8ನೇ ಶತಮಾನದ ಅಂತ್ಯದಲ್ಲಿ ಯುರೋಪಿಯನ್ ರಾಷ್ಟ್ರಗಳ ನಡುವಿನ ಬಾಲ್ಕನ್ ಮತ್ತು ಉತ್ತರ ಆಫ್ರಿಕಾದಲ್ಲಿನ ಸಂಘರ್ಷದ ಹೊರತಾಗಿಯೂ ವಿಶ್ವದ ಆರ್ಥಿಕತೆ ಏರುಗತಿಯಲ್ಲಿತ್ತು. ಆದರೆ..

ಇಂಡಿಯಾ ಗೇಟ್‌: ಪ್ರಶಾಂತ್ ನಾತು

ಜಾಗತಿಕ ರಾಜಕಾರಣ ಮತ್ತು ಆರ್ಥಿಕತೆ ಯಾವತ್ತೂ ನಿಂತ ನೀರು ಆಗಿರುವುದಿಲ್ಲ. ಕಾಲದಿಂದ ಕಾಲಕ್ಕೆ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಜಾಗತಿಕ ನೀತಿಗಳು ಮತ್ತು ಚಲನೆಯ ದಿಕ್ಕುಗಳು ಬದಲಾಗುತ್ತಲೇ ಇರುತ್ತವೆ. ಎರಡನೇ ಮಹಾಯುದ್ಧದ ನಂತರ ‘ವಿಶ್ವವು ಮುಕ್ತ ಮಾರುಕಟ್ಟೆಯತ್ತ ಸಾಗಬೇಕು. ಅದು ಮಾತ್ರವೇ ಧ್ವಸ್ತವಾಗಿದ್ದ ವಿಶ್ವದ ಆರ್ಥಿಕತೆ ಪುನರಪಿ ಚೇತರಿಕೆಗೆ ಕಾರಣ ಆಗಬಹುದು’ ಎನ್ನುತ್ತಿದ್ದ ಅಮೆರಿಕ; ‘ಸಮಾಜವಾದ ಮತ್ತು ಸಾಮ್ಯವಾದವೊಂದೇ ವಿಶ್ವದ ಆರ್ಥಿಕತೆಯ ಭವಿಷ್ಯ’ ಎನ್ನುತ್ತಿದ್ದ ಸೋವಿಯತ್ ಯೂನಿಯನ್ ನಡುವಿನ ಶೀತಲ ಸಮರವನ್ನು ಜಗತ್ತು ನೋಡಿದೆ. ಆದರೆ ಯಾವಾಗ 1991ರಲ್ಲಿ ಸೋವಿಯತ್ ಯೂನಿಯನ್ ಕುಸಿದು ಬಿತ್ತೋ ಹೆಚ್ಚು ಕಡಿಮೆ ಪೂರ್ತಿ ಜಗತ್ತು ಅಮೆರಿಕದ ಏಕಚಕ್ರ ಅಧಿಪತ್ಯವನ್ನು ಒಪ್ಪಿಕೊಂಡಿತ್ತು. ಪರಿಣಾಮ ಏನು ಅಂದರೆ, GATT ಒಪ್ಪಂದ ಹೋಗಿ WTO ಬಂತು.

ಮಾರುಕಟ್ಟೆಯನ್ನು ಮುಕ್ತ ಮಾಡಿ ಎಂದು ಅಮೆರಿಕ ಮತ್ತು ಪಶ್ಚಿಮದ ರಾಷ್ಟ್ರಗಳು ಮೂರನೇ ಜಗತ್ತಿನ ಏಷ್ಯಾದ ರಾಷ್ಟ್ರಗಳಿಗೆ ಮನವೊಲಿಕೆ, ಬೆದರಿಕೆ ಮೂಲಕ ಒತ್ತಡ ಹಾಕತೊಡಗಿದವು. ನೋಡನೋಡುತ್ತಲೇ ವಿಶ್ವದ 160ಕ್ಕೂ ಹೆಚ್ಚು ರಾಷ್ಟ್ರಗಳು ಡಂಕೆಲ್ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದವು. ಇವತ್ತು ನಾನು ಆರ್ಥಿಕ ಕೋಟೆ ಕಟ್ಟಿಕೊಳ್ಳುತ್ತೇನೆ, ನಿಮಗೆ ಏನು ಬೇಕಾದರೂ ಆಗಲಿ, ನಮಗೆ ಸಂಬಂಧವಿಲ್ಲ ಅನ್ನುತ್ತಿರುವ ಅಮೆರಿಕ ಸರಿಯಾಗಿ 30 ವರ್ಷಗಳ ಹಿಂದೆ ಸಾಲ ಬೇಕಾ? ಮಾರುಕಟ್ಟೆ ತೆರೆಯಿರಿ. ಮಿಲಿಟರಿ ನೆರವು ಬೇಕಾ? ಮಾರ್ಕೆಟ್ ಓಪನ್ ಮಾಡಿ ಎಂದು ಭಾಷಣ ಮಾಡಿ ಜಾಗತಿಕರಣವೊಂದೇ ವಿಶ್ವದ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಎಂದು ಬಿಂಬಿಸಿತು. ಆದರೆ ಈಗ ನೋಡಿ ಅದೇ ಅಮೆರಿಕ ಮುಕ್ತ ಮಾರುಕಟ್ಟೆ ಸಾಕು, ತಡೆ ಗೋಡೆ ಬೇಕು ಎಂದು ಪಾಠ ಮಾಡುತ್ತಿದೆ. ಇದರ ಅರ್ಥ ಇಷ್ಟೆ: ಮುಕ್ತ ಆರ್ಥಿಕ ನೀತಿಯ The End ಸನಿಹ ಅನ್ನಿಸುತ್ತಿದೆ. ಏನೇ ಅನ್ನಿ ಈ ಪಶ್ಚಿಮದವರನ್ನು ನಂಬುವುದು ಕಷ್ಟ. ಯಾವಾಗ ಕೈ ಕೊಡುತ್ತಾರೋ ಬಿಡುತ್ತಾರೋ ಹೇಳೋದು ಕಷ್ಟ.

ಪಶ್ಚಿಮದ ಇಬ್ಬಂದಿತನಗಳು: ಪಶ್ಚಿಮದ ರಾಷ್ಟ್ರಗಳ ಇಬ್ಬಂದಿತನ, ತರತಮ ರಾಜಕೀಯ ಅದೇನು ಇವತ್ತಿನದಲ್ಲ. ಒಂದು ಕಡೆ ಭಾರತ ಮತ್ತು ಆಫ್ರಿಕಾದ ಬಹುಪಾಲು ಭಾಗವನ್ನು ವಸಾಹತು ಮಾಡಿಕೊಂಡು ಶತಮಾನಗಳ ಕಾಲ ಇಲ್ಲಿನ ಸಂಪತ್ತು ಲೂಟಿ ಹೊಡೆದು ಶ್ರೀಮಂತರಾದ, ಸೂರ್ಯ ಮುಳುಗದ ಸಾಮ್ರಾಜ್ಯ ಎನಿಸಿಕೊಂಡ ಇಂಗ್ಲೆಂಡ್, ಫ್ರಾನ್ಸ್ ಮುಂತಾದ ರಾಷ್ಟ್ರಗಳೇ ಜರ್ಮನಿಯ ಹಿಟ್ಲರ್ ಮತ್ತು ಇಟಲಿಯ ಮುಸೋಲಿನಿಯ ವಿಸ್ತರಣಾವಾದದ ವಿರುದ್ಧವೇ ಎರಡನೇ ಮಹಾಯುದ್ಧಕ್ಕೆ ಇಳಿದವು. ಇವತ್ತು ಇಡೀ ವಿಶ್ವದಲ್ಲಿ ಯಾರು ಪರಮಾಣು ಬಾಂಬ್ ಹೊಂದಬೇಕು, ಬೇಡ ಎಂದು ಫರ್ಮಾನು ಹೊರಡಿಸುವ ಅಮೆರಿಕ ಅಲ್ಲವೇ ಮೊಟ್ಟಮೊದಲು ಹೀರೋಶಿಮಾ, ನಾಗಸಾಕಿ ಮೇಲೆ ಬಾಂಬ್ ಎಸೆದು ಲಕ್ಷಾಂತರ ಜನರ ವರ್ತಮಾನ ಮತ್ತು ಭವಿಷ್ಯವನ್ನು ಒಂದು ಕ್ಷಣದಲ್ಲಿ ಮುಗಿಸಿ ಹಾಕಿದ್ದು.

ಸೋವಿಯತ್ ಯೂನಿಯನ್, ಚೀನಾ, ಕ್ಯೂಬಾದಂಥ ದೇಶಗಳು ಸಾಮ್ಯವಾದವನ್ನು ಒಪ್ಪಿಕೊಂಡು ಸರ್ವಾಧಿಕಾರಿಗಳನ್ನು ಬೆಳೆಸಿವೆ. ಹೀಗಾಗಿ ತಾನು ಪ್ರಜಾಪ್ರಭುತ್ವದ ಪರ ಎಂದು ಜಾಗತಿಕವಾಗಿ ಹೇಳುತ್ತಿದ್ದ ಅಮೆರಿಕದ ಕೈವಾಡ ಇಲ್ಲದೆ ಪಾಕಿಸ್ತಾನದಲ್ಲಿ ಭುಟ್ಟೋ ಮತ್ತು ಬಾಂಗ್ಲಾದೇಶದಲ್ಲಿ ಶೇಖ್‌ ಮುಜಿಬುರ್ ರೆಹಮಾನ್‌ರನ್ನು ಹತ್ಯೆ ಮಾಡಲಾಯಿತೇ? 70 ಮತ್ತು 80ರ ದಶಕದಲ್ಲಿ ಭಾರತ-ಚೀನಾದಂಥ ದೇಶಗಳಿಗೆ ಓಡಾಡಿ ಮಾರುಕಟ್ಟೆ ಮುಕ್ತ ಮಾಡಿ. ಇಲ್ಲವಾದರೆ ಸಾಲ ಕೊಡೋಲ್ಲ, ಸಹಾಯ ಮಾಡೋಲ್ಲ, ಜೊತೆಗೆ ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದ ಅಮೆರಿಕ ಇವತ್ತು ಮುಕ್ತ ಮಾರುಕಟ್ಟೆಯಿಂದ ನಾವು ದಿವಾಳಿ ಏಳುವ ಸ್ಥಿತಿಯಲ್ಲಿ ಇದ್ದೇವೆ. ಬಾಗಿಲು ಹಾಕದಿದ್ದರೆ, ತೆರಿಗೆ ಏರಿಸದಿದ್ದರೆ ನಾವು ಬದುಕುವುದು ಕಷ್ಟ ಎಂದು ಹೇಳಿಕೊಳ್ಳುತ್ತಿದೆ ಎಂದರೆ ಅರ್ಥ ಏನು? ಮುಕ್ತ ಮಾರುಕಟ್ಟೆಯ ದಿನಗಳ ಅಂತ್ಯವಾ ಅಥವಾ ಮುಕ್ತ ಮಾರುಕಟ್ಟೆಯ ಲಾಭ ತನಗಿಂತ ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾದ ರಾಷ್ಟ್ರಗಳಿಗೆ ಆಗುತ್ತಿದೆ ಎಂಬ ಭಯವಾ? ಬಹುತೇಕ ಎರಡನೇ ಕಾರಣವೇ ಜಾಸ್ತಿ ಇರಬೇಕು ಅನ್ನಿಸುತ್ತಿದೆ.

ಪರಿಣಾಮಗಳು ಏನು?: 8ನೇ ಶತಮಾನದ ಅಂತ್ಯದಲ್ಲಿ ಯುರೋಪಿಯನ್ ರಾಷ್ಟ್ರಗಳ ನಡುವಿನ ಬಾಲ್ಕನ್ ಮತ್ತು ಉತ್ತರ ಆಫ್ರಿಕಾದಲ್ಲಿನ ಸಂಘರ್ಷದ ಹೊರತಾಗಿಯೂ ವಿಶ್ವದ ಆರ್ಥಿಕತೆ ಏರುಗತಿಯಲ್ಲಿತ್ತು. ಆದರೆ ಕೈಗಾರಿಕೆಗಳ ಕಾರಣದಿಂದ ಫ್ರಾನ್ಸ್ ಮತ್ತು ಬ್ರಿಟನ್‌ಗಳ ಜೊತೆಗೆ ಅಮೆರಿಕ ಮತ್ತು ಜರ್ಮನಿಗಳು ಆರ್ಥಿಕ ಮತ್ತು ರಾಜಕೀಯ ಶಕ್ತಿಗಳಾಗಿ ಹೊರ ಹೊಮ್ಮಿದವು. ಆ ಸಂಘರ್ಷವೇ ಮೊದಲನೇ ಮತ್ತು ಎರಡನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತು. ಅದಾದ ಮೇಲೆ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ನಡುವಿನ ಶೀತಲ ಸಮರದ ಪರಿಣಾಮವಾಗಿ ಹಣವು ಅಮೆರಿಕದಿಂದ ಪಶ್ಚಿಮ ಜರ್ಮನಿ ಮತ್ತು ಪೂರ್ವ ಏಷ್ಯಾಗಳಲ್ಲಿ ಹರಿದು, ನೋಡುತ್ತಾ ನೋಡುತ್ತಾ ಎರಡನೇ ಮಹಾಯುದ್ಧದ ಬೂದಿಯಿಂದ ಪಶ್ಚಿಮ ಯುರೋಪ್ ಮತ್ತು ಜಪಾನ್‌ ವಾರ್ಷಿಕ 9 ಪ್ರತಿಶತ ಬೆಳವಣಿಗೆ ದಾಖಲಿಸಿದವು.

ಅದಾದ ಮೇಲೆ ಸೋವಿಯತ್ ಯೂನಿಯನ್ ಕುಸಿದು ಬಿದ್ದ ನಂತರ ವಿಶ್ವದ ಆರ್ಥಿಕತೆ ಪಶ್ಚಿಮದ ಕ್ಲಬ್‌ನಿಂದ ಹೊರಗೆ ಬಿದ್ದು ಏಷ್ಯಾದ ರಾಷ್ಟ್ರಗಳು ಮತ್ತು ಆಫ್ರಿಕಾದ ಅನೇಕ ರಾಷ್ಟ್ರಗಳು ನಿಜವಾದ ಅರ್ಥದಲ್ಲಿ ‘ವಿಶ್ವ ಮಾರುಕಟ್ಟೆ’ ಯನ್ನು ಪ್ರವೇಶಿಸಿದವು. 1990ರ ನಂತರ ಭಾರತ, ಚೀನಾ, ಬ್ರೆಜಿಲ್‌ನಂಥ ಜನಸಂಖ್ಯೆ ಜಾಸ್ತಿ ಇರುವ ದೇಶಗಳಿಂದ ಹಿಡಿದು ಬಾಂಗ್ಲಾದೇಶ, ಫಿಲಿಪ್ಪೀನ್ಸ್‌ನಂಥ ಸಣ್ಣ ರಾಷ್ಟ್ರಗಳು ಕೂಡ 133ರಿಂದ 150 ಪ್ರತಿಶತ ಬೆಳವಣಿಗೆ ದರವನ್ನು ದಾಖಲಿಸಿವೆ. 90ರ ನಂತರ ಪ್ರತಿ ದಶಕದಲ್ಲಿ ಒಂದು ಬಿಲಿಯನ್‌ಗಿಂತ ಜಾಸ್ತಿ ಜನ ‘ಮಾರುಕಟ್ಟೆ’ಯ ಲಾಭಾರ್ಥಿಗಳು ಎನ್ನುವುದು ವಾಸ್ತವ. ಮಾರುಕಟ್ಟೆಯ ಲಾಭ ತನಗಿಂತ ಜಾಸ್ತಿ ಉಳಿದವರಿಗೆ ಹೋಗುತ್ತಿದೆ, ವಾಪಸ್‌ ಅಮೆರಿಕದ ಜನ ಅಮೆರಿಕದ ವಸ್ತುಗಳನ್ನು ಕೊಂಡರೆ ಮಾತ್ರ ನಾವು ಬದುಕಿ ಉಳಿಯಬಲ್ಲೆವು. ಇಲ್ಲವಾದಲ್ಲಿ ಮತ್ತೊಮ್ಮೆ ದೊಡ್ಡ ಆರ್ಥಿಕ ಕುಸಿತ ಆಗುತ್ತದೆ ಎಂಬ ಭಯದಲ್ಲಿ ಅಮೆರಿಕ ಮತ್ತು ಟ್ರಂಪ್ ಇರುವಂತೆ ಕಾಣುತ್ತಿದೆ. ತನ್ನ ದೇಶವನ್ನು ಕಾಪಾಡಿಕೊಳ್ಳುವುದು ತಪ್ಪು ಅಲ್ಲವೇ ಅಲ್ಲ. ಆದರೆ 75 ವರ್ಷ ಮುಕ್ತ ಮಾರುಕಟ್ಟೆ ಎಂದೆಲ್ಲ ಭಾಷಣ ಹೊಡೆದು ಏಕಾಏಕಿ ಕೋಟೆ ಬಾಗಿಲು ಹಾಕುತ್ತೇನೆ ಎಂದು ಹೊರಟರೆ ಆಗುವ ಜಾಗತಿಕ ಪರಿಣಾಮ ಏನು ಎಂಬುದು ಮಾತ್ರ ಪ್ರಶ್ನೆ.

ಜಾಗತಿಕ ಬದಲಾವಣೆ ಏನು?: ವಿಶ್ವದ ರಾಜಕೀಯ ಮತ್ತು ಆರ್ಥಿಕ ಇತಿಹಾಸ ನೋಡಿದಾಗ ಜನಸಂಖ್ಯೆ ಅತ್ಯಂತ ಕಡಿಮೆ ಇರುವ ರಾಷ್ಟ್ರಗಳೇ ಸಂಪದ್ಭರಿತವಾಗಿರುತ್ತಿದ್ದವು. ಅಷ್ಟೇ ಅಲ್ಲ, ಅಲೆಕ್ಸಾಂಡರ್‌ನಿಂದ ಹಿಡಿದು ಆಂಗ್ಲರವರೆಗೆ ಜಗತ್ತನ್ನು ರಾಜಕೀಯವಾಗಿ ಹಿಡಿದುಕೊಂಡಿದ್ದು ಕೂಡ ಸಣ್ಣ ಸಣ್ಣ ರಾಷ್ಟ್ರಗಳು. ಇತಿಹಾಸದ ಪುಟ ತಿರುವಿದಾಗ ದೊಡ್ಡ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರಗಳು ಬಡತನದಿಂದ ಕಂಗಾಲು ಪರಿಸ್ಥಿತಿಯಲ್ಲಿ ಇರುತ್ತಿದ್ದವು. ಹಾಗೆ ನೋಡಿದರೆ ಸ್ವಲ್ಪ ದೊಡ್ಡ ರಾಷ್ಟ್ರವಾಗಿ ‘ದೊಡ್ಡಣ್ಣ’ ಅನ್ನಿಸಿಕೊಂಡದ್ದು ಅಮೆರಿಕವೇ. ಅದು ಕೂಡ 1945ರಲ್ಲಿ 2ನೇ ಮಹಾಯುದ್ಧದ ಅಂತ್ಯದ ನಂತರ.

ಆದರೆ ಮುಕ್ತ ಮಾರುಕಟ್ಟೆಯ ಬಾಗಿಲುಗಳು ತೆರೆದ ನಂತರ ವಿಶ್ವದ ಜನಸಂಖ್ಯೆ ಜಾಸ್ತಿ ಇರುವ ಎರಡು ರಾಷ್ಟ್ರಗಳಾದ ಭಾರತ ಮತ್ತು ಚೀನಾ ಜಾಗತಿಕ ರಾಜಕಾರಣ ಆರ್ಥಿಕತೆ ಮತ್ತು ಸೈನಿಕ ಕ್ಷಮತೆಯ ದೃಷ್ಟಿಯಿಂದ ಭೌಗೋಳಿಕ ರಾಜಕೀಯ (geo politics)ನಲ್ಲಿ ತಮ್ಮ ಪ್ರಸ್ತುತತೆಯನ್ನು ಕಂಡುಕೊಂಡಿವೆ. ದೇಶದ ಜನಸಂಖ್ಯೆ ಜಾಸ್ತಿ ಇದ್ದಷ್ಟೂ ಕೆಲಸ ಮಾಡುವವರ ಸಂಖ್ಯೆ ಹೆಚ್ಚು ಮತ್ತು ಕೊಳ್ಳುವವರ ಸಂಖ್ಯೆ ಹೆಚ್ಚು ಅನ್ನುವ ಮಾರುಕಟ್ಟೆ ಸಿದ್ಧಾಂತವೇ ರಾಜಕೀಯ ಮತ್ತು ಆರ್ಥಿಕತೆಯ ನಿಯಮವನ್ನು ಹಾಗೂ ಪ್ರಭಾವ ಕೇಂದ್ರಗಳನ್ನು ಬದಲಿಸುತ್ತಿವೆ. ಅದೇ ಕಾರಣದಿಂದಲೋ ಏನೋ ಅಮೆರಿಕ 35 ವರ್ಷದ ಹಿಂದೆ ತಾನೇ ಮಾಡಿದ ನಿಯಮಗಳನ್ನು ಮುರಿದು ಹೊಸ ನಿಯಮಗಳನ್ನು ಬರೆಯುತ್ತಿದೆ. ಆದರೆ ಇದು ಅಂದುಕೊಂಡಷ್ಟು ಸುಲಭವಿಲ್ಲ. ಈ ಹೊಸ ಆಟ ವಿಶ್ವದ power shiftಗೂ ಕಾರಣ ಆಗಬಹುದು.

ಭಾರತ ಮುಂದೇನು?: ಭಾರತದ ರಾಜರಿಂದ ಹಿಡಿದು ಇವತ್ತಿನ ರಾಜಕಾರಣಿಗಳವರೆಗೆ ಇರುವ ಸಮಸ್ಯೆ ಎಂದರೆ, ವಿದೇಶದ ನಾಯಕರನ್ನು ಪ್ರಮಾಣಿಸಿ ನೋಡದೆ ನಂಬಿ ಬಿಡುವುದು. ಅದು ಚೌ ಏನ್ ಲಾಯರಿಂದ ಹಿಡಿದು ನಿಕ್ಸನ್‌ವರೆಗೆ ಮತ್ತು ಪುಟಿನ್‌ರಿಂದ ಹಿಡಿದು ಟ್ರಂಪ್‌ವರೆಗೆ ಯಾರು ಕೂಡ ತಮ್ಮ ಸ್ವಾರ್ಥ ತಮ್ಮ ಹಿತಾಸಕ್ತಿ ಇಲ್ಲದೇ ಭಾರತಕ್ಕೆ ಬಂದು ಸಹಾಯ ಮಾಡುವುದಿಲ್ಲ ಅನ್ನುವುದು 75 ವರ್ಷಗಳಿಂದ ನಾವು ಕಲಿಯುತ್ತಲೇ ಬಂದ ಪಾಠ. ಚೌ ಏನ್ ಲಾಯ ಮತ್ತು ಮೌಂಟ್ ಬ್ಯಾಟನ್‌ರನ್ನು ನಂಬಿ ಪಂಡಿತ್‌ ನೆಹರು ಚೀನಾ ಹಾಗೂ ಕಾಶ್ಮೀರ ಎರಡರಲ್ಲೂ ನೀತಿ ತಪ್ಪಿದ್ದು ಸಾರ್ವತ್ರಿಕ ಸತ್ಯ. ಇದೆಲ್ಲ ಗೊತ್ತಿದ್ದೂ ಕೂಡ ನರೇಂದ್ರ ಮೋದಿ 5 ವರ್ಷದ ಹಿಂದೆ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ’ ಎಂದಿದ್ದು ಸರಿಯಾದ ಪ್ರಬುದ್ಧ ವಿದೇಶ ನೀತಿ ಏನು ಆಗಿರಲಿಲ್ಲ.

ಉಕ್ರೇನ್ ಮತ್ತು ಗಾಜಾದಲ್ಲಿನ ಘಟನೆಗಳ ನಂತರ ರಾಜಕೀಯವಾಗಿ ಅಲಿಪ್ತವೇ ಭಾರತಕ್ಕೆ ಸರಿಯಾದ ವಿದೇಶ ನೀತಿ ಎನ್ನುವುದು ಅರ್ಥವಾಗಿದ್ದರೆ ಟ್ರಂಪ್ ತೆರಿಗೆ ಹುಚ್ಚಾಟಗಳು ನಾವು ಯಾವುದೇ ಕಾರಣಕ್ಕೂ ಭವಿಷ್ಯದಲ್ಲಿ ಆರ್ಥಿಕವಾಗಿ ಬರೀ ಅಮೆರಿಕದ ಮೇಲೆ ನಿರ್ಭರವಾಗಿ ನಡೆಯುವುದಿಲ್ಲ ಅನ್ನೋದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಉಕ್ರೇನ್ ಅಧ್ಯಕ್ಷರ ಜೊತೆಗೆ ಶ್ವೇತಭವನದಲ್ಲಿ ನಡೆಸಿದ ಮಾತುಕತೆ, ಭಾರತ- ಪಾಕಿಸ್ತಾನ ಯುದ್ಧ ವಿರಾಮದ ಬಗ್ಗೆ ಟ್ರಂಪ್ ಹೇಳಿಕೆಗಳು ಮತ್ತು ಭಾರತದ ಮೇಲೆ ಹಾಕಿದ ತೆರಿಗೆ ಜೊತೆಗೆ ಪಾಕಿಸ್ತಾನದ ಮೇಲಿನ ಡಿಢೀರ್‌ ಪ್ರೀತಿಯ ಅರ್ಥವೇನು ಅಂದರೆ, ಬೇಕೋ ಬೇಡವೋ ಮುಂದಿನ ಮೂರೂವರೆ ವರ್ಷ ನರೇಂದ್ರ ಮೋದಿ ಮತ್ತು ಭಾರತ ಟ್ರಂಪ್ ಮಹಾಶಯನನ್ನು ಸಹಿಸಿಕೊಳ್ಳೋದು ಅನಿವಾರ್ಯ. ಇದಕ್ಕೆ ಅಮೆರಿಕ ಬೆಲೆ ತೆರುತ್ತದೆಯೋ ಅಥವಾ ನಾವೇ ಕುಸಿತ ಕಾಣುತ್ತವೆಯೋ ಅನ್ನೋದು ಭವಿಷ್ಯದ ಕುತೂಹಲ. ಆದರೆ ಬದುಕು ಇರಲಿ, ಜಗತ್ತು ಇರಲಿ ಪ್ರತಿ ಸಂಕಷ್ಟ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಎನ್ನುವುದು ಟ್ರಂಪ್ ಸಂಕಷ್ಟದ ಬೆಳ್ಳಿ ಗೆರೆ.