ಭಾರತದ ನೆರೆ ರಾಷ್ಟ್ರಗಳು ಒಂದೊಂದಾಗಿ ಹೊತ್ತಿ ಉರಿಯುತ್ತಿದೆ ಶ್ರೀಲಂಕಾ, ಬಾಂಗ್ಗಾದೇಶ ಇದೀಗ ನೇಪಾಳ. ಸೋಶಿಯಲ್ ಮೀಡಿಯಾ ನಿಷೇಧ ಈ ಮಟ್ಟಕ್ಕೆ ಹಿಂಸಾಚಾರಕ್ಕೆ ಕಾರಣವಾಯಿತಾ?

ಶ್ರೀಲಂಕಾ...

ಬಾಂಗ್ಲಾದೇಶ...

ನೇಪಾಳ...

ಭಾರತದ ನೆರೆರಾಷ್ಟ್ರಗಳಲ್ಲಿ ಜನರು ದಂಗೆಯೇಳುವ ಪ್ರವೃತ್ತಿ ಮುಂದುವರಿದಿದೆ. ನೇಪಾಳದಲ್ಲಿ 19 ಪ್ರತಿಭಟನಾಕಾರರ ಸಾವು ಯುವಜನರ ಒಂದು ವರ್ಗವನ್ನು ರೊಚ್ಚಿಗೆಬ್ಬಿಸಿದೆ. ಈಗಾಗಲೇ ಪ್ರಧಾನಿ ಹಾಗೂ ಸಚಿವರು ರಾಜೀನಾಮೆ ನೀಡಿದ್ದಾರೆ. ರಾಜಕೀಯ ನಾಯಕರನ್ನು ಅಟ್ಟಾಡಿಸಿ ಹಲ್ಲೆ ಮಾಡಲಾಗ್ತಿದೆ, ಅವರ ಮನೆಗಳಿಗೆ ಬೆಂಕಿಯಿಟ್ಟಿರುವ ವರದಿಗಳು ಬರ್ತಿವೆ. ಎಲ್ಲೆಂದರಲ್ಲಿ ಆಕ್ರೋಶ... ಕ್ರೌರ್ಯ... ವಿಧ್ವಂಸ...

ಹಿಮಾಲಯದ ತಪ್ಪಲಿನಲ್ಲಿ 'ಕೂಲ್‌ ಕೂಲ್‌' ಆಗಿದ್ದ ಈ ಪುಟ್ಟ ದೇಶದಲ್ಲಿ ರೋಷಾಗ್ನಿ ಧಗಧಗಿಸಲು ಕಾರಣ ಏನು? ಇದೇನು ಆಕಸ್ಮಿಕ ಘಟನೆಯೇ? ಕೇವಲ 'ಸೋಶಿಯಲ್ ಮೀಡಿಯಾ' ಬ್ಯಾನ್‌ ಕಾರಣವೇ? ಯುವಜನರು ಈ ಪ್ರಮಾಣದಲ್ಲಿ ಬೀದಿಗಿಳಿಯುವ, ಉಗ್ರ ಪ್ರತಿಭಟನೆ ನಡೆಸುವಷ್ಟು ಸೋಶಿಯಲ್ ಮೀಡಿಯಾದ ಮೇಲೆ ಅವಲಂಬಿತರಾಗಿದ್ದಾರೆಯೇ? ಅಥ್ವಾ ಅದರ ದಾಸರಾಗಿದ್ದಾರೆಯೇ? ಕೇವಲ ಸೋಶಿಯಲ್‌ ಮೀಡಿಯಾಗಾಗಿ ಈ ಮಟ್ಟದ ವರ್ತನೆ ತೋರುವಷ್ಟು ಅಲ್ಲಿನ ಯುವಜನರು ವಿವೇಕವನ್ನು ಕಳೆದುಕೊಂಡಿದ್ದಾರೆಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಸರ್ಕಾರದಿಂದ ಸೋಶಿಯಲ್ ಮೀಡಿಯಾ ಬ್ಯಾನ್:

ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಣಿ ಮಾಡಿಸದ ಹಿನ್ನೆಲೆ, ಫೇಸ್ಬುಕ್, ಎಕ್ಸ್ ಹಾಗೂ ಯೂಟ್ಯೂಬ್‌ ಸೇರಿದಂತೆ 26 ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಿ ನೇಪಾಳ ಸರ್ಕಾರ ಕಳೆದ ಗುರುವಾರ ಆದೇಶ ಹೊರಡಿಸಿತ್ತು. ನೋಂದಣಿ ಮಾಡಿಸಲು ಆ.28 ರಿಂದ ಒಂದು ವಾರ ಅವಕಾಶ ಕೊಡಲಾಗಿದ್ದರೂ, ಮೆಟಾ ಒಡೆತನದ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಪ್ ಆಗಲಿ, ಅಲ್ಫಾಬೆಟ್‌ ಒಡೆತನದ ಯೂಟ್ಯೂಬ್‌ ಆಗಲಿ, ಎಲಾನ್ ಮಸ್ಕ್ ಒಡೆತನದ ಎಕ್ಸ್‌ ಆಗಲಿ ಅಥ್ವಾ ಲಿಂಕ್ಡ್‌ಇನ್, ರೆಡಿಟ್ ಆಗಲಿ... ಯಾವ ಸಂಸ್ಥೆಯೂ ನೋಂದಣಿ ಮಾಡಿಸಿರಲಿಲ್ಲ. ಕಳೆದ ವರ್ಷ ನೇಪಾಳ ಸುಪ್ರೀಂ ಕೋರ್ಟ್‌ ಆದೇಶದನ್ವಯ, ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸ್ಥಳೀಯ ಸಂಪರ್ಕಾಧಿಕಾರಿಯನ್ನು ನಿಯೋಜಿಸಿ ಅವರ ವಿವರಗಳನ್ನು ಸರ್ಕಾರದ ಜೊತೆ ಹಂಚಿಕೊಳ್ಳಬೇಕಿತ್ತು. ಆದರೆ, TikTok, Viber, Witk, Nimbuzz ಮತ್ತು Popo Liveಗಳಂತ ಸಂಸ್ಥೆಗಳು ಸರ್ಕಾರದ ಆದೇಶವನ್ನು ಪಾಲಿಸಿ ನೋಂದಾಯಿಸಿದ ಹಿನ್ನೆಲೆ ಅವುಗಳ ಮೇಲೆ ನಿರ್ಬಂಧ ಹೇರಲಾಗಿಲ್ಲ.

3 ದಿನ 3 ಪ್ರಧಾನಿಗಳು ಔಟ್! ಜಾಗತಿಕ ರಾಜಕಾರಣದಲ್ಲಿ ತಲ್ಲಣ!

ನೇಪಾಳಿಗರ ಸೋಶಿಯಲ್ ಮೀಡಿಯಾ ಪ್ರೀತಿ:

ನೆಟ್ವರ್ಕಿಂಗ್ ಪ್ರೀತಿಯೋ ಅಥ್ವಾ ಅವಲಂಬನೆಯೋ, ಇತ್ತೀಚಿಗಿನ ವರ್ಷಗಳಲ್ಲಿ ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಪ್ರಮಾಣ ಬಹಳ ಹೆಚ್ಚಾಗಿದೆ. ಅದಕ್ಕೆ ಹತ್ತು ಹಲವು ಕಾರಣಗಳಿವೆ.

ನೇಪಾಳದ ಜನಸಂಖ್ಯೆ ಸುಮಾರು 30 ಮಿಲಿಯನ್ (ಅಂದ್ರೆ 3 ಕೋಟಿ). ಒಂದು ವರದಿಯ ಪ್ರಕಾರ ನೇಪಾಳದಲ್ಲಿ ಸುಮಾರು 1.4 ಕೋಟಿ ಸೋಶಿಯಲ್ ಮೀಡಿಯಾ ಬಳಕೆದಾರರಿದ್ದಾರೆ, 48%- ಜನಸಂಖ್ಯೆಯ ಸರಿಸುಮಾರು ಅರ್ಧಕ್ಕರ್ಧ! ಈ ಪ್ರಮಾಣ ಭಾರತಕ್ಕಿಂತಲೂ ಹೆಚ್ಚು! ಭಾರತದಲ್ಲಿ ಈ ಪ್ರಮಾಣ 33% ಮಾತ್ರ! ನೇಪಾಳದಲ್ಲಿ ಫೇಸ್ಬುಕ್ ಅತೀ ಹೆಚ್ಚು ಜನಪ್ರಿಯವಾಗಿದ್ದು, ಸುಮಾರು 14 ಮಿಲಿಯನ್ ಬಳಕೆದಾರರಿದ್ದಾರೆ. ಸುಮಾರು 4 ಮಿಲಿಯನ್ ಇನ್ಸ್ಟಾಗ್ರಾಂ ಬಳಕೆದಾರರು ಹಾಗೂ 2 ಮಿಲಿಯನ್ ಲಿಂಕ್ಡ್‌ಇನ್ ಬಳಕೆದಾರರಿದ್ದಾರೆ.

ಯುವಜನರಿಗೆ ಕಾಡುತ್ತಿರುವ ನಿರುದ್ಯೋಗ:

ನೇಪಾಳ ಜನಸಂಖ್ಯೆಯ 77.4% ಭಾಗ ಗ್ರಾಮೀಣ ಜನರು. ದೂರದೂರದ ಗುಡ್ಡಗಾಡು, ಪರ್ವತಗಳಲ್ಲಿ ವಾಸಿಸುವವರು ಹೆಚ್ಚು. ಹಾಗಾಗಿ ನಗರ ಪ್ರದೇಶ ಹಾಗೂ ಹೊರ ದೇಶಗಳಿಗೆ ವಲಸೆ ಹೋಗಿ ಶಿಕ್ಷಣ ಪಡೆಯುವ, ದುಡಿಯುವ ಜನರ ಪ್ರಮಾಣ ಹೆಚ್ಚಿದೆ. ವರ್ಲ್ಡ್‌ ಬ್ಯಾಂಕ್‌ ವರದಿಯೊಂದರ ಪ್ರಕಾರ 2024ರಲ್ಲಿ 24 ವಯಸ್ಸಿನ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಸುಮಾರು 20.8%! ದೇಶದ ಜಿಡಿಪಿಯ ಶೇ.33ರಷ್ಟು ಆದಾಯ ಬರೋದು ಹೊರದೇಶಗಳಲ್ಲಿ ದುಡಿಯುವವವರಿಂದ ಎಂಬುವುದು ಗಮನಿಸಬೇಕಾದ ಸಂಗತಿ!

ನೇಪಾಳ ಪ್ರಧಾನಿ ರಾಜೀನಾಮೆ ಬಳಿಕ ಮಹತ್ವದ ಬೆಳವಣಿಗೆ, ಹಿಂದೂ ರಾಜ್ಯ ಮರುಸ್ಥಾಪಿಸಿ ರಾಜರ ಆಡಳಿತ?

ಬೆಂಕಿಗೆ ತುಪ್ಪ ಸುರಿಯಿತಾ ನೆಪೋ ಕಿಡ್ ಅಭಿಯಾನ?

ನೇಪಾಳ ಸರ್ಕಾರ ಸೋಶಿಯಲ್ ಮೀಡಿಯಾವನ್ನು ಬ್ಯಾನ್‌ ಮಾಡೋ ವಾರಗಳ ಹಿಂದೆ 'ನೆಪೋ ಕಿಡ್‌' ಎಂಬ ಅಭಿಯಾನ ಭಾರೀ ಸದ್ದು ಮಾಡಿತ್ತು. ರಾಜಕಾರಣಿಗಳ ವಿಲಾಸಿ ಜೀವನ, ಅವರ ಮಕ್ಕಳ ಐಷಾರಾಮಿ ಜೀವನಶೈಲಿ ಹಾಗೂ ಭ್ರಷ್ಟಾಚಾರಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿದ್ದು, ವ್ಯವಸ್ಥೆಯ ವಿರುದ್ಧ ಆಕ್ರೋಶದ ಕಿಡಿಹೊತ್ತಿಸಿತ್ತು . ಆ ಧ್ವನಿಯನ್ನು ಹತ್ತಿಕ್ಕಲೆಂದೇ ಸರ್ಕಾರವು ಸೋಶಿಯಲ್ ಮೀಡಿಯಾವನ್ನು ಬ್ಯಾನ್ ಮಾಡಿದೆ ಎಂಬುವುದು ಪ್ರತಿಭಟನಾಕಾರರ ಆರೋಪ.

ಭ್ರಷ್ಟಾಚಾರ ವಿರೋಧಿ ಸ್ವರೂಪ ಪಡೆದ ಪ್ರತಿಭಟನೆ:

ಇನ್ನು ಸರ್ಕಾರದ 'ಬ್ಯಾನ್' ಕ್ರಮವು ಯುವಜನರ ಎದೆಯಲ್ಲಿದ್ದ ಬೆಂಕಿಗೆ ತುಪ್ಪ ಸುರಿಯಿತು ಎಂದರೆ ತಪ್ಪಾಗಲಾರದು. ಸೋಶಿಯಲ್‌ ಮೀಡಿಯಾ ಬ್ಯಾನ್‌ ಎಂಬುವುದು ನೆಪ ಮಾತ್ರ, ವಾಸ್ತವದಲ್ಲಿ ಪ್ರತಿಭಟನೆಗಳು ಸರ್ಕಾರದ 'ಭ್ರಷ್ಟಾಚಾರ'ದ ವಿರುದ್ಧವಾಗಿತ್ತು ಎಂದು ವಿಶ್ಲೇಷಿಲಾಗುತ್ತಿದೆ.

ಪ್ರತಿಭಟನಾಕಾರರ ಮೇಲೆ ಫೈರಿಂಗ್ ಹಾಗೂ 19 ಮಂದಿಯ ಸಾವಂತೂ ಯುವಜನರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ. ಪ್ರಧಾನಿ ಹಾಗೂ ಸಚಿವರ ತಲೆದಂಡವಾಗಿದೆ. ರಾಜಕೀಯ ನಾಯಕರನ್ನು ಅಟ್ಟಾಡಿಸಿ ಹಲ್ಲೆ ಮಾಡಲಾಗುತ್ತಿದೆ, ಪಾರ್ಲಿಮೆಂಟ್‌ ಕಟ್ಟಡ ಸೇರಿದಂತೆ ಸರ್ಕಾರಿ ಕಟ್ಟಡಗಳ ಮೇಲೆ ದಾಳಿಯಾಗುತ್ತಿದೆ, ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿಯಿಟ್ಟ ಘಟನೆಯಲ್ಲಿ ಅವರ ಪತ್ನಿ ಸಾವನಪ್ಪಿದ್ದಾರೆ, ಏರ್ಪೋರ್ಟ್‌ ಮುಚ್ಚಲಾಗಿದೆ, ಎಲ್ಲಾ ಕಡೆ ಹಿಂಸೆ ತಾಂಡವವಾಡುತ್ತಿದೆ, ಒಟ್ಟು 22 ಮಂದಿ ಸಾವನಪ್ಪಿದ್ದಾರೆ. ಶಾಂತಿ ಕಾಪಾಡುವಂತೆ ನೇಪಾಳ ಸೇನೆ ಪ್ರತಿಭಟನಕಾರರಲ್ಲಿ ಮನವಿ ಮಾಡಿದೆ.