
ಖಾಸಗಿ ವಾಹಿನಿ ಇಂಡಿಯಾ ಟಿವಿಯಲ್ಲಿ ರಜತ್ ಶರ್ಮಾ ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದಾರೆ. ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್ ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.
* ಯಶ್ ತುಂಬಾ ಮೊಂಡು ಎಂಬ ಆರೋಪವಿದೆ. ನೀವು ಯಾರ ಮಾತನ್ನೂ ಕೇಳದೆ ನಿಮ್ಮಿಷ್ಟದಂತೆ ಇರುತ್ತೀರಾ?
ಇದರಲ್ಲಿ ತಪ್ಪೇನಿದೆ ಸರ್? ಇರುವುದು ಒಂದೇ ಜೀವನ. ನಾವು ಏನಾಗಬೇಕೆಂದು ಬಯಸುತ್ತೇವೆಯೋ, ಏನನ್ನು ಸಾಧಿಸಬೇಕೋ ಅದನ್ನು ಮಾಡಬೇಕು. ಅದನ್ನು ಮೊಂಡುತನ ಎನ್ನುವುದಾದರೆ ಪ್ರತಿಯೊಬ್ಬರೂ ಒಳ್ಳೆಯ ವಿಷಯಗಳಿಗೆ ಮೊಂಡುತನ ಹೊಂದಿರಬೇಕು.
* ಬಾಲ್ಯದಲ್ಲಿ ನೀವು ಮೊಂಡುತನ ಮಾಡಿದಾಗ ತಂದೆಯಿಂದ ಏಟು ಬೀಳುತ್ತಿತ್ತಂತೆ?
ಹೌದು, ತುಂಬಾ ಹೊಡೆಯುತ್ತಿದ್ದರು. ನಾನು ಬಾಲ್ಯದಲ್ಲಿ ಅಷ್ಟು ಚೇಷ್ಟೆ ಮಾಡುತ್ತಿದ್ದೆ. ನನ್ನ ತಂಗಿ ಈಗಲೂ ಹೇಳುತ್ತಾಳೆ, ‘ನೀನು ನಟನಾಗಿ ಎಲ್ಲರೂ ನಿನಗೆ ಇಷ್ಟೊಂದು ಗೌರವ ಕೊಡುತ್ತಿದ್ದಾರೆ, ಆದರೆ ಚಿಕ್ಕವನಿದ್ದಾಗ ನಿನ್ನನ್ನು ನೋಡಿದವರು ಇವನು ಜೀವನದಲ್ಲಿ ಏನೂ ಉದ್ದಾರ ಆಗಲ್ಲ ಎನ್ನುತ್ತಿದ್ದರು’ ಎಂದು. ಆದರೆ ಜೀವನದಲ್ಲಿ ಕಲಿತ ಆ ಪಾಠಗಳು ನನ್ನನ್ನು ದೊಡ್ಡ ಯುದ್ಧಗಳಿಗೆ ಸಿದ್ಧಪಡಿಸಿದವು ಎಂದೆನಿಸುತ್ತದೆ.
* ತಂದೆ ನಿಮ್ಮನ್ನು ಫ್ಯಾನ್‌ಗೆ ತಲೆಕೆಳಗಾಗಿ ನೇತುಹಾಕಿ ಫ್ಯಾನ್ ಆನ್ ಮಾಡಿದ್ದರಂತೆ? ನಿಮ್ಮ ಸ್ನೇಹಿತರು ತಂದೆಯನ್ನು ‘ಟೈಗರ್’ ಎನ್ನುತ್ತಿದ್ದರಂತೆ?
ಹೌದು. ನಾನು ಶಾಲೆಯಿಂದ 10 ನಿಮಿಷ ತಡವಾಗಿ ಬಂದರೂ ಪೊಲೀಸ್ ಗಾಡಿಯಂತೆ ವಾಹನ ತಂದು ಹುಡುಕುತ್ತಿದ್ದರು. ನನ್ನ ಸ್ನೇಹಿತರು ‘ಬೇಗ ಮನೆಗೆ ಹೋಗು, ನಿಮ್ಮಪ್ಪ ಬಂದುಬಿಡುತ್ತಾರೆ’ ಎಂದು ಓಡಿಹೋಗುತ್ತಿದ್ದರು. ಕಾಲೇಜು ದಿನಗಳಲ್ಲೂ ಅವರು ಎಲ್ಲರ ಮುಂದೆ ಹೊಡೆಯುತ್ತಿದ್ದರು. ಕೊನೆಗೆ ಒಂದು ದಿನ ನಾನು ಅವರ ಮುಂದೆ ಕೆಳಗೆ ಬಿದ್ದು ನಾಟಕ ಮಾಡಿದೆ, ಅಂದಿನಿಂದ ಹೊಡೆಯುವುದನ್ನು ಬಿಟ್ಟರು.
* ನಿಮ್ಮ ತಂದೆ ನಿರ್ದೇಶಕರೋ, ನಿರ್ಮಾಪಕರೋ ಅಲ್ಲ ಎಂಬ ಕೊರಗು ಇತ್ತಾ?
ಎಂದಿಗೂ ಇಲ್ಲ ಸರ್. ನನ್ನ ಹೆತ್ತವರು ನನಗೆ ಕಲಿಸಿದ ಮುಖ್ಯ ಪಾಠ, ‘ಯಾರ ಮೇಲೂ ಅವಲಂಬಿತನಾಗಿ ಬದುಕಬೇಡ, ನಿನ್ನ ಕೆಲಸವನ್ನು ನೀನೇ ಮಾಡು, ಯಾರ ಮುಂದೆಯೂ ತಲೆತಗ್ಗಿಸಬೇಡ’ ಎಂಬುದು. ಪ್ರತಿಯೊಬ್ಬ ಮಗುವಿಗೂ ಅವರ ತಂದೆಯೇ ಹೀರೋ. ನಮ್ಮ ತಂದೆ-ತಾಯಿ ಹೆಚ್ಚು ಹಣ ಗಳಿಸದೇ ಇರಬಹುದು, ಆಸ್ತಿ ಮಾಡದೇ ಇರಬಹುದು. ಆದರೆ ನಮ್ಮನ್ನೇ ತಮ್ಮ ಆಸ್ತಿ ಎಂದು ನಂಬಿ ಬೆಳೆಸಿದರು.
* ನಿಮ್ಮ ತಂದೆ ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದರು. ಆರಂಭದಲ್ಲಿ ದಿನಕ್ಕೆ ₹14 ದುಡಿಯುತ್ತಿದ್ದ ದಿನಗಳಿದ್ದವು...
ನಾನು ಓದುವಾಗ ನಮ್ಮ ತಂದೆ ಬಡವರು ಎಂಬ ಭಾವನೆ ನನಗೆ ಬರಲು ಅವರು ಬಿಡಲೇ ಇಲ್ಲ. ಕಾಲೇಜಿಗೆ ಬಂದಾಗ ಎಲ್ಲರ ಬಳಿ ಬೈಕ್, ಹೊಸ ಬಟ್ಟೆ ಇರುತ್ತಿತ್ತು. ನನ್ನ ಬಳಿ ತಂದೆಯ ಹಳೆಯ ಸ್ಕೂಟರ್ ಇತ್ತು. ನಮ್ಮ ಮನಸ್ಥಿತಿ ಮತ್ತು ದುಡಿಮೆಯಿಂದ ಗೌರವ ಸಿಗುತ್ತದೆಯೇ ಹೊರತು ಹೊರಗಿನ ಆಡಂಬರದಿಂದಲ್ಲ ಎಂದು ನನಗೆ ಬಹಳ ಬೇಗ ಅರ್ಥವಾಯಿತು.
* ನೀವು ಅತ್ಯುತ್ತಮ ಡ್ಯಾನ್ಸರ್ ಆಗಿದ್ದಿರಿ, ಹುಡುಗಿಯರೆಲ್ಲ ನಿಮ್ಮ ಡ್ಯಾನ್ಸ್‌ಗೆ ಫಿದಾ ಆಗಿದ್ದರು...
ಹೌದು, ನನಗೆ ಡ್ಯಾನ್ಸ್ ಎಂದರೆ ಪ್ರಾಣ. ಶಾಲೆಯಲ್ಲಿ ಶಿಕ್ಷಕರು ನನ್ನನ್ನು ‘ಹೀರೋ’ ಎಂದೇ ಕರೆಯುತ್ತಿದ್ದರು. ನಾನೂ ಸಹ ಹುಟ್ಟಿನಿಂದಲೇ ಹೀರೋ ಎಂದು ನಂಬಿಬಿಟ್ಟಿದ್ದೆ. ಒಮ್ಮೆ ವೀರಪ್ಪನ್ ಹಾವಳಿ ಇದ್ದಾಗ, ‘ನನಗೆ ರಜೆ ಕೊಡಿ, ನಾನೇ ಹೋಗಿ ವೀರಪ್ಪನ್ ಹಿಡಿದು ತರುತ್ತೇನೆ’ ಎಂದು ಶಾಲೆಯಲ್ಲಿ ಡೈಲಾಗ್ ಹೊಡೆದಿದ್ದೆ. 7ನೇ ತರಗತಿಯವರೆಗೂ ಟೀಚರ್‌ಗಳು ‘ಏನೋ, ವೀರಪ್ಪನ್ ಹಿಡಕೊಂಡು ಬಂದ್ಯಾ?’ ಎಂದು ಕಾಲೆಳೆಯುತ್ತಿದ್ದರು.
* ಚಿತ್ರರಂಗದಲ್ಲಿ ಚಿರಂಜೀವಿ, ಅಲ್ಲು ಅರ್ಜುನ್ ಮುಂತಾದವರ ಕುಟುಂಬದ ಹಿನ್ನೆಲೆ ಇರುವ ನಟರಿಗೆ ಆರಂಭದಲ್ಲಿ ಬೆಂಬಲ ಸಿಗುತ್ತದೆ. ನಿಮ್ಮಂತಹ ಹೊರಗಿನವರಿಗೆ ಕಷ್ಟ ಅನಿಸಲಿಲ್ಲವೇ?
ಹಿನ್ನೆಲೆ ಇರಲಿ, ಬಿಡಲಿ, ಕೊನೆಗೆ ನಿರ್ಧರಿಸುವುದು ಪ್ರೇಕ್ಷಕರೇ. ಸ್ಟಾರ್ ಮಕ್ಕಳಿಗೂ ಅವರದೇ ಆದ ತಂದೆಯ ಹೆಸರಿನ ದೊಡ್ಡ ಹೊರೆ ಇರುತ್ತದೆ. ಆದರೆ ನಮ್ಮಂತಹವರಿಗೆ ಆ ಮೊದಲ ಮೆಟ್ಟಿಲು ಹುಡುಕುವುದೇ ಕಷ್ಟ. ಒಮ್ಮೆ ಮೆಟ್ಟಿಲು ಸಿಕ್ಕ ಮೇಲೆ ಹತ್ತುವುದು ನಮ್ಮ ಕೈಯಲ್ಲಿದೆ. ನನ್ನನ್ನು ನಾನೇ ಬೆಳೆಸಿಕೊಂಡಿದ್ದಕ್ಕಿಂತ ಜನರ ಪ್ರೀತಿಯೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಅಲ್ಲು ಅರವಿಂದ್ ಒಮ್ಮೆ ಹೇಳಿದ್ದರು, ‘ಕೆಜಿಎಫ್‌ಗಿಂತ ಮೊದಲು ಯಶ್ ಏನಾಗಿದ್ದರು? ಸಿನಿಮಾ ಮಾಡುವುದು ನಿರ್ಮಾಪಕ, ಅದರ ಲಾಭ ನಟನಿಗೆ ಸಿಗುತ್ತದೆ’ ಎಂದು... ನಿಜ ಸರ್, ಸಿನಿಮಾದಲ್ಲಿ ನೂರಾರು ಜನರು ಕೆಲಸ ಮಾಡುತ್ತಾರೆ. ಆದರೆ ಆ ಎಲ್ಲರ ಶ್ರಮ ನಟನ ಮೂಲಕ ಪರದೆಯ ಮೇಲೆ ಬರುತ್ತದೆ. ನಟ ಅದನ್ನು ಸರಿಯಾಗಿ ಹೊರಹಾಕದಿದ್ದರೆ ಸಿನಿಮಾ ಓಡುವುದಿಲ್ಲ. ಜಗತ್ತಿನ ಇತಿಹಾಸದಲ್ಲೇ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತದೆ, ಏಕೆಂದರೆ ಕ್ಯಾಮೆರಾ ಎದುರು ನಿಂತು ಆ ಭಾವನೆಗಳನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿ ನಟನ ಮೇಲಿರುತ್ತದೆ. ಪ್ರೇಕ್ಷಕರು ಎಂದಿಗೂ ತಪ್ಪಾಗುವುದಿಲ್ಲ.
* ದಕ್ಷಿಣದ ರಾಮ್ ಚರಣ್, ಜೂ. ಎನ್‌ಟಿಆರ್, ಮಹೇಶ್ ಬಾಬು ದೊಡ್ಡ ಕುಟುಂಬದಿಂದ ಬಂದರೂ ನಿಮ್ಮಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ?
ಇಲ್ಲ ಸರ್, ಎಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಈ ‘ಪ್ಯಾನ್ ಇಂಡಿಯಾ’, ‘ಸ್ಟಾರ್ಡಮ್’ ಎಂಬುದೆಲ್ಲ ಶಾಶ್ವತವಲ್ಲ. ಈ ಶುಕ್ರವಾರ ನೀವು ಸೂಪರ್ ಸ್ಟಾರ್ ಆಗಿರಬಹುದು, ಮುಂದಿನ ಶುಕ್ರವಾರ ಏನೂ ಇಲ್ಲದಂತಾಗಬಹುದು. ಯಾರು ಮುಂದು, ಯಾರು ಹಿಂದು ಎನ್ನುವುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ನೆಲೆಸುತ್ತೇವೆ ಎಂಬುದು ಮುಖ್ಯ.
* ಇಲ್ಲಿಯವರೆಗೆ ಬರಲು ನೀವು ನಾಟಕ ರಂಗದಲ್ಲಿ ನೆಲ ಒರೆಸಿದ್ದೀರಿ, ಚಹಾ ಕೊಟ್ಟಿದ್ದೀರಿ...
ಅದನ್ನೆಲ್ಲಾ ಸಾಮಾನ್ಯವಾಗಿ ಜನ ಸ್ಟ್ರಗಲ್ ಎಂದು ಕರೆಯುತ್ತಾರೆ. ಆದರೆ ನನಗೆ ಅದು ಕಷ್ಟ ಎನಿಸಲಿಲ್ಲ. ಆ ಕೆಲಸದಲ್ಲೂ ನಾನು ಖುಷಿ ಕಂಡುಕೊಂಡಿದ್ದೆ. ಕಸ ಗುಡಿಸುವುದರಲ್ಲೂ ಖುಷಿ ಇರಬಹುದು, ದೊಡ್ಡ ಅವಾರ್ಡ್ ತಗೊಂಡಾಗಲೂ ಖುಷಿ ಇಲ್ಲದಿರಬಹುದು. ಮನಸ್ಥಿತಿ ಮುಖ್ಯ.
* ನಿಮ್ಮಲ್ಲಿ ಆರಂಭದಿಂದಲೂ ಹೀರೋ ಎಂಬ ಇಗೋ ಇತ್ತು?
ಅದನ್ನು ನೀವು ಇಗೋ ಅಂದರೆ ಇಗೋ, ನನ್ನ ಮಟ್ಟಿಗೆ ಅದು ಆತ್ಮಗೌರವ, ಸೆಲ್ಫ್ ರೆಸ್ಪೆಕ್ಟ್. 17ನೇ ವಯಸ್ಸಿನಲ್ಲಿ ರಂಗಭೂಮಿಗೆ ಹೋದಾಗ, ‘ನೀನಿನ್ನೂ ಚಿಕ್ಕವನು ಸುಮ್ಮನಿರು’ ಎನ್ನುತ್ತಿದ್ದರು. ನಾನು ಹೇಳುವ ಮಾತಿಗೆ ವಯಸ್ಸಿನ ಹಂಗಿಲ್ಲದೆ ಬೆಲೆ ಸಿಗಬೇಕೆಂದೇ ನಾನು ಗಡ್ಡ ಬಿಡಲು ಶುರುಮಾಡಿದೆ.
* ರಾತ್ರೋರಾತ್ರಿ ಇಷ್ಟು ದೊಡ್ಡ ಸೂಪರ್ ಸ್ಟಾರ್ ಆದಾಗ ನಿಮ್ಮ ಶಾಲಾ-ಕಾಲೇಜು ಸ್ನೇಹಿತರ ಪ್ರತಿಕ್ರಿಯೆ ಹೇಗಿತ್ತು?
ಕರ್ನಾಟಕದಲ್ಲಿ ನನಗೆ ಸಿಕ್ಕ ಗೆಲುವು ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಒಂದೊಂದೇ ಹೆಜ್ಜೆ ಇಟ್ಟು, ಹಲವು ಹಿಟ್ ಸಿನಿಮಾಗಳ ನಂತರ ‘ಕೆಜಿಎಫ್’ ಸಾಧ್ಯವಾಯಿತು. ನಮ್ಮ ಚಿತ್ರರಂಗವನ್ನು ಯಾರಾದರೂ ಕಡೆಗಣಿಸಿದರೆ ನನಗೆ ಬೇಸರವಾಗುತ್ತಿತ್ತು. ಅದಕ್ಕೇ ಇಡೀ ತಂಡವನ್ನು ಒಪ್ಪಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋದೆವು. ದೇಶದ ಜನರು ನನ್ನನ್ನು ಒಪ್ಪಿಕೊಂಡರು. ಕರ್ನಾಟಕದ ಜನರಿಗೆ ನನ್ನ ಬೆಳವಣಿಗೆ ತಮ್ಮದೇ ಮನೆಯ ಮಗನ ಗೆಲುವು ಎನಿಸುತ್ತದೆ.
* ನೀವು ಅಹಂಕಾರಿಯಂತೆ, ಟಿವಿ ಸೀರಿಯಲ್‌ನಲ್ಲಿರುವಾಗಲೇ 7 ಸಿನಿಮಾಗಳ ಆಫರ್ ಬಂದಾಗ, ‘ನನಗೆ ಮೊದಲು ಸ್ಕ್ರಿಪ್ಟ್ ಕೊಡಿ’ ಎಂದು ಕೇಳಿ ಸಿನಿಮಾಗಳನ್ನೇ ಕಳೆದುಕೊಂಡಿರಂತೆ?
ಹೌದು, ಟಿವಿ ನಟ ಸ್ಕ್ರಿಪ್ಟ್ ಕೇಳಬಾರದು ಎಂಬ ನಿಯಮ ಎಲ್ಲಿದೆ? ನಾನು ಮಾಡುವ ಪಾತ್ರ ನನಗೆ ಇಷ್ಟವಾಗಬೇಕು, ನಾನು ಪ್ರಾಮಾಣಿಕವಾಗಿರಬೇಕು. ಅದಕ್ಕಾಗಿ ಸ್ಕ್ರಿಪ್ಟ್ ಕೇಳಿದೆ. ಆ 7 ಸಿನಿಮಾಗಳು ಕೈತಪ್ಪಿದರೂ ನನಗೆ ಬೇಸರವಿಲ್ಲ.
* ಈಗ ನೀವು ಒಂದು ಚಿತ್ರಕ್ಕೆ ₹50 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತೀರಾ?
ಅದಕ್ಕೂ ಜಾಸ್ತಿ. ನಮ್ಮ ಮೌಲ್ಯಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತದೆ. ನಾನು ಕೇವಲ ನಟನಾಗಿ ಹಣ ಪಡೆಯುವುದಿಲ್ಲ. ಕೆಜಿಎಫ್‌ಗಿಂತ ಮುಂಚಿನಿಂದಲೂ ನಿರ್ಮಾಪಕರ ಜೊತೆ ಪಾಲುದಾರನಾಗಿ ರಿಸ್ಕ್ ತೆಗೆದುಕೊಳ್ಳುತ್ತೇನೆ. ಸಿನಿಮಾ ಹಣ ಗಳಿಸಿದರೆ ನನಗೂ ಪಾಲು, ಸೋತರೆ ನಷ್ಟದಲ್ಲೂ ಪಾಲು.
* ನೀವು ಶಾರುಖ್ ಖಾನ್ ಅವರ ಬಹುದೊಡ್ಡ ಅಭಿಮಾನಿ. ಆದರೆ ‘ಜೀರೋ’ ಚಿತ್ರದ ಎದುರೇ ‘ಕೆಜಿಎಫ್’ ಬಿಡುಗಡೆ ಮಾಡಿ ಕ್ಲ್ಯಾಶ್ ಮಾಡಿದಿರಿ?
ನಾನು ಶಾರುಖ್ ಸರ್ ಅವರ ಬಹುದೊಡ್ಡ ಫ್ಯಾನ್. ಪ್ಯಾನ್ ಇಂಡಿಯಾ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬರುವಾಗ ಕ್ಲ್ಯಾಶ್ ಅನಿವಾರ್ಯ. ಅವರ ಚಿತ್ರ ದೊಡ್ಡದಾಗಿತ್ತು, ನಮ್ಮದು ಚಿಕ್ಕದಾಗಿತ್ತು. ಅದಕ್ಕೆ ಬಿಡುಗಡೆ ಮಾಡಿದೆವು. ನಮ್ಮ ಸಿನಿಮಾ ಚೆನ್ನಾಗಿ ಓಡಿತು ಎಂದ ಮಾತ್ರಕ್ಕೆ ನಾನು ಶಾರುಖ್ ಸರ್‌ಗಿಂತ ದೊಡ್ಡವನಾಗುವುದಿಲ್ಲ. ನಾನು ನಮ್ಮ ಹಿರಿಯರಿಗಿಂತ ದೊಡ್ಡವನು ಅಂದುಕೊಂಡ ಕ್ಷಣ ನನ್ನ ಅಂಗಡಿ ಬಂದ್ ಆಗುತ್ತದೆ.
* ಅಮೀರ್ ಖಾನ್ ಕೂಡ ‘ಕೆಜಿಎಫ್ 2’ ನೋಡಿ ಹೆದರಿ ತಮ್ಮ ಚಿತ್ರದ ರಿಲೀಸ್ ಡೇಟ್ ಮುಂದೂಡಿದರು ಎನ್ನುತ್ತಾರೆ?
ಯಾರೂ ಯಾರಿಗೂ ಹೆದರುವುದಿಲ್ಲ ಸರ್. ಅವರವರ ಸಿನಿಮಾಗಳ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
* ನಿಮ್ಮ ಹೊಸ ಚಿತ್ರ ‘ಟಾಕ್ಸಿಕ್’ ರಿಲೀಸ್ ಡೇಟ್ ಮುಂದೂಡಿದಾಗ ಯಶ್ ಕೂಡ ಹೆದರಿದರು ಎಂಬ ಮಾತಿದೆ?
ನನ್ನ ಬಳಿ ಕಳೆದುಕೊಳ್ಳಲು ಏನೂ ಇಲ್ಲದಿರುವಾಗ ನನಗೆ ಭಯ ಏಕೆ ಸರ್? 100-200 ಕೋಟಿ ಕಡಿಮೆ ಬಂದರೆ ನನಗೇನೂ ಆಗುವುದಿಲ್ಲ. ನಾನು ಜನರಿಗೆ ನೀಡಿದ ಭರವಸೆಗೆ ತಕ್ಕಂತೆ ಸಿನಿಮಾ ಬರಬೇಕು. ಚಿತ್ರಕ್ಕೆ ಹೆಚ್ಚಿನ ಸಮಯ ಬೇಕು ಎನಿಸಿದಾಗ ಮುಂದೂಡಿದೆವು. ಕೇವಲ ಇಮೇಜ್ ಉಳಿಸಿಕೊಳ್ಳಲು ಹಠ ಹಿಡಿದು ರಿಲೀಸ್ ಮಾಡಿದ್ದರೆ ಅದು ಅಹಂಕಾರವಾಗುತ್ತಿತ್ತು.
* ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ‘ಯಶ್ ಮಿಸ್ಟರ್ ಶೋ ಆಫ್’ ಎಂದಾಗ ನಿಮ್ಮ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು...
ಅವರು ಆಗಷ್ಟೇ ಚಿತ್ರರಂಗಕ್ಕೆ ಬಂದ ಹೊಸಬರಾಗಿದ್ದರು. ಕೆಲವು ಶೋಗಳಲ್ಲಿ ವಿವಾದ ಹುಟ್ಟುಹಾಕಲೆಂದೇ ಆಯ್ಕೆಗಳನ್ನು ಕೊಟ್ಟು ಪ್ರಶ್ನೆ ಕೇಳುತ್ತಾರೆ. ಬಹುಶಃ ಅವರಿಗೆ ನನ್ನ ಹೆಸರು ಸೂಕ್ತ ಎನಿಸಿರಬಹುದು. ಅದರಿಂದ ಹಲವು ನಿರ್ದೇಶಕರಿಗೆ ಬೇಸರವಾಗಿತ್ತು. ಆದರೆ ನನಗೆ ಬೇಸರವಾಗಲಿಲ್ಲ. ಯಾರಾದರೂ ನನ್ನ ಬಗ್ಗೆ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಬೇರೆಯವರ ಅಭಿಪ್ರಾಯ ನನ್ನ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಹೆಸರಿನಲ್ಲಿ ಬೇರೆ ಕಲಾವಿದರನ್ನು ನಿಂದಿಸುವವರು ನನ್ನ ನಿಜವಾದ ಅಭಿಮಾನಿಗಳೇ ಅಲ್ಲ.
* ‘ನಾನು ಪೋಷಕರ ಜೊತೆ ಕುಳಿತು ನೋಡಲಾಗದ ದೃಶ್ಯಗಳಲ್ಲಿ ನಟಿಸುವುದಿಲ್ಲ’ ಎಂದಿದ್ದ ನೀವು, ಈಗ ‘ಟಾಕ್ಸಿಕ್’ನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಾ?
ಮನುಷ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾನೆ. ಕಲೆಯು ಸಮಾಜಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು. ಈ ಚಿತ್ರದ ಟ್ಯಾಗ್ಲೈನ್ ‘ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’. ಇದು ಮಕ್ಕಳಿಗಲ್ಲ ಎಂದು ನಾವೇ ಸ್ಪಷ್ಟಪಡಿಸಿದ್ದೇವೆ. ಮಹಿಳಾ ನಿರ್ದೇಶಕಿ ಗೀತು ಮೋಹನ್‌ದಾಸ್ ಮಹಿಳೆಯರ ಆಸೆ ಮತ್ತು ಕಲ್ಪನೆಗಳನ್ನು ಧೈರ್ಯವಾಗಿ ಚಿತ್ರಿಸಿದ್ದಾರೆ. ಕಥೆಯ ಅಗತ್ಯಕ್ಕೆ ತಕ್ಕಂತೆ ಆ ದೃಶ್ಯಗಳಿವೆ.
* ಇನ್‌ಸ್ಟಾಗ್ರಾಮ್‌ನಲ್ಲಿ 14 ಮಿಲಿಯನ್ ಫಾಲೋವರ್ಸ್ ಇದ್ದರೂ ನೀವು ಕೇವಲ ಒಬ್ಬರನ್ನು (ಪತ್ನಿ ರಾಧಿಕಾ ಪಂಡಿತ್) ಮಾತ್ರ ಫಾಲೋ ಮಾಡುತ್ತೀರಾ?
ಹೌದು, ರಾಧಿಕಾ ನನ್ನ ಜೀವನದ ಏಕೈಕ ಆಪ್ತ ಗೆಳತಿ. ಸೀರಿಯಲ್ ದಿನಗಳಿಂದ ನಾವಿಬ್ಬರೂ ಏನೂ ಇಲ್ಲದ ಕಾಲದಿಂದ ಒಟ್ಟಿಗೆ ಬೆಳೆದಿದ್ದೇವೆ. ನನ್ನ ಬದುಕಿನ ಆಧಾರಸ್ತಂಭ ಅವರು.
* ₹4000 ಕೋಟಿ ಬಜೆಟ್‌ನ ‘ರಾಮಾಯಣ’ ಚಿತ್ರದಲ್ಲಿ ನೀವೇಕೆ ರಾಮನ ಬದಲಿಗೆ ರಾವಣನ ಪಾತ್ರ ಆಯ್ದುಕೊಂಡಿರಿ?
ಶ್ರೀರಾಮನ ಧರ್ಮ ಮತ್ತು ಒಳ್ಳೆಯತನದ ತೀವ್ರತೆಯನ್ನು ತೋರಿಸಲು ಅಷ್ಟೇ ಪ್ರಬಲವಾದ, ಭಯಂಕರವಾದ ರಾವಣನ ಪಾತ್ರ ಬೇಕು. ಆ ಪಾತ್ರವನ್ನು ನನಗಿಂತ ಚೆನ್ನಾಗಿ ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ. ರಣಬೀರ್ ಕಪೂರ್ ರಾಮನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಜಾಗತಿಕ ಮಟ್ಟದ ಸಂಗೀತ ನೀಡುತ್ತಿದ್ದಾರೆ.
* ದಳಪತಿ ವಿಜಯ್ ಅವರಂತೆ ನೀವೂ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾಗುವ ಆಸಕ್ತಿ ಇದೆಯೇ?
ಸದ್ಯಕ್ಕೆ ನಟನಾಗಿ ಈ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಜವಾಬ್ದಾರಿಯಿದೆ. ಆದರೆ ರಾಜಕೀಯ ಎಂದರೆ ಸಾರ್ವಜನಿಕ ಸೇವೆ, ಭವಿಷ್ಯದಲ್ಲಿ ಅಂತಹ ಅಗತ್ಯ ಬಂದರೆ ನೋಡೋಣ. ಸದ್ಯಕ್ಕಂತೂ ರಾಜಕೀಯದ ಯಾವುದೇ ಯೋಚನೆಗಳಿಲ್ಲ.
* ನೀವು ದೊಡ್ಡ ಸ್ಟಾರ್ ಆದಾಗ ನಿಮ್ಮ ತಂದೆಯ ಮೊದಲ ಪ್ರತಿಕ್ರಿಯೆ ಹೇಗಿತ್ತು?
ಅವರು ಯಾವಾಗಲೂ ಸಪೋರ್ಟಿವ್. ಆದರೆ ಈಗಲೂ ನಾನು ಚೇಷ್ಟೆ ಮಾಡುತ್ತೇನೆ, ಅವರು ನನ್ನನ್ನು ಯಾರಾದರೂ ಯಾಮಾರಿಸಬಹುದು ಎಂದು ಕಮೆಂಟ್ ಮಾಡುತ್ತಿರುತ್ತಾರೆ. ಅದು ಭಾರತೀಯ ಪೋಷಕರ ಪ್ರೀತಿ, ‘ಜಾಸ್ತಿ ಹಾರಬೇಡ, ನೆಲದಲ್ಲೇ ಇರು’ ಅಂತ ಹೇಳುವ ರೀತಿ.
* ನಿಮ್ಮ ಸಂಬಂಧಿಕರು ಕೆಲವರು ‘ಇವನಿಗೆ ಊಟ ಇರಲಿಲ್ಲ ನಾವೇ ಹಾಕಿದ್ದು, 5 ದಿನ ಸ್ನಾನ ಮಾಡುತ್ತಿರಲಿಲ್ಲ ನಾವೇ ಮಾಡಿಸಿದ್ದು’ ಅಂತೆಲ್ಲ ಹೇಳಿದ್ದಾರಂತೆ?
ಒಬ್ಬ ವ್ಯಕ್ತಿ ದೊಡ್ಡವನಾದಾಗ ಹಲವರು ಬಂದು ‘ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ’ ಎನ್ನುತ್ತಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದಾಗಲೂ ನಾನು ಸ್ಟೈಲ್ ಬಿಟ್ಟಿರಲಿಲ್ಲ, ಸ್ನಾನವಂತೂ ಪ್ರತಿದಿನ ಮಾಡುತ್ತಿದ್ದೆ. ಯಾರಾದರೂ ನೆರವಾಗಿದ್ದರೆ ಎಲ್ಲರಿಗೂ ಧನ್ಯವಾದ.
* 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ನಿಂತು ಫೋಟೋ ಕೊಟ್ಟಿರಂತೆ?
ಗ್ರೂಪ್ ಫೋಟೋ ತೆಗೆದರೆ ಅವರ ನೆನಪು ಉಳಿಯಲ್ಲ. ವೈಯಕ್ತಿಕವಾಗಿ ಫೋಟೋ ಕೊಟ್ಟರೆ ಅವರಿಗೆ ಲೈಫ್‌ಟೈಮ್ ಮೆಮೊರಿ. ಅವರ ಸಮಯಕ್ಕೂ ಬೆಲೆಯಿದೆ.
* ನೀವು ಸ್ಟಾರ್ ಆದ ಮೇಲೂ ನಿಮ್ಮ ತಂದೆ ಬಸ್ ಡ್ರೈವಿಂಗ್ ಕೆಲಸ ಮುಂದುವರಿಸಿದ್ದರು...
ಹೌದು ಸರ್. ಮಗ ಆಡಿ ಕಾರಿನಲ್ಲಿ ತಿರುಗಾಡುತ್ತಾನೆ, ಅಪ್ಪ ಬಸ್ ಓಡಿಸುತ್ತಾನೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ನಾನು ಅವರಿಗೆ ದುಬಾರಿ ಕಾರು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಅವರು ‘ನನಗೆ ಯಶ್ ತಂದೆ ಅಂತ ಸಿಗುವ ಗೌರವಕ್ಕಿಂತ, ನನ್ನ ಕಾಯಕಕ್ಕೆ ನನ್ನ ಸಹೋದ್ಯೋಗಿಗಳು ಕೊಡುವ ಗೌರವವೇ ನನಗೆ ಮುಖ್ಯ’ ಎಂದು ಹೆಮ್ಮೆಯಿಂದ ಕೆಲಸ ಮಾಡುತ್ತಿದ್ದರು.
* ಮಕ್ಕಳು ಟಾಕ್ಸಿಕ್ ಚಿತ್ರದಿಂದ ಏನು ಕಲಿಯುತ್ತಾರೆ?
ಏನು ಮಾಡಬಾರದು ಎಂಬುದನ್ನು ಕಲಿಯುತ್ತಾರೆ. ಇದು ಮಕ್ಕಳಿಗಾಗಿ ಮಾಡಿದ ಚಿತ್ರವಲ್ಲ.
ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವರ ಆರೋಗ್ಯ ಸರಿಯಿರಲಿಲ್ಲ. ಅಷ್ಟು ಧೂಳಿನಲ್ಲಿ ನಾವು ಬಾಡಿ ಡಬಲ್ ಬಳಸೋಣ ಎಂದರೂ ಅವರು ಒಪ್ಪಲಿಲ್ಲ. ‘ನನ್ನ ಕಾಯಕಕ್ಕೆ ಅಗೌರವ ಮಾಡಬೇಡಿ’ ಎಂದು ಸ್ವತಃ ಬಂದು ಅದ್ಭುತವಾಗಿ ನಟಿಸಿದರು. ಅವರ ಬದ್ಧತೆ ಅಸಾಧಾರಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.