ನಟನೆಯ ಅವಕಾಶ ತಾನಾಗಿಯೇ ಒದಗಿ ಬಂತು: Chandan Shetty

Kannadaprabha News   | Asianet News
Published : Feb 04, 2022, 09:30 AM ISTUpdated : Feb 04, 2022, 10:53 AM IST
ನಟನೆಯ ಅವಕಾಶ ತಾನಾಗಿಯೇ ಒದಗಿ ಬಂತು:  Chandan Shetty

ಸಾರಾಂಶ

ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಬಿಗ್‌ಬಾಸ್‌ ಖ್ಯಾತಿಯ ರ್ಯಾಪರ್ ಚಂದನ್‌ ಶೆಟ್ಟಿ ಈಗ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಸುಜಯ್‌ ಶಾಸ್ತ್ರಿ ನಿರ್ದೇಶನದ, ಗೋವಿಂದರಾಜ್‌ ನಿರ್ಮಾಣದ ‘ಎಲ್ರ ಕಾಲೆಳಿಯತ್ತೆ’ ಕಾಲ ಚಿತ್ರದಲ್ಲಿ ಚಂದನ್‌ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜೇಶ್‌

ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಬಿಗ್‌ಬಾಸ್‌ ಖ್ಯಾತಿಯ ರ್ಯಾಪರ್ ಚಂದನ್‌ ಶೆಟ್ಟಿ (Chandan Shetty) ಈಗ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಸುಜಯ್‌ ಶಾಸ್ತ್ರಿ (Sujay Shastry) ನಿರ್ದೇಶನದ, ಗೋವಿಂದರಾಜ್‌ ನಿರ್ಮಾಣದ 'ಎಲ್ರ ಕಾಲೆಳಿಯತ್ತೆ ಕಾಲ' (Elra Kaal Eliyutte Kaala) ಚಿತ್ರದಲ್ಲಿ ಚಂದನ್‌ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಚನಾ ಕೊಟ್ಟಿಗೆ (Archana Kottige), ತಾರಾ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಸಂದರ್ಭದಲ್ಲಿ ಚಂದನ್‌ ಶೆಟ್ಟಿ ಜೊತೆ ಮಾತುಕತೆ.

* ರ್ಯಾಪ್ ಸಂಗೀತದ ಸ್ಟಾರ್‌ ನಟನೆಗೆ ಬಂದಿದ್ದೀರಿ. ಹೇಗೆ ಸಾಧ್ಯವಾಯಿತು?
ನನಗೆ ಸಂಗೀತಕಾರನಾಗಿ ದೊಡ್ಡ ಕಲಾಕಾರ ಆಗಬೇಕು ಎಂಬ ಆಸೆ ಇತ್ತು. ನಟನಾಗುವ ಆಲೋಚನೆ ಇರಲಿಲ್ಲ. ಆದರೆ ಚಿಕ್ಕಂದಿನಲ್ಲಿ ನನ್ನ ತಂದೆಯವರು ನಿನಗೆ ಯೋಗ ಇದೆ, ನೀನು ಹೀರೋ ಆಗು ಎಂದು ಹೇಳುತ್ತಿದ್ದರು. ಅವರು ಆಸ್ಟ್ರಾಲಜಿ ನಂಬುತ್ತಾರೆ. ನಾನು ಅದನ್ನು ಏನೂ ನಂಬಿರಲಿಲ್ಲ. ಬಿಗ್‌ಬಾಸ್‌ ಆದ ಮೇಲೆ ನನ್ನ ಆತ್ಮೀಯರು, ನನ್ನನ್ನು ಇಷ್ಟಪಡುವವರು ಸಿನಿಮಾದಲ್ಲಿ ನಟಿಸಬೇಕು ಅಂತ ಹೇಳುತ್ತಿದ್ದರು ಕೂಡ. ಆದರೆ ನಾನು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ರಾಜ ರಾಣಿ ರಿಯಾಲಿಟಿ ಶೋ ಶೂಟಿಂಗ್‌ ಸಂದರ್ಭದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಸುಜಯ್‌ ಶಾಸ್ತ್ರಿಯವರು ಬಂದು ಒನ್‌ ಲೈನ್‌ ಹೇಳಿದರು. ನಾನು ಬಹಳ ಚೆನ್ನಾಗಿದೆ ಎಂದೆ. ನಟಿಸುತ್ತೀರಾ ಎಂದು ಕೇಳಿದರು. ನಾನು ಸರಿ ಎಂದೆ. ಇದು ಯಾವುದೂ ಪ್ಲಾನ್‌ ಮಾಡಿ ಆಗಿದ್ದಲ್ಲ, ತನ್ನಿಂತಾನೇ ಸಂಭವಿಸಿದ್ದು. ಸುಜಯ್‌ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನಟನೆಗೆ ಒಪ್ಪಿದ್ದೇನೆ.

ಹೊಸ ಸಿನಿಮಾಗೆ ನನ್ ಗೆಟಪ್ಪೆ ಚೇಂಜ್ ಆಗಿದೆ : ಚಂದನ್ ಶೆಟ್ಟಿ

* ಯಾಕೆ ಇಷ್ಟು ದಿನ ನಟನೆ ಮನಸ್ಸು ಮಾಡಿರಲಿಲ್ಲ?
ನನ್ನ ಪ್ರಕಾರ ಸಿನಿಮಾ ಎಂದರೆ ಕ್ಯಾರೆಕ್ಟರ್‌. ಗಟ್ಟಿಪಾತ್ರಗಳೇ ಮನಸ್ಸಲ್ಲಿ ನಿಲ್ಲುವುದು. ಸಿನಿಮಾ ಎಂದಾಗ ಕತೆ ಹೀರೋ ಆಗಿರಬೇಕು. ನಿರ್ದೇಶಕನೇ ಹೀರೋ ಆಗಿರಬೇಕು. ಆಗ ಮಾತ್ರ ಆ ಸಿನಿಮಾ ಮನಸ್ಸಲ್ಲಿ ನಿಲ್ಲಲು ಸಾಧ್ಯ. ಈ ಚಿತ್ರಕ್ಕಾಗಿ ರಂಗಭೂಮಿ ತಂಡ ಕೆಲಸ ಮಾಡುತ್ತಿದೆ. ತಮಾಷೆ ಇದೆ. 80ರ ದಶಕದ ಕತೆ ಇದೆ. ವಿಶಿಷ್ಟಪಾತ್ರ ಇದೆ. ಹಾಗಾಗಿ ಒಪ್ಪಿಕೊಂಡೆ.

* 80ರ ದಶಕದ ಕತೆ. ತಯಾರಿ ಹೇಗಿದೆ?
ಮೊದಲೆಲ್ಲಾ ಸಂಗೀತ ರೆಡಿ ಮಾಡಿ ಆದ ಮೇಲೆ ಹಾಡಿನ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ಈಗ ನಟಿಸಿ ಆಮೇಲೆ ಸಂಗೀತ ಕೊಡುತ್ತಾರೆ. ಡೈಲಾಗ್‌, ಸನ್ನಿವೇಶ, ಪಾತ್ರ ಅರ್ಥ ಮಾಡಿಕೊಂಡು ನಟಿಸಬೇಕಾದ ಸವಾಲು ನನಗಿದೆ. ಈಗಾಗಲೇ ನಿರ್ದೇಶಕರು ಒಂದು ತಿಂಗಳು ವರ್ಕ್‌ಶಾಪ್ ಮಾಡಿದ್ದಾರೆ. ಒಂದು ಅದ್ಭುತ ತಂಡ ಇದೆ. ಈ ತಂಡದ ಮೂಲಕ ನಾನು ಹೆಚ್ಚು ಕಲಿಯಬಹುದು ಅನ್ನುವ ಆಸೆ ಇದೆ. ಹೊಸ ಜಗತ್ತಿಗೆ ಕಾಲಿಡುತ್ತಿದ್ದೇನೆ. ಕುತೂಹಲ ಇದೆ.

Fun Video: ಚಂದನ್‌ಗೆ ಆ್ಯಪಲ್, ನಿವೇದಿತಾಗೆ ಕಹಿ ಹಾಗಲಕಾಯಿ..!

ಎಲ್ರ ಕಾಲೆಳಿಯತ್ತೆ ಕಾಲ ಮುಹೂರ್ತ: ಸುಜಯ್‌ ಶಾಸ್ತ್ರಿ ನಿರ್ದೇಶನದ, ಗೋವಿಂದರಾಜ್‌ ನಿರ್ಮಾಣದ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರಕ್ಕೆ ಮುಹೂರ್ತ ಆಗಿದೆ. ಅರ್ಚನಾ ಕೊಟ್ಟಿಗೆ, ತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜ್‌ಗುರು ಹೊಸಕೋಟೆ ಸ್ಕ್ರಿಪ್ಟ್‌ ಬರೆದಿದ್ದಾರೆ. ಪ್ರವೀಣ್‌ ಮತ್ತು ಪ್ರದೀಪ್‌ ಸಂಗೀತ ನೀಡುತ್ತಿದ್ದಾರೆ. ವಿಶ್ವಜೀತ್‌ ರಾವ್‌ ಛಾಯಾಗ್ರಾಹಣ ಹೊಣೆ ಹೊತ್ತಿದ್ದಾರೆ. ಮುಹೂರ್ತಕ್ಕೆ ಆಗಮಿಸಿದ್ದ ಅರ್ಜುನ್‌ ಗುರೂಜಿ ನಮ್ಮ ಕನ್ನಡ ಸಿನಿಮಾವನ್ನು ಬೇರೆ ಭಾಷಿಗರು ಸಬ್‌ಟೈಟಲ್‌ ಹಾಕಿಕೊಂಡು ನೋಡುವಂತೆ ಆಗಬೇಕು ಎಂದು ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು