ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳು ಕೊಟ್ಟ ಕಾಣಿಕೆ: ಪುನೀತ್‌ರಾಜ್‌ಕುಮಾರ್

Kannadaprabha News   | Asianet News
Published : Mar 18, 2021, 09:39 AM IST
ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳು ಕೊಟ್ಟ ಕಾಣಿಕೆ: ಪುನೀತ್‌ರಾಜ್‌ಕುಮಾರ್

ಸಾರಾಂಶ

ನಟ ಪುನೀತ್‌ ರಾಜ್‌ಕುಮಾರ್ ಅವರಿಗೆ 46ನೇ ಹುಟ್ಟುಹಬ್ಬದ ಸಂಭ್ರಮ. ಈ ವರ್ಷ ತೀರಾ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವ ಪುನೀತ್‌ ರಾಜ್‌ಕುಮಾರ್ ಅವರ ಮಾತುಗಳು ಇಲ್ಲಿವೆ...  

ಆರ್. ಕೇಶವಮೂರ್ತಿ

ಎಂದಿನಂತೆ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎನ್ನುವ ಬೇಸರ ಇದೆಯಾ?

ಖಂಡಿತ ಇಲ್ಲ. ಆದರೆ, ಪ್ರೀತಿ ಹಾಗೂ ಅಭಿಮಾನ ಇಟ್ಟುಕೊಂಡು ಮನೆವರೆಗೂ ಬರುವ ಅಭಿಮಾನಿಗಳನ್ನು ನೇರವಾಗಿ ನೋಡಿ ಮಾತನಾಡಿಸಲು ಆಗುತ್ತಿಲ್ಲ ಎನ್ನುವ ಬೇಸರ ಇದೆ. ಅದ್ದೂರಿಯಾಗಿ ಬರ್ತ್‌ಡೇ ಮಾಡಿಕೊಂಡಿಲ್ಲ ಎನ್ನುವ ಕೊರತೆ ಕಾಡುತ್ತಿಲ್ಲ.

ಹುಟ್ಟುಹಬ್ಬದ ಸಂಭ್ರಮಗಳನ್ನು ಹೇಗೆ ನೋಡುತ್ತೀರಿ?

ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದೇವೆ. ನಮ್ಮನ್ನು ಪ್ರೀತಿಸುವವರು, ಅಭಿಮಾನಿಸುವವರು ಇದ್ದೇ ಇರುತ್ತಾರೆ. ಅವರು ಪ್ರೀತಿಯಿಂದ ಏನೇ ಮಾಡಿದರೂ ಬೇಡ ಅಂತ ಹೇಳೋಕೆ ಆಗಲ್ಲ. ಅದು ಅವರ ಸಂಭ್ರಮ ಅಂತಲೇ ಖುಷಿಯಿಂದ ಸ್ವೀಕರಿಸಬೇಕು. ನಮ್ಮ ಹುಟ್ಟುಹಬ್ಬವನ್ನು, ನಮ್ಮ ಗೆಲುವನ್ನು ಮತ್ತೊಬ್ಬರು ಹಬ್ಬದಂತೆ ಆಚರಿಸುತ್ತಾರಲ್ಲ, ಒಬ್ಬ ನಟನಾಗಿ ಇದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಇದೆಲ್ಲ ಅಭಿಮಾನಿಗಳು ಪ್ರೀತಿಯಿಂದ ಪ್ರತಿ ವರ್ಷ ಬಂದು ಕೊಡುವ ಮತ್ತು ತೋರುವ ಕಾಣಿಕೆ. ಆದರೆ, ಈಗಿನ ಪರಿಸ್ಥಿತಿ ಬೇರೆ. ಎಲ್ಲರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನಾವು ನೂರಾರು ಜನ ಒಂದು ಕಡೆ ಸೇರಿ ಸಂಭ್ರಮಿಸುವ ಸಂದರ್ಭ ಇದಲ್ಲ.

ನಮ್ಮ ಸಂಸ್ಥೆಯಲ್ಲಿ ಮಕ್ಕಳ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಆ ನಿಟ್ಟಿನಲ್ಲಿ ಎಲ್ಲ ತಯಾರಿಗಳು ನಡೆಯುತ್ತಿವೆ. ಸದ್ಯದಲ್ಲೇ ಮಕ್ಕಳ ಸಿನಿಮಾ ಪಿಆರ್‌ಕೆ ಸಂಸ್ಥೆಯಲ್ಲಿ ಘೋಷಣೆ ಮಾಡಲಿದ್ದೇವೆ.

ಹುಟ್ಟುಹಬ್ಬದ ಪ್ರಯುಕ್ತ ನಿಮ್ಮ ಅಭಿಮಾನಿಗಳು ಥಿಯೇಟರ್ ಕಾರ್ಮಿಕರಿಗೆ ರೇಷನ್ ವಿತರಣೆ ಮಾಡುತ್ತಿದ್ದಾರಲ್ಲ?

ಅವರು ಮಾಡುವ ಒಳ್ಳೆಯ ಕೆಲಸಕ್ಕೆ ನನ್ನ ಹೆಸರು ಇಟ್ಟುಕೊಳ್ಳುತ್ತಾರೆ. ನಮ್ಮ ಯಶಸ್ಸನ್ನು ಸಂಭ್ರಮಿಸುತ್ತಾರೆ, ನಮ್ಮ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಇದನ್ನೆಲ್ಲ ನೋಡಿದಾಗ, ನಮಗಿಂತ ಪುಣ್ಯವಂತರು ಇಲ್ಲ ಅನಿಸುತ್ತದೆ. ಒಬ್ಬ ನಟನಾಗಿ ಅವರಿಗೆ ನಾನು ಒಳ್ಳೆಯ ಸಿನಿಮಾ ಕೊಡಬಹುದು ಅಷ್ಟೆ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು. ಅದಕ್ಕೆ ಅವರನ್ನು ಅಭಿಮಾನಿ ದೇವರುಗಳು ಅಂತ ಹೇಳುವುದು.

"

ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬದಂದು ನಿಮಗೆ ನೆನಪಾಗುವ ಘಟನೆ ಅಥವಾ ಸನ್ನಿವೇಶ ಏನು?

ಪ್ರತಿ ವರ್ಷವೂ ವಿಶೇಷವೇ. ಆದರೆ, 1992ರಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಂಡಾಗ ಅಮ್ಮ ಒಂದು ಕಾರು ಕೊಡಿಸಿದರು. 17-18ನೇ ವಯಸ್ಸಿಗೆ ಕಾರು ತೆಗೆದುಕೊಂಡ ಖುಷಿ. ಅದು ಹುಟ್ಟುಹಬ್ಬದ ದಿನ. ಪ್ರೀತಿಯಿಂದ ಅಮ್ಮ ಕೊಡಿಸಿದ ಕಾರು ಅದು. ಅದನ್ನು ಯಾವತ್ತೂ ಮರೆಯಲಾಗದು.

ಯುವರತ್ನ 'FeelThePower' ಪ್ರೋಮೋ ಹಾಡು ಬಿಡುಗಡೆ; ಕುತೂಹಲ ಹೆಚ್ಚಿಸಿದೆ ಪುನೀತ್‌ ಲುಕ್! 
 

ಮೈಸೂರಿನಲ್ಲಿ ನಡೆಯಬೇಕಿದ್ದ ಯುವ ಸಂಭ್ರಮ ಕಾರ್ಯಕ್ರಮ ರದ್ದಾಗಿದೆ. ಮಾ.21ರಂದು ಬೇರೆ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆ ಬಗ್ಗೆ ಸದ್ಯದಲ್ಲೇ ಹೇಳುತ್ತೇವೆ.

ನಿಮಗೆ ಮೊದಲ ವಿಷ್ ಮಾಡೋದು ಯಾರು?

ಮೊದಲು ಅಪ್ಪ- ಅಮ್ಮ. ಮದುವೆಯಾದ ಮೇಲೆ ಮನೆಯಲ್ಲಿ ನನ್ನ ಪತ್ನಿ ಹಾಗೂ ಮಕ್ಕಳು. ಮೊದಲು ಅವರೇ ಬಂದು ವಿಷ್ ಮಾಡಿ ಸಿಹಿ ಕೊಡುತ್ತಾರೆ. ಕುಟುಂಬದವರ ಆಶೀರ್ವಾದ ಮುಖ್ಯ. ಅವರೇ ನಮ್ಮ ಬೆನ್ನೆಲುಬು.\

ಹ್ಯಾಪಿ ಬರ್ತಡೇ ಪುನೀತ್‌; ಚಿತ್ರರಂಗದ ಆಪ್ತರು ಶುಭಕೋರಿದ್ದು ಹೀಗೆ! 

ಚಿತ್ರರಂಗಕ್ಕೆ ಬಂದು 46 ವರ್ಷ ಕಳೆದಿದ್ದೀರಿ. ಏನಿಸುತ್ತಿದೆ?

ಅದ್ಭುತವಾದ ಜೀವನ ಸಿಕ್ಕಿದೆ. ಒಳ್ಳೆಯ ಕುಟುಂಬ, ಒಳ್ಳೆಯ ಸ್ನೇಹಿತರು, ನನ್ನ ಜತೆ ಒಳ್ಳೆಯ ಸಿನಿಮಾ ಮಾಡಬೇಕು ಎಂದುಕೊಂಡಿರುವ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ನಗು ನಗುತ್ತ ಮಾತನಾಡಿಸುವ ಅಭಿಮಾನಿಗಳು... ಎಲ್ಲವನ್ನೂ ಪಡೆದುಕೊಂಡಿದ್ದೇವೆ. ಒಬ್ಬ ಮನುಷ್ಯನಿಗೆ ಇದಕ್ಕಿಂತ ಇನ್ನೇನು ಬೇಕು? ನಾವು ಎಷ್ಟು ವರ್ಷ ನಡೆದುಕೊಂಡು ಬಂದಿದ್ದೇವೆ ಎನ್ನುವುದಕ್ಕಿಂತ ಇಷ್ಟೆಲ್ಲಾ ಸಿಕ್ಕಿದೆ.

ರೆಸಾರ್ಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್ ಪತ್ನಿ ಹುಟ್ಟುಹಬ್ಬ ಆಚರಣೆ; ವಿಡಿಯೋ ವೈರಲ್!

ಬಾಲ ನಟರಾಗಿ ನಟಿಸಿದ ನಿಮ್ಮದೇ ಸಿನಿಮಾಗಳನ್ನು ಈಗ ನೀವು ನೋಡಿದಾಗ ಏನನಿಸುತ್ತದೆ?

ನನ್ನ ಪಾಡಿಗೆ ನಾನೇ ನಗುತ್ತೇನೆ. ಆಗ ನಾನು ಯಾವುದನ್ನು ನೋಡಿರಲಿಲ್ಲ. ತುಂಬಾ ವರ್ಷಗಳ ನಂತರ ನನ್ನ ಆ ದಿನಗಳ ಚಿತ್ರಗಳನ್ನು ನೋಡಿದೆ. ‘ಹೆಂಗಲ್ಲ ಮಾಡಿದ್ದೀನಿ’ ಅಂತ ಅನಿಸುತ್ತದೆ. ಅದರಲ್ಲೂ ನನ್ನ ಅಚ್ಚುಮೆಚ್ಚಿನ ಸಿನಿಮಾ ‘ಭಾಗ್ಯವಂತರು’. ಈ ಚಿತ್ರವನ್ನು ನನ್ನ ಮಕ್ಕಳಿಗೆ ತೋರಿಸುವ ಪ್ರಯತ್ನ ಮಾಡಿದೆ. ನೋಡೋಣ ಅವರು ಏನು ಹೇಳುತ್ತಾರೆ ಅಂತ. ಅವರು ಕೂಡ ನನ್ನಷ್ಟೇ ಕುತೂಹಲದಿಂದ ಸಿನಿಮಾ ನೋಡಿದರು.

ನೀವು ಇಷ್ಟಪಟ್ಟ ಬೇರೆ ಬಾಲನಟರ ಚಿತ್ರ ಹಾಗೂ ನಟರು ಯಾರು?

ಮಾಲ್ಗುಡಿ ಡೇಸ್. ನನ್ನ ಫೇವರೆಟ್ ಬಾಲ ನಟ ಮಾ. ಮಂಜು. ಆ ಸಿನಿಮಾ ನೋಡುವಾಗಲೆಲ್ಲ ಮಾ.ಮಂಜು ಸೂಪರ್ ನಟ ಅನಿಸುತ್ತದೆ. ನಾನು ಈ ಹಿಂದೆ ಕೂಡ ಹೇಳಿದ್ದೇನೆ, ಮಾ.ಮಂಜು ನನ್ನ ನೆಚ್ಚಿನ ಬಾಲ ನಟ ಅಂತ. ಇನ್ನೂ ವಿಜಯ್ ರಾಘವೇಂದ್ರ, ಶ್ರೀಮುರಳಿ ಅವರು ಬಾಲ ನಟರಾಗಿ ಕಾಣಿಸಿಕೊಂಡ ಚಿತ್ರಗಳು ಇಷ್ಟ. ಹಾಗೆ ಇತ್ತೀಚೆಗೆ ನಾನು ನೋಡಿದ ಅದ್ಭುತ ಮಕ್ಕಳ ಸಿನಿಮಾ ಎಂದರೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡುಗೆ ರಾಮಣ್ಣ ರೈ’. ಸೂಪರ್ ಸಿನಿಮಾ. ಅದರಲ್ಲಿ ನಟಿಸಿದ ಮಕ್ಕಳನ್ನೂ ನಾನು ಭೇಟಿ ಮಾಡಿದೆ.

ಫಿಟ್‌ನೆಸ್ ಬಗ್ಗೆ ತುಂಬಾ ಜಾಗೃತಿ ಮೂಡಿಸುತ್ತೀರಿ. ನಿಮ್ಮ ಫಿಟ್‌ನೆಸ್ ಗುಟ್ಟೇನು?

ಫೈಟ್ ಫಾರ್ ಫ್ಯಾಟ್, ಫೈಟ್ ಫಾರ್ ಆಲ್ ವೈರಸ್. ಇದಿಷ್ಟೆ ಈಗಿನ ಆರೋಗ್ಯದ ಗುಟ್ಟು. ಅದೇನೋ ಗೊತ್ತಿಲ್ಲ, ನನಗೆ ಮೊದಲಿನಿಂದಲೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ. ಹೀಗಾಗಿ ಫಿಟ್ ಆಗಿರಬೇಕು ಎಂದುಕೊಳ್ಳುತ್ತೇನೆ. ನಮ್ಮ ಅಣ್ಣ (ಶಿವರಾಜ್‌ಕುಮಾರ್), ಅಪ್ಪಾಜಿ, ರಾಘು (ರಾಘವೇಂದ್ರ ರಾಜ್‌ಕುಮಾರ್) ಯಾರಿಗೂ ಡಯಾಟ್ ಇಲ್ಲ ನೋಡಿ.

45 ವರ್ಷಗಳ ಸಿನಿ ಜರ್ನಿ ಪೂರೈಸಿದ ಪುನೀತ್ ರಾಜ್‌ಕುಮಾರ್‌; ಸುದೀಪ್ ವಿಶ್ ಮಾಡಿದ್ದು ಹೀಗೆ! 

ಲಾಕ್‌ಡೌನ್ ನಂತರ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದೀರಾ?

ಲಾಕ್‌ಡೌನ್‌ನಲ್ಲಿ ಮನೆಯಲ್ಲಿದ್ದಾಗ ಹೆಚ್ಚು ನೋಡಿದ್ದು ಮಕ್ಕಳ ಸಿನಿಮಾಗಳು. ಅದರಲ್ಲೂ ಅನಿಮೇಷನ್ ಚಿತ್ರಗಳು. ಆದರೆ, ಲಾಕ್‌ಡೌನ್ ನಂತರ ನಾನು ಥಿಯೇಟರ್‌ಗಳಿಗೆ ಹೋಗಿ ಸಿನಿಮಾ ನೋಡಲಿಕ್ಕೆ ಆಗಲಿಲ್ಲ.

ಯುವರತ್ನ ಚಿತ್ರದ ಮೂಲಕ ಏನು ಹೇಳುತ್ತಿದ್ದೀರಿ?

ತುಂಬಾ ಸಿಂಪಲ್ ಸ್ಟೋರಿ. ಇವತ್ತಿನ ಯುವ ಸಮುದಾಯ ನೋಡಲೇಬೇಕಾದ ಕತೆ ಇಲ್ಲಿ. ಯುವ ಸಮೂಹ, ವಿದ್ಯೆ, ನಮ್ಮ ಸಮಾಜ... ಈ ಅಂಶಗಳನ್ನು ತುಂಬಾ ಕಮರ್ಷಿಯಲ್ಲಾಗಿ, ಎಲ್ಲೂ ನೀರಸ ಅನಿಸದೆ ಮನರಂಜನೆಯ ನೆಲೆಯಲ್ಲಿ ತೆರೆ ಮೇಲೆ ತಂದಿದ್ದೇವೆ. ನಿರ್ದೇಶಕ ಸಂತೋಷನ್ ಆನಂದ್‌ರಾಮ್ ಅವರು ಸಂದೇಶಾತ್ಮಕ ಕತೆಗಳನ್ನೂ ಆಪ್ತವಾಗಿ ಹೇಳುತ್ತಾರೆ ಎಂಬುದು ಈಗಾಗಲೇ ‘ರಾಜಕುಮಾರ’ ಚಿತ್ರದಲ್ಲಿ ನೋಡಿದ್ದೀರಿ. ‘ಯುವರತ್ನ’ ಇನ್ನೊಂದು ಹಂತದ ಕತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು