ಕೋಲ್ಕತ್ತಾ: ಖ್ಯಾತ ಯೂಟ್ಯೂಬರ್ ಧ್ರುವ ರಥೀ ಅವರ ರಿಯಲ್ ಫ್ರೂಟ್ ಜ್ಯೂಸ್‌ಗೆ ಸಂಬಂಧಿಸಿದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕುವಂತೆ ಇತ್ತೀಚೆಗೆ ಕೋಲ್ಕತ್ತಾ ಹೈಕೋರ್ಟ್ ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಿದೆ. ಹೀಗೆ ಕೋರ್ಟ್ ಆದೇಶಿಸಿದ್ದೇಕೆ? ಅಂತಹದ್ದೇನಿದೆ ಆ ವೀಡಿಯೋದಲ್ಲಿ ಇಲ್ಲಿದೆ ಡಿಟೇಲ್ಸ್.
ಮಾರ್ಚ್ 15 ರಂದು ಕೋಲ್ಕತ್ತಾ ಹೈಕೋರ್ಟ್, ಯೂಟ್ಯೂಬರ್ ಧ್ರುವ ರಥೀ ಅವರಿಗೆ ತಾವು ಮಾಡಿದ ವೀಡಿಯೋದಲ್ಲಿರುವ, 'ಎಫ್‌ಎಂಸಿಜಿ ಮೇಜರ್ ಡಾಬರ್ ರಿಯಲ್ ಫ್ರೂಟ್ ಜ್ಯೂಸ್ ಬ್ರಾಂಡ್‌ಗೆ ಸಂಬಂಧಿಸಿದ ದೃಶ್ಯಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿ 7 ದಿನಗಳ ಕಾಲಾವಕಾಶ ನೀಡಿತ್ತು. ಆದರೆ ವಿಡಿಯೋದಿಂದ ರಿಯಲ್ ಫ್ರೂಟ್‌ಗೆ ಸಂಬಂಧಿಸಿದ ಅಂಶಗಳನ್ನು ತೆಗೆದು ಹಾಕದ ಹಿನ್ನೆಲೆಯಲ್ಲಿ ಈಗ ಸಾಮಾಜಿಕ ಜಾಲತಾಣಗಳಿಗೆ ಯೂಟ್ಯೂಬ್ ಲಿಂಕ್ ಡಿಲಿಟ್ ಮಾಡುವಂತೆ ಕೋರ್ಟ್ ಆದೇಶಿಸಿದೆ.
ಇದಕ್ಕೆ ಮೊದಲು ಫೆಬ್ರವರಿ 13 ರಂದು ಧ್ರುವ ರಥೀ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ಯಾಕ್ ಮಾಡಲಾದ ಹಣ್ಣಿನ ರಸಗಳ ಹಾನಿಕಾರಕ ಅಂಶಗಳ ಬಗ್ಗೆ ವಿಡಿಯೋ ಮಾಡಿದ್ದರು. ತಮ್ಮ ವಿಡಿಯೋದಲ್ಲಿ ಹಣ್ಣಿನ ಜ್ಯೂಸ್‌ನ ಪ್ಯಾಕ್ ಪ್ರದರ್ಶಿಸುವಾಗ ಧ್ರುವ ರಥೀ ಬ್ರ್ಯಾಂಡ್‌ನ ಹೆಸರನ್ನು ಮರೆ ಮಾಚಿದ್ದರೂ, ಪ್ಯಾಕ್‌ನ ಇತರ ಭಾಗಗಳನ್ನು ಸ್ಪಷ್ಟವಾಗಿ ಕಾಣುವಂತೆ ಬಿಟ್ಟಿದ್ದರು. ಇದರಿಂದ ಅವರು ತಮ್ಮ ವೀಡಿಯೋಗೆ ಬಳಸಿದ್ದು, ಡಾಬರ್‌ನ ರಿಯಲ್ ಪ್ರೂಟ್ ಜ್ಯೂಸ್ ಪ್ಯಾಕೇಟೇ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಸಂಪೂರ್ಣ ವಿಡಿಯೋದಲ್ಲಿ ಯೂಟ್ಯೂಬರ್ ಧ್ರುವ ರಥೀ ಡಾಬರ್‌ನ ರಿಯಲ್ ಫ್ರೂಟ್ ಪ್ಯಾಕೇಟ್‌ಗಳ ಚಿತ್ರ ಬಳಸಿದೆ ಎಂದು ಡಾಬರ್ ಆರೋಪಿಸಿತ್ತು.
ಬಿಸಿಲ ಧಗೆ ತಡೆಯೋಕೆ ಆಗ್ತಿಲ್ವಾ? ಇಂಥಾ ಪಾನೀಯ ಕುಡಿಯೋದು ಬಿಟ್ಬಿಡಿ
ವೀಡಿಯೊ ರಿಲೀಸ್ ಆದ ಎರಡು ದಿನಗಳ ನಂತರ, ಡಾಬರ್, ಫೆಬ್ರವರಿ 15 ರಂದು ರಥಿಗೆ ಪತ್ರ ಬರೆದು, ವೀಡಿಯೊವನ್ನು ತೆಗೆದು ಹಾಕುವಂತೆ ಕೇಳಿಕೊಂಡಿತ್ತು. ಆದರೆ ರಥೀ ವೀಡಿಯೊವನ್ನು ತೆಗೆದುಹಾಕಲು ನಿರಾಕರಿಸಿದ್ದಲ್ಲದೇ ಫೆಬ್ರವರಿ 17 ರಂದು ಉತ್ತರ ಕಳುಹಿಸಿದರು. ಅಲ್ಲದೇ ಈ ವಿಚಾರವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ಇದಾದ ನಂತರ ಡಾಬರ್ ಕಂಪನಿಯು ವೀಡಿಯೊವನ್ನು ತೆಗೆದು ಹಾಕಲು ನಿರ್ದೇಶನಗಳನ್ನು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.
ಡಾಬರ್‌ನ ಅರ್ಜಿಯ ಪ್ರಕಾರ, ರಥೀ , ಕಾರ್ಬೊನೇಟೆಡ್ ಪಾನೀಯಗಳು ಮತ್ತು ಹಣ್ಣಿನ ಜ್ಯೂಸ್‌ಗಳ ನಡುವೆ ಹಾಗೂ ಪ್ಯಾಕೇಜ್ ಮಾಡಿದ ಜ್ಯೂಸ್ ಮತ್ತು ತಾಜಾ ಜ್ಯೂಸ್ ನಡುವೆ ಅಸಂಬದ್ಧ ಹೋಲಿಕೆ ಮಾಡಿದ್ದಾರೆ. ಎಲ್ಲಾ ಪ್ಯಾಕ್ ಮಾಡಲಾದ ಹಣ್ಣಿನ ಜ್ಯೂಸ್‌ಗಳನ್ನು ಜನ ತಿರಸ್ಕರಿಸುವಂತೆ ಮಾಡುವುದು ಈ ವೀಡಿಯೊದ ಒಟ್ಟಾರೆ ಉದ್ದೇಶ ಎಂದು ಹೇಳಿದೆ. ಪ್ಯಾಕ್ ಮಾಡಿದ ಹಣ್ಣಿನ ಪಾನೀಯಗಳನ್ನು ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್, ಕೂದಲು ಉದುರುವಿಕೆ ಇತ್ಯಾದಿಗಳು ಬರುತ್ತವೆ. ಇದರಿಂದ ಈ ಪ್ಯಾಕೇಜ್ಡ್ ಹಣ್ಣಿನ ರಸ ಸೇವಿಸದಿರುವುದು ಒಳ್ಳೆಯದು ಹಾಗೆಯೇ ಮಕ್ಕಳಿಗೂ ಕೂಡ ಇದನ್ನು ನೀಡದಿರಿ ಎಂದು ರಥೀ ತಮ್ಮ ವೀಡಿಯೋದಲ್ಲಿ ಹೇಳಿದ್ದಾರೆ.
ಸಿಕ್ಕಾಪಟ್ಟೆ ಬಿಸಿ ನೀರು, ಟೀ ಕುಡಿತೀರಾ? ಆರೋಗ್ಯಕ್ಕೆ ಒಳ್ಳೇದಲ್ಲ ಈ ಅಭ್ಯಾಸ!
ತಮ್ಮ ಈ ಆರೋಪಗಳನ್ನು ಮಾಡುವಾಗ ರಥೀ ಅವರು ವಿಡಿಯೋದಲ್ಲಿ ನಮ್ಮ 'ರಿಯಲ್' ಬ್ರಾಂಡ್‌ನ ಸ್ಪಷ್ಟ ಹಾಗೂ ನೇರ ಉಲ್ಲೇಖವನ್ನು ಮಾಡಿದ್ದಾರೆ. ರಥಿಯು ಉದ್ದೇಶಪೂರ್ವಕವಾಗಿ ನಮ್ಮ ನೋಂದಾಯಿತ ಲೋಗೋ ಹಾಗೂ ರಿಯಲ್ ಫ್ರೂಟ್ ಪವರ್ (Real Fruit Power) ಅನ್ನು ಭಾಗಶಃ ಮಸುಕುಗೊಳಿಸಿದ್ದಾರೆ. ಜೊತೆಗೆ ನಮ್ಮ ಉತ್ಪನ್ನವನ್ನು ಗುರಿಯಾಗಿಸಿಕೊಂಡು ನಮ್ಮ ಖ್ಯಾತಿಗೆ ಕಳಂಕ ತಂದಿದ್ದಾರೆ ಎಂದು ಅವರು ಡಾಬರ್ ಸಂಸ್ಥೆ ದೂರಿದೆ.
ಅಲ್ಲದೇ ತಮ್ಮ ವೀಡಿಯೋಗೆ ರಥಿ, ನಮ್ಮ ಸಂಸ್ಥೆಯ ಉತ್ಪನ್ನದ ಜಾಹೀರಾತಿನ ವಿಡಿಯೋಗಳ ದೃಶ್ಯಗಳನ್ನು ಬಳಸಿದ್ದಾರೆ. ಹೀಗಾಗಿ ಇದು ನಮ್ಮ ಉತ್ಪನ್ನವನ್ನೇ ಗುರಿಯಾಗಿಸಿ ಮಾಡಲಾಗಿದೆ ಎಂದೆನಿಸುತ್ತಿದೆ ಎಂದು ಡಾಬರ್ ದೂರಿದೆ. ಡಾಬರ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಧ್ರುವ ರಥಿಗೆ ಈ ವಿಡಿಯೋವನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ರಥೀ ಅವರು "ರಿಯಲ್" ಎಂಬ ಬ್ರ್ಯಾಂಡ್ ಹೆಸರನ್ನು ಮಸುಕುಗೊಳಿಸಿದ್ದರೂ, ಅದರ ಗುರುತು ಸ್ಪಷ್ಟವಾಗಿ ಕಾಣಿಸುತ್ತಿತ್ತು ಎಂಬ ಡಾಬರ್ ಆರೋಪವನ್ನು ಕೋರ್ಟ್ ಒಪ್ಪಿತು.
ಅಲ್ಲದೇ ರಥಿ ಅವರು ಪ್ಯಾಕೇಜಿಂಗ್, ಲೇಬಲ್ ಮತ್ತು ಉತ್ಪನ್ನದ ಲೋಗೋವನ್ನು ಅನಧಿಕೃತವಾಗಿ ಬಳಸುವುದರ ಮೂಲಕ
1999 ರ ಟ್ರೇಡ್ ಮಾರ್ಕ್ ಆಕ್ಟ್ (Trade Marks Act), 1999 ರ ಸೆಕ್ಷನ್ 29 (9) ಮತ್ತು 1957 ರ ಹಕ್ಕುಸ್ವಾಮ್ಯ ಕಾಯಿದೆ ಅನ್ವಯ ಅವರು ಡಾಬರ್‌ಗೆ ನೀಡಲಾದ ಟ್ರೇಡ್‌ಮಾರ್ಕ್ ಮತ್ತು ಹಕ್ಕುಸ್ವಾಮ್ಯ ರಕ್ಷಣೆಯನ್ನು (copyright protection)ಉಲ್ಲಂಘಿಸಿದ್ದಾರೆ ಎಂದು ಕೋರ್ಟ್ ತೀರ್ಪು ನೀಡಿತು.
ಅವರ ವೀಡಿಯೋದಲ್ಲಿರುವ ಹೇಳಿರುವ ಅಂಶ ಆಕ್ಷೇಪಾರ್ಹವಲ್ಲದಿದ್ದರೂ ಅಲ್ಲಿ ಅವರು ಬಳಸಿರುವ ಫೋಟೋ ವೀಡಿಯೋಗಳು ಡಾಬರ್ ಸಂಸ್ಥೆಯ ರಿಯಲ್ ಫ್ರೂಟ್ ಜ್ಯೂಸ್ ಉತ್ಪನ್ನದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಮೂಲಕ ರಥೀ, 'ಲಕ್ಷ್ಮಣ ರೇಖೆ' (Lakshamanrekha) ದಾಟಿದ್ದಾರೆ ಎಂಬ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿತು. ನನ್ನ ದೃಷ್ಟಿಯಲ್ಲಿ ಅರ್ಜಿದಾರರ ಉತ್ಪನ್ನ ರಿಯಲ್ ಅನ್ನು ವಿಡಿಯೋದಲ್ಲಿ ನಿರ್ದಿಷ್ಟವಾಗಿ ಗುರಿಪಡಿಸಿ ಅವಹೇಳನ ಮಾಡಲಾಗಿದೆ ಎಂದು ನ್ಯಾಯಮೂರ್ತಿ ರವಿ ಕ್ರಿಶನ್ ಕಪೂರ್ (Ravi Krishan Kapur) ಅವರಿದ್ದ ಪೀಠ ಹೇಳಿತು.
ಹೀಗಾಗಿ ವಿಡಿಯೋದಿಂದ ರಿಯಲ್ ಫ್ರೂಟ್‌ಗೆ ಸಂಬಂಧಿಸಿ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಿದ ನಂತರವಷ್ಟೇ ವೀಡಿಯೋ ಪ್ರಸಾರ ಮಾಡುವಂತೆ ಕೋರ್ಟ್ ಸೂಚಿಸಿತ್ತು. ಅಲ್ಲದೇ ಇದನ್ನು ಜಾರಿಗೆ ತರಲು ನ್ಯಾಯಾಲಯ 7 ದಿನಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತ್ತು. ಆದರೆ ಮುಂದಿನ ವಿಚಾರಣೆ ವೇಳೆಯೂ ವೀಡಿಯೋವನ್ನು ತೆಗೆಯದೇ ಪ್ರಸಾರ ಮುಂದುವರಿಸಿದ್ದಾಗಿ ಡಾಬರ್ ಮತ್ತೆ ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ನ್ಯಾಯಾಲಯ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಈ ವಿಡಿಯೋದ ಪ್ರಸಾರ ತಡೆ ಹಿಡಿಯುವಂತೆ ಆದೇಶ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.