Head Bush ಬಡವರ ಮಕ್ಳು ಗೆಲ್ಲಬೇಕಣ್ಣ: ಡಾಲಿ ಧನಂಜಯ್‌

By Kannadaprabha NewsFirst Published Oct 21, 2022, 8:55 AM IST
Highlights

ಡಾಲಿ ಧನಂಜಯ್‌ ಅವರ ‘ಹೆಡ್‌ ಬುಷ್‌’ ಸಿನಿಮಾ ಇಂದು ತೆರೆ ಮೇಲೆ ಬರುತ್ತಿದೆ. ಶೂನ್ಯ ನಿರ್ದೇಶನದ, ಅಗ್ನಿ ಶ್ರೀಧರ್‌ ಕತೆ ಬರೆದಿರುವ ಈ ಚಿತ್ರದಲ್ಲಿ ರವಿಚಂದ್ರನ್‌, ಲೂಸ್‌ ಮಾದ ಯೋಗೀಶ್‌, ರಘು ಮುಖರ್ಜಿ, ಶ್ರುತಿ ಹರಿಹರನ್‌, ದೇವರಾಜ್‌, ಬಾಲು ನಾಗೇಂದ್ರ ಹೀಗೆ ಬಹು ದೊಡ್ಡ ತಾರಾಬಳಗವೇ ಇದೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಧನಂಜಯ್‌ ಅವರ ಮಾತುಗಳು ಇಲ್ಲಿವೆ.

ಆರ್‌. ಕೇಶವಮೂರ್ತಿ

ಹೆಡ್‌ ಬುಷ್‌ ನಿಮಗೆ ಈಗ ಕೊಟ್ಟಿರುವ ಖುಷಿ, ನಂಬಿಕೆ ಎಂಥದ್ದು?

Latest Videos

ಬೆಂಗಳೂರು ವ್ಯಾಪ್ತಿಯಲ್ಲಿ ತೆರೆ ಕಂಡಿರುವ ಎಲ್ಲಾ ಚಿತ್ರಮಂದಿರಗಳ ಮೊದಲ ದಿನದ ಶೋಗಳ ಟಿಕೆಟ್‌ ಮಾರಾಟ ಆಗಿವೆ. ಜಿಲ್ಲಾ ಕೇಂದ್ರಗಳಲ್ಲಿ ಎರಡು, ಮೂರು ಶೋಗಳು ಹೌಸ್‌ಫುಲ್‌ ಆಗಿವೆ. ಚಿತ್ರದ ಟ್ರೇಲರ್‌ ಅನ್ನು ಬೇರೆ ಬೇರೆ ಭಾಷೆಯವರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸಿನಿಮಾ ತೆರೆಗೆ ಬರುವ ಮುನ್ನವೇ ಓಟಿಟಿ ಹಾಗೂ ಸ್ಯಾಟಲೈಟ್‌ ಹಕ್ಕುಗಳು ಸೋಲ್ಡ್‌ ಔಟ್‌ ಆಗಿದೆ. ಇದೆಲ್ಲ ನನ್ನದೇ ಸಿನಿಮಾದ ವಹಿವಾಟು ಅಂತ ನೋಡಿದಾಗ ಆಗೋ ಖುಷಿ ಮಾತಿನಲ್ಲಿ ಹೇಳಕ್ಕೆ ಆಗಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಚಿತ್ರಕ್ಕೂ ಪೇಯ್ಡ್‌ ಪ್ರೀಮಿಯರ್‌ ಶೋಗಳನ್ನು ಆಯೋಜಿಸಲಾಗಿದೆ. ಈಗ ಅನಿಸುತ್ತದೆ ‘ಹೆಡ್‌ ಬುಷ್‌’ ಜನರ ಸಿನಿಮಾ ಆಗುತ್ತದೆಂಬ ನಂಬಿಕೆಯಂತೂ ಮೂಡಿದೆ.

ಚಿತ್ರದ ಮೇಲೆ ಕ್ರೇಜ್‌ ಹೆಚ್ಚಾಗಿದ್ದು ಟ್ರೇಲರ್‌ ಬಿಡುಗಡೆ ನಂತರ ಅಲ್ಲವೇ?

ಹೌದು. ನಾನು ಕೂಡ ಟ್ರೇಲರ್‌ ಬರಲಿ, ಜನರ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ಕಾಯುತ್ತಿದ್ದೆ. ಟ್ರೇಲರ್‌ಗೆ ಸಿಕ್ಕ ರೆಸ್ಪಾನ್ಸ್‌, ಅಲ್ಲಿಂದ ಚಿತ್ರದ ಸುತ್ತ ನಡೆದ ಬ್ಯುಸಿನೆಸ್‌ ನೋಡಿದಾಗ ನನ್ನ ಕೆರಿಯರ್‌ಗೆ ಇದು ದೊಡ್ಡ ಯಶಸ್ಸು.

ಹೆಡ್‌ ಬುಷ್‌ ಟ್ರೇಲರ್‌ಗಿಂತ ಮೊದಲು ಗೆಲುವಿನ ನಂಬಿಕೆ ಇರಲಿಲ್ಲವೇ?

ಇತ್ತು. ಆದರೆ, ದೊಡ್ಡ ಮಟ್ಟದ ಕ್ರೇಜ್‌ ನಿರೀಕ್ಷೆ ಮಾಡುತ್ತಿದ್ದೆ. ಅಲ್ಲದೆ ನಾನು ಹೀರೋನಾ, ಖಳನಾಯಕನಾ ಎಂದು ನೋಡುವವರು ಇದ್ದರು. ಬಡವ ರಾಸ್ಕಲ್‌ ಚಿತ್ರದಿಂದ ಈ ಗೊಂದಲ ಕೊಂಚ ಮಟ್ಟಿಗೆ ದೂರ ಆಯಿತು. ಈಗ ಹೆಡ್‌ ಬುಷ್‌ ಟ್ರೇಲರ್‌ ಧನಂಜಯ್‌ ನಟನೆಯ ಸಿನಿಮಾಗಳು ಕೂಡ ಬಿಡುಗಡೆಗೂ ಮುನ್ನವೇ ವ್ಯಾಪಾರ ಮಾಡುತ್ತವೆ ಎಂದು ಸಾಬೀತು ಮಾಡಿದೆ.

ರಿಲೀಸ್‌ಗೂ ಮುನ್ನ ಬಾಕ್ಸಾಫೀಸ್‌ನಲ್ಲಿ ಶುರುವಾಯ್ತು ಡಾನ್ ಜಯರಾಜ್ ಹಫ್ತಾ ವಸೂಲಿ!

ಹೆಡ್‌ ಬುಷ್‌ ಯಾವ ರೀತಿಯ ಸಿನಿಮಾ ಎಂದುಕೊಳ್ಳಬಹುದು?

ಕರ್ನಾಟಕ ರಾಜಧಾನಿಯ ಬೆಂಗಳೂರಿನ ಒಂದು ಕಾಲಘಟ್ಟದ ಕತೆಯ ಸಿನಿಮಾ. ರಾಜ್ಯದ ರಾಜಧಾನಿ ಕತೆ ಎಂದ ಮೇಲೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಈ ಕತೆಯಲ್ಲಿ ಜಯರಾಜ್‌ ಎನ್ನುವ ಮುಖ್ಯ ಪಾತ್ರಧಾರಿ, ಆ ಪಾತ್ರದ ಸುತ್ತ ಬರುವ ಬೇರೆ ಬೇರೆ ಪಾತ್ರಧಾರಿಗಳು. ಇವರೆಲ್ಲರ ಒಟ್ಟು ಶ್ರಮವೇ ಹೆಡ್‌ ಬುಷ್‌.

ತುಂಬಾ ದೊಡ್ಡ ತಾರಾಬಳಗವೇ ಇದೆಯಲ್ಲ?

ಎಲ್ಲರು ಅಪ್ಪಟ ಕನ್ನಡ ಕಲಾವಿದರು. ನಮ್ಮಲ್ಲಿ ಒಳ್ಳೆಯ ಕಲಾವಿದರು ಇದ್ದಾರೆ. ಎಲ್ಲರನ್ನು ಜತೆ ಮಾಡಿಕೊಂಡು ಸಿನಿಮಾ ಮಾಡಿದರೆ ಜನ ಗೆಲ್ಲಿಸುತ್ತಾರೆ ಎಂಬುದನ್ನು ನಾನು ಬಡವ ರಾಸ್ಕಲ್‌ ಚಿತ್ರದಲ್ಲೇ ನೋಡಿದೆ. ಅದು ಹೆಡ್‌ ಬುಷ್‌ನಲ್ಲೂ ಮುಂದುವರಿಯಿತು.

Head Bush 22 ಕೋಟಿಗೆ ಸೇಲ್‌; ಟಿವಿ-ಓಟಿಟಿ ಬ್ಯುಸಿನೆಸ್‌ನಲ್ಲಿ ಡಾಲಿ ದಾಖಲೆ

ಈ ಚಿತ್ರದ ಶಕ್ತಿ ಏನು?

ಅಗ್ನಿ ಶ್ರೀಧರ್‌ ಅವರ ಚಿತ್ರಕಥೆ, ಶೂನ್ಯ ಅವರ ದೃಶ್ಯ ಕಲ್ಪನೆ, ಕಲಾವಿದರ ಪಾತ್ರ ಪೋಷಣೆ, ಆ ದಿನಗಳನ್ನು ಕ್ರಿಯೇಟ್‌ ಮಾಡಿದ ತಾಂತ್ರಿಕ ವರ್ಗ... ಇವಿಷ್ಟುವಿಭಾಗಗಳು ಹೆಡ್‌ ಬುಷ್‌ ಚಿತ್ರದ ಪ್ಲಸ್‌ ಅಥವಾ ಶಕ್ತಿ ಎನ್ನಬಹುದು.

ಈಗೀಗ ಹಣದ ಮುಖ ನೋಡುತ್ತಿರುವ ನಿಮಗೆ ಎಲ್ಲರನ್ನು ಜತೆ ಮಾಡಿಕೊಂಡು ಸಿನಿಮಾ ಮಾಡುವ ಆಲೋಚನೆ ಬಂದಿದ್ದು ಹೇಗೆ?

ಅದು ನನ್ನ ಜೀವನ ನನಗೆ ಕಲಿಸಿಕೊಟ್ಟಪಾಠ. ಖಾಲಿ ಕೈಯಲ್ಲಿ ಬೆಂಗಳೂರಿಗೆ ಬಂದವನು ನಾನು. ನಾವು ಹೋದ ಮೇಲೂ ನಮ್ಮ ಆಲೋಚನೆಗಳು, ನಮ್ಮ ಕೆಲಸಗಳು ಬದುಕಿರಬೇಕಲ್ಲ ಎಂದುಕೊಂಡಾಗ ಹುಟ್ಟಿಕೊಂಡಿದ್ದೇ ಡಾಲಿ ಪಿಕ್ಚರ್‌. ಎಲ್ಲಕ್ಕಿಂತ ಮುಖ್ಯವಾಗಿ ಬಡವರ ಮಕ್ಕಳೂ ಗೆಲ್ಲಬೇಕಣ್ಣ. ಕನಸುಗಳನ್ನು ಮಾತ್ರ ಹೊತ್ತುಕೊಂಡು ಚಿತ್ರರಂಗಕ್ಕೆ ಬಂದವರು ನನ್ನ ಕಣ್ಣಿಗೆ ಕಂಡಾಗ ಅವರನ್ನು ಜತೆ ಮಾಡಿಕೊಳ್ಳುತ್ತಿದ್ದೇನೆ.

ನಿಮ್ಮ ಸಿನಿಮಾ ಬಿಡುಗಡೆಯ ಒತ್ತಡದಲ್ಲೂ ಮತ್ತೊಬ್ಬರಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದೀರಲ್ಲ?

ನನ್ನ ಹುಟ್ಟುಹಬ್ಬದ ದಿನ ನಾನು ಹೇಳಿದ್ದೆ, ಸದ್ಯದಲ್ಲೇ ನಾನು ಹೊಸ ಸಿನಿಮಾ ಘೋಷಣೆ ಮಾಡುತ್ತೇನೆ ಅಂತ. ಅದು ನನಗೇ ಅಲ್ಲ. ಬೇರೆಯವರಿಗೆ. ಸೆಟ್‌ ಬಾಯ್‌ ಆಗಿದ್ದ ಉಮೇಶ್‌ ಅವರ ನಿರ್ದೇಶನದಲ್ಲಿ ‘ಟಗರು ಪಲ್ಯ’ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಬಡವ ರಾಸ್ಕಲ್‌ ಚಿತ್ರದಿಂದ ಕೊರಿಯರ್‌ ಬಾಯ್‌ ಆಗಿದ್ದ ಶಂಕರ್‌ ಗುರು ನಿರ್ದೇಶಕರಾದರು. ಟಗರು ಚಿತ್ರದಿಂದ ನಾನು ಗೆದ್ದೆ. ನನ್ನಂತೆಯೇ ಗೆಲ್ಲುವ ಪ್ರತಿಭಾವಂತರು ನನ್ನ ಜತೆ ಇದ್ದಾರೆ. ಅವರಿಗೂ ವೇದಿಕೆ ಬೇಕಲ್ಲ.

click me!