ಕಿರುತೆರೆ ಟು ಸಿನಿಮಾ. ಮತ್ತೆ ಸಿನಿಮಾ ಟು ಕಿರುತೆರೆ. ಹೀಗೆ ಸೈಕಲ್ ಹೊಡೆದ ನಟ ಪ್ರಮೋದ್. ಶ್ರುತಿ ನಾಯ್ಡು ನಿರ್ಮಾಣ, ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಬಂದಾಗ ಇವರ ಪ್ರತಿಭೆ ಸಿನಿಮಾ ಜಗತ್ತಿಗೆ ಗೊತ್ತಾಯಿತು. ಸದ್ಯ ಬೇಡಿಕೆಯಲ್ಲಿರುವ ಪ್ರಮೋದ್ ಅವರ ಮುಂದೆ ಎಷ್ಟುಚಿತ್ರಗಳಿವೆ, ಮುಂದಿನ ಪಯಣ, ಹಿಂದಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಆರ್ ಕೇಶವಮೂರ್ತಿ
ಪ್ರೀಮಿಯರ್ ಪದ್ಮಿನಿ ಚಿತ್ರದ ನಂತರ ನಿಮ್ಮಲ್ಲಿ ಏನೆಲ್ಲ ಬದಲಾವಣೆಗಳಾಗಿವೆ?
undefined
ವೈಯಕ್ತಿಕವಾಗಿ ನಾನು ಅದೇ ಪ್ರಮೋದ್. ಮಂಡ್ಯ ಜಿಲ್ಲೆಯ ಮದ್ದೂರಿನ ಎಳೆನೀರುಮಂಡಿ ಗ್ರಾಮದ ಹುಡುಗ ಅಷ್ಟೆ. ಆದರೆ, ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟುಬದಲಾವಣೆಗಳನ್ನು ಕಂಡಿದ್ದೇನೆ. ಈಗ ಚಿತ್ರಕತೆ ಮಾಡುವಾಗ, ನಟರ ಹೆಸರು ಬಂದಾಗ ನನ್ನ ಹೆಸರು ಹೇಳುತ್ತಿದ್ದಾರೆ. ನನ್ನ ಹೀರೋ ಅಂತ ಗುರುತಿಸಿದ್ದಾರೆ. ಆಗ ಅವಕಾಶಗಳಿಗಾಗಿ ಅಲೆದಾಡುತ್ತಿದ್ದ ನಾನು ಈಗ ಸಿಕ್ಕ ಅವಕಾಶಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಚಿತ್ರಗಳಿಗೆ ಜೀವ ತುಂಬುವ ಜವಾಬ್ದಾರಿ ನನ್ನ ಮೇಲಿದೆ.
ನೋಡಲು ನಟ ದರ್ಶನ್ ತರ: ನಿರ್ದೇಶಕನಾಗೋ ಕನಸು ಹೊತ್ತ ಪ್ರಮೋದ್!
ನಿಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರೆ?
ನನ್ನ ಮೊದಲ ಚಿತ್ರವೇ ನಿಂತು ಹೋಗಿದೆ. ಸಂಜೀವ್ ಖಾಸನೀಸ್ ಎಳೆಂಟು ಚಿತ್ರಗಳನ್ನು ಒಟ್ಟಿಗೆ ಘೋಷಣೆ ಮಾಡಿದ್ರರಲ್ಲ ಅದರಲ್ಲಿ ನನ್ನ ನಟನೆಯ ‘ಪ್ರೀತಿ ಪ್ರಾಪ್ತಿರಸ್ತು’ ಸಿನಿಮಾ ಕೂಡ ಒಂದು. ಶೇ.60 ಭಾಗ ಚಿತ್ರೀಕರಣ ಆಗಿತ್ತು. ಆದರೆ, ನಿರ್ಮಾಪಕರ ಸಮಸ್ಯೆ ಕಾರಣಕ್ಕೆ ಸಿನಿಮಾ ಟೇಕಾಫ್ ಆಗಲಿಲ್ಲ. ಎರಡ್ಮೂರು ವರ್ಷ ಶ್ರಮ ಹಾಕಿ ಮಾಡಿದ ಸಿನಿಮಾ ‘ಗೀತಾ ಬ್ಯಾಂಗಲ್‌ಸ್ಟೋರ್’. ಈ ಚಿತ್ರ ನೋಡಿ ಮೆಚ್ಚಿಕೊಂಡರು. ಆದರೆ, ಯಾರೂ ಅವಕಾಶ ಕೊಡಲಿಲ್ಲ. ನನ್ನ ನಟನೆ ಮೆಚ್ಚಿಕೊಂಡವರು ಅವಕಾಶ ಯಾಕೆ ಕೊಡುತ್ತಿಲ್ಲ ಎನ್ನುವ ಚಿಂತೆ ಆಯ್ತು. ಆದರೆ, ತಾಳ್ಮೆಯಿಂದ ಕಾದೆ. ಮತ್ತೆ ಧಾರಾವಾಹಿ ಕಡೆ ಮುಖ ಮಾಡಿದೆ. ಶ್ರುತಿ ನಾಯ್ಡು ನಿರ್ಮಾಣದ ‘ಮಂಜು ಮತ್ತು ನಾನು’ ಧಾರಾವಾಹಿಯಲ್ಲಿ ಎರಡು ಎಪಿಸೋಡ್‌ಗಾಗಿ ಕರೆಸಿದವರು 24 ಎಪಿಸೋಡ್ ಮಾಡಿದ್ರು. ವಿಲನ್ ಆಗಿ ಮಿಂಚಿದ ನನ್ನ ಸಿನಿಮಾ ಕನಸುಗಳು, ಒದ್ದಾಟಗಳನ್ನು ನೋಡಿದ ಶ್ರುತಿ ನಾಯ್ಡು ಅವರೇ ನನಗೆ ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ಪ್ರಮೋದ್, ಹೀರೋ ಆದ್ರು.
ಆ ಕಷ್ಟದ ದಿನಗಳಲ್ಲಿ ನಿಮ್ಮನ್ನು ನಿಲ್ಲಿಸಿದ್ದು ಏನು?
ಸಿನಿಮಾಗಾಗಿ ಮನೆ ಬಿಟ್ಟು ಬಂದು 10 ವರ್ಷ ಮನೆಗೆ ಕಡೆ ತಲೆ ಹಾಕಲಿಲ್ಲ. ಯಾಕೆಂದರೆ ನಾವೇ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ. ಇಲ್ಲಿ ಏನೇ ಸಮಸ್ಯೆ, ಅವಮಾನ, ಸೋಲು, ಕಷ್ಟಗಳು ಬಂದರೂ ನಿಲ್ಲಬೇಕು. ಪ್ರತಿಭೆ ಇದ್ದವರಿಗೆ ತಡವಾದರೂ ಇಲ್ಲೊಂದು ಜಾಗ ಸಿಗುತ್ತದೆಂಬ ನಂಬಿಕೆ ನಾನು ಇಲ್ಲಿ ನಿಲ್ಲುವಂತೆ ಮಾಡಿತು.
ಪ್ರತಿಭೆ ಇದ್ದರೆ ಸಾಕಾ? ಶಿಫಾರಸ್ಸು, ಗಾಡ್‌ಫಾದರ್ ಇರಬೇಕಾ?
ಖಂಡಿತ ಯಾರಾದರೂ ಒಬ್ಬರ ಸಪೋರ್ಟ್ ಇರಲೇಬೇಕು. ನೀವು ಅದನ್ನು ಶಿಫಾರಸ್ಸು ಅಥವಾ ಗಾಡ್‌ಫಾದರ್ ಏನು ಬೇಕಾದರೂ ಅಂದುಕೊಳ್ಳಿ. ಆದರೆ, ನಮಗೆ ಆರಂಭದಲ್ಲಿ ವೇದಿಕೆ ಅಥವಾ ದಾರಿ ತೋರಿಸುವುದಕ್ಕಾದರೂ ಒಬ್ಬರ ನೆರವು ಅಗತ್ಯ ಎಂಬುದನ್ನು ಈಗಾಗಲೇ ಗೆದ್ದಿರುವ ಕಲಾವಿದರನ್ನು ನೋಡಿದರೇ ಗೊತ್ತಾಗಲಿದೆ. ನನಗೂ ಹಾಗೆ ಸಪೋರ್ಟ್ ಸಿಕ್ಕಿದ್ದರಿಂದಲೇ ಇಲ್ಲಿ ಗುರುತಿಸಿಕೊಂಡೆ. ಮುಂದೆ ಪ್ರತಿಭೆಯಿಂದ ಭವಿಷ್ಯ ರೂಪಿಸಿಕೊಳ್ಳಬೇಕಿದೆ.
'ಪ್ರೀಮಿಯರ್ ಪದ್ಮಿನಿ' ಪ್ರಮೋದ್ ಈಗ 'ಇಂಗ್ಲಿಷ್ ಮಂಜ'!ಧಾರಾವಾಹಿಗಳಲ್ಲಿ ನೀವು ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲವಲ್ಲ?
ನಾನು ಹೀರೋ ಆಗುವುದಾದರೆ ಸಿನಿಮಾಗಳಲ್ಲೇ ಆಗಬೇಕೆಂದು ನಿರ್ಧರಿಸಿದ್ದೆ. ಹೀಗಾಗಿ ಧಾರಾವಾಹಿಗಳಲ್ಲಿ ಕ್ಯಾರೆಕ್ಟರ್ ರೋಲ್‌ಗಳಿಗೆ ಸೀಮಿತವಾದೆ. ಕೊನೆಗೆ ನನ್ನ ಈ ಆಸೆ ಪೂರೈಸಿಕೊಂಡೆ. ‘ಗೀತಾ ಬ್ಯಾಂಗಲ್ ಸ್ಟೋರ್’, ‘ಪ್ರೀಮಿಯರ್ ಪದ್ಮಿನಿ’, ‘ಮತ್ತೆ ಉದ್ಭವ’ ಈ ಮೂರು ಚಿತ್ರಗಳಲ್ಲಿ ಹೀರೋ ಆದ ಖುಷಿ. ಮುಂದೆ ಕೂಡ ಒಳ್ಳೆಯ ಚಿತ್ರಗಳು ಬರುತ್ತಿವೆ.
ಈಗ ಯಾವೆಲ್ಲ ಚಿತ್ರಗಳು ನಿಮ್ಮ ಮುಂದಿವೆ?
‘ಇಂಗ್ಲಿಷ್ ಮಂಜ’, ‘100 ಮಂಕೀಸ್’ ಚಿತ್ರಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಶೂಟಿಂಗ್ ಹೋಗುತ್ತಿವೆ. ಗೀತ ರಚನೆಕಾರ ಸಂತೋಷ್ ನಾಯ್‌್ಕ ನಿರ್ದೇಶನ ಚಿತ್ರವೊಂದನ್ನು ಒಪ್ಪಿಕೊಂಡಿದ್ದೇನೆ. ಮುಂದಿನ ವರ್ಷ ಮತ್ತೆ ಶ್ರುತಿ ನಾಯ್ಡು ಅವರ ನಿರ್ಮಾಣದಲ್ಲೇ ಮತ್ತೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಇದರ ಜತೆಗೆ ಇನ್ನೆರಡು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ.
ಯಾವ ರೀತಿಯ ಪಾತ್ರಗಳು ನಿಮಗೆ ಬರುತ್ತಿವೆ?
ಆರ್ಯ ಮಹೇಶ್ ನಿರ್ದೇಶನದ ‘ಇಂಗ್ಲಿಷ್ ಮಂಜ’ ಚಿತ್ರದ್ದು ರೌಡಿಸಂ ಕತೆ. ಇಲ್ಲಿ ಪಕ್ಕಾ ಮಾಸ್ ರೋಲ್. ‘100 ಮಂಕೀಸ್’ ಚಿತ್ರ ಯೋಗರಾಜ್ ಭಟ್ ಅವರ ತಂಡದಿಂದ ಬಂದಿದ್ದು. ಇದು ಒಂದು ಟ್ರಾವಲ್ ಕತೆ. ಈ ಸಿನಿಮಾ ತಡವಾಗುತ್ತದೆ ಎಂದು ಗೊತ್ತಾಗಿ ನಾನೇ ನಿರ್ಮಾಪಕರನ್ನು ಕೊಡಿಸಿ, ಎರಡ್ಮೂರು ದಿನಗಳಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವಷ್ಟುಉತ್ಸಾಹ ತುಂಬುವ ಕತೆ ಇದು. ಯಶಸ್ವಿ ಬಾಲಾದಿತ್ಯಾ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ನಾಯ್‌್ಕ ಮಾಡಲಿರುವ ಚಿತ್ರ ಬೇರೊಂದು ರೀತಿಯ ಪಾತ್ರ.
ಕೊರೋನಾ ಬಿಡುವಿನ ದಿನಗಳನ್ನು ನೀವು ಹೇಗೆ ಕಳೆದ್ರಿ?
ನನ್ನ ಹುಟ್ಟೂರಿನಲ್ಲಿ. ಹೀರೋ ಆಗಿ ಗುರುತಿಸಿಕೊಂಡ ಮೇಲೆ ಫ್ಯಾಮಿಲಿ ವಲಯದಲ್ಲೂ ನಾನು ಸ್ಟಾರ್ ಆದೆ. ಆ ಖುಷಿ ಕ್ಷಣಗಳನ್ನು ಅನುಭವಿಸಿದೆ. ಜತೆಗೆ ನಾನೇ ಒಂದು ಕತೆ ಬರೆದುಕೊಂಡಿದ್ದೇನೆ. ತುಂಬಾ ಯೂನಿಕ್ ಕತೆ. ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕತೆ. ಈ ಕತೆಯನ್ನು ನಾನೇ ನಿರ್ದೇಶನ ಮಾಡುತ್ತೇನೆ. ಮುಂದಿನ ವರ್ಷ ಕೊನೆಯಲ್ಲಿ ನನ್ನ ನಟನೆ ಮತ್ತು ನಿರ್ದೇಶನದ ಈ ಸಿನಿಮಾ ಸೆಟ್ಟೇರಲಿದೆ. ನನ್ನ ಸ್ನೇಹಿತರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊರೋನಾ ಹೊತ್ತಿನಲ್ಲಿ ಹುಟ್ಟೂರಿನಲ್ಲಿ ಹುಟ್ಟಿಕೊಂಡ ಕತೆ ಇದು.