ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಂ ಮುನೀರ್ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.

ವಾಷಿಂಗ್ಟನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಂ ಮುನೀರ್ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆಯುತ್ತಿದೆ.

ಇತ್ತೀಚೆಗೆ ಪಾಕಿಸ್ತಾನದ ಜೊತೆ ಹೊಸ ವ್ಯಾಪಾರ ಒಪ್ಪಂದಕ್ಕೆ ಟ್ರಂಪ್ ಸಹಿ ಹಾಕಿದ್ದರು. ಇದರ ಭಾಗವಾಗಿ ಪಾಕಿಸ್ತಾನಕ್ಕೆ ಆದ್ಯತೆಯ ಸುಂಕ ದರವನ್ನು ನೀಡುವುದಾಗಿ ಮತ್ತು ಪಾಕಿಸ್ತಾನದಲ್ಲಿ ತೈಲ ನಿಕ್ಷೇಪಗಳನ್ನು ಪತ್ತೆಹಚ್ಚಲು ಸಹಾಯ ಮಾಡುವುದಾಗಿ ತಿಳಿಸಿದ್ದರು. ಆದರೆ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತಿರುವ ಕಾರಣ ಭಾರತದ ರಫ್ತಿಗೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಟ್ರಂಪ್ ಇತ್ತೀಚೆಗೆ ಘೋಷಿಸಿದ್ದರು. ಇದರಿಂದ ಭಾರತೀಯ ಉತ್ಪನ್ನಗಳ ಮೇಲಿನ ಒಟ್ಟು ಸುಂಕ ಶೇ.50ಕ್ಕೆ ಏರಿಕೆಯಾಗಲಿದೆ.

ಫೀಲ್ಡ್ ಮಾರ್ಷಲ್ ಅಸಿಂ ಮುನೀರ್ ಜೂನ್‌ನಲ್ಲಿ ಕೊನೆಯ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಆಗ ಟ್ರಂಪ್ ಅವರಿಗೆ ವೈಟ್ ಹೌಸ್‌ನಲ್ಲಿ ಊಟಕ್ಕೆ ಆತಿಥ್ಯ ವಹಿಸಿದ್ದರು. ಪಾಕ್ ಪತ್ರಿಕೆ ಡಾನ್ ವರದಿ ಮಾಡಿರುವ ಪ್ರಕಾರ, ಈ ವರ್ಷ ಮತ್ತೆ ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮುನೀರ್ ಆಗಲೇ ಸೂಚಿಸಿದ್ದರು. ಯುಎಸ್ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಕಳೆದ ಜುಲೈನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಮುನೀರ್ ಅವರ ಈ ಭೇಟಿ ನಡೆಯುತ್ತಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ನಡೆಸಿದ ಆಪರೇಷನ್ ಸಿಂದೂರ್ ಪ್ರತಿದಾಳಿಯ ನಂತರ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಹಳಸಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದರು. ಆದರೆ ಈ ಹೇಳಿಕೆಯನ್ನು ನರೇಂದ್ರ ಮೋದಿ ಸರ್ಕಾರ ನಿರಾಕರಿಸಿತ್ತು. ‘ಆಪರೇಷನ್ ಸಿಂದೂರ್ ನಿಲ್ಲಿಸಲು ಜಗತ್ತಿನ ಯಾವ ನಾಯಕರೂ ನಮ್ಮನ್ನು ಕೇಳಿಲ್ಲ’ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದ್ದರು. ಈ ಘಟನೆಗಳ ಜೊತೆಗೆ ಸುಂಕ ಹೆಚ್ಚಳವೂ ಸೇರಿಕೊಂಡಿದೆ.