Kantara ನೋ ಕಾಮೆಂಟ್ಸ್‌ ಅಂದರೆ.....ನೋ ಕಾಮೆಂಟ್ಸ್‌; ವಿವಾದದ ಬಗ್ಗೆ ರಿಷಬ್ ಶೆಟ್ಟಿ ಮಾತು

By Kannadaprabha NewsFirst Published Oct 21, 2022, 9:08 AM IST
Highlights

'ದೈವಾರಾಧನೆ ಹಿಂದು ಸಂಸ್ಕೃತಿಯದ್ದೋ ಅಲ್ಲವೋ ಅನ್ನುವುದನ್ನು ಚರ್ಚಿಸುವುದು ತಪ್ಪಲ್ಲ. ಅದನ್ನು ಈ ಸಿನಿಮಾಕ್ಕೆ ತಳಕು ಹಾಕಿರುವುದು ಸರಿಯೂ ಅಲ್ಲ.'

ನೋ ಕಾಮೆಂಟ್ಸ್‌ ಅಂದರೆ.....

ನೋ ಕಾಮೆಂಟ್ಸ್‌!

ಹಾಗಂತ ಹೇಳಿ ರಿಷಬ್‌ ಸುಮ್ಮನಾದರು. ಅವರು ಉತ್ತರಿಸಿದ್ದು ಕಾಂತಾರ ಚಿತ್ರದ ಕುರಿತು ಬಂದ ಪ್ರತಿಕ್ರಿಯೆಗೆ. ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂದು ಚೇತನ್‌ ಅಹಿಂಸಾ ಪತ್ರಿಕಾ ಗೋಷ್ಠಿ ಕರೆದು ಹೇಳಿದ್ದರು. ಭೂತಾರಾಧನೆ ಹಿಂದೂ ಸಂಸ್ಕೃತಿ ಎನ್ನುವುದನ್ನು ಸಾರಿ ಹೇಳುವುದಕ್ಕೆ ಕಾಂತಾರ ಚಿತ್ರವನ್ನು ನಿರ್ಮಾಣ ಮಾಡಿದ್ದಾರಾ ಎಂದು ಯಾರೂ ಕೇಳಲಿಲ್ಲ. ಅದೆಲ್ಲ ಚೇತನ್‌ ಅವರಿಗೆ ಅನ್ನಿಸಿದ್ದು. ಅನ್ನಿಸಿದ್ದನ್ನು ಅವರು ಹೇಳಿದ್ದು.

ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತನಾಡಬಾರದು , ನಟ ಚೇತನ್‌ಗೆ ಸಚಿವ ಸುನೀಲ್ ಕುಮಾರ್ ಟಾಂಗ್

ಅವರ ಮಾತು ಅವರದು. ನಾನು ಅದಕ್ಕೆ ಉತ್ತರ ಕೊಡುವುದಿಲ್ಲ. ಕೊಡಬೇಕಾಗಿಯೂ ಇಲ್ಲ ಎಂದರು ರಿಷಬ್‌. ಅವರ ನಿಲುವು ಸರಿಯಾಗಿದೆ ಎಂದು ಹೇಳಬಹುದು. ಯಾಕೆಂದರೆ ಇದಕ್ಕೂ ಮುಂಚೆ ಹದಿಮೂರು ಸಿನಿಮಾಗಳಲ್ಲಿ ಭೂತಾರಾಧನೆ, ದೈವಗಳು, ಭೂತಕೋಲ ಬಂದಿವೆ. ಮದಿಪು ಎಂಬ ಚಿತ್ರದಲ್ಲಿ ಭೂತಕೋಲ ಕಟ್ಟುವ ಪಾತ್ರಧಾರಿ ಹಿಂದೂ ಅಲ್ಲ ಅನ್ನುವುದನ್ನೂ ತೋರಿಸಿದ್ದಾರೆ. ಕೋಮು ಸೌಹಾರ್ದ ಬಿಂಬಿಸುವ ಆ ಸಿನಿಮಾ ಬಂದಾಗ ಚೇತನ್‌ ಏನೂ ಹೇಳಿರಲಿಲ್ಲ. ಹಾಗೆಯೇ ಹಿಂದೆ ಬಂದ ಹದಿಮೂರು ಸಿನಿಮಾಗಳ ಕುರಿತೂ ಮಾತಾಡಿರಲಿಲ್ಲ. ಆಗ ಅವರು ಅಮೆರಿಕಾದಲ್ಲಿದ್ದರೋ ಏನೋ? ಅವರದೇನೂ ತಪ್ಪಿಲ್ಲ.

ದೈವಾರಾಧನೆ ಹಿಂದು ಸಂಸ್ಕೃತಿಯದ್ದೋ ಅಲ್ಲವೋ ಅನ್ನುವುದನ್ನು ಚರ್ಚಿಸುವುದು ತಪ್ಪಲ್ಲ. ಅದನ್ನು ಈ ಸಿನಿಮಾಕ್ಕೆ ತಳಕು ಹಾಕಿರುವುದು ಸರಿಯೂ ಅಲ್ಲ. ಕಾಂತಾರವನ್ನು ಒಂದು ದಂತಕತೆ ಎಂದು ಕರೆದಿದ್ದಾರೆ. ಅದರಲ್ಲಿ ಸಾಕಷ್ಟುಫ್ಯಾಂಟಸಿಯಿದೆ. ನಂಬಿದವರು ನಂಬುತ್ತಾರೆ, ನಂಬದವರು ಇಲ್ಲ, ನಂಬಿದವರಿಗೆ ಇಂಬು ಕೊಡುತ್ತದೆ ದೈವ ಎನ್ನುವುದು ದಕ್ಷಿಣ ಕನ್ನಡದಲ್ಲಿ ಪ್ರಚಲಿತವಿರುವ ಮಾತು.

ತೆಲುಗು ಇಂಡಸ್ಟ್ರಿಗೆ ಹೋಗುವ ಪುಕಾರು... ನೋ ವೇ ಚಾನ್ಸೇ ಇಲ್ಲ ಎಂದ ಶೆಟ್ರು

ರಿಷಬ್‌ ತೆಲುಗು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದರು.

ನಿರೂಪಕ- ಭೂತಕೋಲ ಹಿಂದೂ ಧರ್ಮದ ಆಚರಣೆ ಅಲ್ಲ ಅಂದಿದ್ದಾರಲ್ಲ ಚೇತನ್‌?

ರಿಷಭ್‌- ‘ಯಾರವರು, ಅವರು ಚೆನ್ನಾಗಿದ್ದಾರಾ? ಅವರೇನು ಮಾಡುತ್ತಿದ್ದಾರೆ?’

ನಿರೂಪಕ - ಅವರು ಆಕ್ಟರ್‌

ರಿಷಬ್‌- ‘ನೋ ಕಮೆಂಟ್ಸ್‌. ಆದರೆ ಈ ಸಿನಿಮಾ ಮಾಡುವ ಯೋಚನೆ ಬಂದಾಗಲೇ ದೈವಗಳಿಗೆ, ದೈವಾರಾಧಕರ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ಎಚ್ಚರಿಕೆ ಇತ್ತು. ಹೀಗಾಗಿ ದೈವಾರಾಧಕರನ್ನು ಜೊತೆಯಲ್ಲಿ ಇಟ್ಟುಕೊಂಡು ಪ್ರತೀ ದೃಶ್ಯ ತೆಗೆಯುವಾಗಲೂ ಇದು ಸರಿಯೇ ಎಂದು ಅವರನ್ನು ಕೇಳಿ ತಿಳಿದು ಚಿತ್ರೀಕರಣ ಮಾಡಿದ್ದೇನೆ. ಅಲ್ಲದೇ, ಸಂಸ್ಕೃತಿ ಬಗ್ಗೆ ಮಾತಾಡುವಷ್ಟುಅರ್ಹತೆ ನನಗಿಲ್ಲ. ಪ್ರಶ್ನೆ ಕೇಳುವವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಪ್ರಕಾರ ಮಾತಾಡುವ ಅರ್ಹತೆ ಇರುವುದು ಆ ಸಂಸ್ಕೃತಿಯನ್ನು ಪಾಲಿಸುತ್ತಿರುವವರಿಗೆ, ದೈವರಾಧನೆ ಮಾಡುತ್ತಿರುವವರಿಗೆ. ಅವರು ತಲೆಮಾರುಗಳಿಂದ ಈ ಸಂಸ್ಕೃತಿಯನ್ನು ಆಚರಿಸಿಕೊಂಡು ಉಳಿಸಿಕೊಂಡು ಬರುತ್ತಿದ್ದಾರೆ. ಇವತ್ತು ಸುಮ್ಮನೆ ಕೂತು ಮಾತಾಡಿಬಿಡುವುದಿಲ್ಲ. ಭೂತಕೋಲಕ್ಕೆ ಅದರದ್ದೇ ಆದ ಭವ್ಯ ಇತಿಹಾಸವಿದೆ. ಗೊತ್ತಿಲ್ಲದೇ ಅದರ ಬಗ್ಗೆ ಮಾತಾಡುವುದು ತಪ್ಪಾಗುತ್ತದೆ.

ಇದಕ್ಕೆ ಬಹಳ ಸೊಗಸಾಗಿ ಪ್ರತಿಕ್ರಿಯಿಸಿದ್ದು ಉಪೇಂದ್ರ. ಅವರ ಬಳಿ ಈ ಪ್ರಶ್ನೆ ಕೇಳಿದಾಗ ಅವರೆಂದರು: ಇಂಥಾ ವಿಚಾರಗಳು ಮಾತಾಡಿದಷ್ಟುಬೆಳೆಯುತ್ತಾ ಹೋಗುತ್ತವೆ. ನಾವದಕ್ಕೆ ಜಾಸ್ತಿ ಒತ್ತು ಕೊಡಬಾರದು. ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡಬಾರದು. ಭೂತಾರಾಧನೆ ವೈಯುಕ್ತಿಕ ನಂಬಿಕೆ. ಅದನ್ನಿಟ್ಟುಕೊಂಡು ಸಾಮಾಜಿಕವಾಗಿ ಕಿತ್ತಾಡೋದನ್ನೆಲ್ಲ ಮಾಡೋದು ಅಸಹ್ಯವಾಗಿ ಕಾಣುತ್ತದೆ. ಗೌರವ ಕೊಡಬೇಕು. ಈ ಥರದ ವಿಚಾರಗಳಲ್ಲಿ ನಮ್ಮ ಕಡೆ ಬಹಳ ನಂಬಿಕೆ ಇದೆ. ನಮ್ಮ ತಂದೆ ನಾಗನ ಪೂಜೆ ಮಾಡುತ್ತಾರೆ. ನಾವೂ ಕೂಡಾ ಮಾಡುತ್ತೇವೆ. ಅವೆಲ್ಲ ನಂಬಿಕೆ ಇರುವ ಜಾಗಗಳು. ಆ ಬಗ್ಗೆ ಜಾಸ್ತಿ ಮಾತಾಡಬಾರದು.

ಅಷ್ಟಕ್ಕೂ ಕಾಂತಾರ ಒಂದು ಕಥಾ ಚಿತ್ರ. ಅದು ಡಾಕ್ಯುಡ್ರಾಮಾ ಅಲ್ಲ, ಅದೊಂದು ಪಂಜರ್ಲಿಯ ಬಯೋಪಿಕ್‌ ಅಲ್ಲ ಎಂದೆಲ್ಲ ಚೇತನ್‌ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಅಲ್ಲಿಗೆ ಚೇತನ್‌ ಉದ್ದೇಶವೂ ಗೆದ್ದಿತಲ್ಲ. ಅವರೂ ಏಕಾಂತಾರದಿಂದ ಆಚೆ ಬಂದು ಪ್ರಸಿದ್ಧರಾದರು.

ಗೆದ್ದ ಸಿನಿಮಾದ ವಿರುದ್ಧ ಯುದ್ಧ ಮಾಡಿದರೆ ಏನಾಗದಿದ್ದರೂ ಪ್ರಚಾರವಂತೂ ಸಿಗುತ್ತದೆ, ಖರ್ಚಿಲ್ಲದೆ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ.

click me!