ಅರುಣಾಚಲ ಪ್ರದೇಶ ತನ್ನ ಭಾಗವೆಂದು ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಅರುಣಾಚಲದ ಗಡಿ ಪ್ರದೇಶದಲ್ಲಿ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳ ತಂಗುದಾಣವನ್ನು ನಿರ್ಮಿಸಿದೆ. ತಂಗುದಾಣದೊಳಗೆ 35ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಇರಿಸುವ ವ್ಯವಸ್ಥೆ

ನವದೆಹಲಿ: ಅರುಣಾಚಲ ಪ್ರದೇಶ ತನ್ನ ಭಾಗವೆಂದು ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಅರುಣಾಚಲದ ಗಡಿ ಪ್ರದೇಶದಲ್ಲಿ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳ ತಂಗುದಾಣವನ್ನು ನಿರ್ಮಿಸಿದೆ. ಭಾರತದ ರಾಡಾರ್‌ ಕಣ್ಗಾವಲು ತಪ್ಪಿಸುವ ರೀತಿಯಲ್ಲಿ ನಿರ್ಮಿಸಿರುವ ತಂಗುದಾಣದೊಳಗೆ 35ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗಿದೆ.

ಮ್ಯಾಕ್‌ಮೋಹನ್‌ ಗಡಿರೇಖೆಯಿಂದ 40 ಕಿ.ಮೀ ದೂರದ ಲೂನ್ಜ್‌ ಪ್ರದೇಶದಲ್ಲಿ ಈ ವ್ಯವಸ್ಥೆ

ಭಾರತ ಮತ್ತು ಚೀನಾ ದೇಶಗಳನ್ನು ಪ್ರತ್ಯೇಕಿಸುವ ಮ್ಯಾಕ್‌ಮೋಹನ್‌ ಗಡಿರೇಖೆಯಿಂದ 40 ಕಿ.ಮೀ ದೂರದ ಲೂನ್ಜ್‌ ಪ್ರದೇಶದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ತನ್ನ ಅತ್ಯಾಧುನಿಕ ಯುದ್ಧ ವಿಮಾನ, ಡ್ರೋನ್‌ಗಳನ್ನು ನಿಯೋಜಿಸಲಿದೆ. ಇದರ ಜೊತೆಗೆ ಇಲ್ಲಿ ಚೀನಾ ಹೊಸ ಆಡಳಿತಾತ್ಮಕ ಕಚೇರಿಯನ್ನೂ ಸ್ಥಾಪನೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಚೀನಾದ ತಂತ್ರಗಾರಿಕೆಯ ಭಾಗ

ಇದು ಅಸ್ಸಾಂ , ಅರುಣಾಚಲ ಪ್ರದೇಶದ ವ್ಯಾಪ್ತಿಯಲ್ಲಿ ತನ್ನದೇ ವಾಯುನೆಲೆಗಳನ್ನು ಸ್ಥಾಪಿಸಿ ಭಾರತದ ವಾಯುಪಡೆಗೆ ಬೆದರಿಕೆಯಾಗುವ ಚೀನಾದ ತಂತ್ರಗಾರಿಕೆಯ ಭಾಗವಾಗಿದೆ. ಇನ್ನು ಈ ಪ್ರದೇಶದ ಭೂಗತ ಸುರಂಗಗಳಲ್ಲಿ ಈಗಾಗಲೇ ಚೀನಾ ಮದ್ದುಗುಂಡುಗಳನ್ನು ಮತ್ತು ಇಂಧನಗಳನ್ನು ಇರಿಸಿದೆ ಎಂದು ನಿವೃತ್ತ ಏರ್ ಚೀಫ್ ಮಾರ್ಷಲ್‌ ಬಿ.ಎಸ್‌. ಧನೋವಾ ಮಾಹಿತಿ ನೀಡಿದ್ದಾರೆ.