ಅವತಾರ ಪುರುಷ ನನ್ನದೇ ಲೈಫ್‌ ಸ್ಟೋರಿ ಅನಿಸಿತು: ಶರಣ್‌

By Kannadaprabha News  |  First Published May 6, 2022, 8:31 AM IST

ಶರಣ್‌ ನಟನೆಯ, ಸಿಂಪಲ್‌ ಸುನಿ ನಿರ್ದೇಶನದ, ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಅವತಾರ ಪುರುಷ’ ಸಿನಿಮಾ ಇಂದು (ಮೇ 6) ತೆರೆ ಮೇಲೆ ಮೂಡುತ್ತಿದೆ. ಸಿನಿಮಾ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ನಟ ಶರಣ್‌ ಅವರೊಂದಿಗಿನ ಮಾತುಕತೆ.


ಆರ್‌. ಕೇಶವಮೂರ್ತಿ

ಮೂರು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೀರಿ. ಹೇಗನಿಸುತ್ತಿದೆ?

Latest Videos

undefined

ಮೊದಲ ಸಿನಿಮಾ ಬಿಡುಗಡೆ ಸಂಭ್ರಮದ ಭಾವನೆ ಇದೆ. ಎಲ್ಲವೂ ಹೊಸದಾಗಿ ಕಾಣುತ್ತಿದೆ. ಪ್ರಶ್ನೆಗಳು, ಕುತೂಹಲ, ಎಕ್ಸೈಟ್‌ಮೆಂಟ್‌, ಎಮೋಷನ್‌, ನಾನು ತೆರೆ ಮೇಲೆ ಬಂದಾಗ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ. ಹೀಗೆ ಮೊದಲ ಸಿನಿಮಾ ಮಾಡಿದಾಗ ಆಗುವ ಅನುಭವ ಈಗ ಆಗುತ್ತಿದೆ. ‘ಅವತಾರ ಪುರುಷ’ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದು ಈಗಾಗಲೇ ನೋಡಿದವರು ಹೇಳುತ್ತಿದ್ದಾರೆ. ಆ ಒಂದು ನಂಬಿಕೆ ಮತ್ತು ಸಮಾಧಾನ ಕೂಡ ಇದೆ.

ನೀವು ಸಿನಿಮಾ ನೋಡಿದ್ದೀರಾ?

ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಆಪ್ತರಿಗಾಗಿಯೇ ಶೋ ಹಾಕಿದ್ದರು. ಆದರೆ, ನಾನು ನೋಡಿಲ್ಲ. ಯಾಕೆಂದರೆ ನಾನು ನನ್ನ ಚಿತ್ರವನ್ನು ಮೊದಲ ದಿನ, ಮೊದಲ ಶೋ ಪ್ರೇಕ್ಷಕರ ಜತೆ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ.

ಎರಡು ಹಂತದಲ್ಲಿ ಕತೆ ಹೇಳಬೇಕೆಂದು ಮೊದಲೇ ನಿರ್ಧರಿಸಲಾಗಿತ್ತೇ?

ಎರಡು ಭಾಗಗಳಲ್ಲಿ ಕತೆ ಹೇಳಬೇಕು ಎಂಬುದು ಸಂಪೂರ್ಣವಾಗಿ ಚಿತ್ರತಂಡದ ನಿರ್ಧಾರ. ತುಂಬಾ ದೊಡ್ಡ ಕತೆ, ಮೇಕಿಂಗ್‌ ಹಾಗೂ ವಿಷ್ಯುವಲ್‌ ದೊಡ್ಡದಾಗಿದೆ. ಹೀಗಾಗಿ ಒಂದೇ ಕಂತಿನಲ್ಲಿ ಕತೆ ಹೇಳಿ ಮುಗಿಸಿದರೆ ಅಪೂರ್ಣ ಅನಿಸುತ್ತದೆ. ಅಲ್ಲದೆ ಈ ಕತೆಯನ್ನು ನಿರ್ಮಾಪಕರು ವೆಬ್‌ ಸರಣಿ ಮಾಡಬೇಕು ಅಂದುಕೊಂಡಿದ್ದರಂತೆ. ವೆಬ್‌ ಸರಣಿ ಕತೆ ಒಂದು ಕಂತಿನಲ್ಲಿ ಹೇಳಲು ಸಾಧ್ಯವಿಲ್ಲ ಎನಿಸಿ, ಚಿತ್ರೀಕರಣ ಮಾಡುತ್ತಾ ಹೋದಂತೆ ಭಾಗ 2 ಯೋಚನೆ ಬಂತು.

ಈ ಚಿತ್ರದ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?

ನಟನೆ ಮಾಡಲು ಹೋಗಿ, ಕೊನೆಗೆ ನಿಜವಾಗಿಯೂ ನಟಿಸಬೇಕು ಎಂದಾಗ ಏನೆಲ್ಲ ಆಗುತ್ತದೆ ಎಂಬುದನ್ನು ಒಬ್ಬ ಜೂನಿಯರ್‌ ಆರ್ಟಿಸ್ಟ್‌ ಪಾತ್ರದ ಮೂಲಕ ಹೇಳಲಾಗಿದೆ. ನಿಜವಾಗಲೂ ಆ್ಯಕ್ಟ್ ಮಾಡಬೇಕು ಅನಿಸಿದಾಗ ಏನೆಲ್ಲ ಮಾಡುತ್ತಾನೆ ಎಂಬುದು ಸಿನಿಮಾ. ಒಂದು ಕುಟುಂಬ, ಆ ಕುಟುಂಬದ ಮಗ ತಾನೆ ಎಂದು ಹೋಗುವ ನಾಯಕ, ಅವನ ಹಿಂದೆಯೇ ಹೆಜ್ಜೆ ಹಾಕುವ ಬ್ಲಾಕ್‌ ಮ್ಯಾಜಿಕ್‌ ತಂತ್ರಗಳು ಇವುಗಳ ಮೂಲಕ ಹೊಸ ಲೋಕದ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು.

ನನ್ನ ಸಿನಿಮಾಗಳು ಅಂದ್ರೆ ಮೊದ್ಲು ನಾಯಕಿಯರೇ ಸಿಕ್ತಿರಲಿಲ್ಲ, 'ಅವತಾರ ಪುರುಷ' ಟ್ರೇಲರ್‌ನಲ್ಲಿ ಶರಣ್

ನಿಮ್ಮ ಪ್ರಕಾರ ಈ ಚಿತ್ರದ ವಿಶೇಷತೆ ಏನು?

ಜೂನಿಯರ್‌ ಆರ್ಟಿಸ್ಟ್‌ ಒಬ್ಬನ ಪಡಿಪಾಟಲು. ಜತೆಗೆ ಕಾಮಿಡಿಯಲ್ಲಿ ಬ್ಲಾಕ್‌ ಮ್ಯಾಜಿಕ್‌ ತಂದಿರುವ ರೀತಿ. ಮಗನಂತೆ ನಟಿಸುತ್ತಿದ್ದವನೇ ನಿಜವಾದ ಮಗ ಎಂದುಕೊಂಡಾಗ ಬ್ಲಾಕ್‌ ಮ್ಯಾಜಿಕ್‌ ಬರುತ್ತದೆ. ಒಂದು ಕಾಮಿಡಿ ಚಿತ್ರದಲ್ಲಿ ಬ್ಲಾಕ್‌ ಮ್ಯಾಜಿಕ್‌ ನೆರಳು ಬರುವುದೇ ಹೊಸತನ. ಅದೇ ಚಿತ್ರದ ನಿಜವಾದ ಶಕ್ತಿ. ರಿಯಲ್‌ ಶೋ ಇಲ್ಲಿಂದ ಆರಂಭವಾಗುತ್ತದೆ.

ಜೂನಿಯರ್‌ ಆರ್ಟಿಸ್ಟ್‌ ಕತೆ ಎನ್ನುತ್ತಿದ್ದೀರಿ. ನಿಮ್ಮ ನಿಜ ಜೀವನಕ್ಕೆ ಈ ಕತೆ ಕನೆಕ್ಟ್ ಆಯಿತಾ?

ಖಂಡಿತ ಆಗಿದೆ. ನೂರು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿಕೊಂಡು ಬಂದು ನೂರನೇ ಚಿತ್ರಕ್ಕೆ ನಾನು ಹೀರೋ ಆದವನು. ಈಗ ಸಿನಿಮಾಗಾಗಿ ಅದೇ ಕ್ಯಾರೆಕ್ಟರ್‌ ಆರ್ಟಿಸ್ಟ್‌ ಪಾತ್ರ ಮಾಡುವಾಗ ನನ್ನ ಆ ದಿನಗಳು ನೆನಪಾದವು. ಶೂಟಿಂಗ್‌ ಸೆಟ್‌ಗಳಲ್ಲಿ ವಾರಗಟ್ಟಲೇ ಕಾಯುತ್ತಿದ್ದು, ಪಾತ್ರಕ್ಕಾಗಿ ಅಲೆದಾಡಿದ್ದು, ಮರದ ಕೆಳಗಿನ ನೆರಳೇ ಕ್ಯಾರವಾನ್‌ ಆಗಿದ್ದು ಎಲ್ಲವೂ ನೆನಪಾದವು. ಒಂದು ರೀತಿಯಲ್ಲಿ ‘ಅವತಾರ ಪುರುಷ’ ಸಿನಿಮಾ ಮಾಡುವಾಗ ನನ್ನನ್ನು ನಾನೇ ಮತ್ತೊಮ್ಮೆ ನೋಡಿಕೊಂಡಂತಾಯಿತು. ನನ್ನಂತಹ ಬಹುತೇಕ ಜೂನಿಯರ್‌ ಆರ್ಟಿಸ್ಟ್‌ಗಳ ಲೈಫ್‌ ಸ್ಟೋರಿ ಇದು ಎನ್ನಬಹುದು.

Avatara Purusha: ಎಲ್ಲಾ ಅಭಿಮಾನಿಗಳು ಎಲ್ಲರ ಸಿನಿಮಾ ನೋಡಬೇಕು: ಧ್ರುವ ಸರ್ಜಾ

ಚಿತ್ರದ ಹೆಸರಿನಂತೆ ನಿಮಗೆ ಇಲ್ಲಿ ಎಷ್ಟುಅವತಾರಗಳು ಇವೆ?

ತುಂಬಾ ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಡಾಕ್ಟರ್‌, ಪೊಲೀಸ್‌, ಪೋಸ್ಟ್‌ ಮ್ಯಾನ್‌, ರಾಜಕಾರಣಿ ಹೀಗೆ ಹತ್ತಾರು ಗೆಟಪ್‌ಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ನಾನು ಕಾಣಿಸಿಕೊಳ್ಳುವ ಅವತಾರಗಳಿಗೆ ಲೆಕ್ಕವಿಲ್ಲ. ಯಾಕೆಂದರೆ ಕೆಲವೊಂದು ದೃಶ್ಯಗಳಲ್ಲಿ ನಾಲ್ಕೈದು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ.

ನಿಮ್ಮ ಪ್ರಕಾರ ಚಿತ್ರದ ಹೈಲೈಟ್‌ಗಳೇನು?

ಕಾಮಿಡಿ ಕತೆಯಲ್ಲಿ ಬ್ಲಾಕ್‌ ಮ್ಯಾಜಿಕ್‌ ಬರುವುದು, ಬಿ ಸುರೇಶ್‌, ಸಾಯಿ ಕುಮಾರ್‌, ಶ್ರೀನಗರ ಕಿಟ್ಟಿ, ಆಶಿಕಾ ರಂಗನಾಥ್‌, ಅಶುತೋಷ್‌ ರಾಣಾ... ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿರುವುದು, ಮೊದಲ ಬಾರಿಗೆ ಸೀಕ್ವೆಲ್‌ ರೂಪದಲ್ಲಿ ಬರುತ್ತಿರುವುದು.

ತಮ್ಮದೇ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದ ನಟ ಸಾಯಿ ಕುಮಾರ್

ಸುನಿ, ಪುಷ್ಕರ್‌ ಹಾಗೂ ನಿಮ್ಮ ಕಾಂಬಿನೇಶನ್‌ ಬಗ್ಗೆ ಹೇಳುವುದಾದರೆ?

ಸಿನಿಮಾ ಮೇಲೆ ಪ್ರೀತಿ ಮತ್ತು ಮೋಹ ಇರುವ ನಿರ್ದೇಶಕ, ಸಿನಿಮಾ ನಿರ್ಮಾಣವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನಿಭಾಯಿಸುವ ನಿರ್ಮಾಪಕನ ಜತೆ ನಾನೂ ಇದ್ದೇನೆ ಎಂಬುದೇ ಖುಷಿ. ಒಂದು ಒಳ್ಳೆಯ ತಂಡದ ಸಿನಿಮಾ ಇದು ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

click me!