ಅವತ್ತು ನನ್ನ ಟೆರರಿಸ್ಟ್‌ ಥರ ನೋಡಿದವರೆಲ್ಲಾ ಎಲ್‌ಹೋದ್ರು : ಪವನ್‌ ಕುಮಾರ್‌

By Kannadaprabha NewsFirst Published Nov 3, 2020, 9:39 AM IST
Highlights

ಅಸ್ಮಿತೆ ಕಿರುಚಿತ್ರಕ್ಕೆ ಉತ್ತಮ ರೆಸ್ಪಾನ್ಸ್‌, ವಿರೋಧಿಗಳಿಗೆ ಚಿತ್ರದ ಮೂಲಕವೇ ತಿರುಗೇಟು ನೀಡಿದ ಲೂಸಿಯಾ ನಿರ್ದೇಶಕ

ರಾಜ್ಯೋತ್ಸವದಂದು ಕನ್ನಡ ಸಂವೇದನೆಯ ‘ಅಸ್ಮಿತೆ’ ಕಿರುಚಿತ್ರವನ್ನು ಲೂಸಿಯಾ ನಿರ್ದೇಶಕ ಪವನ್‌ ಕುಮಾರ್‌ ಎಫ್‌ಯುಸಿಯಲ್ಲಿ ರಿಲೀಸ್‌ ಮಾಡಿದ್ದಾರೆ. ಹೇರಿಕೆಗಳು ನಮ್ಮ ಭಾವನೆಗಳ ಮೇಲೆ ಹೇಗೆ ಘಾಸಿ ಮಾಡುತ್ತವೆ ಅನ್ನುವುದನ್ನು ಮಾತಿಲ್ಲದೇ ಸಂವಹಿಸುವ ಚಿತ್ರವಿದು. ತಮ್ಮನ್ನು ಕನ್ನಡ ವಿರೋಧಿ ಎಂದವರಿಗೆ ಈ ಮೂಲಕ ತಮ್ಮದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ ಪವನ್‌.

 ಅಸ್ಮಿತೆಯ ಬಗ್ಗೆ ಫೀಡ್‌ಬ್ಯಾಕ್‌ ಸಿಕ್ಕಿತಾ?

ಹಲವರಿಂದ ಉತ್ತಮ ಫೀಡ್‌ಬ್ಯಾಕ್‌ ಬಂದಿದೆ. ಸೋಷಿಯಲ್‌ ಮೀಡಿಯಾಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಮಗೆ ಬೇಕಾದ್ದು ನಮ್ಮ ಭಾಷೆಯಲ್ಲಿ ಸಿಗದೇ ಇದ್ದಾಗ ಭಾವನಾತ್ಮಕವಾಗಿ ನಮಗೇನನಿಸುತ್ತೆ? ಅನ್ನುವ ಕತೆ. ಮೂರು ದಿನದಲ್ಲಿ ಈ ಚಿತ್ರ ಶೂಟಿಂಗ್‌ ಮಾಡಿದ್ದು. ನನ್ನ ಮಗಳ ಜೊತೆಗೆ ಆಡಲು ಬರುತ್ತಿದ್ದ ಹುಡುಗ ಸಾಮಿಕ್‌ ಇದರಲ್ಲಿ ಮುಖ್ಯ ಪಾತ್ರ ಮಾಡಿದ್ದಾನೆ. ಅವನ ಅಪ್ಪ ಸೂರಜ್‌ ರಂಗಭೂಮಿ ಹಿನ್ನೆಲೆಯವರು. ಆತನ ಅಮ್ಮ ಸುಷ್ಮಾ ಡ್ಯಾನ್ಸರ್‌. ಅವರೂ ಇದರಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನನ್ನ ಪತ್ನಿ ಹಾಗೂ ಮಗಳು ನಟಿಸಿದ್ದಾರೆ. ಸೂರಜ್‌ ಅವರ ಮನೆಯಲ್ಲೇ ಶೂಟಿಂಗ್‌ ನಡೆದಿದೆ. ಹಲವರ ಶ್ರಮ ಇದರ ಹಿಂದಿದೆ. ಚಿತ್ರದ ಟೈಟಲ್‌ ಕೊಟ್ಟಿದ್ದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ಅದನ್ನು ಬರೆದವರು ಯೋಗರಾಜ್‌ ಭಟ್‌.

ಪವನ್‌ ಕುಮಾರ್‌ ಚಿತ್ರದ ರೀಮೇಕ್‌ ಕಮಾಲ್‌; ಫಿಲಿಪ್ಪೀನ್ಸ್‌ ಭಾಷೆಗೆ ಯೂಟರ್ನ್‌!

‘ಕನ್ನಡದಲ್ಲಿ’ ಅನ್ನೋ ಪ್ರಾಜೆಕ್ಟ್ನಲ್ಲಿ ಎಷ್ಟುಶಾರ್ಟ್‌ ಫಿಲ್ಮಂಗಳು ಬರಲಿವೆ?

ನಾನೇ ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ. ನವೆಂಬರ್‌ 10ಕ್ಕೆ ರಿಲೀಸ್‌ ಮಾಡುವ ಯೋಚನೆ ಇದೆ. ಇದು ಡಾರ್ಕ್ ಕಾಮಿಡಿ ಜಾನರ್‌ದು. ಕನ್ನಡ ಕಳಕಳಿ ಮುಖ್ಯ ವಸ್ತು. ಜೊತೆಗೆ ಗಿರಿರಾಜ್‌ 12 ನಿಮಿಷದ ಶಾರ್ಟ್‌ಮೂವಿ ಮಾಡ್ತಿದ್ದಾರೆ. ಚೈತನ್ಯ, ಶೇಷಾದ್ರಿ ಸೇರಿದಂತೆ ಹಲವರು ಭರವಸೆ ನೀಡಿದ್ದಾರೆ. ಎಲ್ಲವನ್ನೂ ಸೇರಿಸಿ ಪೂರ್ಣ ಪ್ರಮಾಣದ ಚಿತ್ರವಾಗಿಸಿ ಸೆನ್ಸಾರ್‌ ಮಂಡಳಿಗೆ ನೀಡೋದು, ಕನ್ನಡದಲ್ಲೇ ಸೆನ್ಸಾರ್‌ ಸರ್ಟಿಫಿಕೇಟ್‌ ನೀಡಲು ಮನವಿ ಮಾಡುವುದು ಇದರ ಉದ್ದೇಶ. ಈಗ ಮತ್ತೆ ಎಲ್ಲರೂ ಅವರವರ ಪ್ರಾಜೆಕ್ಟ್ನಲ್ಲಿ ಬ್ಯುಸಿ ಆಗಿರುವ ಕಾರಣ ಏನಾಗುತ್ತೆ ಅಂತ ಗೊತ್ತಿಲ್ಲ.

ಬಜೆಟ್‌ ಎಲ್ಲಾ ಹೇಗೆ?

ಈ ಕಿರುಚಿತ್ರಗಳಿಗೆ ಕಲಾವಿದರು, ತಂತ್ರಜ್ಞರು, ಜಾಗ ನೀಡಿದವರು ಯಾರೂ ಹಣ ಪಡೆದಿಲ್ಲ. ಈ ಪ್ರಾಜೆಕ್ಟ್ ಮೇಲಿನ ಗೌರವಕ್ಕೆ ಫ್ರೀಯಾಗಿ ಮಾಡಿದ್ದಾರೆ. ಇಲ್ಲವಾದರೆ ಲಕ್ಷಾಂತರ ರು. ಬೇಕಾಗುತ್ತಿತ್ತು. ಆದರೆ ಕೆಮರಾ ಬಾಡಿಗೆ, ಇತರೇ ಖರ್ಚುಗಳನ್ನು ನಾನೇ ನಿಭಾಯಿಸಿದ್ದೇನೆ. ಉಳಿದ ಕಿರುಚಿತ್ರಗಳನ್ನೂ ಹಾಗೇ ನಿರ್ಮಿಸಲಿದ್ದಾರೆ.

ಈ ಪ್ರಾಜೆಕ್ಟ್ಗೂ ಮೊದಲು ನೀವು ಕನ್ನಡ ವಿರೋಧಿ ಅಂತ ಬಿಂಬಿಸಿದವರ ಸಹಕಾರ ಸಿಕ್ಕಿತಾ?

ಅದೇ ವ್ಯಂಗ್ಯ. ಕನ್ನಡ ಬೆಳೆಸಿ ಅಂತೆಲ್ಲ ಮಾತಾಡೋದೇ ಜಾಸ್ತಿ ಆಗ್ತಿದೆ, ಕನ್ನಡದ ಕೆಲಸಗಳೇನೂ ನಡೀತಿಲ್ಲ, ಕನ್ನಡದಲ್ಲಿ ಅನ್ನ ಸಿಗುತ್ತಿಲ್ಲ ಅನ್ನೋ ಅರ್ಥದಲ್ಲಿ ನಾನು ವೀಡಿಯೋ ಹಾಕಿದಾಗ ನನ್ನನ್ನು ಟೆರರಿಸ್ಟ್‌ ಥರ ನೋಡಿದರು. ಅದೇ ಈ ಥರ ಪ್ರಾಜೆಕ್ಟ್ ಶುರು ಮಾಡೋಣ ಅಂದಾಗ ಬೆಂಬಲಿಸಿದವರು ಬಹಳ ಕಡಿಮೆ. ಎಫ್‌ಯುಸಿ ಆಗಲೀ, ಈ ಪ್ರಾಜೆಕ್ಟ್ಗಾಗಲೀ ಅವರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಕನ್ನಡ ಪ್ರೇಮದ ಸ್ಟೇಟಸ್‌ ಹಾಕ್ಕೊಳ್ಳೋದ್ರಲ್ಲೇನೂ ಹೆಚ್ಚುಗಾರಿಕೆ ಇಲ್ಲ. ಕೆಲಸನೂ ಏನಾದ್ರೂ ಮಾಡಬೇಕು ಅಲ್ವಾ..

ಸಿನಿಮಾ ನಿರ್ದೇಶಕರಿಗೆಂದೇ ಶುರುವಾದ ಕ್ಲಬ್‌ ಎಫ್‌.ಯು.ಸಿ! 

ಎಫ್‌ಯುಸಿ ಆರಂಭಿಸಿ ಆರು ತಿಂಗಳಾಯಿತು. ಅಲ್ಲಿನ ಸುಖ ದುಃಖ?

ಚಿತ್ರರಂಗ ಕಷ್ಟದಲ್ಲಿದೆ. ಸಿನಿಮಾದವರ ಮುಂದೆ ಸಾಕಷ್ಟುಚಾಲೆಂಜ್‌ಗಳಿವೆ. ಓಟಿಟಿ ಅಂದರೆ ಅಮೆಜಾನ್‌, ನೆಟ್‌ಫ್ಲಿಕ್ಸ್‌ ಅಂತಾರೆ. ಆದರೆ ಅವರು ಕೊಟ್ಟಿದ್ದೇ ದುಡ್ಡು ಅನ್ನೋ ಸ್ಥಿತಿ ಇದೆ. ಆದರೆ ಈ ಥರದ ಒಂದು ಪ್ಲಾಟ್‌ಫಾಮ್‌ರ್‍ ಮಾಡಿಕೊಂಡರೆ ನಮ್ಮವರಿಗೆ ಸಹಾಯ ಆಗುತ್ತೆ ಅಂದುಕೊಂಡು ಮಾಡಿದ್ದು. 0.2 ಪರ್ಸೆಂಟ್‌ ಕನ್ನಡಿಗರು ಇದನ್ನು ಸಬ್‌ಸ್ಕೆ್ರೖಬ್‌ ಮಾಡಲಿ ಅಂದುಕೊಂಡಿದ್ದು. ಅಷ್ಟುಜನ ಇದ್ದರೆ ನಮಗೂ 12 ಕ್ವಾಲಿಟಿ ಸಿನಿಮಾ ಮಾಡುವಷ್ಟುಚೈತನ್ಯ ಬರುತ್ತೆ. ಆದರೆ ಪ್ರತಿಕ್ರಿಯೆ ಅಂದುಕೊಂಡಷ್ಟುಬಂದಿಲ್ಲ. ಬಹಳ ಕಡಿಮೆ ಇದೆ. ಇದರಲ್ಲಿ ಲಾಭ ನನಗಲ್ಲ, ಸಿನಿಮಾಗಳಿಗೆ. ಇದಕ್ಕೆ ಜನ ಸಪೋರ್ಟ್‌ ಮಾಡಿದ್ದರೆ ಸ್ವಾಭಿಮಾನದಿಂದ ಕೆಲಸ ಮಾಡಬಹುದಿತ್ತು. ಅತ್ಯುತ್ತಮ ಕಂಟೆಂಟ್‌ ನಮ್ಮ ಭಾಷೆಯಲ್ಲೇ ಕೊಡಬಹುದಿತ್ತು. ಈಗ ಮಾಡುತ್ತಿರುವ ವೆಬ್‌ ಸೀರೀಸ್‌ ಕನ್ನಡದಲ್ಲೇ ಮಾಡಬಹುದಿತ್ತು. ತೆಲುಗಿಗೆ ಬರಬೇಕಾದ ಅಗತ್ಯ ಬರುತ್ತಿರಲಿಲ್ಲ.

ಹೇಗೆ ನಡೀತಿದೆ ಆ ಕೆಲಸ, ಕನ್ನಡಕ್ಕೂ ಬರುತ್ತಾ?

ಈಗಷ್ಟೇ ಶುರುವಾಗಿದೆ. ಇನ್ನೊಂದು ಆರು ತಿಂಗಳ ಕೆಲಸ. ಈ ನಡುವೆ ಕನ್ನಡಕ್ಕೂ ಡಬ್‌ ಆಗಬಹುದೇನೋ. ಆಮೇಲೆ ಹಿಂದಿಯಲ್ಲಿ ಕೆಲಸ ಶುರುವಾಗುತ್ತೆ. ಈ ಬಗ್ಗೆ ಹೆಚ್ಚಿನ ವಿವರ ಮುಂದೆ ಸಿಗಲಿದೆ.

click me!