Yash Interview: 14ಕ್ಕೆ ಕೆಜಿಎಫ್‌-2 ತೆರೆಗೆ, ಇಂದಿನಿಂದ ಟಿಕೆಟ್‌ ಬುಕಿಂಗ್‌

By Govindaraj SFirst Published Apr 10, 2022, 10:34 AM IST
Highlights

‘ರಾಕಿಂಗ್‌ ಸ್ಟಾರ್‌’ ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ, ವಿಜಯ್‌ ಕಿರಗಂದೂರು ನಿರ್ಮಾಣದ ‘ಕೆಜಿಎಫ್‌ 2’ ಸಿನಿಮಾ ಏಪ್ರಿಲ್‌ 14ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.  ಈ ಸಂದರ್ಭದಲ್ಲಿ ಯಶ್‌ ಸಂದರ್ಶನ.

ಬೆಂಗಳೂರು (ಏ.10): ‘ರಾಕಿಂಗ್‌ ಸ್ಟಾರ್‌’ ಯಶ್‌ (Yash) ನಟನೆಯ, ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ, ವಿಜಯ್‌ ಕಿರಗಂದೂರು (Vijay Kiragandur) ನಿರ್ಮಾಣದ ‘ಕೆಜಿಎಫ್‌ 2’ (KGF Chapter 2:) ಸಿನಿಮಾ ಏಪ್ರಿಲ್‌ 14ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಬಾಲಿವುಡ್‌ನಲ್ಲಿ ಮೊದಲ ದಿನವೇ ದಾಖಲೆಯ ಕಲೆಕ್ಷನ್‌ ಮಾಡುವ ನಿರೀಕ್ಷೆ ಇದೆ. ಉತ್ತರ ಭಾರತ, ತಮಿಳುನಾಡು, ಕೇರಳದಲ್ಲಿ ವೇಗವಾಗಿ ಟಿಕೆಟ್‌ ಬುಕ್‌ ಆಗುತ್ತಿವೆ. ಏ.10ರಂದು ಕನ್ನಡದಲ್ಲೂ ಟಿಕೆಟ್‌ ಬುಕಿಂಗ್‌ ಶುರುವಾಗಲಿದೆ. ಈ ಸಂದರ್ಭದಲ್ಲಿ ಯಶ್‌ ಸಂದರ್ಶನ.

* ಕೆಜಿಎಫ್‌ ಥರ ಯಶ್‌ ಕೂಡ ಈಗ ರಾಷ್ಟ್ರಮಟ್ಟದಲ್ಲಿ ಬ್ರ್ಯಾಂಡ್‌ ಆಗಿದ್ದಾರೆ. ಈ ಜರ್ನಿ, ದಾರಿ ಹೇಗಿತ್ತು?
ನನ್ನನ್ನು ಮೊದಲಿನಿಂದ ಕನ್ನಡಿಗರು ನೋಡಿದ್ದಾರೆ. ತಪ್ಪಿದ್ದಾಗ ತಿದ್ದಿದ್ದಾರೆ. ಗೆದ್ದಾಗ ಸಂಭ್ರಮಿಸಿದ್ದಾರೆ. ಮುಂದೆ ಏನಾಗಬಹುದು ಅನ್ನುವುದನ್ನು ನನಗಿಂತ ಮುಂಚೆಯೇ ಗ್ರಹಿಸಿದ್ದಾರೆ. ಇದು ನನ್ನ ಮನೆ. ಬೆಳೆಸಿದ್ದೀರಿ. ಬೆಳೆದಿದ್ದೇನೆ. ನಾನು ಓಡುತ್ತಾ ಇದ್ದೇನೆ. ಓಡುತ್ತಾ ಇರುತ್ತೇನೆ. ಒಬ್ಬ ಮನುಷ್ಯ ಆಸೆ ಪಟ್ಟು ಏನೋ ಸಾಧನೆ ಮಾಡಬೇಕು ಎಂದು ಹೊರಟಾಗ ಅದಕ್ಕೆ ಇಡೀ ಜಗತ್ತು ಜೊತೆಯಾಗುತ್ತದೆ, ಪ್ರೋತ್ಸಾಹಿಸುತ್ತದೆ ಎನ್ನುವುದು ನನಗೆ ಈಗ ಅರ್ಥವಾಗಿದೆ. ನಾವು ಪರಸ್ಪರ ಯಾರು ಅಂತ ಗೊತ್ತಿರಲಿಲ್ಲ. ಎಲ್ಲಿಂದಲೋ ಬಂದಿದ್ದೇವೆ. ವಿಜಯ್‌ ಕಿರಗಂದೂರು ಮಂಡ್ಯದ ಯಾವುದೋ ಹಳ್ಳಿಯಿಂದ ಬಂದವರು. ಅವರು ಒಬ್ಬ ನಾಯಕನಂತೆ ಇದ್ದರು. ಪ್ರಶಾಂತ್‌ ನೀಲ್‌ ಒಬ್ಬ ಶ್ರೇಷ್ಠ ನಿರ್ದೇಶಕ. ಅವರು ನನಗೆ ದಾರಿಯಲ್ಲಿ ಸಿಕ್ಕರು. ನಾವು ಸಾಗುತ್ತಿರುವಾಗ ನಮಗೆ ಬೇಕಾದವರು ಸಿಗುತ್ತಿರುತ್ತಾರೆ. ಎಲ್ಲಕ್ಕಿಂತ ಮೊದಲು ನೀವು ನಿಮ್ಮನ್ನು ನಂಬಬೇಕು. ಜಗತ್ತು ನಿಮ್ಮನ್ನು ನಂಬಲಿ ಬಿಡಲಿ, ನಿಮ್ಮ ಉದ್ದೇಶ, ನಿಮ್ಮ ನಂಬಿಕೆ ಸರಿ ಇದ್ದಾಗ ಉಳಿದೆಲ್ಲವೂ ತನ್ನಿಂತಾನೇ ಆಗುತ್ತದೆ.

* ಕೆಜಿಎಫ್‌ನಿಂದ ನಿಮಗೆ ದಕ್ಕಿದ್ದು ಏನು?
ಪ್ರತಿ ದಿನವೂ ಕಲಿಯುವುದಕ್ಕೆ ಸಿಕ್ಕಿದೆ. ಅದಕ್ಕಿಂತ ಹೆಚ್ಚಾಗಿ ವಿಜಯ್‌ ಕಿರಗಂದೂರು, ಪ್ರಶಾಂತ್‌ ನೀಲ್‌ರಂತಹ ವ್ಯಕ್ತಿಗಳು ಸಿಕ್ಕಿದ್ದಾರೆ. ನಾವು ಈ ಸವಾಲನ್ನು ಒಟ್ಟಿಗೆ ಎದುರಿಸಿ ಬಂದಿದ್ದೇವೆ. ಪರಸ್ಪರರಿಂದ ತುಂಬಾ ಕಲಿತಿದ್ದೇವೆ. ಮೂವರ ದೃಷ್ಟಿಕೋನವೂ ಬೇರೆ ಬೇರೆ ಇದೆ. ಆದರೆ ಉದ್ದೇಶ ಒಂದೇ. ಅದು ಸಿನಿಮಾ.

ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ

* ನಿಮಗೆ ದುಡ್ಡು ಖುಷಿ ಕೊಡುತ್ತದೋ, ಕೀರ್ತಿ ತೃಪ್ತಿ ಕೊಡುತ್ತದೋ?
ನಾನು ಕಲಾವಿದ. ಬರೀ ಕಲೆಗಾಗಿ ಬದುಕುತ್ತೇನೆ ಅಂತಲ್ಲ. ಮನ್ನಣೆ ಬೇಕು. ಪ್ರತಿಯೊಂದು ಕೆಲಸದಲ್ಲಿಯೂ ಮನ್ನಣೆ ಸಿಗುವುದು ಮುಖ್ಯ. ಅಲ್ಲದೆ ಪ್ರತಿಯೊಂದನ್ನೂ ಎಂಜಾಯ್‌ ಮಾಡಬೇಕು. ಕಲಾವಿದನಾಗಿ ಮನ್ನಣೆ ಸಿಕ್ಕಾಗ ಖುಷಿ ಪಡಬೇಕು. ಅದಕ್ಕೆ ತಕ್ಕ ಸಂಭಾವನೆ ಸಿಕ್ಕಾಗ ಅದನ್ನೂ ಎಂಜಾಯ್‌ ಮಾಡಬೇಕು. ಹೆಚ್ಚು ಜನರಿಗೆ ತಲುಪಿದಾಗ ಸಿಗುವ ಶಕ್ತಿಯನ್ನೂ ಎಂಜಾಯ್‌ ಮಾಡಬೇಕು.

* ಪೈರಸಿ ಕುರಿತಾಗಿ ಏನಾದರೂ ಕ್ರಮ ತೆಗೆದುಕೊಂಡಿದ್ದೀರಾ?
ಪೈರಸಿ ಆಗುತ್ತಲೇ ಇರುತ್ತದೆ. ಪೈರಸಿ ನಿಲ್ಲಿಸುವುದನ್ನು ಜನರೇ ನಿರ್ಧಾರ ಮಾಡುತ್ತಾರೆ. ಪ್ರಾಣಿಗಳ ಚರ್ಮ ಖರೀದಿಸುವುದು ನಿಲ್ಲಿಸಿದರೆ ಪ್ರಾಣಿಗಳನ್ನು ಕೊಲ್ಲುವುದು ನಿಲ್ಲಿಸುತ್ತಾರೆ. ಪೈರಸಿ ನೋಡುವುದನ್ನು ಜನ ನಿಲ್ಲಿಸಿದರೆ ಪೈರಸಿ ಮಾಡುವವರು ನಿಲ್ಲಿಸುತ್ತಾರೆ. ಸಿನಿಮಾವನ್ನು ಥಿಯೇಟರಲ್ಲಿ ನೋಡಿದರೇನೇ ಖುಷಿ ಸಿಗುತ್ತದೆ.

* ದೊಡ್ಡ ಸಿನಿಮಾ ಬಂದಿದೆ. ಮುಂದೇನು?
ನಮ್ಮ ಕೆಲಸ, ಜವಾಬ್ದಾರಿ ಈ ಕ್ಷಣ ಯಾವ ಸಿನಿಮಾ ಇದೆಯೋ ಅದನ್ನು ಚೆನ್ನಾಗಿ ಮಾಡಲು ಶ್ರಮಿಸುವುದು. ಮುಂದೆ ಏನಾಗುತ್ತದೋ ನೋಡೋಣ. ಜೀವ ವಿಕಾಸ ಕಾನ್ಸೆಪ್ಟ್‌ ನೋಡಿ. ನಾಲ್ಕು ಕಾಲಿನಲ್ಲಿ ಚಲಿಸುತ್ತಿದ್ದ ಮಾನವ ಈಗ ಫ್ಲೈಟ್‌ ಹತ್ತಿ ಓಡಾಡುವ ಹಂತಕ್ಕೆ ಬೆಳೆದು ಬಂದಿದ್ದಾನೆ. ಆ ಒಂದೊಂದು ಹಂತದಲ್ಲೂ ಬೆಳವಣಿಗೆ ಅಸಾಧ್ಯ ಅಂತಲೇ ಅನ್ನಿಸುತ್ತಿರುತ್ತದೆ. ಆದರೆ ಹೋಗ್ತಾ ಹೋಗ್ತಾ ನಮಗೆ ನಮ್ಮ ದಾರಿ ಸಿಗುತ್ತದೆ.

* ಯಶ್‌, ವಿಜಯ್‌ ಕಿರಗಂದೂರು, ಪ್ರಶಾಂತ್‌ ನೀಲ್‌ ಮೂರು ಜನ ಮತ್ತೆ ಸೇರಿ ಇದಕ್ಕಿಂತ ದೊಡ್ಡ ಸಿನಿಮಾ ಮಾಡ್ತೀರಾ?
ಎನರ್ಜಿ ಮತ್ತು ಸಿನರ್ಜಿ ಅಂತ ಇರುತ್ತದೆ. ಪ್ರತಿಯೊಬ್ಬರಲ್ಲೂ ಒಂದೊಂದು ಎನರ್ಜಿ ಇರುತ್ತದೆ. ಎಲ್ಲವೂ ಒಟ್ಟಿಗೆ ಸೇರಿದಾಗ ಸಿನರ್ಜಿ ಆಗುತ್ತದೆ. ಇಬ್ಬರ ಜೊತೆಗೆ ನಾನೂ ಸೇರಿದಾಗ ಇನ್ನೇನೋ ಒಂದು ಆಗುತ್ತದೆ. ಕಾಂಬಿನೇಷನ್‌ಗೆ ಒಂದು ಶಕ್ತಿ ಇರುತ್ತದೆ. ಜನರು ಆ ಕಾಂಬಿನೇಷನ್‌ ಮೆಚ್ಚಿದಾಗ ಅದು ದೊಡ್ಡ ಶಕ್ತಿ ಆಗುತ್ತದೆ. ಜನರು ಸಕ್ಸಸ್‌ ಕೊಟ್ಟರು. ಹೆಚ್ಚು ಜನ ನಂಬುತ್ತಿದ್ದಾರೆ ಅಂದಾಗ ಹೆಚ್ಚು ಪ್ರೋತ್ಸಾಹ, ಶಕ್ತಿ ಸಿಗುತ್ತದೆ. ಅವರು ನಂಬುತ್ತಿದ್ದಾರೆ ಅಂದಾಗ ಅದಕ್ಕೆ ಪರಿಶ್ರಮ, ಶಕ್ತಿ ಹುಟ್ಟುತ್ತದೆ ಅನ್ನುವುದು ನನ್ನ ನಂಬಿಕೆ. ಒಳ್ಳೆಯ ಕೆಲಸ ಮಾಡಬೇಕು ಅಂತ ನಾವು ಮೂರು ಜನ ಸೇರಿದೆವು. ಒಳ್ಳೆಯದೇ ಆಯಿತು. ಒಳ್ಳೆಯ ವಿಷಯದಿಂದ ಒಳ್ಳೆಯ ವ್ಯಕ್ತಿಗಳು, ಬುದ್ಧಿವಂತಿಕೆ ಹುಟ್ಟುವುದಿಲ್ಲ. ಒಳ್ಳೆಯ ವ್ಯಕ್ತಿಗಳು, ಒಳ್ಳೆಯ ಉದ್ದೇಶದಿಂದ ಒಳ್ಳೆಯ ವಿಷಯಗಳು ಹುಟ್ಟಿಕೊಳ್ಳುತ್ತವೆ. ಮುಂದೇನಾಗುತ್ತದೆ ಎಂಬುದಕ್ಕೆ ಮುಂದೆ ಉತ್ತರ ಸಿಗುತ್ತದೆ.

'KGF 2'; ಹಿಂದಿಯಲ್ಲಿ 12 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್

2000 ರು.ವರೆಗೆ ಟಿಕೆಟ್‌ ಸೇಲ್‌: ಬಿಡುಗಡೆಗೂ ಮುನ್ನವೇ ಯಶ್‌ ಅಭಿನಯದ ‘ಕೆಜಿಎಫ್‌-2’ ದೇಶಾದ್ಯಂತ ಭಾರೀ ಹವಾ ಸೃಷ್ಟಿಸಿದೆ. ಮುಂಬೈ ಹಾಗೂ ಪುಣೆಯಲ್ಲಿ 1500 ರು.ವರೆಗೂ ಟಿಕೆಟ್‌ ದರ ನಿಗದಿಯಾಗಿದೆ. ದಿಲ್ಲಿಯಲ್ಲಿ 1800ರಿಂದ 2000 ರು.ವರೆಗೂ ದರ ನಿಗದಿಯಾಗಿದೆ. ಏ.14ರಂದು ‘ಕೆಜಿಎಫ್‌-2’ ಚಿತ್ರ ಬಿಡುಗಡೆ ಆಗಲಿದ್ದು, ವಿಶೇಷವಾಗಿ ಮುಂಬೈ ಹಾಗೂ ಪುಣೆಯಲ್ಲಿ ಬೆಳಿಗ್ಗೆ 6 ಗಂಟೆಗೇ ಪ್ರದರ್ಶನ ಆರಂಭವಾಗಲಿದೆ. ಮುಂಬೈನ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಬೇಕಾದ ಸೀಟು ಆಯ್ಕೆ ಮಾಡಬಹುದಾದ ಪ್ರತಿ ಸೀಟಿನ ಟಿಕೆಟ್‌ನ ದರವನ್ನು 1,450 ರು.ರಿಂದ 1500 ರು.ಗೆ ನಿಗದಿಪಡಿಸಲಾಗಿದೆ. 

ಅದೇ ರೀತಿ ದೆಹಲಿಯಲ್ಲಿ 1800 ರು. ನಿಂದ 2000 ರು. ಭಾರೀ ಬೆಲೆಯಲ್ಲಿ ಟಿಕೆಟ್‌ ಮಾರಾಟವಾಗುತ್ತಿವೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್‌ ಆದರ್ಶ್ ಟ್ವೀಟ್‌ ಮಾಡಿದ್ದಾರೆ. ಈ ನಡುವೆ, ಎಲ್ಲ ಸ್ಥಳಗಳಲ್ಲಿ ಇಷ್ಟೊಂದು ಭಾರೀ ದರಕ್ಕೆ ಟಿಕೆಟ್‌ ಮಾರಾಟವಾಗುತ್ತಿಲ್ಲ. ಆಯ್ದ ಸ್ಥಳಗಳಲ್ಲಿ ಭಾರೀ ಮೊತ್ತಕ್ಕೆ ಬಿಕರಿ ಆಗುತ್ತಿವೆ. ಉಳಿದ ಸ್ಥಳಗಳಲ್ಲಿ ಮಾಮೂಲಿ ಟಿಕೆಟ್‌ ದರದಲ್ಲೇ ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟವಾಗುತ್ತಿವೆ ಎಂದು ಕೆಲವು ಚಿತ್ರತಜ್ಞರು ಸ್ಪಷ್ಟಪಡಿಸಿದ್ದಾರೆ.

click me!