‘ಯುವ ರಣಧೀರ ಕಂಠೀರವ’ ಇದು ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಮಗ ಯುವ ರಾಜಕುಮಾರ್ ಮೊದಲ ಚಿತ್ರದ ಟೈಟಲ್. ನ.1ರಂದೇ ಲಾಂಚ್ ವಿಡಿಯೋ ಬಿಡುಗಡೆ ಮಾಡಿ ಕನ್ನಡದ ಬಾವುಟ ಹಾರಿಸುವುದರೊಂದಿಗೆ ದೊಡ್ಮನೆಯ ಮೂರನೇ ಕುಡಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದೆ. ಖಡಕ್ ಡೈಲಾಗ್, ಅದ್ದೂರಿ ಸೆಟ್, ಹಿಸ್ಟಾರಿಕಲ್ ಬ್ಯಾಗ್ರೌಂಡ್‌ನಲ್ಲಿ ಸಾಗುವ ಈ ಐತಿಹಾಸಿಕ ಚಿತ್ರದ ಬಗ್ಗೆ ಮತ್ತು ತಮ್ಮ ಬೆಳ್ಳಿತೆರೆ ಪ್ರವೇಶದ ಬಗ್ಗೆ ಯುವ ರಾಜಕುಮಾರ್ ಇಲ್ಲಿ ಮಾತನಾಡಿದ್ದಾರೆ.
ಕೆಂಡಪ್ರದಿ
1. ಗುರು ರಾಜ್‌ಕುಮಾರ್‌ನಿಂದ ಯುವ ರಾಜ್‌ಕುಮಾರ್ ಆಗಿ ಬದಲಾದ ಜರ್ನಿ ಹೇಗಿತ್ತು?
undefined
ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದರೆ ಅದಕ್ಕೆ ಬೇಕಾದ ತಯಾರಿ ಮಾಡಬೇಕು. ನಾನೂ ಹಾಗೆಯೇ ಸಿನಿಮಾ ಕ್ಷೇತ್ರಕ್ಕೆ ಬೇಕಾದ ತಯಾರಿ ಮಾಡಿದ್ದೇನೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ನಾಲ್ಕು ವರ್ಷಗಳ ಕಾಲ ಡ್ಯಾನ್ಸ್, ಫೈಟ್, ಆ್ಯಕ್ಟಿಂಗ್ ತರಬೇತಿ ಪಡೆದಿದ್ದೇನೆ. ಆ ವೇಳೆಯಲ್ಲಿಯೇ ನಮ್ಮ ಚಿತ್ರದ ಡೈರೆಕ್ಟರ್ ಪುನೀತ್ ರುದ್ರಾಂಗ್ ಅವರು ಸಿಕ್ಕಿದ್ದು. ಅವರ ಬಳಿ ಸಾಕಷ್ಟುಕಲಿತೆ. ಸದ್ಯ ಈ ಹಂತಕ್ಕೆ ಬಂದು ತಲುಪಿದ್ದೇನೆ. ನನಗೆ ಈಗ ಅನ್ನಿಸಿರುವುದು ಕಲಿಕೆ ಎನ್ನುವುದು ನಿರಂತರ. ಮುಂದೆಯೂ ಪ್ರತಿ ಹಂತದಲ್ಲೂ ಕಲಿಯುತ್ತಾ ಹೋಗುತ್ತೇನೆ.
ಸ್ಯಾಂಡಲ್‌ವುಡ್‌ನಲ್ಲಿ ಯುವರಾಜನ ಆರ್ಭಟ; 'YR 01' ಲುಕ್ ನೋಡಿ!
2. ಪುನೀತ್ ಆ್ಯಂಡ್ ಟೀಮ್ ಸೇರಿದ್ದು ಹೇಗೆ?
ನಿರ್ದೇಶಕ ಪುನೀತ್ ಬಗ್ಗೆ ನನಗೆ ಭರವಸೆ ಇದೆ. ಅವರು ಪ್ರತಿಭಾವಂತರು. ಅವರ ವಿಷನ್ ಬಹಳ ಇಷ್ಟವಾಯ್ತು. ಚಿತ್ರಕ್ಕೆ ತಕ್ಕುದಾದ ಕಾಸ್ಟೂ್ಯಮ್, ಟೈಟಲ್ ಎಲ್ಲವನ್ನೂ ಅವರೇ ಫೈನಲ್ ಮಾಡಿದ್ದು. ಲಾಂಚ್ ವಿಡಿಯೋದ ಪೂರ್ಣ ಪರಿಕಲ್ಪನೆ ಅವರದ್ದೇ. ಅವರ ಡೆಡಿಕೇಷನ್ ಚೆನ್ನಾಗಿದೆ. ಇದನ್ನು ನಮ್ಮ ಮನೆಯವರಿಗೆ ಹೇಳಿ, ಅವರ ಜೊತೆಯೇ ಕೆಲಸಕ್ಕೆ ಇಳಿದೆ. ನಮ್ಮ ಜೊತೆಗೆ ದೊಡ್ಡ ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡಿರುವ ತಂತ್ರಜ್ಞರೂ ಕೂಡಿಕೊಂಡಿದ್ದಾರೆ. ಸಿನಿಮಾವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದೇವೆ.
3. ಹಿಸ್ಟಾರಿಕಲ್ ಸಿನಿಮಾ ಮೂಲಕ ಪ್ರಾರಂಭದಲ್ಲಿಯೇ ದೊಡ್ಡ ರಿಸ್ಕ್‌ಗೆ ಮುಂದಾಗಿದ್ದೀರಿ
ಹಾಗೇನಿಲ್ಲ, ಹಿಸ್ಟಾರಿಕಲ್ ಸಿನಿಮಾ ಇರಲಿ, ಯಾವುದೇ ಸಿನಿಮಾ ಇರಲಿ ರಿಸ್ಕ್ ಇದ್ದೇ ಇರುತ್ತದೆ. ಅದನ್ನು ಪ್ರೀತಿಯಿಂದ ಮಾಡಿದರೆ ಗೆಲುವು ಸಿಕ್ಕುತ್ತದೆ. ಸಿನಿಮಾದಿಂದ ಸಿನಿಮಾಕ್ಕೆ ತಯಾರಿಗಳು ಬೇರೆ ಬೇರೆ ಆಗುತ್ತಾ ಹೋಗುತ್ತವೆ. ಆದರೆ ಎಲ್ಲಾ ಚಿತ್ರಗಳಿಗೂ ತಯಾರಿಯನ್ನಂತೂ ಮಾಡಿಕೊಳ್ಳಲೇಬೇಕು. ನಮ್ಮ ಪರಿಶ್ರಮ ಹೆಚ್ಚಿದಂತೆ ಕೆಲಸದ ಬಗ್ಗೆ ವಿಶ್ವಾಸ ಹೆಚ್ಚಾಗುತ್ತದೆ. ಹಾಗೆ ವಿಶ್ವಾಸ ಹೆಚ್ಚಾದರೆ ಮಾಡುವ ಕೆಲಸದಲ್ಲೂ ಅಚ್ಚುಕಟ್ಟುತನ ಬರುತ್ತದೆ ಎನ್ನುವ ನಂಬಿಕೆ ನನ್ನದು.
ಜಾಲಿ ಮೋಡ್‌ನಲ್ಲಿ ಯುವರಾಜ್; ದುಬೈನಲ್ಲಿ ಫ್ಲೈ ಬೋರ್ಡಿಂಗ್ ವಿಡಿಯೋ ನೋಡಿ!
4. ಮುಂದೆ ಸಿನಿಮಾದಿಂದ ಏನೆಲ್ಲಾ ಅಚ್ಚರಿ ನಿರೀಕ್ಷೆ ಮಾಡಬಹುದು?
ಈಗ ಲಾಂಚ್ ವಿಡಿಯೋವನ್ನಷ್ಟೇ ಬಿಡುಗಡೆ ಮಾಡಿದ್ದೇವೆ. ನಮ್ಮ ತಂಡ, ನಮ್ಮ ಪ್ರಯತ್ನ, ನಮ್ಮ ನಿರೂಪಣೆ ಯಾವ ರೀತಿ ಇರುತ್ತದೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದು. ಸಿನಿಮಾ ಇದಕ್ಕಿಂತಲೂ ಚೆನ್ನಾಗಿ ಬರುತ್ತದೆ ಎನ್ನುವ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ನಮ್ಮ ಮುಂದಿನ ಹಾದಿ ಹೇಗಿರಲಿದೆ, ಸಿನಿಮಾ ಹೇಗೆ ಮೂಡಿಬರಲಿದೆ ಎನ್ನುವುದು ಮುಂದೆ ಗೊತ್ತಾಗುತ್ತಾ ಹೋಗುತ್ತದೆ.
5. ಸಿನಿಮಾ ಯಾವ ಹಂತದಲ್ಲಿ ಇದೆ?
ಈಗ ಪ್ರಿಪ್ರೊಡಕ್ಷನ್ ಹಂತದಲ್ಲಿ ಇದೆ. ಮುಂದೆ ಮೂಹೂರ್ತ, ಬೇರೆ ಬೇರೆ ಕಲಾವಿದರು ಎಲ್ಲವೂ ಫೈನಲ್ ಆಗಲಿದೆ. ಕೊರೋನಾ ಕಾರಣಕ್ಕೆ ಈಗಾಗಲೇ ತಡವಾಗಿದೆ. ಸಾಧ್ಯವಾದಷ್ಟುಬೇಗ ಕೆಲಸ ಮುಗಿಸಿ ಮುಂದಿನ ವರ್ಷ ಬರುತ್ತೇವೆ.