Kantara ಸಿನಿಮಾ ಮಾಡಿದ್ದಲ್ಲ, ಆಗಿದ್ದು: ರಿಷಬ್‌ ಶೆಟ್ಟಿ

By Kannadaprabha News  |  First Published Oct 7, 2022, 8:56 AM IST

ಕಾಂತಾರ ಸಿನಿಮಾ ಗೆದ್ದಿದೆ. ವಿಶ್ವದೆಲ್ಲೆಡೆ ಒಳ್ಳೆಯ ಮಾತುಗಳೇ ಕೇಳಿಬರುತ್ತಿವೆ. ಸಿನಿಮಾ ಬಿಡುಗಡೆಯಾದ ಆರಂಭದ ಆರು ದಿನಗಳ ಎಲ್ಲೆಡೆಯೂ ಹೌಸ್‌ಫುಲ್‌ ಪ್ರದರ್ಶನಗಳನ್ನು ಕಂಡಿದೆ. ಬೇರೆ ರಾಜ್ಯ, ಬೇರೆ ದೇಶಗಳಲ್ಲಿ ಜನ ಕಿಮೀಗಟ್ಟಲೆ ಡ್ರೈವ್‌ ಮಾಡಿಕೊಂಡು ಬಂದು ಸಿನಿಮಾ ನೋಡುತ್ತಿದ್ದಾರೆ. ಬೇರೆ ಭಾಷೆಯ ಜನ ಸಬ್‌ಟೈಟಲ್‌ ಮೂಲಕ ಸಿನಿಮಾ ನೋಡಿ ಥ್ರಿಲ್‌ ಆಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರವೊಂದಕ್ಕೆ ದೊರೆತ ಅಪರೂಪದ ಗೆಲುವು ಇದು. ನಿರ್ಮಾಪಕ ವಿಜಯ್‌ ಕಿರಗಂದೂರು ಖುಷಿಯಾಗಿದ್ದಾರೆ. ರಿಷಬ್‌ ಶೆಟ್ಟಿಸಂತೋಷವಾಗಿದ್ದಾರೆ. ಈ ಸಂದರ್ಭದಲ್ಲಿ ರಿಷಬ್‌ ಮಾತುಗಳು.


- ನನ್ನ ಬಳಿ 36 ಕತೆಗಳು ಇದ್ದವು. ಅದರಲ್ಲಿ ಯಾವ ಕತೆ ಮಾಡಬೇಕು ಎಂಬ ಆಲೋಚನೆಯಲ್ಲಿದ್ದೆ. ಒಂದು ದಿನ ಗೆಳೆಯ ದೀಪು ಬಂದು ಅವನ ತಂದೆ ಹಂದಿ ಕೊಲ್ಲುವುದಕ್ಕೆಂದು ಮನೆಯಲ್ಲಿ ಕೋವಿ ತಂದಿಟ್ಟುಕೊಂಡು, ಅದು ಅರಣ್ಯಾಧಿಕಾರಿಗೆ ಗೊತ್ತಾಗಿ ಅವರು ಬಂದು ಅರೆಸ್ಟ್‌ ಮಾಡಿಕೊಂಡು ಹೋದ ಕತೆ ಹೇಳಿದ. ಅದನ್ನು ಬೆಳೆಸುತ್ತಾ ಹೋದೆ. ಆರಂಭದಲ್ಲಿ ದೈವದ ಕತೆ ಇರಲಿಲ್ಲ. ಆಮೇಲಾಮೇಲೆ ಎಲ್ಲವೂ ಸೇರಿಕೊಳ್ಳುತ್ತಾ ಹೋಯಿತು. ಒಂದು ಹಂತದಲ್ಲಿ ಕತೆ ಕೈಮೀರಿ ಹೋಯಿತು. ಕಾಂತಾರ ಸಿನಿಮಾವನ್ನು ನಾನು ಮಾಡಬೇಕು ಅಂದುಕೊಂಡಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಾಂತಾರ ಸಿನಿಮಾ ಮಾಡಿದ್ದಲ್ಲ, ಆಗಿದ್ದು.

- ದೈವದ ಸಿನಿಮಾ ಮಾಡಬೇಕು ಎಂದುಕೊಂಡಾಗ ಮೊದಲು ನಾನು ದೈವನರ್ತಕರಲ್ಲಿ ಕೇಳಿದೆ. ಅವರು ನೀನು ಧರ್ಮಸ್ಥಳ ಸನ್ನಿಧಾನಕ್ಕೆ ಹೋಗು ಎಂದರು. ಅಲ್ಲಿ ಹೋಗಿ ಆಶೀರ್ವಾದ ಪಡೆದೆ. ಪಂಜುರ್ಲಿ ಕೋಲದಲ್ಲಿ ಭಾಗಿಯಾಗಿ ದೈವದ ಮುಂದೆ ಅನುಗ್ರಹ ಬೇಕು ಕೇಳಿಕೊಂಡೆ. ದೈವಿಕ ಗಳಿಗೆಯಲ್ಲಿ ಪಂಜುರ್ಲಿ ದೈವ ತನ್ನ ಮುಖದ ಬಣ್ಣವನ್ನು ನನ್ನ ಮುಖಕ್ಕೆ ಹಚ್ಚಿತ್ತು. ಅದೊಂದು ಅವಿಸ್ಮರಣೀಯವಾದ, ಮಾತಲ್ಲಿ ಹೇಳಲಾಗದ ಅಮೂಲ್ಯ ಕ್ಷಣ.

Latest Videos

undefined

- ಸಿನಿಮಾ ಜನರಿಗೆ ಇಷ್ಟವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಷ್ಟರ ಮಟ್ಟಿಗೆ ಜನ ಪ್ರೀತಿ ತೋರಿಸುತ್ತಾರೆ ಎಂದುಕೊಂಡಿರಲಿಲ್ಲ. ಹಿರಿಯರೆಲ್ಲಾ ಬಂದು ಕಾಲಿಗೆ ಬೀಳುತ್ತಾರೆ. ನಾನು ವಾಪಸ್‌ ಓಡಿ ಬಿಡುತ್ತೇನೆ. ಮನುಷ್ಯ ದೇವರಾಗಬಾರದು. ನಾವು ದೈವಗಳನ್ನು ನಂಬಿದವರು. ನಮ್ಮ ಊರಲ್ಲಿ ಕೇಳಿ ಬಂದ, ನಾನು ಚಿಕ್ಕಂದಿನಿಂದ ನೋಡಿದ ಕತೆಗಳನ್ನು ಸೇರಿಸಿ ದಂತಕತೆಯಾಗಿ ಸಿನಿಮಾ ಮಾಡಿದ್ದೇನೆ. ಈ ಕತೆ ಒಂದೊಂದು ತಲೆಮಾರಿನಿಂದ ತಲೆಮಾರಿಗೆ ದಾಟುತ್ತಾ ಬಂದ ಕತೆ.

- ನಿರ್ದೇಶಕನಾಗಿ ನನಗೆ ಈ ಸಿನಿಮಾಗೆ ಬೇಕಾಗಿದ್ದ ಬಜೆಟ್‌ ಸಿಗಬಹುದಿತ್ತು. ಆದರೆ ನಾನು ಅಂಥಾ ದೊಡ್ಡ ಸ್ಟಾರ್‌ ಆಗಿರಲಿಲ್ಲ. ನನ್ನ ಮಟ್ಟಿಗೆ ಈ ಬಜೆಟ್‌ ತುಂಬಾ ದೊಡ್ಡದಾಗಿತ್ತು. ಆದರೆ ನಿರ್ಮಾಪಕರು ನನ್ನ ಮೇಲೆ ನಂಬಿಕೆ ಇಟ್ಟರು. ಪ್ಯಾನ್‌ ಇಂಡಿಯಾ ಸಿನಿಮಾ ಎಂದರೆ ಅದೊಂದು ಬೇರೆ ಬ್ಯುಸಿನೆಸ್‌. ಪ್ರಮೋಷನ್‌ಗೆ ಅಂತಲೇ ಸಿಕ್ಕಾಪಟ್ಟೆದುಡ್ಡು ಸುರಿಯಬೇಕು. ಆದರೆ ಈಗ ಎಲ್ಲಾ ಕಡೆ ಪ್ರಚಾರ ಸಿಕ್ಕಿದೆ. ಸಿನಿಮಾ ಡಬ್‌ ಮಾಡಿ ಬಿಡುಗಡೆ ಮಾಡುವ ಕೆಲಸಗಳು ನಡೆಯುತ್ತಿವೆ.

ಸೆನ್ಸೇಷನ್ ಸೃಷ್ಟಿಸಿದ ಕಾಂತಾರ: ಸಿನಿಮಾವನ್ನ ಗೆಲ್ಲಿಸಿದ್ದೇ ಪಂಜುರ್ಲಿ & ಗುಳಿಗ ದೈವ!

- ಕನ್ನಡದ ಸಿನಿಮಾವನ್ನು ಏಕಕಾಲದಲ್ಲಿ ವಿಶ್ವಾದ್ಯಂತ ಬಿಡುಗಡೆ ಮಾಡುವುದಕ್ಕೆ ಬೇರೆಯದೇ ಆದ ಶಕ್ತಿ ಬೇಕು. ಅದು ಹೊಂಬಾಳೆ ಫಿಲಂಸ್‌ಗೆ ಇದೆ. ಅದಕ್ಕಾಗಿ ನಾನು ವಿಜಯ್‌ ಕಿರಗಂದೂರು ಮತ್ತು ಕಾರ್ತಿಕ್‌ ಗೌಡರಿಗೆ ಕೃತಜ್ಞ.

- ಈ ಮಧ್ಯೆ ಕೆಲವು ಟೀಕೆಗಳೂ ಬರುತ್ತಿವೆ. ವೈದಿಕ ವಿಚಾರಗಳ ಕಡೆಗೆ ಒಲವು ಜಾಸ್ತಿ ಇದೆ ಎಂದು ಕೆಲವರು ಹೇಳಿದ್ದಾರೆ. ಅದು ನಾವು ವರಾಹ ರೂಪಂ, ವೈದ ವರಿಷ್ಠಂ ಎಂಬ ಸಂಸ್ಕೃತ ಹಾಡು ಬಳಸಿದ್ದರಿಂದ ಬಂದಿರಬಹುದು ಅಂದುಕೊಳ್ಳುತ್ತೇನೆ. ಆ ಸಂದರ್ಭಕ್ಕೆ ಆ ಕ್ಲಾಸಿಕ್‌ ಹಾಡು ಸೂಕ್ತವಾಗಿತ್ತು. ಬಹಳ ಸಮಯದ ನಂತರ ಅಂಥದ್ದೊಂದು ಕ್ಲಾಸಿಕ್‌ ಹಾಡು ಬಂದಿದ್ದು ಖುಷಿಯ ವಿಚಾರ ಅಲ್ಲವೇ.

- ಶಿವನ ಪಾತ್ರದ ಮೂಲಕ ಕೆಲವು ಯುವಜನತೆ ತಾವು ನಿಜವಾಗಿ ಮಾಡಬೇಕಾದ ಕೆಲಸ ಬಿಟ್ಟು ಚಟಗಳಿಗೆ ದಾಸರಾಗುವ ಕುರಿತು ಹೇಳುವ ಉದ್ದೇಶ ಇತ್ತು. ಅವನು ದೈವ ನರ್ತಕರ ಮಗ. ಅವನು ದೈವ ಕಟ್ಟಬೇಕು. ಆದರೆ ಅವನು ಅದನ್ನು ಬಿಟ್ಟು ನಶೆಗೆ ಮಾರುಹೋಗುವುದು, ಶಿಕಾರಿ ಮಾಡುವುದು ಇತ್ಯಾದಿ ಮಾಡುತ್ತಿರುತ್ತಾನೆ. ಅವನು ತಪ್ಪು ಮಾಡಿದಾಗಲೆಲ್ಲಾ ಎಚ್ಚರಿಸುವ ಕೆಲಸವನ್ನು ಪಂಜುರ್ಲಿ ದೈವ ಮಾಡುತ್ತಿರುತ್ತದೆ. ಒಂದು ಹಂತದಲ್ಲಿ ಅವನಲ್ಲಿ ಆಗುವ ಬದಲಾವಣೆಯೇ ಈ ಸಿನಿಮಾದ ಪ್ರಮುಖ ಘಟ್ಟ. ದಾರಿಯನ್ನು ಬಿಟ್ಟು ಹೊರಟವರಿಗೆ ಈ ಜ್ಞಾನೋದಯ ಆದರೆ ಆ ಪಾತ್ರ ಸಾರ್ಥಕ.

"ಕಾಂತಾರ" ಫ್ಯಾನ್ ಇಂಡಿಯಾ, ಅಕ್ಟೋಬರ್ 9ರಂದು ಹಿಂದಿ ಟ್ರೈಲರ್ ರಿಲೀಸ್

- ಪ್ರಮುಖ ಪಾತ್ರಗಳ ಜೊತೆ ಇರುವ ಪಾತ್ರಗಳು ತಮಾಷೆ ಮಾಡುತ್ತಲೇ ಇರುತ್ತವೆ ಎಂಬ ಮಾತು ಕೇಳಿ ಬಂತು. ಸಾವಿನ ಮನೆಯಲ್ಲೂ ಕೂಡ ಮನೆಯ ಹಿಂದೆಯೋ, ಅಕ್ಕಪಕ್ಕದಲ್ಲೋ ತಮಾಷೆಗಳು ನಡೆಯುತ್ತಿರುತ್ತವೆ. ನನ್ನ ಸಿನಿಮಾದಲ್ಲಿಯೂ ಅಂಥದ್ದು ನಡೆಯುತ್ತದೆ. ಎಲ್ಲರ ಮನಸ್ಥಿತಿಯೂ ಬೇರೆ ಬೇರೆ ಥರ ಇರುತ್ತದೆ.

- ತಮ್ಮ ಸಿನಿಮಾದ ಬಜೆಟ್‌ ಮತ್ತು ಗಳಿಕೆಯ ನಂಬರ್‌ ಅನ್ನು ಹೊಂಬಾಳೆ ಸಂಸ್ಥೆ ಹೇಳುವ ಪರಿಪಾಠ ಇಟ್ಟುಕೊಂಡಿಲ್ಲ. ಹಾಗಾಗಿ ನಾನು ಕಾಂತಾರದ ಬಜೆಟ್‌, ಗಳಿಕೆ ನಂಬರ್‌ ಹೇಳುವುದು ಸಾಧ್ಯವಿಲ್ಲ.

- ನಾನು ಆ ಕ್ಷಣದಲ್ಲಿ ಏನು ತೋಚುತ್ತದೋ ಅದನ್ನು ಮಾಡುವವನು. ಪ್ಲಾನ್‌ ಇಟ್ಟುಕೊಂಡು ಯಾವುದನ್ನೂ ಮಾಡುವುದಿಲ್ಲ. ಮುಂದೆ ಯಾವ ಸಿನಿಮಾ ಮಾಡಬೇಕು ಎಂಬ ಯೋಚನೆಯೂ ಸದ್ಯಕ್ಕಿಲ್ಲ. ಈಗ ಖುಷಿಯಲ್ಲಿ ಇದ್ದೇನೆ. ಖುಷಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ.

click me!