ಶೇ.65ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಈ ದೇಶದಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ರಾಮ ಮಂದಿರ, ವಿಶೇಷ ಅಂದರೆ ಈ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಹಿಂದೂಗಳು ನೆಲೆಸಿದ್ದಾರೆ. ಇದೀಗ ಅಲ್ಲಿನ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ.

ಪೋರ್ಟ್ ಆಫ್ ಸ್ಪೇನ್ (ಆ.29) ಬರೋಬ್ಬರಿ 500 ವರ್ಷಗಳ ಬಳಿಕ ರಾಮಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ಇದೀಗ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಸುದೀರ್ಘ ವಿವಾದವೊಂದು ಅಂತ್ಯಗೊಂಡು ಶ್ರೀರಾಮನ ಮಂದಿರ ತಲೆ ಎತ್ತಿದೆ. ಇದೀಗ ಶೇಕಡಾ 65ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಹೊಂದಿರುವ ಕ್ರಿಶ್ಚಿಯನ್ ದೇಶದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಹೌದು, ಕೆರಿಬಿಯನ್ ರಾಷ್ಟ್ರ ಟ್ರಿನಿಡ್ಯಾಡ್ ಆ್ಯಂಡ್ ಟೊಬ್ಯಾಗೋ ದೇಶದಲ್ಲಿ ಈ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ.

ರಾಮ ಮಂದಿರ ನಿರ್ಮಾಣ ಖಚಿತಪಡಿಸಿದ ಸಚಿವ

ಟ್ರಿನಿಡ್ಯಾಡ್ ಆ್ಯಂಡ್ ಟೊಬ್ಯಾಗೋ ದೇಶದ ಪಬ್ಲಿಕಿ ಯುಟಿಲಿಟಿ ಸಚಿವ ಬೆರಿ ಪಡರಟ್ ಈ ಕುರಿತು ಖಚಿತಪಡಿಸಿದ್ದಾರೆ. ರಾಜಧಾನಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತದೆ.ಈ ಕುರಿತು ಹಿಂದೂ ಮುಖಂಡರು, ಸ್ವಾಮೀಜಿಗಳು, ಪೂಜ್ಯರ ಜೊತೆ ಸಮಾಲೋಚನೆ ನಡೆದಿದೆ. ಟ್ರಿನಿಡ್ಯಾಡ್ ಆ್ಯಂಡ್ ಟೊಬ್ಯಾಗೋದಲ್ಲಿ ನಿರ್ಮಾಣವಾಗುವ ರಾಮ ಮಂದಿರಕ್ಕೆ ಹೊಸ ರಾಮ ಲಲ್ಲಾ ಮೂರ್ತಿಯನ್ನು ಆಯೋಧ್ಯೆಯಿಂದ ತರಿಸಿಕೊಳ್ಳಲು ಮಾತುಕತೆ ನಡೆದಿದೆ ಎಂದಿದ್ದಾರೆ.

ರಾಮ ಮಂದಿರ ನಿರ್ಮಾಣ, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯನ್ನು ಸರ್ಕಾರ ಸ್ವಾಗತಿಸುತ್ತಿದೆ, ಜೊತೆಗೆ ಬೆಂಬಲಿಸುತ್ತಿದೆ. ಈ ದ್ವೀಪರಾಷ್ಟ್ರದಲ್ಲಿ ಹಿಂದೂ ಸಾಂಸ್ಕೃತಿಕ ಪರಂಪರೆ ಹಾಗೂ ಆಚರಣೆಯನ್ನು ಬೆಂಬಲಿಸುತ್ತದೆ.

ರಾಮಾಯಣ ದೇಶದಲ್ಲಿ ರಾಮ ಮಂದಿರ

ಟ್ರಿನಿಡ್ಯಾಡ್ ಆ್ಯಂಡ್ ಟೊಬ್ಯಾಗೋ ರಾಮಾಯಣ ದೇಶ ಎಂದೇ ಗುರುತಿಸಿಕೊಂಡಿದೆ. ಕಾರಣ 19ನೇ ಶತಮಾನದಲ್ಲಿ ಭಾರತದಿಂದ ಕಾರ್ಮಿಕರನ್ನು ಟ್ರಿನಿಡ್ಯಾಡ್ ಆ್ಯಂಡ್ ಟೊಬ್ಯಗೋ ದೇಶಕ್ಕೆ ಕರೆತರಲಾಗಿತ್ತು. ಈ ಪೈಕಿ ಬಹುತೇಕರು ಇಲ್ಲಿಯೇ ನೆಲೆಸಿದ್ದಾರೆ. ಹೀಗಾಗಿ 19ನೇ ಶತಮಾನದಿಂದ ಟ್ರಿನಿಡ್ಯಾಡ್ ಆ್ಯಂಡ್ ಟೊಬ್ಯಾಗೋ ಹಾಗೂ ಭಾರತಕ್ಕೂ ಅವಿನಾಭವ ಸಂಬಂಧವಿದೆ. ಕಾರ್ಮಿಕರಾಗಿ ತೆರಳಿದ ಭಾರತೀಯರು ಶ್ರೀರಾಮನ ಪೂಜೆ, ಹಿಂದೂ ಹಬ್ಬಗಳ ಆಚರಣೆಯನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ಟ್ರಿನಿಡ್ಯಾಡ್ ಆ್ಯಂಡ್ ಟೊಬ್ಯಾಗೋ ದೇಶದಲ್ಲಿರುವ 1.5 ಮಿಲಿಯನ್ ಒಟ್ಟು ಜನಸಂಖ್ಯೆಯಲ್ಲಿ 3.5 ಲಕ್ಷ ಮಂದಿ ಹಿಂದೂಗಳು.