ಡುಮ್ಮಿ ಎಂದು ಮಾಜಿ ಪತ್ನಿ ಫೋನ್ ನಂಬರ್ ಸೇವ್ ಮಾಡಿದ ಪತಿಗೆ ದಂಡ ವಿಧಿಸಿದ ಕೋರ್ಟ್, ಪತ್ನಿ, ಮಾಜಿ ಗರ್ಲ್‌ಫ್ರೆಂಡ್, ಆಪ್ತರು, ಶತ್ರುಗಳು, ಹಿತೈಷಿಗಳ ಫೋನ್ ನಂಬರ್ ನೀವು ಹೇಗೆ ಸೇವ್ ಮಾಡಿದ್ದೀರಿ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ಟರ್ಕಿ (ಅ.24) ಮೊಬೈಲ್ ಫೋನ್‌ನಲ್ಲಿ ನಂಬರ್ ಸೇವ್ ಮಾಡುವಾಗ ಚಿತ್ರ ವಿಚಿತ್ರವಾಗಿ ಸೇವ್ ಮಾಡುವುದು ಭಾರತೀಯರ ಅಭ್ಯಾಸ. ಹೆಸರಿನ ಜೊತೆಗೆ ನ್ಯೂ, ಜಿಯೋ, ಏರ್ಟೆಲ್, ಬಿಎಸ್‌ಎನ್ಎಲ್, ಅಡ್ಡ ಹೆಸರು, ನೀವು ಕರೆಯುವ ಹೆಸರು ಸೇರಿದಂತೆ ಸುಲಭವಾಗಿ ಗುರುತುಪತ್ತೆಯಾಗಲು ಹಲವು ಹೆಸರುಗಳನ್ನು ಸೇರಿಸಲಾಗುತ್ತದೆ. ಹಲವರು ನಿಜವಾದ ಹೆಸರು ಬಿಟ್ಟು ಅಡ್ಡ ಹೆಸರನ್ನೇ ಇಟ್ಟಿರುತ್ತಾರೆ. ಇಲ್ಲೊಬ್ಬ, ಮಾಜಿ ಪತ್ನಿ ಮೇಲಿದ್ದ ಆಕ್ರೋಶವನ್ನು ಮೊಬೈಲ್ ನಂಬರ್ ಸೇವ್ ಮಾಡುವಾಗ ತೋರಿಸಿದ್ದಾನೆ. ಪತ್ನಿಯ ಹೆಸರಿನ ಬದಲು ಡುಮ್ಮಿ ಎಂದು ಸೇವ್ ಮಾಡಿದ್ದಾನೆ. ಮಾಜಿ ಪತ್ನಿಯನ್ನು ವ್ಯಂಗ್ಯವಾಡಿದ್ದಾರೆ ಎಂದು ಕೋರ್ಟ್ ಪತಿಗೆ ದಂಡ ವಿಧಿಸಿದ ಘಟನೆ ಟರ್ಕಿಯಲ್ಲ ನಡೆದಿದೆ.
ಏನಿದು ಘಟನೆ?
ಉಸಾಕ್ ವ್ಯಾಪ್ತಿಯ ನಿವಾಸಿಗಳಾದ ಇವರಿಬ್ಬರು ಮದುವೆಯಾಗಿ ಮಕ್ಕಳು ಇವೆ. ಆದರೆ ಕಳೆದ ಹಲವು ತಿಂಗಳಿನಿಂದ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಪ್ರತಿ ದಿನ ಜಗಳವಾಡುತ್ತಿದ್ದ ಇವರು ಡಿವೋರ್ಸ್‌ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಪತಿ ಹಾಗೂ ಪತ್ನಿ ನಡುವಿನ ಆಕ್ರೋಶ ತಣ್ಣಗಾಗಿರಲಿಲ್ಲ. ಪತ್ನಿ ಮೇಲೆ ತೀವ್ರ ಅಸಮಾಧಾನಗೊಂಡಿದ್ದ ಪತಿ ತನ್ನ ಮೊಬೈಲ್‌ನಲ್ಲಿ ಪತ್ನಿ ಹೆಸರಿನ ಬದಲು ಟರ್ಕಿಷ್ ಭಾಷೆಯಲ್ಲಿ ಟೊಂಬಿಕ್ ಎಂದು ಸೇವ್ ಮಾಡಿದ್ದಾನೆ. ಎಂದರೆ ಡುಮ್ಮಿ ಎಂದರ್ಥ. ಇಷ್ಟೇ ಅಲ್ಲ ತನ್ನ ಆಕ್ರೋಶವನ್ನು ಮೆಸೇಜ್ ಮೂಲಕ ತೀರಿಸಿದ್ದಾನೆ. ಇಲ್ಲಿಂದ ತೊಲಗು, ನನಗೆ ನಿನ್ನ ಮುಖ ನೋಡಲು ಇಷ್ಟವಿಲ್ಲ. ನಿನ್ನ ಮುಖ ಪ್ರೇತಗಳೇ ನೋಡಲಿ ಎಂದು ಮಾಜಿ ಪತ್ನಿಗೆ ಮೆಸೇಜ್ ಮಾಡಿದ್ದಾನೆ.
ವ್ಯಂಗ್ಯ, ಮಾನಸಿಕ ಕಿರುಕುಳ ಅರ್ಜಿ ಸಲ್ಲಿಸಿದ ಮಾಜಿ ಪತ್ನಿ
ಕೋರ್ಟ್‌ನಲ್ಲಿ ಡಿವೋರ್ಸ್ ಕೇಸ್ ಕೆಲ ತಿಂಗಳುಗಳಿಂದ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಆಕೆ, ಮಾಜಿ ಗಂಡನ ವಿರುದ್ದ ವ್ಯಂಗ್ಯವಾಡುತ್ತಿರುವುದು ಹಾಗೂ ಮಾನಸಿಕ ಹಿಂಸೆ ಕುರಿತು ದೂರು ನೀಡಿದ್ದಾಳೆ. ಇದಕ್ಕೆ ಪೂರಕವಾಗಿ ಮಸೇಜ್ ಸ್ಕ್ರೀನ್‌ಶಾಟ್, ಫೋನ್ ನಂಬರ್ ಸೇವ್ ಮಾಡಿರುವ ದಾಖಲೆಗಳನ್ನು ನೀಡಿದ್ದಾಳೆ.
ವ್ಯಂಗ್ಯ ಸಹಿಸಲ್ಲ ಎಂದ ಕೋರ್ಟ್
ಈ ಕುರಿತು ಪೊಲೀಸರಿಗೆ ವರದಿ ತರಿಸಿಕೊಂಡ ಕೋರ್ಟ್, ಪತಿಯನ್ನು ಹಿಗ್ಗಾ ಮುಗ್ಗಾ ಜಾಡಿಸಿದೆ. ಹೊಂದಾಣಿಕೆಯಿಂದ ಜೀವನ ಸಾಗದಿದ್ದರೆ, ವಿಚ್ಚೇದನ ಕೊನೆಯ ಆಯ್ಕೆಯಾಗಿದೆ. ಆದರೆ ವಿಚ್ಚೇದನ ನೀಡುತ್ತಿದ್ದಾರೆ ಅನ್ನೋ ಕಾರಣದಿಂದ ಅಥವಾ ದ್ವೇಷದ ಕಾರಣದಿಂದ, ಅಸಮಾಧಾನದ ಕಾರಣದಿಂದ ಮಹಿಳೆಯನ್ನು ವ್ಯಂಗ್ಯವಾಡುವುದು, ಆಕೆಯ ವಿರುದ್ದ ಆಕ್ರೋಶ ಹೊರಹಾಕುವುದು, ದ್ವೇಷ ಸಾಧಿಸುವುದು ಹಿಂಸೆ ಹಾಗೂ ಕಿರುಕುಳದ ಭಾಗವಾಗಿದೆ. ಹೀಗಾಗಿ ಮಹಿಳೆಯ ಬಾಡಿಶೇಮಿಂಗ್ ಮಾಡಿರುವುದು ಮಾತ್ರವಲ್ಲ, ಆಕೆಯ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿ ಬಲಹೀನರನ್ನಾಗಿ ಮಾಡುವ ಮಾನಸಿಕ ಹಿಂಸೆ ಗಂಭೀರವಾಗಿದೆ. ಹೀಗಾಗಿ ದಂಡ ಪಾವತಿಸವುವಂತೆ ಕೋರ್ಟ್ ಆದೇಶ ನೀಡಿದೆ.
ಈ ಪ್ರಕರಣದ ಬೆನ್ನಲ್ಲೇ ಕೋರ್ಟ್ ಇವರ ಡಿವೋರ್ಸ್ ಅರ್ಜಿಯನ್ನು ಅಂತಿಮಗೊಳಿಸಿದೆ. ಮಾಜಿ ಪತ್ನಿಗೆ ಜೀವನಾಂಶ ನೀಡಿ ಪ್ರಕರಣ ಅಂತ್ಯಗೊಳಿಸುವಂತೆ ಕೋರ್ಟ್ ಸೂಚಿಸಿದೆ.
