ಡಾಲಿ ಧನಂಜಯ ನಿರ್ಮಾಣದ, ಉಮೇಶ್ ಕೃಪ ನಿರ್ದೇಶನದ, ನಾಗಭೂಷಣ ನಾಯಕನಾಗಿ ನಟಿಸಿರುವ ‘ಟಗರು ಪಲ್ಯ’ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕ ನಟಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅವರ ಸಂದರ್ಶನ.
ರಾಜೇಶ್ ಶೆಟ್ಟಿ
* ಚಿತ್ರರಂಗ ಪ್ರವೇಶಿಸುವ ನಿರೀಕ್ಷೆ ಇತ್ತಾ?
ತುಂಬಾ ಸಿನಿಮಾಗಳನ್ನು ನೋಡುತ್ತಿದ್ದೆ. ಸಿನಿಮಾ ಎಂದರೆ ನನಗೆ ಇಷ್ಟ. ಆದರೆ ಚಿತ್ರರಂಗ ಪ್ರವೇಶಿಸುವ ನಿರೀಕ್ಷೆ ಇರಲಿಲ್ಲ. ಈ ಸಿನಿಮಾಗೆ ಆಯ್ಕೆಯಾಗಿದ್ದು ಅನಿರೀಕ್ಷಿತ.
undefined
* ನಟನೆಯ ಅನುಭವ ಹೇಗಿತ್ತು?
ಈ ಸಿನಿಮಾಗೆ ಆಯ್ಕೆಯಾದ ಮೇಲೆ ಸಿನಿಮಾ ಚಿತ್ರೀಕರಣಕ್ಕೆ ಹೋಗಲು ಸಮಯ ತುಂಬಾ ಕಡಿಮೆ ಇತ್ತು. ಆ ಸಮಯದಲ್ಲೇ ವರ್ಕ್‌ಶಾಪ್ ನಡೆಸಿದರು. ನಮ್ಮ ಸಿನಿಮಾ ಚಿತ್ರೀಕರಣ ನಡೆದಿದ್ದು ಭರಚುಕ್ಕಿ ಸಮೀಪದಲ್ಲಿ. ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ನಮ್ಮ ತಂಡ 250-300 ಮೆಟ್ಟಿಲು ಹತ್ತಿಕೊಂಡು ಹೋಗಬೇಕಿತ್ತು. ಎಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿಕೊಂಡರು. ಹಾಗಾಗಿ ನಟನೆ ಕಷ್ಟವಾಗಲಿಲ್ಲ. ವರ್ಕ್‌ಶಾಪ್ ಸಮಯದಲ್ಲಿಯೇ ಪಾತ್ರಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೆ.
ಇದು Tagaru Palya ಪ್ರಮೋಷನಲ್ ಸಾಂಗ್: ಡಾಲಿ ಧನಂಜಯ್ ಲಿರಿಕ್ಸ್... ಪ್ರೇಮ್ ವಾಯ್ಸ್ ಚಿಂದಿ!
* ತಂದೆ ಪ್ರೇಮ್ ಅವರು ಏನು ಸಲಹೆ ನೀಡಿದ್ದರು?
ನೀನು ಮತ್ತು ಕ್ಯಾಮೆರಾ ಮಾತ್ರ ಆ ಸನ್ನಿವೇಶದಲ್ಲಿ ಇರುವುದು ಎಂದುಕೊಂಡು ನಟಿಸು, ವಿಶ್ವಾಸದಿಂದ ಅಭಿನಯಿಸು ಅಂತ ತಂದೆ ಹೇಳಿದ್ದರು. ಅದನ್ನು ಪಾಲಿಸಿದೆ. ಅಲ್ಲದೇ ವರ್ಕ್‌ಶಾಪ್‌ನಲ್ಲಿ ತರಬೇತಿ ಪಡೆದು ಬಂದು ಮನೆಯಲ್ಲಿ ತಂದೆ ಎದುರಿಗೆ ಮತ್ತೊಮ್ಮೆ ಪ್ರಾಕ್ಟೀಸ್ ಮಾಡುತ್ತಿದ್ದೆ. ಅದರಿಂದಲೂ ನನಗೆ ತುಂಬಾ ಸಹಾಯವಾಗಿದೆ.
* ಧನಂಜಯ ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಹೇಗನ್ನಿಸಿತು?
ಅವರನ್ನು ನಾನು ಮೊದಲು ಭೇಟಿ ಮಾಡಿದ್ದೇ ನಮ್ಮ ಸಿನಿಮಾದ ಆಡಿಯೇ ಕಾರ್ಯಕ್ರಮದಲ್ಲಿ. ಅದಕ್ಕಿಂತ ಮೊದಲು ಅವರ ಸಿನಿಮಾ ನೋಡಿ ಮಾತ್ರ ಗೊತ್ತಿತ್ತು. ನನ್ನ ನಟನೆಯನ್ನು ಮೆಚ್ಚಿಕೊಂಡರು. ಚೆನ್ನಾಗಿ ನೋಡಿಕೊಂಡರು. ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಖುಷಿ ಇದೆ.
* ಟಗರು ಪಲ್ಯ ಶೀರ್ಷಿಕೆ ಕೇಳಿದ ತಕ್ಷಣ ನಿಮ್ಮ ಪ್ರತಿಕ್ರಿಯೆ ಏನಿತ್ತು?
ನನಗೆ ವಿಶಿಷ್ಟ ಅನ್ನಿಸಿತ್ತು. ಮಟನ್ ಚಾಪ್ಸ್‌ಗೆ ಟಗರು ಪಲ್ಯ ಎಂದು ಹೇಳುತ್ತಾರೆ ಅಂತ ಗೊತ್ತಿರಲಿಲ್ಲ. ನನಗೆ ಕತೆ ತುಂಬಾ ಇಷ್ಟವಾಗಿತ್ತು. ನನ್ನ ಪಾತ್ರವೂ ಹಿಡಿಸಿತ್ತು. ಆದರೆ ಸ್ವಲ್ಪ ಸವಾಲಿನ ಪಾತ್ರ. ಹಳ್ಳಿ ಹುಡುಗಿ. ಮುಗ್ಧ ಹುಡುಗಿಯೇ ಆದರೂ ತುಂಬಾ ಸ್ಟ್ರಾಂಗ್. ಮಂಡ್ಯ ಸ್ಲ್ಯಾಂಗಿನ ಭಾಷೆ. ಇವೆಲ್ಲವನ್ನೂ ರೂಢಿಸಿಕೊಂಡು ಆ ಪಾತ್ರವಾಗಿದ್ದು ಒಳ್ಳೆಯ ಅನುಭವ.
* ಈ ಸಿನಿಮಾ ಯಾಕೆ ವಿಶೇಷ?
ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ಹಳ್ಳಿಯ ಆಚರಣೆ, ಸಂಬಂಧಗಳನ್ನು ತಿಳಿಸುವ ಸಿನಿಮಾ. ಊರು ಬಿಟ್ಟು ನಗರಗಳಿಗೆ ಬಂದವರು ಮತ್ತೆ ಹಳ್ಳಿಗಳತ್ತ ತಿರುಗುವಂತೆ ಮಾಡುವ ಸಿನಿಮಾ. ಇದು ನಮ್ಮ ಸಿನಿಮಾ. ನಮ್ಮತನ ಇರುವ ಸಿನಿಮಾ. ಯಾರೂ ಮಿಸ್ ಮಾಡಬಾರದ ಸಿನಿಮಾ.
* ಮುಂದಿನ ಹೆಜ್ಜೆಗಳು?
ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿಕೊಂಡು ಒಳ್ಳೆಯ ಕಲಾವಿದೆ ಅಂತನ್ನಿಸಿಕೊಳ್ಳುವ ಆಸೆ ಇದೆ.
ನಟನಾಗಬೇಕೆಂದು ಬಂದೆ, ಹೀರೋ ಆಗಿದ್ದು ಬೋನಸ್: ನಾಗಭೂಷಣ್
ಒಳ್ಳೆಯ ಕತೆ ಟಗರು ಪಲ್ಯ, ಧನಂಜಯ: ‘ಟಗರು ಪಲ್ಯ’ ಇಂದು 175 ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಕುರಿತಾಗಿ ನಿರ್ಮಾಪಕ ಧನಂಜಯ್, ‘ಒಂದೊಳ್ಳೆ ಕಥೆಗೆ ಏನು ಬೇಕು ಅದೆಲ್ಲವನ್ನೂ ಟಗರು ಪಲ್ಯಗೆ ಒದಗಿಸಿದ್ದೇವೆ. ನಮ್ಮ ಸಂಸ್ಥೆ ಕಡೆಯಿಂದ ನಾವೆಲ್ಲರೂ ಸೇರಿ ಒಂದೊಳ್ಳೆ ಪ್ರಾಡೆಕ್ಟ್ ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ. ಇದು ನಮ್ಮೆಲ್ಲರಿಗೂ ಬಹಳ ಕನೆಕ್ಟ್ ಆಗುವ ವಿಷಯ. ಬೇರೆ ಭಾಷೆ ಸಿನಿಮಾ ನೋಡಿದಾಗ ನಮ್ಮಲ್ಲಿ ಬರಬೇಕು ಅಂತೀವಲ್ಲ. ಆ ರೀತಿ ಕಥೆ ಇದು. ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ಯಾವತ್ತೂ ನನಗೋಸ್ಕರ ಹೇಳಿಕೊಂಡಿಲ್ಲ. ಅದು ಬೇರೆಯವರಿಗೆ ಸ್ಫೂರ್ತಿ ಆಗಲಿ ಎಂದು ಹೇಳಿದ್ದೇನೆ. ನಮ್ಮ ಪ್ರೊಡಕ್ಷನ್‌ನಿಂದ ಮೂವರು ಹೊಸ ನಿರ್ದೇಶಕರು ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ ಅನ್ನೋದು ನಮ್ಮ ಹೆಮ್ಮೆ’ ಎಂದು ಹೇಳಿದ್ದಾರೆ.