ನಟನೆ ಜತೆಗೆ ಮಹಿಳಾ ಉದ್ಯಮಿ ಆಗುವ ಕನಸು ಇದೆ: ಕಾರುಣ್ಯ ರಾಮ್‌

By Kannadaprabha NewsFirst Published Nov 5, 2020, 3:48 PM IST
Highlights

ಕಾರುಣ್ಯ ರಾಮ್‌ ಮತ್ತೆ ಲೈಮ್‌ ಲೈಟ್‌ಗೆ ಬಂದ ಸಂಭ್ರಮದಲ್ಲಿದ್ದಾರೆ. ಏಳೆಂಟು ತಿಂಗಳ ಕೊರೋನಾ, ಲಾಕ್‌ಡೌನ್‌ ಅಜ್ಞಾತವಾಸದಿಂದ ಹೊರ ಬಂದು ಈಗ ನೀನಾಸಂ ಸತೀಶ್‌ ನಟನೆಯ ‘ಪೆಟ್ರೋಮ್ಯಾಕ್ಸ್‌’ಗೆ ಜತೆಯಾಗಿದ್ದಾರೆ. ಈ ಖುಷಿಯಲ್ಲಿ ಅವರು ಹೇಳಿದ್ದಿಷ್ಟು.

- ಆರ್‌ ಕೇಶವಮೂರ್ತಿ

ಮತ್ತೆ ಕ್ಯಾಮೆರಾ ಮುಂದೆ ಕ್ಷಣಗಳು ಹೇಗಿವೆ?

ನಟಿಯಾಗಬೇಕೆಂದು ಕನಸು ಕಟ್ಟಿಕೊಂಡು ಹೊಸತಾಗಿ ಚಿತ್ರರಂಗಕ್ಕೆ ಬಂದ ಅನುಭವ. ಏಳೆಂಟು ತಿಂಗಳು ಸಿನಿಮಾಗಳೇ ಇಲ್ಲದೆ ಮನೆಯಲ್ಲಿ ಕೂತಿದ್ದ ನನಗೆ ಈಗ ಸಿನಿಮಾ ಸೆಟ್‌ನಲ್ಲಿ ಹೊಸ ನಟಿಯಂತೆ ಭಾಸವಾಗುತ್ತಿದೆ. ನನಗೆ ಮಾತ್ರವಲ್ಲ, ಎಲ್ಲರಿಗೂ ಇದೇ ಅನುಭವ ಆಗಿರಬೇಕು.

ಸೂಕ್ತ ಅಭ್ಯರ್ಥಿ ಗೆದ್ದು ಬರಲಿ, ಆರ್‌ಆರ್‌ ನಗರದಲ್ಲಿ ಅಭಿವೃದ್ಧಿ ಕೆಲಸಗಳಾಗಲಿ: ಕಾರುಣ್ಯ ರಾಮ್ 

ಇದ್ದಕ್ಕಿದ್ದಂತೆ ‘ಪೆಟ್ರೋಮ್ಯಾಕ್ಸ್‌’ ಜತೆಯಾಗಿದ್ದು ಹೇಗೆ?

ಸಡನ್ನಾಗಿ ಆಗಿದ್ದೇನು ಅಲ್ಲ. ಈ ತಂಡದಲ್ಲಿ ನಾನೂ ಇದ್ದೆ. ಅದನ್ನು ನಿರ್ದೇಶಕ ವಿಜಯ್‌ ಪ್ರಸಾದ್‌ ಅವರು ಲೇಟಾಗಿ ರಿವಿಲ್‌ ಮಾಡಬೇಕು ಎಂದುಕೊಂಡಿದ್ದರು. ಆದರೆ, ಶೂಟಿಂಗ್‌ ಸೆಟ್‌ನಲ್ಲಿ ನಾನು ಇದ್ದ ಫೋಟೋಗಳು ನೋಡಿ ಎಲ್ಲರಿಗೂ ಗೊತ್ತಾಗಿದೆ ಅಷ್ಟೆ.

ಹಾಗಾದರೆ ಹರಿಪ್ರಿಯಾ ಜತೆಗೆ ನೀವೂ ಚಿತ್ರದ ನಾಯಕಿನಾ?

ನಿರ್ದೇಶಕ ವಿಜಯ್‌ ಪ್ರಸಾದ್‌ ಅವರು ಇಲ್ಲಿವರೆಗೂ ಮಾಡಿರುವ ಚಿತ್ರಗಳು ನಾಯಕ, ನಾಯಕಿ ಸಿನಿಮಾ ಎನ್ನುವುದಕ್ಕಿಂತ ಕತೆ- ಕಂಟೆಂಟ್‌ ಬೇಸ್‌ ಸಿನಿಮಾಗಳೇ ಆಗಿವೆ. ಹೀಗಾಗಿ ನಾನು ಇಲ್ಲಿ ನಾಯಕಿ ಎನ್ನುವುದಕ್ಕಿಂತ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ‘ಪೆಟ್ರೋಮ್ಯಾಕ್ಸ್‌’ ಕತೆಗೆ ನಾನು ಸೇರಿದಂತೆ ಎಲ್ಲರೂ ಪಾತ್ರಧಾರಿಗಳೇ.

ಯಾವ ರೀತಿ ಕತೆ, ಯಾವ ರೀತಿಯ ಪಾತ್ರವಿದೆ?

ಒಟ್ಟು ನಾಲ್ಕು ಪಾತ್ರಗಳು. ಮೂವರು ಹುಡುಗರು, ಒಬ್ಬ ಹುಡುಗಿ. ಮೂರು ಮಂದಿ ಹುಡುಗರ ಜತೆ ಒಬ್ಬ ಹುಡುಗಿ ಹೇಗೆ ಇದು, ಇವರ ಜೀವನದ ಕತೆ ಏನು, ಏನು ಮಾಡುತ್ತಾರೆ ಎಂಬುದೇ ಚಿತ್ರದ ಕತೆ. ಆ ಒಬ್ಬ ಹುಡುಗಿ ನಾನೇ. ನಮ್ಮೊಂದಿಗೆ ಹರಿಪ್ರಿಯಾ ಜತೆಯಾಗುತ್ತಾರೆ. ಐದು ಮಂದಿ ಸುತ್ತ ಸಾಗುವ ಸಿನಿಮಾ ಇದು.

ಶೂಟಿಂಗ್‌ ಅನುಭವ ಹೇಗಿದೆ?

ಮೈಸೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕೋವಿಡ್‌ 19 ಭಯ ಅಂತೂ ಕಾಡಲಿಲ್ಲ. ಯಾಕೆಂದರೆ ಆ ಮಟ್ಟಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡೇ ಚಿತ್ರೀಕರಣ ಆರಂಭಿಸಿದ್ದು. ಹೀಗಾಗಿ ಯಾವುದೇ ಆತಂಕ, ಭಯ ಇಲ್ಲದೆ ಲಾಕ್‌ಡೌನ್‌ ನಂತರ ಸಿನಿಮಾ ಶೂಟಿಂಗ್‌ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ.

ಯೋಧರ ಫೋಟೋವುಳ್ಳ ಜಾಕೆಟ್ ಧರಿಸಿ ಕಾರುಣ್ಯ ರಾಮ್! 

ಆದರೆ, ನೀವು ಲೈಮ್‌ ಲೈಟ್‌ಗೆ ಅಪರೂಪ ಎನಿಸುತ್ತಿದ್ದೀರಲ್ಲ?

ಹಾಗೇನು ಇಲ್ಲ. ಲಾಕ್‌ಡೌನ್‌ಗೂ ಮೊದಲು ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ, ಎರಡು ಕನಸು... ಹೀಗೆ ನಾನು ನಟಿಸಿದ ಒಂದಿಷ್ಟುಚಿತ್ರಗಳು ಯಶಸ್ವಿ ಆಗುತ್ತಿದ್ದವು. ಅದೇ ಯಶಸ್ಸಿನಲ್ಲಿ ಒಂದಿಷ್ಟುಚಿತ್ರಗಳೂ ಬರುತ್ತಿದ್ದವು. ಪವನ್‌ ಒಡೆಯರ್‌ ನಿರ್ದೇಶಿಸಿ, ಇಶಾನ್‌ ನಾಯಕನಾಗಿರುವ ‘ರೆಮೋ’ ಸಿನಿಮಾ ಒಪ್ಪಿಕೊಂಡು ಶೂಟಿಂಗ್‌ ಮಾಡುತ್ತಿದ್ವಿ. ಬೇರೆ ಚಿತ್ರಗಳ ಜತೆ ಮಾತುಕತೆ ಮಾಡುವ ಹೊತ್ತಿಗೆ ಕೊರೋನಾ ಸಂಕಷ್ಟಎದುರಾಗಿ ಎಲ್ಲವೂ ಸ್ತಬ್ದಗೊಂಡಿತು. ಚಿತ್ರರಂಗವೇ ಬಾಗಿಲು ಹಾಕಿದ ಮೇಲೆ ನಾನು ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳಲಿ?

ಲಾಕ್‌ಡೌನ್‌ ನಂತರ ಚಿತ್ರರಂಗ ನಿಮಗೆ ಹೇಗೆ ಕಾಣಿಸುತ್ತಿದೆ, ಮುಂದೆ ನಿಮ್ಮ ಪಾತ್ರಗಳು ಹೇಗಿರುತ್ತವೆ?

ಹೊಸದಾಗಿ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್‌ ಆದಾಗ ಎಲ್ಲರಿಗೂ ದೊಡ್ಡ ಹೊಡೆತ ಬಿದ್ದಿದ್ದು ಗೊತ್ತಿದೆ. ನನಗಂತೂ ಕೆರಿಯರ್‌ ಮುಗಿಯಿತಾ, ಇನ್ನು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೇ ಎನ್ನುವ ಆತಂಕ ಶುರುವಾಗಿತ್ತು. ಈಗ ಅದೆಲ್ಲ ತಿಳಿಯಾಗುತ್ತಿದೆ. ಈಗ ಇಂಥಾ ಪಾತ್ರಗಳೇ ಬೇಕು, ನಾಯಕಿನೇ ಆಗಬೇಕು ಅಂತೇನು ಇಲ್ಲ. ಚಿತ್ರದಲ್ಲಿ ಎಷ್ಟೇ ಮಂದಿ ಇರಲಿ, ನನಗೆ ಕೊಟ್ಟಪಾತ್ರಕ್ಕೆ ಜೀವ ತುಂಬುವ ಅವಕಾಶ ಇದೆಯಾ ಎಂದು ನೋಡುತ್ತೇನೆ. ಹಾಗೆ ಜಾಗ ಇದ್ದ ಪಾತ್ರಗಳನ್ನು ಒಪ್ಪಿಕೊಳ್ಳುತ್ತೇನೆ.

ನಟನೆ ಜೊತೆಗೆ ತೆರೆ ಹಿಂದಿನ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಯೋಚನೆ ಉಂಟಾ?

ನಾನು ಅಷ್ಟುಬುದ್ಧಿವಂತೆ ಅಲ್ಲ. ಕೊನೆವರೆಗೂ ಸಿನಿಮಾ ವಿದ್ಯಾರ್ಥಿ ಆಗಿಯೇ ಇರುತ್ತೇನೆ. ಕೊನೆವರೆಗೂ ನಟಿಯಾಗಿದ್ದುಕೊಂಡು ಕಲಿಯಬೇಕು ಎಂಬುದು ಆಸೆ. ಆದರೆ, ಸಿನಿಮಾ ಹೊರತಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಇದೆ. ಮಹಿಳಾ ಉದ್ಯಮಿ ಆಗಬೇಕು ಎಂಬುದು ನನ್ನ ಕನಸು. ಮೊದಲಿನಿಂದಲೂ ಇದೆ. ಆ ನಿಟ್ಟಿನಲ್ಲಿ ಒಂದಿಷ್ಟುಕೆಲಸಗಳನ್ನು ಮಾಡುತ್ತಿದ್ದೇನೆ. ಮುಂದಿನ ವರ್ಷ ನಟಿ ಹಾಗೂ ಬ್ಯುಸಿನೆಸ್‌ ವುಮನ್‌ ಆಗಲಿದ್ದೇನೆ.

click me!