ಸಂದೇಶ ಇಲ್ಲ, ಮಜಾ ಸಿನಿಮಾ ಹೀರೋ: ರಿಷಬ್‌ ಶೆಟ್ಟಿ

By Kannadaprabha News  |  First Published Mar 5, 2021, 9:24 AM IST

ಮಾ.5ರಂದು ಭರತ್‌ರಾಜ್‌ ನಿರ್ದೇಶನದ, ರಿಷಬ್‌ ಶೆಟ್ಟಿನಿರ್ಮಾಣದ ‘ಹೀರೋ’ ಸಿನಿಮಾ ಬಿಡುಗಡೆ ಆಗುತ್ತಿದೆ. ರಿಷಬ್‌, ಗಾನವಿ ಲಕ್ಷ್ಮಣ್‌, ಪ್ರಮೋದ್‌ ಶೆಟ್ಟಿಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾ ಶೂಟಿಂಗ್‌ ಆಗಿದ್ದು 43 ದಿನದಲ್ಲಿ. ಲಾಕ್‌ಡೌನ್‌ ಮುಗಿದ ತಕ್ಷಣ 24 ಜನರ ಟೀಮ್‌ ಒಂದೆಡೆ ಸೇರಿ ಅತಿವೇಗವಾಗಿ ಚಿತ್ರೀಕರಿಸಿಕೊಂಡ ಸಿನಿಮಾ ಎಂಬ ಹೆಗ್ಗಳಿಗೆ ಈ ಸಿನಿಮಾಗಿದೆ. ಈ ಕುರಿತು ರಿಷಬ್‌ ಶೆಟ್ಟಿಮಾತುಗಳು.


ರಾಜೇಶ್‌ ಶೆಟ್ಟಿ

- ಸಿನಿಮಾ ಶೂಟಿಂಗ್‌ ಪರ್ಮಿಷನ್‌ ಸಿಕ್ಕಾಗ ಹರಿಕತೆ ಗಿರಿಕತೆ, ಲಾಫಿಂಗ್‌ ಬುದ್ಧ ಸಿನಿಮಾ ಮಾಡೋಣ ಅಂತ ಸಿದ್ಧವಾಗಿ ಪೂಜೆ ಮಾಡಿದೆವು. ಆದರೆ ಅದರ ಮರುದಿನವೇ ಕೊರೋನಾ ಕೇಸ್‌ಗಳು ಜಾಸ್ತಿಯಾಗಿ ನಿಯಮಾವಳಿಗಳು ಜಾರಿಯಾಯಿತು. ಆ ನಿಯಮಗಳಿಂದ ಸಿಟಿಯಲ್ಲಿ ಶೂಟಿಂಗ್‌ ಮಾಡಲು ಸಾಧ್ಯವಿರಲಿಲ್ಲ. ಆಗ ಹೊಸತಾಗಿ ಏನಾದರೂ ಮಾಡೋಣ, ನಾನಿದ್ದೇನೆ, ಪ್ರಮೋದ್‌ ಶೆಟ್ರು ಇದ್ದಾರೆ. ಇನ್ನೊಬ್ಬರು ಕಲಾವಿದೆಯನ್ನು ಹಾಕಿಕೊಂಡು ಆಫೀಸಲ್ಲೇ ಶೂಟ್‌ ಮಾಡಿಕೊಂಡು ಒಂದು ಸಿನಿಮಾ ಮಾಡೋಣ ಎಂದು ಪ್ಲಾನ್‌ ಮಾಡಿ ಎಲ್ಲರ ಬಳಿ ಐಡಿಯಾ ಕೇಳಿದೆ. ಆಗ ಭರತ್‌ರಾಜ್‌ ‘ಹೀರೋ’ ಸಿನಿಮಾ ಐಡಿಯಾ ಕೊಟ್ಟರು. ಐಡಿಯಾ ಚೆನ್ನಾಗಿದೆಯಲ್ಲ ಅನ್ನಿಸಿತು. ಒಂದೇ ರಾತ್ರಿಯಲ್ಲಿ ಕತೆ ಮಾಡಿದೆವು. ಇನ್ನೊಂದು ರಾತ್ರಿ ಕೂತು ಚಿತ್ರಕತೆ ರೆಡಿ ಆಯಿತು. ಮತ್ತೈದು ದಿನ ತೆಗೆದುಕೊಂಡು ಸಂಭಾಷಣೆ ಬರೆದೆವು. ಒಂದು ವಾರದಲ್ಲಿ ಸ್ಕಿ್ರಪ್ಟ್‌ ರೆಡಿ.

Latest Videos

undefined

"

ಲಾಕ್‌ಡೌನ್‌ನಲ್ಲಿ ಹೀರೋ ಆದ ರಿಷಬ್‌ ಶೆಟ್ಟಿ ಶುಕ್ರವಾರ ಬರ್ತಿದ್ದಾರೆ; ಏನಿದೆ ವಿಶೇಷತೆಗಳು! 

- ಮತ್ತೊಂದು ವಾರ ತೆಗೆದುಕೊಂಡು ಶೂಟಿಂಗ್‌ಗೆ ಹೊರಟೆವು. ಏಳು ದಿನ ಪ್ರೀ ಪ್ರೊಡಕ್ಷನ್‌. ಆಮೇಲೆ ಶೂಟಿಂಗು. 10 ದಿನ ಶೂಟಿಂಗು ಅಂತ ಹೋಗಿದ್ದು. ಆಮೇಲೆ ಬದಲಾವಣೆ ಮಾಡಿಕೊಳ್ಳುತ್ತಾ ಅದು 43 ದಿನ ಶೂಟಿಂಗ್‌ ಆಗುವವರೆಗೆ ಹೋಯಿತು. ನಾವು ಹೋಗಿದ್ದೇ 24 ಜನ. ಕಲಾವಿದರೇ ತಂತ್ರಜ್ಞರು. ತಂತ್ರಜ್ಞರೇ ಕೆಲಸಗಾರರು. ಹೀಗೆ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಹಾಸ್ಟೆಲಲ್ಲಿ ಇದ್ದಂತೆ. ಕಾಲೇಜಲ್ಲಿ ನಾಟಕ ಮಾಡುತ್ತೇವಲ್ಲ, ಆ ಥರ ಇದ್ದಂತೆ.

- ಹಾಸನದ ಬೇಲೂರು ಬಳಿ 200 ಎಕರೆ ಎಸ್ಟೇಟ್‌ ಅದು. ಭರತ್‌ರಾಜ್‌ ಎಲ್ಲರನ್ನೂ ಸಿದ್ಧ ಮಾಡಿದರು. ನಾನು ಕೆಲವು ಫೈಟ್‌ ಕೊರಿಯೋಗ್ರಫಿ ಮಾಡಿದೆ. ರಿಸ್ಕೀ ಸ್ಟಂಟ್‌ಗಳನ್ನು ವಿಕ್ರಮ್‌ ಮಾಡಿದರು. ಒಬ್ಬನನ್ನು ಬಿಟ್ಟು ಉಳಿದವರು ಯಾರೂ ಹೊರಗೆ ಹೋಗುವಂತಿರಲಿಲ್ಲ. ಒಬ್ಬ ಎಸ್ಟೇಟಿನಿಂದ ಹೊರಗೆ ಹೋಗಿ ಬೇಕಾಗಿದ್ದ ಸಾಮಾಗ್ರಿ ತರುತ್ತಿದ್ದ. ಅದನ್ನು ಸ್ಯಾನಿಟೈಸ್‌ ಮಾಡಿ ಒಳಗೆ ತರುತ್ತಿದ್ದೆವು. ಮೂರು ಹೊತ್ತು ಕಷಾಯ ಕುಡಿಯುತ್ತಿದ್ದೆವು. ನಾವೇ ಅಡುಗೆ ಮಾಡೋದು. ನಾವೇ ನಟಿಸೋದು. ನಾವೇ ಕೆಲಸ ಮಾಡೋದು. ಹಾಗಾಗಿ ನೂರು ಜನ ಮಾಡುವ ಕೆಲಸವನ್ನು 24 ಜನ ಮಾಡಿದೆವು.

- ವಿಶುವಲೀ ರಿಚ್‌ ಆಗಿ ಬರಬೇಕಾಗಿತ್ತು. ಮಂಜು ಬೇಕಾಗಿತ್ತು. ಕೆಲವೊಮ್ಮೆ ನಿಜವಾದ ಮಂಜು ಇರುತ್ತಿತ್ತು. ಇಲ್ಲದಿದ್ದಾಗ ಕೆಜಿಗಟ್ಟಲೆ, ಚೀಲಗಟ್ಟಲೆ ಸಾಮ್ರಾಣಿ ಖಾಲಿ ಮಾಡಿದ್ದೇವೆ. ಬಾಣಲೆಯಲ್ಲಿ ಸಾಮ್ರಾಣಿ ಹಾಕಿ ಉರಿಸಿ ಮಂಜು ಮುಸುಕಿದಂತೆ ಮಾಡುತ್ತಿದ್ದೆವು. ಒಂದು ಸೀನಲ್ಲಿ ಚಲಿಸುವ ಟ್ರ್ಯಾಕ್ಟರ್‌ ಶೂಟ್‌ ಮಾಡಬೇಕಿತ್ತು. ಬೆಟ್ಟದಿಂದ ಟ್ರ್ಯಾಕ್ಟರ್‌ ಕೆಳಗಿಳಿಯುತ್ತಿದೆ. ಬೆಟ್ಟದ ಮೇಲೆ ಇಬ್ಬರೂ ಸಾಮ್ರಾಣಿ ಉರಿಸಿದ ಬಾಣಲೆ ಹಿಡಿದುಕೊಂಡು ಓಡಬೇಕು. ಕೆಳಗೆ ಇಬ್ಬರೂ ಓಡಬೇಕು. ಮತ್ತೊಬ್ಬ ಟ್ರ್ಯಾಕ್ಟರ್‌ ಮುಂದೆ. ಹೀಗೆ ಓಡುತ್ತಾ ಬಿದ್ದು ಎದ್ದು ಹಾಗೇ ಶೂಟಿಂಗ್‌ ಮುಂದುವರಿಸಿದ್ದೇವೆ.

ಗಂಡಾಂತರದಿಂದ ಪಾರಾದ ರಿಷಬ್ ಶೆಟ್ಟಿ; ಪೆಟ್ರೋಲ್ ಬಾಂಬ್ ಸಿಡಿಸೋ ವೇಳೆ ರಿಷಬ್‌ಗೆ ಹೊತ್ತಿಕೊಳ್ತು ಬೆಂಕಿ! 

- ನಾವು ಸಾಮಾನ್ಯವಾಗಿ ಸ್ಕಿ್ರಪ್ಟ್‌ಗೆ ಆರು ತಿಂಗಳು, ಪ್ರಿ-ಪ್ರೊಡಕ್ಷನ್‌ 3 ತಿಂಗಳು, ಪ್ರೊಡಕ್ಷನ್‌ 4 ತಿಂಗಳು, ಪೋಸ್ಟ್‌ ಪ್ರೊಡಕ್ಷನ್‌ 4 ತಿಂಗಳು, ಪಬ್ಲಿಸಿಟಿಗಾಗಿ 2 ತಿಂಗಳು.. ಹೀಗೆ ಒಂದು ಸಿನಿಮಾಗೆ ಒಂದರಿಂದ ಒಂದೂವರೆ ವರ್ಷ ತೆಗೆದುಕೊಳ್ಳುತ್ತಿದ್ದೆವು ಇಷ್ಟುದಿನ. ಆದರೆ ಈ ಸಲ ಬಹಳ ವೇಗವಾಗಿ ಮುಗಿಯಿತು. ಈ 24 ಜನ ಇಲ್ಲದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಹಾಗಾಗಿ ಈ ಚಿತ್ರದ ಹೀರೋ ಯಾರು ಎಂದರೆ ಆ 24 ಜನ ಮತ್ತು 24 ಜನರ ಮನೆಯವರು.

- ಮಜಾ ಮಾಡಿಕೊಂಡು ಶೂಟಿಂಗ್‌ ಮಾಡಿದ್ದೇವೆ. ಹಾಗಾಗಿ ನೋಡುವವರಿಗೂ ಮಜಾ ಬರುತ್ತದೆ ಎಂದುಕೊಂಡಿದ್ದೇವೆ. ಈ ಸಿನಿಮಾದಲ್ಲಿ ಸಂದೇಶ ಏನೂ ಇಲ್ಲ. ಒಂದೇ ದಿನದಲ್ಲಿ ಶುರುವಾಗಿ ಒಂದೇ ದಿನ ಮುಗಿಯುವ ಕತೆ. ಡಿಫರೆಂಟ್‌ ಸ್ಕ್ರೀನ್‌ಪ್ಲೇ ಇದೆ. ಒಳ್ಳೆಯ ಸಿನಿಮ್ಯಾಟಿಕ್‌ ಎಕ್ಸ್‌ಪೀರಿಯನ್ಸ್‌ ಕೊಡುವ ಯತ್ನ ಮಾಡಿದ್ದೇವೆ. ಚೂರು ಹಿಂಸೆ ಇದೆ. ಸಂದೇಶ ಇಲ್ಲ. ಪೂರ್ತಿ ಮಜಾ ಕೊಡುವ ಸಿನಿಮಾ.

- ಹುಡುಗನೊಬ್ಬ ತನ್ನ ಹಳೆಯ ಪ್ರೇಮಿಯ ರೌಡಿ ಗಂಡನಿಗೆ ಶೇವ್‌ ಮಾಡಲು ಹೋಗುತ್ತಾನೆ. ಅಲ್ಲಿಂದ ಕತೆ ಶುರುವಾಗುತ್ತದೆ. ಅವನದು ಪಕ್ಕದ್ಮನೆ ಹುಡುಗನ ಪಾತ್ರ. ತುಂಬಾ ಸಾಮಾನ್ಯ ಮನುಷ್ಯ. ಪ್ರೀತಿ ಸೋತಿದ್ದಾನೆ, ದೇವದಾಸ ಆಗಿದ್ದಾನೆ. ಅವನಿಗೆ ಪ್ಲಾನ್‌ ಇರಲ್ಲ. ಗಾಳಿ ಬಂದಹಾಗೆ ಹೋಗುತ್ತಾ ಇರುತ್ತಾನೆ. ಮಜಾ ಕೊಡುತ್ತಾನೆ. ಶೂಟಿಂಗ್‌ ಮುಗಿಸಿಕೊಂಡು ಬಂದ ಮೇಲೆ ರಕ್ಷಿತ್‌ ಶೆಟ್ಟಿಮತ್ತೊಂದಷ್ಟುಮಂದಿ ಸಿನಿಮಾ ದೃಶ್ಯಗಳನ್ನು ನೋಡಿ ಥಿಯೇಟರ್‌ನಲ್ಲಿ ರಿಲೀಸ್‌ ಮಾಡಿ ಎಂದರು. ನಮಗೂ ಧೈರ್ಯ ಬಂತು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ತುಂಬಾ ಇತ್ತು. ಅದನ್ನು ಮುಗಿಸಿ ಈಗ ಬಂದಿದ್ದೇವೆ.

ರಿಷಬ್ ಶೆಟ್ಟಿ ‘ಹೀರೋ’ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಖಡಕ್ ವಿಲನ್! 

- 2 ಗಂಟೆ 5 ನಿಮಿಷ ಸಿನಿಮಾ ನಮ್ಮದು. ಹಿಂದಿ ಡಬ್ಬಿಂಗ್‌ ಹಕ್ಕು, ಸ್ಯಾಟಲೈಟ್‌ ಹಕ್ಕು ಮಾರಾಟವಾಗಿದೆ. ಝೀ ಕನ್ನಡದವರು ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು ತೆಗೆದುಕೊಂಡಿದ್ದಾರೆ. ಮಾಡಿದ ಖರ್ಚು ವಾಪಸ್‌ ಬಂದಿದೆ. ಇನ್ನೇನಿದ್ದರೂ ನಮ್ಮ ಸಿನಿಮಾ ಜನರಿಗೆ ತಲುಪಿಸುವುದಷ್ಟೇ ಕೆಲಸ. ತುಂಬಾ ಪ್ರಸಿದ್ಧ ವಿಎಫ್‌ಎಕ್ಸ್‌ ತಂಡ, ಸೌಂಡ್‌ ಡಿಸೈನ್‌ ತಂಡ ನಮ್ಮ ಸಿನಿಮಾಗೆ ಕೆಲಸ ಮಾಡಿದೆ. ಕಲರ್‌ ಕರೆಕ್ಷನ್‌ ಕೂಡ ಚೆಂದ ಆಗಿದೆ. ಸಿನಿಮಾ ವ್ಯಾಮೋಹಿಗಳು ಈ ಸಿನಿಮಾ ಖಂಡಿತಾ ಇಷ್ಟಪಡುತ್ತಾರೆ.

"

ನಾನೂ ರಾಬರ್ಟ್‌ಗೆ ಕಾಯುತ್ತಿದ್ದೇನೆ.

ಮುಂದಿನವಾರ ದರ್ಶನ್‌ ಅವರ ರಾಬರ್ಟ್‌ ಸಿನಿಮಾ ಬರುತ್ತಿದೆ. ಅದರ ಅರಿವಿದ್ದೇ ನಾವು ಸಿನಿಮಾ ರಿಲೀಸ್‌ ಮಾಡುತ್ತಿದ್ದೇವೆ. ಸದ್ಯ 165 ಥಿಯೇಟರ್‌ಗಳಲ್ಲಿ ಹೀರೋ ಬರುತ್ತಿದೆ. ಮುಂದಿನ ವಾರ ಮುಂದಿನ ವಾರ ಕೆಲವು ಥಿಯೇಟರ್‌ಗಳು ಹೋಗುತ್ತದೆ. ಅದು ನಮಗೆ ಗೊತ್ತಿದೆ. ನಾವು ಗುಂಗಲ್ಲಿ ಬದುಕೋಕಾಗಲ್ಲ. ದರ್ಶನ್‌ ಸ್ಟಾರ್‌ ನಟರು. ಅವರದು ದೊಡ್ಡ ಸಿನಿಮಾ. ಆ ಸಿನಿಮಾ ಬರುತ್ತಿದೆ ಎಂದಾಗ ಅವರ ದುಡ್ಡು ರಿಕವರಿ ಆಗಬೇಕೆಂದರೆ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗಲೇಬೇಕು. ಹಾಗಾಗಿ ನಮ್ಮಿಂದ ಥಿಯೇಟರ್‌ ಹೋಯ್ತು ಅಂತ ಕಣ್ಣೀರ್‌ ಹಾಕೋ ಸೀನೆಲ್ಲಾ ಇಲ್ಲ. ಒಂದು ವಾರ ಟೈಮಿದೆ ನಮಗೆ. ಸಿನಿಮಾ ಜನರಿಗೆ ಇಷ್ಟವಾಯಿತು ಎಂದರೆ ಮುಂದೆ ಸಾಗಬಹುದು. ಮುಂದಿನವಾರ ಶೇ.50 ಥಿಯೇಟರ್‌ ಕಡಿಮೆಯಾದರೂ ತಲೆ ಕೆಡಿಸಿಕೊಳ್ಳಲ್ಲ. ಮಧ್ಯಾಹ್ನದ ಹೊತ್ತಿಗೆ ಸಿನಿಮಾದ ಹಣೆಬರಹ ಗೊತ್ತಾಗುವ ಕಾಲ ಇದು, ಅಂಥದ್ದರಲ್ಲಿ ಒಂದು ವಾರ ಇದೆ ನಮಗೆ. ಸಾಕು.

ಯಪ್ಪಾ!! ರಿಷಬ್ ಶೆಟ್ಟಿ 'ಹೀರೋ' ಟ್ರೇಲರ್ ನೋಡಿದ್ರಾ? 

ಬಜೆಟ್‌ಗೆ ತಕ್ಕ ಹಾಗೆ ರಿಲೀಸ್‌ ಮಾಡಬೇಕೇ ಹೊರತು ಓವರ್‌ ಕಾನ್ಫಿಡೆನ್ಸ್‌ ಇರಬಾರದು. ನಮಗೆ ನಮ್ಮ ಮಿತಿ ಗೊತ್ತಿದೆ.

ರಾಬರ್ಟ್‌ನಂತಹ ಗಜಪಡೆ ಮುಂದೆ ಬದುಕಿ ಉಳಿದರೆ ಸೈಡಲ್ಲಿ ಮುಂದೆ ಹೋಗ್ತಾ ಇರುತ್ತೇವೆ. ಅವರದು ಹೈವೇ. ನಮ್ಮದು ಸವೀರ್‍ಸ್‌ ರೋಡ್‌. ರಾಬರ್ಟ್‌ ಹಿಟ್‌ ಆದಷ್ಟೂನಮಗೆ ಒಳ್ಳೆಯದು. ಅವರಿಂದ ನಮಗೂ ಜನ ಬರಬಹುದು.

ಒಂದೇ ಸಲ ನಮ್ಮ ಸಿನಿಮಾಗೆ ಜನ ಬರುತ್ತಾರೆ ಅಂತೇನೂ ಇಲ್ಲ. ಸಿನಿಮಾ ಚೆನ್ನಾಗಿ ಮಾಡಿದ್ದೇವೆ ಎಂಬ ನಂಬಕೆ ನಮಗಿದೆ. 40 ಲಕ್ಷ ಟ್ರೇಲರ್‌, 14 ಲಕ್ಷ ಹಾಡು ನೋಡಿದ್ದಾರೆ. ಅಷ್ಟುಮಂದಿ ಕುತೂಹಲದಿಂದ ಬಂದರೆ ಸಾಕು. ನಮ್ಮ ಸಿನಿಮಾ ಚೆನ್ನಾಗಿದ್ದರೆ ಮುಂದೆ ಹೋಗಿಯೇ ಹೋಗುತ್ತೇವೆ.

ಜೂನ್‌ನಲ್ಲಿ ಗರುಡಗಮನ ವೃಷಭವಾಹನ, ಅಕ್ಟೋಬರ್‌ನಲ್ಲಿ ಹರಿಕತೆ ಅಲ್ಲ ಗಿರಿಕತೆ ರಿಲೀಸಾಗಬಹುದು. ಡಿಸೆಂಬರ್‌ನಲ್ಲಿ ಪ್ರಮೋದ್‌ ಶೆಟ್ರು ಮುಖ್ಯ ಪಾತ್ರದಲ್ಲಿರುವ, ನನ್ನ ನಿರ್ಮಾಣದ ಲಾಫಿಂಗ್‌ ಬುದ್ಧ ಬಿಡುಗಡೆ ಆಗುತ್ತದೆ.

click me!