ಉಕ್ರೇನ್ ಡಾನೆಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಂದ ಹಿಂದೆ ಸರಿದರೆ ಯುದ್ಧ ನಿಲ್ಲಿಸುವುದಾಗಿ ಪುಟಿನ್ ಹೇಳಿದ್ದಾರೆ. ಈ ಬೇಡಿಕೆಯನ್ನು ಟ್ರಂಪ್, ಜೆಲೆನ್ಸ್‌ಕಿ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರ ಗಮನಕ್ಕೆ ತಂದಿದ್ದಾರೆ. ಭೂಪ್ರದೇಶ ಹಸ್ತಾಂತರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಉಕ್ರೇನ್ - ರಷ್ಯಾ ಯುದ್ಧವನ್ನು ಕೊನೆಗೊಳಿಸಬೇಕಾದರೆ, ಉಕ್ರೇ‌ನ್ ಡಾನೆಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಂದ ಹಿಂದೆ ಸರಿಯಬೇಕು ಎಂದು ಪುಟಿನ್ ಆಗ್ರಹಿಸಿದ್ದು, ತನ್ನ ಬೇಡಿಕೆ ಈಡೇರದಿದ್ದರೆ ಯುದ್ಧ ಮುಂದುವರಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಯೂ ಹೇಳಿದ್ದಾರೆ.

ಶುಕ್ರವಾರ ಅಲಾಸ್ಕಾದಲ್ಲಿ ಟ್ರಂಪ್ ಜೊತೆಗಿನ ಮಾತುಕತೆಯ ವೇಳೆ ಪುಟಿನ್ ತನ್ನ ಬೇಡಿಕೆ ಸಲ್ಲಿಸಿದ್ದಾರೆ. ಈ ವಿಚಾರವನ್ನು ಮಾತುಕತೆಯ ಕುರಿತು ಸಂಪೂರ್ಣ ಮಾಹಿತಿ ಹೊಂದಿರುವ ನಾಲ್ವರು ಖಚಿತ ಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪುಟಿನ್ ಷರತ್ತನ್ನು ಟ್ರಂಪ್ ಶನಿವಾರ ದೂರವಾಣಿ ಸಂಭಾಷಣೆಯ ವೇಳೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್‌ಕಿ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರ ಗಮನಕ್ಕೆ ತಂದಿದ್ದಾರೆ. ಮಾಸ್ಕೋ ಜೊತೆಗೆ ಕದನ ವಿರಾಮ ಪ್ರಯತ್ನವನ್ನು ನಿಲ್ಲಿಸುವಂತೆ ಅವರಲ್ಲಿ ಟ್ರಂಪ್ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಗಳ ಪರಿಣಾಮವಾಗಿ, ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ರಷ್ಯಾ ಬಹುಮಟ್ಟಿಗೆ ಆಕ್ರಮಿಸಿಕೊಂಡಿರುವ ಪ್ರದೇಶಗಳ ಮೇಲೆ ರಷ್ಯಾಗೆ ಪೂರ್ಣ ನಿಯಂತ್ರಣ ಲಭಿಸಲಿದೆ. ಕಳೆದ ನವೆಂಬರ್ ತಿಂಗಳಿಂದ ಪುಟಿನ್ ಪಡೆಗಳು ಈ ಪ್ರದೇಶದಲ್ಲಿ ಅಸಾಧಾರಣ ವೇಗವಾಗಿ ಮುಂದೊತ್ತಿ ಸಾಗುತ್ತಿವೆ.

ಡಾನೆಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ರಷ್ಯಾ ಕೈಗೆ ಒಪ್ಪಿಸುವುದಕ್ಕೆ ಬದಲಾಗಿ, ಖೆರ್ಸಾನ್ ಮತ್ತು ಜಾ಼ಪೊರಿಜ್ಯಾಗಳ ಗಡಿಗಳಲ್ಲಿ ದಾಳಿಯನ್ನು ಸ್ಥಗಿತಗೊಳಿಸುವುದಾಗಿ ಪುಟಿನ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ರಷ್ಯಾ ಸೇನೆ ಈಗಾಗಲೇ ದೊಡ್ಡ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಇನ್ನೂ ಹೆಚ್ಚಿನ ಭೂಮಿಯನ್ನು ಆಕ್ರಮಿಸಲು ಹೊಸ ದಾಳಿ ನಢಸುವುದಿಲ್ಲ ಎಂದು ಪುಟಿನ್ ಭರವಸೆ ನೀಡಿರುವುದಾಗಿ ಸಭೆಯ ಮಾಹಿತಿ ಹೊಂದಿರುವ ಮೂವರು ಖಚಿತಪಡಿಸಿದ್ದಾರೆ.

ಯುದ್ಧದ ಮೂಲ ಕಾರಣಗಳನ್ನು ಸರಿಪಡಿಸುವುದು ತನ್ನ ಉದ್ದೇಶವಾಗಿದ್ದು, ತಾನು ಆ ಬೇಡಿಕೆಗಳಿಂದ ಖಂಡಿತವಾಗಿಯೂ ಹಿಂದೆ ಸರಿದಿಲ್ಲ ಎಂದು ಪುಟಿನ್ ಮತ್ತೆ ಸ್ಪಷ್ಟಪಡಿಸಿದ್ದಾರೆ. ಪುಟಿನ್ ಬೇಡಿಕೆ ಉಕ್ರೇನಿನ ಈಗಿನ ಸ್ವಾಯತ್ತತೆಯನ್ನು ಕೊನೆಯಾಗಿಸಬಲ್ಲದು. ಅಂದರೆ, ಉಕ್ರೇನ್ ಈಗಿರುವ ರೀತಿಯಲ್ಲಿ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅದರೊಡನೆ, ಪುಟಿನ್ ಪೂರ್ವದತ್ತ ನ್ಯಾಟೋದ ವಿಸ್ತರಣೆಗೆ ತಡೆ ಒಡ್ಡಲಿದ್ದಾರೆ.

ಒಂದು ವೇಳೆ ಪುಟಿನ್ ಸಮಸ್ಯೆಯ ಮೂಲ ಎಂದು ಭಾವಿಸಿರುವ ವಿಚಾರಗಳು ಪರಿಹಾರ ಕಂಡರೆ, ಭೂ ಪ್ರದೇಶಗಳೂ ಸೇರಿದಂತೆ ಇತರ ವಿಚಾರಗಳ ಕುರಿತಂತೆ ರಾಜಿಯಾಗಲು ಪುಟಿನ್ ಸಿದ್ಧರಿದ್ದಾರೆ ಎಂದು ಕ್ರೆಮ್ಲಿನ್ ಮಾಜಿ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ರಷ್ಯನ್ ಸೇನಾ ಪಡೆಗಳು ಇಂದಿಗೆ ಡಾನೆಸ್ಕ್‌ನ 70% ಪ್ರಾಂತ್ಯವನ್ನು ವಶಪಡಿಸಿಕೊಂಡಿವೆ‌. ಆದರೂ ಉಕ್ರೇನ್ ಪಶ್ಚಿಮದ ನಗರಗಳನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದು, ಅವುಗಳು ಉಕ್ರೇನಿನ ಮಿಲಿಟರಿಗೆ ಮತ್ತು ಪೂರ್ವ ಭಾಗದ ರಕ್ಷಣೆಗೆ ಅತ್ಯಂತ ಮುಖ್ಯವಾಗಿವೆ. ಲುಹಾನ್ಸ್ಕ್ ನಲ್ಲಿ ಪಶ್ಚಿಮದ ಸಣ್ಣ ಭಾಗವನ್ನು ಹೊರತುಪಡಿಸಿ, ಬಹುತೇಕ ಸಂಪೂರ್ಣ ಪ್ರಾಂತ್ಯ ರಷ್ಯಾ ಕೈವಶದಲ್ಲಿದೆ.

ಜೆಲೆನ್ಸ್‌ಕಿ ಜೊತೆ ಆತ್ಮೀಯರಾಗಿರುವವರ ಪ್ರಕಾರ, ಜೆಲೆನ್ಸ್‌ಕಿ ಡಾನೆಸ್ಕ್ ಪ್ರದೇಶವನ್ನು ರಷ್ಯಾಗೆ ಬಿಟ್ಟುಕೊಡಲು ಒಪ್ಪುವ ಸಾಧ್ಯತೆಗಳಿಲ್ಲ. ಆದರೆ, ಅವರು ಇನ್ನುಳಿದ ಪ್ರಾಂತ್ಯಗಳ ಕುರಿತು ಆಗಸ್ಟ್ 18, ಸೋಮವಾರದಂದು ವಾಷಿಂಗ್ಟನ್ ನಲ್ಲಿ ಟ್ರಂಪ್ ಜೊತೆಗಿನ ಭೇಟಿಯಲ್ಲಿ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.

ಬಲ್ಲ ಮೂಲಗಳ ಪ್ರಕಾರ, ಟ್ರಂಪ್ ಮತ್ತು ಪುಟಿನ್ ಜೊತೆ ತ್ರಿಪಕ್ಷೀಯ ಮಾತುಕತೆ ನಡೆಸಲು ಜೆಲೆನ್ಸ್‌ಕಿ ಸಿದ್ಧವಾಗಿದ್ದಾರೆ.

ಓರ್ವ ಉಕ್ರೇನಿಯನ್ ಅಧಿಕಾರಿಯ ಪ್ರಕಾರ, ಪುಟಿನ್ ಸಮಿ ಮತ್ತು ಖಾರ್ಕಿವ್‌ನ ಕೆಲ ಪ್ರದೇಶಗಳನ್ನು ಮರಳಿ ಉಕ್ರೇನ್ ನಿಯಂತ್ರಣಕ್ಕೆ ನೀಡಲು ಸಮ್ಮತಿಸಿದ್ದಾರೆ ಎಂದು ಟ್ರಂಪ್ ಜೆಲೆನ್ಸ್‌ಕಿ ಬಳಿ ಹೇಳಿದ್ದಾರೆ. ಈ ಪ್ರದೇಶಗಳಲ್ಲಿ ರಷ್ಯಾ ಬಹಳ ಕಡಿಮೆ ಭೂ ಪ್ರದೇಶವನ್ನು ವಶಪಡಿಸಿಕೊಂಡಿರುವುದರಿಂದ, ಪುಟಿನ್ ಕೊಡುಗೆ ಅಷ್ಟೇನೂ ಗಂಭೀರವಲ್ಲ ಎಂದು ಉಕ್ರೇನಿಯನ್ ಅಧಿಕಾರಿ ಹೇಳಿದ್ದಾರೆ.

ಪ್ರಸ್ತುತ ಬೆಳವಣಿಗೆಗಳ ಕುರಿತು ಅರಿವು ಹೊಂದಿರುವ ಇನ್ನೋರ್ವ ವ್ಯಕ್ತಿಯ ಪ್ರಕಾರ, ಉಕ್ರೇನಿಗೆ ಅಮೆರಿಕಾದ ಭದ್ರತಾ ಭರವಸೆಯನ್ನು ಜೆಲೆನ್ಸ್‌ಕಿ ಸ್ವಾಗತಿಸಿದ್ದಾರೆ. ಆದರೆ, ಈ ಕುರಿತ ಮಾಹಿತಿಗಳು ಇನ್ನೂ ಸ್ಪಷ್ಟವಾಗಿಲ್ಲ. ಉಭಯ ದೇಶಗಳ ಅಧ್ಯಕ್ಷರು ಈ ಕುರಿತು ಸೋಮವಾರ ಹೆಚ್ಚಿನ ಸಮಾಲೋಚನೆ ನಡೆಸಲಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿ ಹೇಳಿದ್ದಾರೆ.

ಎಪ್ರಿಲ್ ಬಳಿಕ ಪುಟಿನ್‌ರ ಪ್ರಾದೇಶಿಕ ಬೇಡಿಕೆಗಳು ಇನ್ನಷ್ಟು ತೀಕ್ಷ್ಣವಾಗಿವೆ. ಎಪ್ರಿಲ್ ತಿಂಗಳಲ್ಲಿ ಪುಟಿನ್ ಟ್ರಂಪ್ ರಾಯಭಾರಿ ಸ್ಟೀವ್ ವಿಟ್ಕಾಫ್ ಬಳಿ 'ಮೂಲ ಸಮಸ್ಯೆಗಳು' ಪರಿಹಾರ ಕಂಡರೆ, ಸಂಪೂರ್ಣ ಕದನವನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದರು. ಯುದ್ಧ ಅಧಿಕೃತವಾಗಿ ಮುಕ್ತಾಯ ಕಾಣುವುದಿಲ್ಲ. ಆದರೆ, ಗಡಿಗಳು ಈಗ ಎಲ್ಲಿವೆಯೋ ಅಲ್ಲಿಗೇ ಸ್ಥಿರವಾಗಲಿದ್ದು, ರಷ್ಯಾ ಇನ್ನೂ ಹೆಚ್ಚಿನ ಪ್ರದೇಶಗಳ ಮೇಲೆ ಆಕ್ರಮಣ ನಡೆಸುವುದಿಲ್ಲ ಎಂದು ಪುಟಿನ್ ಹೇಳಿದ್ದರು.

ಪುಟಿನ್ ಜೊತೆ ಟ್ರಂಪ್ ಏನೇನು ಸಮಾಲೋಚನೆ ನಡೆಸಿದ್ದಾರೆ ಎಂದು ಶ್ವೇತ ಭವನ ಖಚಿತಪಡಿಸಿಲ್ಲ

ಆದರೆ ಪುಟಿನ್ ವಕ್ತಾರರಾದ ಡಿಮಿಟ್ರಿ ಪೆಸ್ಕೋವ್ ಅವರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. "ಟ್ರಂಪ್ ಮತ್ತು ಪುಟಿನ್ ನಡುವಿನ ಮಾತುಕತೆ ಅತ್ಯಂತ ಮಹತ್ವದ್ದಾಗಿದ್ದು, ಇದು ಒಂದು ಒಪ್ಪಂದಕ್ಕೆ ಬರಲು ನೆರವಾಗುವ ಸಾಧ್ಯತೆಗಳಿವೆ. ಮಾತುಕತೆಗಳು ಇನ್ನೂ ಮುಂದುವರಿಯಲಿದ್ದು, ಅಲ್ಲಿ ಏನೇನು ನಡೆಯಿತು ಎನ್ನುವುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ.

ಮಾಸ್ಕೋಗೆ ತೆರಳಿದ ಬಳಿಕ, ಪುಟಿನ್ ಅಲಾಸ್ಕಾ ಭೇಟಿ ಸಮಯೋಚಿತ ಮತ್ತು ಅತ್ಯಂತ ಉಪಯುಕ್ತವಾಗಿತ್ತು ಎಂದು ಕ್ರೆಮ್ಲಿನ್ ಅಧಿಕಾರಿಗಳೊಡನೆ ಹೇಳಿದ್ದಾರೆ ಎಂದು ರಷ್ಯನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಬಿಕ್ಕಟ್ಟಿಗೆ ಮೂಲ ಕಾರಣಗಳನ್ನು ಪುಟಿನ್ ಟ್ರಂಪ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು, ಯಾವುದೇ ಶಾಂತಿ ಒಪ್ಪಂದ ಈ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕು ಎಂದು ಪುಟಿನ್ ಆಗ್ರಹಿಸಿದ್ದಾರೆ.

ಒಂದು ವೇಳೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸದಿದ್ದರೆ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಪುಟಿನ್‌ರನ್ನು ಎಚ್ಚರಿಸುವ ಮನಸ್ಥಿತಿಯೊಡನೆ ಟ್ರಂಪ್ ಶುಕ್ರವಾರದ ಸಭೆಗೆ ತೆರಳಿದ್ದರು. ಆದರೆ, ಯಾವುದೇ ಫಲಶ್ರುತಿ ಇಲ್ಲದೆ ಸಭೆಯಿಂದ ವಾಪಸಾದ ಟ್ರಂಪ್, ಭೂಮಿ ಮತ್ತು ರಿಯಾಯಿತಿಗಳ ಕುರಿತು ಪುಟಿನ್ ಬೇಡಿಕೆಗಳನ್ನು ಯುರೋಪಿಯನ್ ನಾಯಕರ ಗಮನಕ್ಕೆ ತರಲು ಮಾತ್ರ ಶಕ್ತರಾದರು.

ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಟ್ರಂಪ್, ಯುರೋಪಿಯನ್ ನಾಯಕರಿಗೆ ಪುಟಿನ್ ಮೇಲೆ ಕದನ ವಿರಾಮಕ್ಕೆ ಒತ್ತಡ ಹೇರುವುದನ್ನು ನಿಲ್ಲಿಸುವಂತೆ ಸೂಚಿಸಿದ್ದು, ಬದಲಿಗೆ ಜೆಲೆನ್ಸ್‌ಕಿ ರಷ್ಯಾದೊಡನೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಜರ್ಮನ್ ಚಾನ್ಸಲರ್ ಫ್ರೆಡರಿಕ್ ಮರ್ಜ್ ಮತ್ತು ಫ್ರೆಂಚ್ ಅಧ್ಯಕ್ಷ ಇಮಾನುವಲ್ ಮಾಕ್ರೋನ್ ಸೇರಿದಂತೆ ಐರೋಪ್ಯ ನಾಯಕರೊಡನೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಟ್ರಂಪ್ ತನ್ನ ಸಾಮಾಜಿಕ ಜಾಲತಾಣ ಟ್ರುತ್ ಸೋಷಿಯಲ್‌ನಲ್ಲಿ ಈ ಕುರಿತು ಬರೆದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಸರಿಯಾದ ಮಾರ್ಗವೆಂದರೆ ಉಭಯ ದೇಶಗಳ ನಡುವೆ ನೇರವಾಗಿ ಶಾಂತಿ ಒಪ್ಪಂದ ಏರ್ಪಡಿಸುವುದು. ಯಾಕೆಂದರೆ, ಕದನ ವಿರಾಮ ಒಪ್ಪಂದಗಳು ಆಗಾಗ್ಗೆ ವಿಫಲವಾಗುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.

"ಎಲ್ಲವೂ ಅಂದುಕೊಂಡಂತೆ ನಡೆದರೆ, ನಾವು ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸುತ್ತೇವೆ" ಎಂದೂ ಟ್ರಂಪ್ ಹೇಳಿದ್ದಾರೆ.

ಅಲಾಸ್ಕಾದ ಆಂಕರೇಜ್‌ನಲ್ಲಿ ಪುಟಿನ್ ಮತ್ತು ಟ್ರಂಪ್ ನಡುವೆ ಜೆಲೆನ್ಸ್‌ಕಿ ಅವರನ್ನು ಒಳಗೊಂಡಂತೆ ತ್ರಿಪಕ್ಷೀಯ ಮಾತುಕತೆ ನಡೆಸುವ ಕುರಿತು ಸಮಾಲೋಚನೆ ನಡೆದಿಲ್ಲ ಎಂದು ಕ್ರೆಮ್ಲಿನ್ ಹೇಳಿದೆ.

ರಷ್ಯಾದ ಭಾರೀ ಬೇಡಿಕೆ ಮತ್ತು ಕದನ ವಿರಾಮಕ್ಕಾಗಿ ಆಗ್ರಹಿಸಲು ಟ್ರಂಪ್ ನಿರಾಕರಣೆ ಯುರೋಪಿನ ನಾಯಕರಿಗೆ ಮತ್ತೊಮ್ಮೆ ತಲೆನೋವಾಗುವ ಸಾಧ್ಯತೆಗಳಿವೆ. ಅಲಾಸ್ಕಾ ಸಭೆಗೂ ಮುನ್ನ ಟ್ರಂಪ್ ಶಾಂತಿ ಸ್ಥಾಪನೆಗಾಗಿ ಭೂ ಹಸ್ತಾಂತರದ ಕುರಿತು ಸಲಹೆ ನೀಡಿದಾಗಲೂ ಯುರೋಪಿಯನ್ ನಾಯಕರು ಆತಂಕಕ್ಕೆ ಒಳಗಾಗಿದ್ದರು.

2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಂತರ, ಪುಟಿನ್ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಆರೋಪಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಪುಟಿನ್ ಜೊತೆ ಟ್ರಂಪ್ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದು, ಇದು ಪುಟಿನ್‌ಗೆ ಬೇಕಾದಂತಹ ಫಲಿತಾಂಶ ನೀಡಿದೆ. ಅಂದರೆ, ಪುಟಿನ್ ತನ್ನ ಜಾಗತಿಕ ಏಕಾಕಿತನವನ್ನು ಕೊನೆಗೊಳಿಸಲು ಇದೊಂದು ಉತ್ತಮ ಅವಕಾಶವೂ ಹೌದು. ಆಂಕರೇಜ್‌ಗೆ ಆಗಮಿಸಿದ ಪುಟಿನ್‌ರನ್ನು ಟ್ರಂಪ್ ಕೆಂಪು ಹಾಸಿನ ಮೂಲಕ ಸ್ವಾಗತಿಸಿದರು. ಮಾತುಕತೆಗೂ ಮುನ್ನ ಟ್ರಂಪ್ ಪುಟಿನ್ ಜೊತೆ ತಮಾಷೆಯಾಗಿ ಮಾತನಾಡುತ್ತಿದ್ದುದೂ ಕಂಡುಬಂದಿತ್ತು.

ಯುರೋಪಿನ ನಾಯಕರೊಡನೆ ಟ್ರಂಪ್ ದೂರವಾಣಿ ಮಾತುಕತೆ ನಡೆಸಿದಾಗ ಮಾಕ್ರೋನ್ ಯಾವ ಕಾರಣಕ್ಕೂ ಪುಟಿನ್ ನಂಬಿಕೆಗೆ ಅರ್ಹರಲ್ಲ ಎಂದು ಟ್ರಂಪ್‌ರನ್ನು ಎಚ್ಚರಿಸಿದ್ದರು. ಹತ್ತು ವರ್ಷಗಳ ಹಿಂದೆ ನಡೆದ ಮಿನ್ಸ್ಕ್ ಕದನ ವಿರಾಮ ಒಪ್ಪಂದವನ್ನೂ ಪುಟಿನ್ ಎಂದಿಗೂ ಜಾರಿಗೆ ತರಲಿಲ್ಲ ಎಂದು ಮಾಕ್ರೋನ್ ನೆನಪಿಸಿದ್ದಾರೆ.

"ಪುಟಿನ್ ಇಂತಹ ದೀರ್ಘಾವಧಿಯ ಆಟಗಳನ್ನು ಆಡುತ್ತಾರೆ. ಅವರು ಯಾವ ಕಾರಣಕ್ಕೂ ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳುವುದಿಲ್ಲ" ಎಂದು ದೂರವಾಣಿ ಮಾತುಕತೆಯ ಮಾಹಿತಿ ಹೊಂದಿರುವ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. "ಟ್ರಂಪ್ ಕದನ ವಿರಾಮ ಅಥವಾ ಶಾಂತಿ ಒಪ್ಪಂದದ ಜಾರಿಗೆ ಅವಸರದಲ್ಲಿದ್ದಾರೆ. ಆದರೆ, ಪುಟಿನ್ ಯಾವುದೇ ರೀತಿಯ ಅವಸರದಲ್ಲೂ ಇಲ್ಲ" ಎಂದು ಅವರು ಹೇಳಿದ್ದಾರೆ.

ಕೋವಲಿಷನ್ ಆಫ್ ದ ವಿಲ್ಲಿಂಗ್ (ಶಾಂತಿ ಒಪ್ಪಂದ ನೆರವೇರಿದ ಬಳಿಕ ಉಕ್ರೇನಿಗೆ ಭದ್ರತಾ ಭರವಸೆಗಳನ್ನು ಜಾರಿಗೆ ತರುವ ಗುರಿ ಹೊಂದಿರುವ ದೇಶಗಳ ಗುಂಪು) ಭಾನುವಾರ ಸಭೆ ಸೇರಲಿದೆ ಎಂದು ವರದಿಗಳು ಹೇಳಿವೆ. ಈ ಸಂಘಟನೆಯಲ್ಲಿ ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಕೆನಡಾ, ಜಪಾನ್ ಮತ್ತು ಇತರ ದೇಶಗಳಿವೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)