಗ, ಸರಿ ಬೇರೆ ಕಟ್ಟಿ, ಅದಕ್ಕೆ ಯಾಕೆ ಟೆನ್ಷನ್‌ ಮಾಡ್ಕೋತೀರಾ ಎಂದರು. ಇಂಥಾ ನಿರ್ಮಾಪಕರು ಇದ್ದಾಗ ಹೇಗೆ ಬೇಕಾದರೂ ಸಿನಿಮಾ ಕಲ್ಪಿಸಿಕೊಳ್ಳಬಹುದು. ನಿರ್ಮಾಣವೂ ಒಂದು ಕಲೆ ಅನ್ನುವುದನ್ನು ಅವರನ್ನು ನೋಡಿದಾಗ ಅರ್ಥ ಆಗುತ್ತದೆ.

Latest Videos

ಕೆಜಿಎಫ್2 ಚಿತ್ರ ಹಾಗೂ ಜೀವನದ ಬಗ್ಗೆ ಯಶ್ ಮನದಾಳದ ಮಾತು!

ಕೆಜಿಎಫ್‌ಗಿಂತ ದೊಡ್ಡ ಸಿನಿಮಾ ಮಾಡುತ್ತೀರಾ ಎಂದು ಕೇಳಿದರೆ ಹೇಳುವುದು ಕಷ್ಟ. ಅದು ತನ್ನಿಂತಾನೇ ಸಂಭವಿಸಬೇಕು. ಕೆಜಿಎಫ್‌ ಅನ್ನುವುದು ಒಂದು ಫ್ರಾಂಚೈಸ್‌. ಫ್ರಾಂಚೈಸ್‌ ಅನ್ನುವುದು ದೊಡ್ಡ ಬ್ಯುಸಿನೆಸ್‌. ಅದು ಯಾವತ್ತೂ ಸಾಯುವುದಿಲ್ಲ. ನನ್ನ ಕೆಲಸ ಮುಗಿಯಿತು ಅಂತ ಯಶ್‌ ಒಂದು ದಿನವೂ ಮಾಡಿಲ್ಲ. ಪೂರ್ತಿ ಜರ್ನಿಯಲ್ಲಿ ಯಶ್‌ ಇದ್ದಾರೆ. ಅವರ ಜಡ್ಜ್‌ಮೆಂಟ್‌ ಅನ್ನು ಪೂರ್ತಿ ನಂಬುತ್ತೇನೆ. ನನ್ನ ಕೆರಿಯರ್‌ ನನಗೆ ಮುಖ್ಯ. ಕೆಜಿಎಫ್‌, ಉಗ್ರಂ ಸಿನಿಮಾಗಳಿಂದ ಜನ ನನ್ನ ಕೆಲಸ ನೋಡಿದ್ದಾರೆ. ತೆಲುಗು ಆಫರ್‌ಗಳು ಬಂತು. ನಾನು ಅದನ್ನು ಒಪ್ಪಿಕೊಂಡಿದ್ದೇನೆ.

ಯಶ್‌ ಅವರ ಪಾತ್ರಕ್ಕೆ ಅವರೇ ಸಂಭಾಷಣೆ ಬರೆದಿದ್ದಾರೆ. ಅವರ ಜೀವನಾನುಭವದಿಂದ ಬಂದ ಮಾತುಗಳು ಅವು. ಯಶ್‌ ಮತ್ತು ರಾಕಿಗೆ ತುಂಬಾ ಸಾಮ್ಯತೆ ಇದೆ. ಅವರ ಮಾತುಗಳನ್ನು ಅವರು ಯಾವತ್ತೂ ಮೊದಲೇ ಬರೆದಿದ್ದಲ್ಲ. ಸೆಟ್‌ಗೆ ಬಂದ ಮೇಲೆಯೇ ಹುಟ್ಟಿದ ಮಾತುಗಳು ಅವು. ಅವರ ಜೀವನಾನುಭವ ದೊಡ್ಡದು. ಅವರ ಥರ ನಾನು ಬದುಕಿಲ್ಲ. ಅವರು ಸಿನಿಮಾಗೆ ನಾನಾ ರೀತಿಯಲ್ಲಿ ಜೀವ ತುಂಬಿದ್ದಾರೆ.

ದಾಖಲೆಯ ಮೊತ್ತಕ್ಕೆ ಕೆಜಿಎಫ್‌ 2 ಪ್ರಿ ರಿಲೀಸ್ ಟಿಕೆಟ್‌ ಮಾರಾಟ: ಯಶ್‌ ಅಬ್ಬರಕ್ಕೆ ದಂಗಾದ ಬಿಟೌನ್‌

ಅನಂತ್‌ನಾಗ್‌ ಅವರು ಈ ಸಿನಿಮಾ ಬಿಟ್ಟಿದ್ದಕ್ಕೆ ಅವರಿಗೆ ವೈಯಕ್ತಿಕ ಕಾರಣಗಳಿದ್ದವು. ಆ ಕಾರಣಗಳ ಬಗ್ಗೆ ನಾನು ಮಾತನಾಡಲಾರೆ. ಅವರು ಇದರಲ್ಲಿ ನಟಿಸುವುದಿಲ್ಲ ಎಂದು ಹೇಳಿದರೆ ಅದು ಅವರ ಇಷ್ಟ. ಅದನ್ನು ನಾನು ಪ್ರಶ್ನಿಸಲಾರೆ. ಆ ಪಾತ್ರಕ್ಕೆ ನಾವು ಕೆಜಿಎಫ್‌ 2 (KGF-2) ಚಿತ್ರದಲ್ಲಿ ನ್ಯಾಯ ಸಲ್ಲಿಸಿದ್ದೇವೆ ಎಂಬ ನಂಬಿಕೆ ಇದೆ.

ದೇಶದಲ್ಲಿ 5500 ಸ್ಕ್ರೀನ್‌ಗಳಲ್ಲಿ ಕೆಜಿಎಫ್‌ 2 ಬಿಡುಗಡೆ

ದೇಶಾದ್ಯಂತ ಸುಮಾರು 5500 ಸ್ಕ್ರೀನ್‌ಗಳಲ್ಲಿ ಕೆಜಿಎಫ್‌ 2 ಬಿಡುಗಡೆ ಮಾಡುವುದಾಗಿ ನಿರ್ಮಾಪಕ ವಿಜಯ್‌ ಕಿರಗಂದೂರು (Vijaya Kiragandoor) ತಿಳಿಸಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ 550 ಸ್ಕ್ರೀನ್‌ಗಳಲ್ಲಿ ಕೆಜಿಎಫ್‌ 2 ಬಿಡುಗಡೆಯಾಗಲಿದೆ. 500 ಸ್ಕ್ರೀನ್‌ಗಳಲ್ಲಿ ಕನ್ನಡ, ಉಳಿದ 50 ಸ್ಕ್ರೀನ್‌ಗಳಲ್ಲಿ ಬೇರೆ ಬೇರೆ ಭಾಷೆಯ ವರ್ಷನ್‌ ರಿಲೀಸ್‌ ಆಗಲಿದೆ.

'ಹಿಂದಿ (Hindi) , ತಮಿಳಿನಲ್ಲಿ (Tamil) ಸ್ವಲ್ಪ ಬೇಗ ಟಿಕೆಟ್‌ ಬುಕಿಂಗ್‌ ಆರಂಭಿಸಿದೆವು. ಅದಕ್ಕೆ ಕಾರಣ ಆಯಾಯ ಭಾಷೆಗಳಲ್ಲಿ ಸ್ಪರ್ಧೆ ಇತ್ತು. ಇನ್ನು ತೆಲುಗು ಮತ್ತು ಕನ್ನಡದಲ್ಲಿ ಬೇರೆ ಯಾವ ಸಿನಿಮಾಗಳೂ ಏ.14ರಂದು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಸ್ವಲ್ಪ ತಡವಾಗಿ ಟಿಕೆಟ್‌ ಬುಕಿಂಗ್‌ ಶುರು ಮಾಡಿದ್ದೇವೆ. ಈ ಸಿನಿಮಾಗೆ ಹಲವು ವರ್ಷಗಳನ್ನು ವ್ಯಯಿಸಿದ್ದೇವೆ. ಶಕ್ತಿ, ಸಮಯ ಎನರ್ಜಿ ಹಾಕಿದ್ದೇವೆ. ಆರ್ಥಿಕ ಒತ್ತಡ ಸಹಿಸಿಕೊಂಡಿದ್ದೇವೆ. ಫ್ಯಾಮಿಲಿ ಸಮಯ ಕಳೆದುಕೊಂಡಿದ್ದೇವೆ. ಅದೆಲ್ಲಾ ಆಗಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಯಶ್‌ ಮುಂದೆ ಸೂಪರ್‌ಸ್ಟಾರ್‌ ಆಗುವುದರಲ್ಲಿ ಅನುಮಾನವೇ ಇಲ್ಲ. ಪ್ರಶಾಂತ್‌ ನೀಲ್‌ (Prasanth Neel) ಇನ್ನೂ ದೊಡ್ಡ ನಿರ್ದೇಶಕ ಆಗುತ್ತಾರೆ. ಕನ್ನಡಿಗರ ಬೆಂಬಲ ಸದಾ ಹೀಗೇ ಇರಲಿ’ ಎಂದು ವಿಜಯ್‌ ಕಿರಗಂದೂರು ಹೇಳಿದ್ದಾರೆ.
 

click me!