ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಇತ್ತ ಸಿಂದೂ ನದಿ ಒಪ್ಪಂದ ರದ್ದು ಮಾಡಿದೆ. ಇದು ಪಾಕಿಸ್ತಾನದ ನಿದ್ದೆಗೆಡಿಸಿದೆ. ಅಸೀಮ್ ಮುನೀರ್ ಸತತ ಬೆದರಿಕೆ ಬಳಿಕ ಇದೀಗ ಮೌನವಾಗಿದ್ದ ಶೆಹಬಾಜ್ ಷರೀಫ್ ಭಾರತಕ್ಕೆ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇಸ್ಲಾಮಾಬಾದ್ (ಆ.13) ಪೆಹಲ್ಗಾಂ ಉಗ್ರ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆರೇಶನ್ ಸಿಂದೂರ್ ಮೂಲಕ ಪಾಠ ಕಲಿಸಿತ್ತು. ಇಷ್ಟೇ ಅಲ್ಲ ಪಾಕಿಸ್ತಾನ ಜೊತೆಗೆ ವ್ಯವಹಾರ ಬಂದ್ ಮಾಡಿತ್ತು. ಪಾಕಿಸ್ತಾನಕ್ಕೆ ವಾಯು ಪ್ರದೇಶ ನಿರಾಕರಿಸಿದೆ. ಸಿಂದೂ ನದಿ ಒಪ್ಪಂದ ರದ್ದುಗೊಳಿಸಿದೆ. ಸಿಂಧೂ ನದಿ ಒಪ್ಪಂದ ರದ್ದು ಕ್ರಮದಿಂದ ಪಾಕಿಸ್ತಾನ ಕಂಗಾಲಾಗಿದೆ. ಪಾಕಿಸ್ತಾನದ ಪ್ರಮುಖ ಜೀವನದಿಯಾಗಿರುವ ಸಿಂದೂ ನದಿ ನೀರು ಇಲ್ಲದಾಗಿದೆ. ಹೀಗಾಗಿ ಅಸೀಮ್ ಮುನೀರ್, ಬಿಲ್ವಾಲ್ ಬುಟ್ಟೋ ಸೇರಿದಂತೆ ಹಲವರು ಭಾರತಕ್ಕೆ ಸತತ ಬೆದರಿಕೆ ಹಾಕುತ್ತಿದ್ದಾರೆ. ಪರಮಾಣು ದಾಳಿಯ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಲವು ದಿನಗಳಿಂದ ಅಸಾಹಯಕನಾಗಿ, ಮೌನಕ್ಕೆ ಜಾರಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಇದೀಗ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಭಾರತ ಸಿಂಧೂ ನದಿ ಒಪ್ಪಂದ ಉಲ್ಲಂಘಿಸಿದರೆ ತಕ್ಕ ಪಾಠ ಕಲಿಸುವುದಾಗಿ ಬೆದರಿಸಿದ್ದಾರೆ.

ಭಾರತಕ್ಕೆ ನಾವು ಒಂದು ಹನಿ ನೀರು ಬಿಡುವುದಿಲ್ಲ

ಸಿಂಧೂ ನದಿ ನೀರಿನ ಒಪ್ಪಂದದ ಕುರಿತು ಭಾರತಕ್ಕೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಒಂದು ಹನಿ ನೀರನ್ನೂ ಬಿಡುವುದಿಲ್ಲ, ಭಾರತಕ್ಕೆ ಪಾಠ ಕಲಿಸುತ್ತೇವೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಇಸ್ಲಾಮಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಷರೀಪ್ ಪಾಠ ಕಲಿಸುವ ಬೆದರಿಕೆ ಹಾಕಿದ್ದಾೆ.

“ನಮ್ಮ ನೀರನ್ನು ತಡೆಯುವುದಾಗಿ ನಮ್ಮ ಶತ್ರು ಬೆದರಿಕೆ ಹಾಕುತ್ತಿದ್ದಾನೆ. ಇಂತಹ ಕ್ರಮ ಕೈಗೊಳ್ಳಲು ಪ್ರಯತ್ನಿಸಿದರೆ, ಪಾಕಿಸ್ತಾನ ನಿಮಗೆ ಮರೆಯಲಾಗದ ಪಾಠ ಕಲಿಸುತ್ತದೆ” ಎಂದು ಷರೀಫ್ ಹೇಳಿದ್ದಾರೆ. ಸಿಂಧೂ ನದಿ ನೀರು ಪಾಕಿಸ್ತಾನದ ಜೀವನಾಡಿ. ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಪಾಕಿಸ್ತಾನದ ಹಕ್ಕುಗಳ ಬಗ್ಗೆ ಯಾವುದೇ ರಾಜಿ ಇಲ್ಲ ಎಂದಿದ್ದಾರೆ.

1960ರ ಒಪ್ಪಂದ ರದ್ದು

ಸಿಂಧೂ ನದಿ ನೀರಿನ ಒಪ್ಪಂದದ ಸಾಮಾನ್ಯ ಕಾರ್ಯಾಚರಣೆಯನ್ನು ಪುನರಾರಂಭಿಸುವಂತೆ ಪಾಕಿಸ್ತಾನದ ವಿದೇಶಾಂಗ ಕಚೇರಿ ಭಾರತವನ್ನು ಕೇಳಿದ ನಂತರ ಶೆಹಬಾಜ್ ಷರೀಫ್ ಈ ಹೇಳಿಕೆ ನೀಡಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಕೈವಾಡ ಇದೆ ಎಂದು ಭಾರತಕ್ಕೆ ಸಾಕ್ಷ್ಯಾಧಾರಗಳೊಂದಿಗೆ ಮಾಹಿತಿ ಸಿಕ್ಕ ನಂತರ 1960 ರ ಸಿಂಧೂ ನದಿ ನೀರಿನ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ.

ಯಾವ ನದಿಗಳ ಮೇಲೆ ಪಾಕಿಸ್ತಾನಕ್ಕಿದೆ ಹಕ್ಕು

ಶೆಹಬಾಜ್ ಷರೀಫ್ ಮೊದಲು ಪಾಕ್ ರಾಜಕೀಯ ನಾಯಕ ಬಿಲಾವಲ್ ಭುಟ್ಟೊ ಕೂಡ ಸಿಂಧೂ ನದಿ ನೀರಿನ ವಿವಾದದಲ್ಲಿ ಭಾರತದ ವಿರುದ್ಧ ಯುದ್ಧದ ಬೆದರಿಕೆ ಹಾಕಿದ್ದರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಇತ್ತೀಚೆಗೆ ನಡೆದ ಯುಎಸ್ ಭೇಟಿಯ ಸಂದರ್ಭದಲ್ಲಿ ಭಾರತದೊಂದಿಗೆ ಪರಮಾಣು ಯುದ್ಧದ ಸಾಧ್ಯತೆಯಿದೆ ಎಂದು ಬೆದರಿಕೆ ಹಾಕಿದ್ದರು. 1960 ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಬಿಯಾಸ್, ಸಟ್ಲೆಜ್ ಮತ್ತು ರವಿ ನದಿಗಳ ನೀರಿನ ಮೇಲೆ ಭಾರತಕ್ಕೆ ಪೂರ್ಣ ಹಕ್ಕಿದೆ. ಸಿಂಧೂ, ಝೀಲಂ ಮತ್ತು ಚಿನಾಬ್ ನದಿಗಳ ನೀರಿನ ಮೇಲೆ ಪಾಕಿಸ್ತಾನಕ್ಕೆ ಹಕ್ಕಿದೆ.

ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಚಿನಾಬ್ ನದಿಯಲ್ಲಿ ಭಾರತವು ತನ್ನ ಅತಿದೊಡ್ಡ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. 1,856 ಮೆಗಾವ್ಯಾಟ್‌ನ ಈ ಯೋಜನೆಗೆ ಪಾಕಿಸ್ತಾನದ ಅನುಮತಿ ಕೇಳುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಮುನೀರ್ ಅವರ ಪರಮಾಣು ಬೆದರಿಕೆಯನ್ನು ಭಾರತ ಅಧಿಕೃತವಾಗಿ ಖಂಡಿಸಿತ್ತು.