ನವೆಂಬರ್ ಬಂದ್ರೆ ಕನ್ನಡಿಗರಿಗೆ ರಾಜ್ಯೋತ್ಸವದ ಸಂಭ್ರಮ. ಉದ್ಯೋಗದ ನಿಮಿತ್ತ ವಲಸೆ ಬಂದವರದ್ದು ಮಾತ್ರ ಇಲ್ಲಿ ‘ಕೆಲಸ ಬೇಕು, ಕನ್ನಡ ಬೇಡ’ ಎನ್ನುವ ಧೋರಣೆ. ಸ್ಥಳೀಯರು ಏನೇ ಕೇಳಿದ್ರೂ ಅವರು ‘ಕನ್ನಡ್ ಗೊತ್ತಿಲ್ಲ...’ ಎನ್ನುವುದು ಮಾಮೂಲು. ಇದನ್ನೇ ಮೂಲವಾಗಿಟ್ಟುಕೊಂಡು ‘ಕನ್ನಡ್ ಗೊತ್ತಿಲ್ಲ...’ಎನ್ನುವ ಹೆಸರಲ್ಲೇ ಕನ್ನಡದ ಮಹತ್ವ ಸಾರುವ ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದ್ದಾರೆ ನಿರ್ದೇಶಕ ಮಯೂರ ರಾಘವೇಂದ್ರ. ಆ ಕುರಿತು ಮಯೂರ ರಾಘವೇಂದ್ರ ಅವರೊಂದಿಗೆ ಮಾತುಕತೆ.
ಕನ್ನಡ್ ಗೊತ್ತಿಲ್ಲ...ಅಂತ ಏನು ಹೇಳಲು ಹೊರಟಿದ್ದೀರಿ?
ಬೆಂಗಳೂರು ಇವತ್ತು ವಲಸಿಗರ ಊರು. ಉದ್ಯೋಗ ಅರಸಿ ಹೊರ ರಾಜ್ಯಗಳ ಸಾಕಷ್ಟುಜನ ಇಲ್ಲಿಗೆ ಬಂದಿದ್ದಾರೆ. ಅಧಿಕೃತ ಸರ್ವೇ ಪ್ರಕಾರ ಬೆಂಗಳೂರಿನಲ್ಲಿ ಶೇಕಡಾ 20 ರಷ್ಟುಜನ ಹೊರ ರಾಜ್ಯಗಳಿಂದ ವಲಸೆ ಬಂದವರಿದ್ದಾರೆ. ಇದರಲ್ಲಿ ಕೆಲವರು ಕನ್ನಡ ಕಲಿತು ಮಾತನಾಡುತ್ತಿರುವುದು ಖುಷಿ ವಿಚಾರ. ನಾವಿರುವ ಯಾವುದೇ ರಾಜ್ಯದ ನೆಲ, ಜಲ ಗೌರವಿಸಬೇಕಾದ್ರೆ ಅದು ಅನಿವಾರ್ಯ. ಬಹುತೇಕ ಜನರಿಗೆ ಕನ್ನಡ ಗೊತ್ತಿಲ್ಲ. ಕಲಿಯುವ ಅನಿವಾರ್ಯತೆಯೂ ಕಾಡಿಲ್ಲ. ಕನ್ನಡಿಗರು ಏನೇ ಕೇಳಿದ್ರೂ, ಗೊತ್ತೋ, ಗೊತ್ತಿಲ್ಲದೆಯೋ ಅವರು ‘ಕನ್ನಡ್ ಗೊತ್ತಿಲ್ಲ...’ಅಂತಾರೆ. ಅಂತವರಿಗೆ ಕನ್ನಡ ಭಾಷೆಯ ಮಹತ್ವ ತಿಳಿಸಬೇಕು, ಕನ್ನಡ್ ಎನ್ನುವ ಬದಲಿಗೆ ಅವರು ಕನ್ನಡ ಎನ್ನುವಂತಾಗಬೇಕೆನ್ನುವ ಉದ್ದೇಶದೊಂದಿಗೆ ಮಾಡಿದ ಸಿನಿಮಾ ಇದು.
undefined
'ಕನ್ನಡ್ ಗೊತ್ತಿಲ್ಲ' ಹೀರೋಯಿನ್ ಬರೆದ ಕನ್ನಡ ಪತ್ರ! .
ಇಂತಹದೊಂದು ಸಿನಿಮಾ ಮಾಡ್ಬೇಕು ಅಂತೆನಿಸಿದ್ದೇಕೆ?
ನಾನೊಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಹದಿನೈದು ಜನ ಉದ್ಯೋಗಿಗಳು ಇದ್ದೆವು. ಅಲ್ಲಿದ್ದವರ ಪೈಕಿ ಕೆಲವರಿಗೆ ಕನ್ನಡವೇ ಗೊತ್ತಿರಲಿಲ್ಲ. ಅವರೆಲ್ಲ ಇಲ್ಲಿಗೆ ಬಂದು ಸಾಕಷ್ಟುವರ್ಷ ಕಳೆದರೂ ಕನ್ನಡ ಎನ್ನಲು ಬರುತ್ತಿರಲಿಲ್ಲ. ಕನ್ನಡದಲ್ಲಿ ನಾವು ಏನೇ ಕೇಳಿದರೂ ‘ ಕನ್ನಡ್ ಗೊತ್ತಿಲ್ಲ...’ಎನ್ನುತ್ತಿದ್ದರು. ಅದು ನನಗೆ ಸಾಕಷ್ಟುಸಿಟ್ಟು ಬರಿಸುತ್ತಿತ್ತು. ಯಾಕಂದ್ರೆ ಅವರೆಲ್ಲ ಕನ್ನಡವನ್ನು ಅವಮಾನಿಸುತ್ತಾರೋ, ವ್ಯಂಗ್ಯ ಮಾಡುತ್ತಿದ್ದಾರೋ ಎನ್ನುವುದು ನನ್ನ ಪ್ರಶ್ನೆ. ಇದಕ್ಕೆ ಏನಾದ್ರು ಮಾಡ್ಬೇಕು ಅಂತೆನಿಸಿತು. ಅದನ್ನು ಮೂಲವಾಗಿಟ್ಟುಕೊಂಡು ಯಾಕೆ ಒಂದು ಸಿನಿಮಾ ಮಾಡಬಾರದು ಎಂದೆನಿಸಿತು. ಯಾಕೆಂದರೆ ಸಿನಿಮಾ ಒಂದು ಪ್ರಭಾವಿ ಮಾಧ್ಯಮ. ಆ ಮೂಲಕ ಬದಲಾವಣೆ ತರಬಹುದು ಎನ್ನುವ ಆಲೋಚನೆ ನನ್ನದು. ಒಂದಷ್ಟುಸಮಯ ತೆಗೆದುಕೊಂಡು ಒಂದು ಕತೆ ಬರೆದೆ. ನಿರ್ಮಾಪಕ ಕುಮಾರ ಕಂಠೀರವ ಅವರಿಗೂ ಅದು ಹಿಡಿಸಿತು. ಆಗ ಶುರುವಾಗಿದ್ದು ‘ಕನ್ನಡ್ ಗೊತ್ತಿಲ್ಲ’ ಸಿನಿಮಾ.
ಕನ್ನಡ್ ಗೊತ್ತಿಲ್ಲ...ಎನ್ನುವ ಟೈಟಲ್ ಆಯ್ಕೆ ಮಾಡಿಕೊಂಡಿದ್ದು ಹೇಗೆ?
ಸಾಮಾನ್ಯವಾಗಿ ಈ ಟೈಟಲ್ ಕೇಳಿದವರಿಗೆಲ್ಲ ನೆಗೆಟಿವ್ ಆಲೋಚನೆ ಬರುವುದು ಸಹಜ. ಕನ್ನಡ್ ಗೊತ್ತಿಲ್ಲ ಅಂತ ನಾವೇ ಹೇಳುತ್ತಿದ್ದೇವೆನೋ ಎನ್ನುವ ಭಾವನೆ ಬರುತ್ತದೆ. ಆದರೆ ಬೆಂಗಳೂರಿನಲ್ಲಿರುವ ಕನ್ನಡಿಗರು ಈ ಪದವನ್ನು ನಿತ್ಯ ಅದೆಷ್ಟುಬಾರಿ ಕೇಳಿರುತ್ತಾರೋ ಗೊತ್ತಿಲ್ಲ. ಯಾಕಂದ್ರೆ ಇಲ್ಲಿರುವ ಪರಭಾಷಿಗರೆಲ್ಲ ಕನ್ನಡ ಎನ್ನುವ ಬದಲಿಗೆ ಕನ್ನಡ್ ಎನ್ನುವುದೇ ಹೆಚ್ಚು. ನಾವು ಹೇಳ ಹೊರಟ ಕತೆಗೆ ಅದೇ ಟೈಟಲ್ ಬೇಕೆನಿಸಿತು. ಹಾಗಾಗಿ ಅದನ್ನೇ ಆಯ್ಕೆ ಮಾಡಿಕೊಂಡಿವೆ. ಅದೆಲ್ಲಕ್ಕಿಂತ ಮುಖ್ಯವಾಗಿ ಕತೆ ಹುಟ್ಟಿದ್ದೇ ಆ ಪದದ ಮೂಲಕ. ಹಾಗಾಗಿ ಅದೇ ಸೂಕ್ತ ಎನಿಸಿತು.
ನಟಿಯ ಕೈ ಗೀಚಿದ ಹುಡುಗ! ಏನಿದು ಗೆಸ್ ಮಾಡಿ!
ಚಿತ್ರದ ಟ್ರೇಲರ್ ನೋಡಿದ್ರೆ ಕನ್ನಡದ ಜತೆಗೆ ಇದೊಂದು ಕ್ರೈಮ್ ಥ್ರಿಲ್ಲರ್ ಕತೆ ಎನಿಸುತ್ತಲ್ವಾ?
ನಿಜ, ಇದು ಸಸ್ಪೆನ್ಸ್ ಹಾಗೂ ಕ್ರೈಮ್ ಥ್ರಿಲ್ಲರ್ ಸಿನಿಮಾ. ಪ್ರೇಕ್ಷಕರಿಗೆ ಹೊಸ ರೀತಿಯಲ್ಲಿ ಏನಾದ್ರೂ ಮುಟ್ಟಿಸಬೇಕು ಎಂದಾಗ ಕತೆ ಕೂಡ ಮುಖ್ಯ. ಆಗ ನನಗೆ ಹೊಳೆದಿದ್ದು ಕ್ರೈಮ್ ಥ್ರಿಲ್ಲರ್ ಎಲಿಮೆಂಟ್ಸ್. ಬೆಂಗಳೂರು ಸೇರಿ ರಾಜ್ಯದಲ್ಲಿರುವ ಪರಭಾಷಿಕರಿಗೆ ಕನ್ನಡದ ಮಹತ್ವ ಹೇಳಬೇಕು. ಹಾಗೆ ಹೇಳುವುದಕ್ಕೆ ಕುತೂಹಲದ ಎಲಿಮೆಂಟ್ಸ್ ಬೇಕು. ಅದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್ ಆಗಿದ್ದರೆ ಸೂಕ್ತ ಎನಿಸಿದಾಗ ಕನ್ನಡದ ಪ್ರೀತಿಯನ್ನು ಹೇಳುವ ಕತೆಗೆ ಸೇರಿಕೊಂಡಿದ್ದು ಕ್ರೈಮ್ ಥ್ರಿಲ್ಲರ್ ಎಲಿಮೆಂಟ್. ಅದೇನು ಅನ್ನೋದು ಸಸ್ಪೆನ್ಸ್. ಸದ್ಯಕ್ಕೆ ಕತೆಯ ಆ ಎಲಿಮೆಂಟ್ ಬಗ್ಗೆ ನಾವು ಇದುವರೆಗೂ ಹೆಚ್ಚೇನು ಹೇಳಿಲ್ಲ. ಅದು ಸಿನಿಮಾದಲ್ಲೇ ನೋಡಿದರೆ ಚೆಂದ.
ಹರಿಪ್ರಿಯಾ ಅವರೇ ಈ ಚಿತ್ರದ ಪ್ರಮುಖ ಪಾತ್ರಧಾರಿ. ಅವರೇನು ಕನ್ನಡ ಕಲಿಸುವ ಮೇಷ್ಟಾ್ರ?
ಹರಿಪ್ರಿಯಾ ಅವರಿಲ್ಲಿ ಒಬ್ಬ ಇನ್ವೆಸ್ಟಿಗೇಟಿವ್ ಆಫೀಸರ್. ಒಂದು ಕೊಲೆಯ ಹಿಂದಿನ ರಹಸ್ಯ ಭೇದಿಸುವ ಅಧಿಕಾರಿ. ಚಿತ್ರದ ಪ್ರಮುಖ ಆಕರ್ಷಣೆಯೇ ಆ ಪಾತ್ರ. ಆ ಪಾತ್ರದ ಮೂಲಕವೇ ಇಡೀ ಕತೆ ಸಾಗುತ್ತದೆ. ಆ ಪಾತ್ರಕ್ಕೆ ಸೂಕ್ತ ಎನಿಸುವ ನಟಿ ಯಾರು ಅಂತ ನಾವು ಹುಡುಕುತ್ತಾ ಹೋದಾಗ ಸೂಕ್ತ ಎನಿಸಿದ್ದು ಹರಿಪ್ರಿಯಾ . ಕೊಲೆ ತನಿಖೆಯ ಜೊತೆಗೆ ಅವರು ಕನ್ನಡದ ಮಹತ್ವವನ್ನು ಹೇಳುತ್ತಾರೆ. ಅದು ಹೇಗೆ ಅನ್ನೋದು ಕೂಡ ಸಸ್ಪೆನ್ಸ್.
ಸಿನಿಮಾ ಬಿಡುಗಡೆಯಾದರೆ, ಕ್ರಾಂತಿಕಾರಿ ಬದಲಾವಣೆ ಗ್ಯಾರಂಟಿ ಅಂತ ಹರಿಪ್ರಿಯಾ ಹೇಳಿದ್ದರು, ಇದು ಹೇಗೆ?
ಸಿನಿಮಾ ಅನ್ನೋದು ಪ್ರಭಾವಶಾಲಿ ಮಾಧ್ಯಮ ಅನ್ನೋದು ಎಲ್ಲರಿಗೂ ಗೊತ್ತು. ಪ್ರತಿ ಸಿನಿಮಾವೂ ಒಂದಿಲ್ಲೊಂದು ರೀತಿಯಲ್ಲಿ ಪ್ರೇಕ್ಷಕರನ್ನು ಪ್ರಭಾವಿಸುತ್ತದೆ. ನಮ್ಮ ಮಟ್ಟಿಗೆ ಈ ಸಿನಿಮಾ ಕನ್ನಡ ಭಾಷೆಯ ಮಹತ್ವವನ್ನು ಹೆಚ್ಚೇ ಹೇಳುತ್ತದೆ. ಅದರಲ್ಲೂ ಬೆಂಗಳೂರು ಸೇರಿ ರಾಜ್ಯಕ್ಕೆ ವಲಸೆ ಬಂದವರಿಗೆ ಯಾಕೆ ಕನ್ನಡ ಮುಖ್ಯ ಎನ್ನುವುದನ್ನು ಹೇಳುತ್ತದೆ. ‘ಕನ್ನಡ್..’ ಎನ್ನುವವರಿಗೆ ಒಂದು ಎಚ್ಚರಿಕೆಯೂ ಇಲ್ಲಿದೆ. ಸಾಮಾನ್ಯವಾಗಿ ನಾವು ಯಾವುದೇ ರಾಜ್ಯಅಥವಾ ದೇಶಕ್ಕೆ ಹೋದರೆ ಅಲ್ಲಿನ ಭಾಷೆ ಮತ್ತು ಜನರ ಭಾವನೆಗಳನ್ನು ಗೌರವಿಸಬೇಕು. ಆದರೆ ಬೆಂಗಳೂರಿನಲ್ಲೀಗ ಆಗುತ್ತಿರುವುದೇ ಬೇರೆ. ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡವೇ ಕಾಣೆಯಾಗುತ್ತಿದೆ. ಕನ್ನಡ ಮಾತನಾಡುವವರ ಸಂಖ್ಯೆ ಕಮ್ಮಿ ಆಗುತ್ತಿದೆ. ಇದಕ್ಕೆ ಕಾರಣ ‘ಕನ್ನಡ್’ ಎನ್ನುವವರ ಪ್ರಭಾವ. ಅಂತವರಿಗೆ ಈ ಸಿನಿಮಾ ಒಂದು ಎಚ್ಚರಿಕೆ ಸಂದೇಶ ರವಾನಿಸುವುದು ಸತ್ಯ. ಆ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತೆ ಅಂತ ಹೇಳಿಬಹುದು.
ಮನಸು ಕದ್ದ ಈ ನಟಿಗೆ ಹುಟ್ಟುವಾಗ ಹೃದಯದಲ್ಲಿ ಹೋಲ್ ಇತ್ತಂತೆ..!
ಒಂದು ಸಿನಿಮಾ ನಿರ್ಮಿಸಿ, ತೆರೆಗೆ ತರುವುದರ ಮೂಲಕ ಕನ್ನಡ್ ಎನ್ನುವರಿಗೆ ಕನ್ನಡದ ಪಾಠ ಕಲಿಸಲು ಸಾಧ್ಯವೇ?
ಸಿನಿಮಾ ಮಾಡಿ ನಾವು ಯಾರಿಗೋ ಪಾಠ ಕಲಿಸಲು ಹೊರಟಿಲ್ಲ. ಅಂತಹ ಯಾವುದೇ ಭ್ರಮೆಯೂ ನಮಗಿಲ್ಲ. ಹಾಗಂತ ಸಿನಿಮಾದಿಂದ ಬದಲಾವಣೆ ಸಾಧ್ಯವೇ ಇಲ್ಲ ಅಂತಲೂ ಹೇಳುತ್ತಿಲ್ಲ. ರಾಜ್ ಕುಮಾರ್ ಅವರ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ ಅದೆಷ್ಟೋ ಜನ ಯುವಕರು ಹಳ್ಳಿಗೆ ಹೋಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಉದಾಹರಣೆಗಳು ಕನ್ನಡ ಸಿನಿಮಾ ಇತಿಹಾಸದಲ್ಲಿದೆ. ಅಂತದ್ದರಲ್ಲಿ ಸಿನಿಮಾದಿಂದ ಏನೂ ಆಗದು ಅಂತ ಹೇಳಲು ಸಾಧ್ಯವಿಲ್ಲ. ನಾನು ನಿಮಗೆ ಒಂದು ಗ್ಯಾರಂಟಿ ಕೊಡುತ್ತೇನೆ, ಈ ಸಿನಿಮಾ ರಿಲೀಸ್ ಆದ ಮೇಲೆ ಕನ್ನಡ್ ಎನ್ನುವವರು ಕನ್ನಡ ಅಂತ ಸೊಗಸಾಗಿ ಹೇಳುತ್ತಾರೆ.
ಸಿನಿಮಾದ ಇತರೆ ಪಾತ್ರ ವರ್ಗದ ಬಗ್ಗೆ ಹೇಳೋದಾದ್ರೆ...
ಹಿರಿಯ ನಟಿ ಸುಧಾರಾಣಿ ಅವರಿದ್ದಾರೆ. ಇದುವರೆಗೂ ಕಾಣಿಸಿಕೊಳ್ಳದಂತಹ ವಿಶಿಷ್ಟಪಾತ್ರ ಅವರದು. ಸಿಬಿಐ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರದ ಮೂಲಕ ಒಂದಷ್ಟುಸಂದೇಶ ಹೇಳುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ಪವನ್, ಧರ್ಮಣ್ಣ ಸೇರಿ ಹಲವರು ಚಿತ್ರದಲ್ಲಿದ್ದಾರೆ. ಇವೆಲ್ಲ ಸುಮ್ಮನೆ ಬಂದು ಹೋಗುವ ಪಾತ್ರಗಳಲ್ಲ. ಪ್ರತಿಯೊಂದು ಪಾತ್ರದಿಂದಲೂ ಕತೆಗೆ ಟರ್ನ್ ಆ್ಯಂಡ್ ಟ್ವಿಸ್ಟ್ ಸಿಗುತ್ತದೆ. ಆ ಮೂಲಕ ಕತೆ 2 ಗಂಟೆಗಳ ಕಾಲ ಕುತೂಹಲಕಾರಿ ತಿರುವುಗಳಲ್ಲಿ ಸಾಗುತ್ತದೆ. ಆ ರೀತಿಯಲ್ಲಿ ಕತೆ, ಚಿತ್ರಕತೆ ಬರೆದಿದ್ದೇನೆ. ರೋಹಿತ್ ಅವರ ಸಂಭಾಷಣೆ ಅದರ ಅಂದವನ್ನು ಮತ್ತಷ್ಟುಹೆಚ್ಚಿಸಿದೆ.
'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?
ನಿಮ್ಮ ಪರಿಚಯ ಮತ್ತು ಹಿನ್ನೆಲೆ ಹೇಳಿ?
ನಂಗಿದು ಮೊದಲ ಸಿನಿಮಾ. ಒಂದಷ್ಟುವರ್ಷಗಳ ಕಾಲ ರೇಡಿಯೋ ಜಾಕಿ ಆಗಿ ಕೆಲಸ ಮಾಡಿದ್ದೇನೆ. ಹಾಗೆಯೇ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಸಿನಿಮಾ ನಿರ್ದೇಶನದ ಸಾಹಸಕ್ಕೆ ಇಳಿದಿದ್ದೇನೆ. ನಾನೇ ಕಂಡು ಅನುಭವಿಸಿದ ಘಟನೆಗಳಿಗೆ ಕತೆ ರೂಪ ಕೊಟ್ಟು ಸಿನಿಮಾ ಮಾಡಿದ್ದೇನೆ. ಆರಂಭದಲ್ಲೇ ನನಗೆ ಈ ಕತೆ ಮುಖ್ಯವಾಗಿದ್ದು ಒಂದು ಭಾಷೆಗೆ ಇರುವ ಮಹತ್ವ ಯಾರೋ ವಲಸಿಗರಿಂದ ಕಮ್ಮಿ ಆಗುತ್ತಿದೆ ಎನ್ನುವ ಆತಂಕದಿಂದ. ಈ ಕತೆ ಮಾಡಿ ಸಿನಿಮಾ ಮಾಡಬೇಕೆಂದಾಗ ನಿರ್ಮಾಪಕ ಕುಮಾರ ಕಂಠೀರವ ಅದಕ್ಕೆ ಸಾಥ್ ಕೊಟ್ಟರು. ಅವರಿಂದಲೇ ಈ ಸಿನಿಮಾ ನಿರ್ಮಾಣವಾಗಿ ತೆರೆಗೆ ಬರಲು ರೆಡಿ ಆಗಿದೆ.
ಸಿನಿಮಾದ ರಿಲೀಸ್ ಪ್ಲಾನ್ ಏನು?
ರಿಲೀಸ್‌ಗೆ ರೆಡಿ ಇದ್ದೇವೆ. ಆದರೆ ದಿನಾಂಕ ಫಿಕ್ಸ್ ಮಾಡಿಕೊಂಡಿಲ್ಲ. ದೊಡ್ಡ ಸಿನಿಮಾಗಳು ಬರುತ್ತಿವೆ. ಅವುಗಳ ನಡುವೆ ಬರುವುದು ಎಷ್ಟುಸರಿ ಎನ್ನುವ ಆಲೋಚನೆಯಲ್ಲಿದ್ದೇವೆ. ಆದರೂ ಇದು ಕನ್ನಡ ಭಾಷೆಗೆ ಸಂಬಂಧಿಸಿದ ಸಿನಿಮಾ. ನವೆಂಬರ್ ತಿಂಗಳಲ್ಲೇ ಬಂದರೆ ಸೂಕ್ತ ಎನ್ನುವ ಆಸೆ ನಮ್ಮದು. ಆ ನಿಟ್ಟಿನಲ್ಲೇ ಈಗ ಸಿದ್ಧತೆ ನಡೆದಿದೆ. ಇಷ್ಟರಲ್ಲೇ ದಿನಾಂಕ ಫಿಕ್ಸ್ ಆಗುತ್ತೆ.