ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಳೆದ ವರ್ಷ ಇಳಿಕೆ ಮಾಡುವ ಮೂಲಕ ಸರ್ಕಾರ ಉದ್ಯೋಗಿಗಳಿಗೆ ಶಾಕ್ ನೀಡಿತ್ತು.ಈ ಬಾರಿ ಕೂಡ ಉದ್ಯೋಗಿಗಳಿಗೆ ನಿರಾಸೆಯೇ ಆಗಿದೆ. ಏಕೆಂದರೆ ಮಂಗಳವಾರ ನಡೆದ ಸಭೆಯಲ್ಲಿ 2022-23ನೇ ಸಾಲಿನ ಇಪಿಎಫ್ ಠೇವಣಿಗಳ ಮೇಲೆ ಶೇ. 8.15 ಬಡ್ಡಿ ನಿಗದಿಪಡಿಸಲು ಇಪಿಎಫ್ಒ ನಿರ್ಧರಿಸಿದೆ.
ನವದೆಹಲಿ (ಮಾ.28):2022-23ನೇ ಸಾಲಿನ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿ ಮೇಲೆ ಒದಗಿಸುವ ಬಡ್ಡಿದರವನ್ನು ಶೇ. 8.15ಕ್ಕೆ ನಿಗದಿಪಡಿಸಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇಂದು (ಮಂಗಳವಾರ) ನಡೆದ ಸಭೆಯಲ್ಲಿ ತೀರ್ಮಾನಿಸಿದೆ. 2022ರ ಮಾರ್ಚ್ ನಲ್ಲಿ ಇಪಿಎಫ್ಒ 2021-22ನೇ ಸಾಲಿನಲ್ಲಿ ಇಪಿಎಫ್ ಠೇವಣಿಯ ಮೇಲೆ ಒದಗಿಸುವ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ಇಳಿಸುವ ನಿರ್ಧಾರ ಕೈಗೊಂಡಿತ್ತು. ಇದು ಕಳೆದ 4 ದಶಕಗಳಲ್ಲೇ ಕನಿಷ್ಠ ಬಡ್ಡಿದರವಾಗಿದ್ದು, ಇದರಿಂದ ಇಪಿಎಫ್‌ನ ಬಡ್ಡಿದರವನ್ನೇ ಅವಲಂಬಿಸಿರುವ ಸುಮಾರು 5 ಕೋಟಿ ಜನರಿಗೆ ನಿರಾಸೆಯಾಗಿತ್ತು. ಇದಕ್ಕೆ ಕಾರ್ಮಿಕ ಸಂಘಟನೆಗಳು ಮತ್ತು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಹೊರತಾಗಿಯೂ, ಇಪಿಎಫ್ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ಇಳಿಸುವ ಮಂಡಳಿ ನಿರ್ಧಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಅನುಮೋದಿಸಿತ್ತು. 2020-21ನೇ ಸಾಲಿನ ಇಪಿಎಫ್ ಠೇವಣಿ ಮೇಲಿನ ಬಡ್ಡಿದರವನ್ನು 2021ರ ಮಾರ್ಚ್ ನಲ್ಲಿ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಶೇ.8.5ಕ್ಕೆ ನಿಗದಿಪಡಿಸಿತ್ತು. ಇಪಿಎಫ್ಒ ಮಂಡಳಿ 2022-23ನೇ ಸಾಲಿನ ಇಪಿಎಫ್ ಬಡ್ಡಿದರಕ್ಕೆ ಸಂಬಂಧಿಸಿ ಕೈಗೊಂಡಿರುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಅನುಮೋದನೆಗೆ ಕಳುಹಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ ಬಳಿಕವಷ್ಟೇ 5 ಕೋಟಿ ಇಪಿಎಫ್ ಖಾತೆದಾರರ ಖಾತೆಗಳಿಗೆ ಬಡ್ಡಿ ಹಣವನ್ನು ಜಮೆ ಮಾಡಲಾಗುತ್ತದೆ.
'ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ನಿರ್ಧಾರ ಕೈಗೊಳ್ಳುವ ಉನ್ನತ ಮಟ್ಟದ ಸಮಿತಿ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಮಂಗಳವಾರ ನಡೆದ ಸಭೆಯಲ್ಲಿ 2022-23ನೇ ಸಾಲಿನ ಇಪಿಎಫ್ ಠೇವಣಿಗಳ ಮೇಲೆ ಶೇ.8.15ರಷ್ಟು ಬಡ್ಡಿ ನೀಡುವ ತೀರ್ಮಾನ ಕೈಗೊಂಡಿದೆ' ಎಂದು ಮೂಲವೊಂದು ಮಾಹಿತಿ ನೀಡಿದೆ. 2020ರ ಮಾರ್ಚ್ ನಲ್ಲಿ ಇಪಿಎಫ್ಒ ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 2019-20ನೇ ಸಾಲಿಗೆ ಶೇ.8.5ಕ್ಕೆ ಇಳಿಕೆ ಮಾಡಿತ್ತು. ಇದು ಏಳು ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿದರವಾಗಿತ್ತು. 2018-19ನೇ ಸಾಲಿನಲ್ಲಿ ಇಪಿಎಫ್ಒ ಠೇವಣಿಗಳ ಮೇಲೆ ಶೇ.8.65 ಬಡ್ಡಿದರವಿತ್ತು. ಇನ್ನು 2016-17ನೇ ಸಾಲಿನಲ್ಲಿ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರ ಶೇ.8.65ರಷ್ಟಿದ್ದರೆ, 2017-18ನೇ ಸಾಲಿನಲ್ಲಿ ಶೇ.8.55 ರಷ್ಟಿತ್ತು. ಇನ್ನು 2015-16ನೇ ಸಾಲಿನಲ್ಲಿ ಶೇ.8.8ರಷ್ಟಿತ್ತು.
PAN Aadhaar Link:ಕೇವಲ 3 ದಿನಗಳಷ್ಟೇ ಬಾಕಿ,ಆಧಾರ್-ಪ್ಯಾನ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಹಂತ 1: ಇಪಿಎಫ್ ಒ (EPFO) ಅಧಿಕೃತ ವೆಬ್ ಸೈಟ್ epfindia.gov.in.ಭೇಟಿ ನೀಡಿ.
ಹಂತ 2:‘Services’ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದಡಿಯಲ್ಲಿ ‘For Employees’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ‘Member Passbook’ ಮೇಲೆ ಕ್ಲಿಕ್ ಮಾಡಿ. ಈಗ ಲಾಗಿನ್ ಪುಟ ತೆರೆದುಕೊಳ್ಳುತ್ತದೆ.
ಹಂತ 4: ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ನಮೂದಿಸಿ. ಕ್ಯಾಪ್ಚ ಕೋಡ್ ಕೂಡ ನಮೂದಿಸಬೇಕಾಗುತ್ತದೆ. ಇದಾದ ಬಳಿಕ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ.
ಸರ್ಕಾರಿ ನೌಕರರಿಗೆ ಬಂಪರ್, ಒಲ್ಡ್ ಪೆನ್ಶನ್ ಸ್ಕೀಮ್ ಶೀಘ್ರ ಜಾರಿ?
ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್
ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ (Message) ಕಳುಹಿಸಿ. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಿ. ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ. ಮೇಲೆ ಹೇಳಿದ ಈ ಎಲ್ಲ ವಿಧಾನದಲ್ಲಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ UAN ಜೊತೆಗೆ ಬ್ಯಾಂಕ್ ಖಾತೆ (Bank account), ಆಧಾರ್ (Aadhaar), ಪ್ಯಾನ್ ಸಂಖ್ಯೆ (PAN number) ಲಿಂಕ್ (link) ಆಗಿರುವುದು ಅಗತ್ಯ.