ಅಮೆರಿಕದ ಬೆದರಿಕೆ ಹೊರತಾಗಿಯೂ ಉಕ್ರೇನ್‌ ಸಮರ ತೀವ್ರಗೊಳ್ಳುತ್ತಿರುವ ನಡುವೆಯೇ ರಷ್ಯಾ ಇದೀಗ ಅಣ್ವಸ್ತ್ರ ಚಾಲಿತ ‘ಬುರೆವೆಸ್ತಿನಿಕ್‌’ ಕ್ಷಿಪಣಿಯ ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಮಾಸ್ಕೋ: ಅಮೆರಿಕದ ಬೆದರಿಕೆ ಹೊರತಾಗಿಯೂ ಉಕ್ರೇನ್‌ ಸಮರ ತೀವ್ರಗೊಳ್ಳುತ್ತಿರುವ ನಡುವೆಯೇ ರಷ್ಯಾ ಇದೀಗ ಅಣ್ವಸ್ತ್ರ ಚಾಲಿತ ‘ಬುರೆವೆಸ್ತಿನಿಕ್‌’ ಕ್ಷಿಪಣಿಯ ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಅಣ್ವಸ್ತ್ರಗಳನ್ನು ಹೊತ್ತುಕೊಂಡು ಸುಮಾರು 14,000 ಕಿ.ಮೀ.ದೂರ ಕ್ರಮಿಸಬಲ್ಲ ಹಾಗೂ 15 ಗಂಟೆ ಕಾಲ ಆಕಾಶದಲ್ಲೇ ಇರಬಲ್ಲ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಗೆ ಸರಿಸಾಟಿಯಾದ ಮತ್ತೊಂದು ಕ್ಷಿಪಣಿ ವಿಶ್ವದಲ್ಲಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ.

ಇದೊಂದು ಅತ್ಯಾಧುನಿಕ ಹಾಗೂ ವಿಶೇಷ ಕ್ಷಿಪಣಿ

ಈ ಕ್ಷಿಪಣಿ ಪರೀಕ್ಷೆಯ ಬಳಿಕ ಉಕ್ರೇನ್‌ ಯುದ್ಧದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಮಿಲಿಟರಿ ಜನರಲ್‌ಗಳನ್ನುದ್ದೇಶಿಸಿ ಮಾತನಾಡಿದ ಪುಟಿನ್‌ ಅವರು ಇದೊಂದು ಅತ್ಯಾಧುನಿಕ ಹಾಗೂ ವಿಶೇಷ ಕ್ಷಿಪಣಿಯಾಗಿದ್ದು, ವಿಶ್ವದ ಯಾವುದೇ ದೇಶದ ಬಳಿಯೂ ಇಂಥ ಶಸ್ತ್ರ ಇಲ್ಲ ಎಂದು ತಿಳಿಸಿದ್ದಾರೆ.

ಮಾರ್ಚ್‌, 2018ರಲ್ಲಿ ಮೊದಲ ಬಾರಿ ಪ್ರಸ್ತಾಪಿಸಿದ್ದರು

ಪುಟಿನ್‌ ಅವರು ಈ ಕ್ಷಿಪಣಿ ಕುರಿತು ಮಾರ್ಚ್‌, 2018ರಲ್ಲಿ ಮೊದಲ ಬಾರಿ ಪ್ರಸ್ತಾಪಿಸಿದ್ದರು. ಈ ಕ್ಷಿಪಣಿಯು ಮಿತಿಯಿಲ್ಲದ ವ್ಯಾಪ್ತಿ ಹೊಂದಿದೆ ಹಾಗೂ ಇದು ಅಮೆರಿಕದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಸಾಗಲಿದೆ ಎಂದು ಹೇಳಿದ್ದರು.

ಈ ಕ್ಷಿಪಣಿಯಲ್ಲಿ ಸಾಂಪ್ರದಾಯಿಕ ಟರ್ಬೋಜೆಟ್‌ ಅಥವಾ ಟರ್ಬೋಫ್ಯಾನ್‌ ಎಂಜಿನ್‌ಗಳ ಬದಲು ಅಣ್ವಸ್ತ್ರ ಚಾಲಿತ ಎಂಜಿನ್‌ ಬಳಸಲಾಗುತ್ತದೆ. ಟರ್ಬೋಜೆಟ್‌ ಅಥವಾ ಟರ್ಬೋಫ್ಯಾನ್‌ ಎಂಜಿನ್‌ಗಳ ಕ್ಷಿಪಣಿಗಳ ವ್ಯಾಪ್ತಿಯು ಅವು ಹೊತ್ತೊಯ್ಯುವ ಇಂಧನವನ್ನು ಅವಲಂಬಿಸಿರುತ್ತವೆ. ಆದರೆ, ಅಣು ಚಾಲಿತ ಕ್ಷಿಪಣಿಗಳ ವ್ಯಾಪ್ತಿ ಹೆಚ್ಚಿರುತ್ತದೆ.

ಇನ್ನು ಅಂತರ್‌ ಖಂಡಾಂತರ ಬ್ಲಾಲಿಸ್ಟಿಕ್‌ ಕ್ಷಿಪಣಿಗಳನ್ನು ಆಕಾಶದಲ್ಲಿ ತಡೆಬಹುದು. ಆದರೆ, ಈ ಕ್ಷಿಪಣಿ ತನ್ನ ಗತಿಯನ್ನು ಬದಲಿಸಿಕೊಂಡು ಕೆಳಹಂತದಲ್ಲಿ ಸಾಗುವ ಹಿನ್ನೆಲೆಯಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸುಲಭವಾಗಿ ಕಣ್ತಪ್ಪಿಸಿ ಸಾಗಲಿದೆ ಎನ್ನಲಾಗಿದೆ.

ಟಾಮ್‌ಹಾಕ್‌ ಬೆದರಿಕೆಗೆ ಸೆಡ್ಡು:

ಉಕ್ರೇನ್‌ಗೆ ತನ್ನ ಅತ್ಯಾಧುನಿಕ ಟಾಮ್‌ಹಾಕ್‌ ಕ್ಷಿಪಣಿ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗಷ್ಟೇ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ರಷ್ಯಾ ಈ ಕ್ಷಿಪಣಿಯ ಪರೀಕ್ಷೆ ನಡೆಸಿದೆ. ಅಂತಿಮ ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆ ಈ ಕ್ಷಿಪಣಿಯನ್ನು ಶೀಘ್ರ ಸೇನೆಗೆ ಸೇರ್ಪಡೆ ಮಾಡುವಂತೆ ಅಧಿಕಾರಿಗಳಿಗೆ ಪುಟಿನ್‌ ಸೂಚಿಸಿದ್ದಾರೆ.