ನವರಾತ್ರಿ, ದೀಪಾವಳಿ ಹಬ್ಬಕ್ಕೆ ಪ್ರಯಾಣ ರದ್ದು, ಅಮೆರಿಕದಲ್ಲಿ H-1B ವೀಸಾ ಭಾರತೀಯರ ಪರದಾಟ, ಡೋನಾಲ್ಡ್ ಟ್ರಂಪ್ ಕೊಟ್ಟ ಮತ್ತೊಂದು ಶಾಕ್‌ಗೆ ಭಾರತೀಯರು ಕಂಗಾಲಾಗಿದ್ದಾರೆ. ಭಾರತ ಪ್ರವಾಸ ಮಾಡಲು ಸಾಧ್ಯವಾಗದೇ, ಅಮೆರಿಕದಲ್ಲಿ ಇರಲೂ ಸಾಧ್ಯವಾಗದೇ ಕಂಗೆಟ್ಟು ಕುಳಿತಿದ್ದಾರೆ.
ವಾಶಿಂಗ್ಟನ್ (ಸೆ.20) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧ್ಯಕ್ಷನಾದ ಬಳಿಕ ಕೈಗೊಳ್ಳುತ್ತಿರುವ ನಿರ್ಧಾರಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ. ಪ್ರಮುಖವಾಗಿ ಭಾರತಕ್ಕೆ ಒಂದರ ಮೇಲೊಂದರಂತೆ ಹೊಡೆತ ಬೀಳುತ್ತಿದೆ. ಇತ್ತೀಚೆಗಷ್ಟು ಟಾರಿಫ್ ಶೇಕಡಾ 50ರಷ್ಟು ಏರಿಸಿ ಶಾಕ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಭಾರತೀಯರೇ ಹೆಚ್ಚಾಗಿ ಹೊಂದಿರುವ ಅಮೆರಿಕದ H-1B ವೀಸಾ ಮೇಲೆ 88 ಲಕ್ಷ ರೂಪಾಯಿ ವಾರ್ಷಿಕ ಶುಲ್ಕ ವಿಧಿಸಿದ್ದಾರೆ. ನವರಾತ್ರಿ ಹಬ್ಬಕ್ಕಾಗಿ ತವರಿಗೆ ಮರಳಲು ಸಜ್ಜಾಗಿರುವ ನಡುವೆ ಟ್ರಂಪ್ ನೀಡಿದ ಆಘಾತದಿಂದ ಅಮೆರಿಕದಲ್ಲಿರುವ ಭಾರತೀಯರು ಕಂಗಲಾಗಿದ್ದಾರೆ.
ಭಾರತೀಯರ ಪ್ರಯಾಣ ರದ್ದು
ಅಮೆರಿಕದಲ್ಲಿ ಉದ್ಯೋಗಕ್ಕಾಗಿ ತೆರಳುವ ಭಾರತೀಯರು H-1B ವೀಸಾ ಪಡೆದು ತೆರಳುತ್ತಿದ್ದರು. ಭಾರತೀಯರೇ ಬಳಸುವ ಅಮೆರಿಕದ H-1B ವೀಸಾ ಇದೀಗ ಟ್ರಂಪ್ ನಿರ್ಧಾರದಿಂದ ಕೈಗೆಟುಕದ ವಸ್ತುವಾಗಿದೆ. ವಾರ್ಷಿಕವಾಗಿ 2,000 ರಿಂದ 5,000 ಅಮೆರಿಕನ್ ಡಾಲರ್ ಮೊತ್ತದಷ್ಟಿದ್ದ ಇದೇ H-1B ವೀಸಾಗೆ ಈಗ ವಾರ್ಷಿಕ 1 ಲಕ್ಷ ಡಾಲರ್ ಪಾವತಿಸುವಂತೆ ಟ್ರಂಪ್ ಸೂಚಿಸಿದ್ದಾರೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ 88 ಲಕ್ಷ ರೂಪಾಯಿ. ಇದು ಅಮೆರಿಕದಲ್ಲಿ H-1B ವೀಸಾ ಪಡೆದು ಕೆಲಸ ಮಾಡುತ್ತಿರುವ ಭಾರತೀಯನಿಗೆ ಅಸಾಧ್ಯ. ಹೀಗಾಗಿ ಆತಂಕ, ಕಂಗಾಲಾಗಿರುವ ಭಾರತೀಯರು ಹಬ್ಬದ ಪ್ರಯಾಣ ರದ್ದು ಮಾಡಿದ್ದಾರೆ. ಮಂದೇನು ಎಂದು ಚಿಂತಿಸವಂತಾಗಿದೆ.
ಅಮೆರಿಕದವರಿಗೆ ಕೆಲಸ ಕೊಡಿ, ವಿದೇಶಿಗರು ಯಾಕೆ?
ಡೋನಾಲ್ಡ್ ಟ್ರಂಪ್ ಹಲವು ನಿರ್ಧಾರಗಳು ಭಾರತೀಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಪ್ರಮುಖವಾಗಿ ಅಮೆರಿಕದಲ್ಲಿನ ಕೆಲಸಗಳಿಗೆ ಭಾರತ ಸೇರಿದಂತೆ ವಿದೇಶದಗಳಿಂದ ಉದ್ಯೋಗಿಗಳನ್ನು ಕರೆತರವು ಬದಲು, ಕಂಪನಿಗಳು ಇಲ್ಲಿನ ವಿದ್ಯಾರ್ಥಿಗಳು, ಯುವಕರಿಗೆ ತರಬೇತಿ ನೀಡಿ ಕೆಲಸ ಕೊಡಿ. ವಿದೇಶಗರನ್ನು ಕರೆಯಿಸಿ ಅವರಿಗೆ ತರಬೇತಿ ನೀಡಿ ಕೆಲಸ ಕೊಡುವ ಬದಲು ಇಲ್ಲಿನವರಿಗೆ ಕೆಲಸ ಕೊಡಿ. ಎಂದು ಟ್ರಂಪ್ ಸರ್ಕಾರ ತಾಕೀತು ಮಾಡಿದೆ. ಇದರ ಮುಂದುವರಿದ ಭಾಗವಾಗಿ H-1B ವೀಸಾ ದುಬಾರಿ ಮಾಡಲಾಗಿದೆ. ಇದರಿಂದ ವಾರ್ಷಿಕ 88 ಲಕ್ಷ ರೂಪಾಯಿ ವೀಸಾಗೆ ನೀಡಿ ಅಮೆರಿಕದಲ್ಲಿ ಉದ್ಯೋಗ ಮಾಡುವ ಸಾಹಸಕ್ಕೆ ಭಾರತೀಯರು ಕೈಹಾಕುವುದಿಲ್ಲ. ಇದರಿಂದ ಭಾರತೀಯರು ಅಮೆರಿಕಾಗೆ ಕೆಲಸಕ್ಕಾಗಿ ಬರುವುದು ತಪ್ಪಲಿದೆ. ಟೆಕ್ ಸೇರಿದಂತೆ ಪ್ರಮುಖ ಐಟಿ ಕ್ಷೇತ್ರದಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ಪ್ರತಿಷ್ಠಿತ ಕಂಪನಿಗಳ ಸಿಇಒ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಭಾರತೀಯರೇ ಇದ್ದಾರೆ. ಇದೆಲ್ಲದಕ್ಕೂ ಕಡಿವಾಣ ಹಾಕಲು ಟ್ರಂಪ್ ಹಾಕಿದ ವೀಸಾ ನೀತಿ ಭಾರತೀಯರಿಗೆ ಮುಳುವಾಗಿದೆ.
H-1B ವೀಸಾ ಪ್ರಮುಖವಾಗಿ ಕೌಶಲ್ಯ ಭರಿತ ಕಾರ್ಮಿಕರನ್ನು ತಾತ್ಕಾಲಿಕವಾಗಿ ಅಮೆರಿಕಕ್ಕೆ ಕರೆತರಲು, ಕೌಶಲ್ಯದ ಕೆಲಸ ನಿರ್ವಹಣೆ ಮಾಡಲು ನೀಡುವ ವೀಸಾ ಆಗಿದೆ. ಆದರೆ ಅಮೆರಿಕದ ಕಂಪನಿಗಳು H-1B ವೀಸಾ ದುರ್ಬಳಕೆ ಮಾಡಿಕೊಳ್ಳುತ್ತಿದೆ. H-1B ವೀಸಾ ಬಳಸಿಕೊಂಡು ಕಡಿಮೆ ವೇತನಕ್ಕೆ ವಿದೇಶಗಳಿಂದ ಕಾರ್ಮಿಕರನ್ನು, ಉದ್ಯೋಗಿಗಳನ್ನು ಅಮೆರಿಕಾಗೆ ಕರೆಯಿಸಿಕೊಳ್ಳಲಾಗುತ್ತಿದೆ. ಬಳಿಕ ಅಮೆರಿಕನ್ನರ ಬದಲು ಈ ಕಡಿಮೆ ವೇತನದ ಹಾಗೂ ಕಡಿಮೆ ಕೌಶಲ್ಯದವರಿಗೆ ಉದ್ಯೋಗ ನೀಡಲಾಗುತ್ತದೆ. ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
