ಹಮಾಸ್ ಒತ್ತೆಯಾಳು ಬಿಡುಗಡೆ, ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿ ಜೀವಂತವಾಗಿ ಮರಳಲೇ ಇಲ್ಲ, ಹಮಾಸ್ ಎಲ್ಲಾ 20 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರೆ, ಬಿಪಿನ್ ಬರುವಿಕೆಯಲ್ಲಿದ್ದ ಕುಟುಂಬಕ್ಕೆ ಆಘಾತವಾಗಿದೆ. ಬಿಪಿನ್ ಕಳೇಬರ ಮಾತ್ರ ಬಂದಿದೆ.
ಟೆಲ್ ಅವೀವ್ (ಅ.14) ಇಸ್ರೇಲ್ ಹಾಗೂ ಹಮಾಸ್ ನಡುವೆ ಮಹತ್ವದ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮುಂದಾಳತ್ವದಲ್ಲಿ ಈ ಕದನ ವಿರಾಮ ಒಪ್ಪಂದ ಮಹತ್ವದ ಪಡೆದುಕೊಂಡಿದೆ. ಕದನ ವಿರಾಮ ಮೂಲಕ ಹಮಾಸ್ ಉಗ್ರರ ಬಳಿ ಒತ್ತೆಯಾಳಾಗಿದ್ದ ಇಸ್ರೇಲ್ ನಾಗೀಕರನ್ನು ಬಿಡುಗಡೆ ಮಾಡಲಾಗಿದೆ. ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಲಾಗುತ್ತಿದೆ. ಆದರೆ ಹಮಾಸ್ ಉಗ್ರರ ಕೈಯಲ್ಲಿ ಒತ್ತೆಯಾಳಾಗಿದ್ದ ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿ ಜೀವಂತವಾಗಿ ಮರಳಿ ಬರಲೇ ಇಲ್ಲ. ಒತ್ತೆಯಾಳಾಗಿದ್ದಾಗ ಹಮಾಸ್ ಹರಿಬಿಟ್ಟ ವಿಡಿಯೋದಲ್ಲಿ ಜೀವಂತವಿದ್ದ ಬಿಪಿನ್ ಜೋಶಿ, ಬಿಡುಗಡೆ ವೇಳೆ ಹಮಾಸ್ ಉಗ್ರರಿಂದಲೇ ಹತ್ಯೆಯಾಗಿದ್ದ ಅನ್ನೋ ಕರಾಳ ಸತ್ಯ ಬಯಲಾಗಿದೆ.
ಬಿಪಿನ್ ಜೋಶಿ ಕಳೇಬರ ಇಸ್ರೇಲ್‌ಗೆ ಹಸ್ತಾಂತರ
ಹಮಾಸ್ ಉಗ್ರರು 2023ರಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ವೇಳೆ ಹಲವರನ್ನು ಸೆರೆಯಲ್ಲಿಟ್ಟುಕೊಂಡಿತ್ತು. ಒತ್ತೆಳಾಯಾಗಿಟ್ಟುಕೊಂಡು ಇಸ್ರೇಲ್ ವಿರುದ್ದ ಸಮರ ಸಾರಿತ್ತು. ಇದೀಗ ಕದನ ವಿರಾಮದ ಹಿನ್ನಲೆಯಲ್ಲಿ ಹಮಾಸ್ ಬಳಿ ಇದ್ದ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಆದರೆ ಬಿಪಿನ್ ಜೋಶಿ ಅದಾಗಲೇ ಹಮಾಸ್ ಉಗ್ರರಿಂದ ಹತ್ಯೆಯಾಗಿದ್ದ. ಬಿಪಿನ್ ಜೋಶಿ ಸೇರಿದಂತೆ ನಾಲ್ವರ ಕಳೇಬರವನ್ನು ಹಮಾಸ್, ಇಸ್ರೇಲ್‌ಗೆ ಹಸ್ತಾಂತರಿಸಿದೆ. ರೆಡ್ ಕ್ರಾಸ್ ಸಂಸ್ಥೆ ಮೂಲಕ ಇಸ್ರೇಲ್‌ಗೆ ಕಳೇಬರಹ ಹಸ್ತಾಂತರಿಸಲಾಗಿದೆ.
ಡಿಎನ್ಎ ಪರೀಕ್ಷೆಗೆ ಮುಂದಾದ ಇಸ್ರೇಲ್
ಬಿಪಿನ್ ಜೋಶಿ, ಗಯ್ ಇಲ್ಲೌಜ್, ಯೊಸ್ಸಿ ಶರಾಬಿ ಹಾಗೂ ಡೇನಿಯಲ್ ಪರೇಜ್ ಪಾರ್ಥೀವ ಶರೀರಗಳನ್ನು ಇಸ್ರೇಲ್‌ಗೆ ಹಸ್ತಾಂತರ ಮಾಡಲಾಗಿದೆ. ಇದೀಗ ಇಸ್ರೇಲ್ ಡಿಎನ್ಎ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಯಾರು ಈ ಬಿಪಿನ್ ಜೋಶಿ?
ಬಿಪಿನ್ ಜೋಶಿ ನೇಪಾಳಿ ಹಿಂದೂ ವಿದ್ಯಾರ್ಥಿ. ಹಮಾಸ್ ಉಗ್ರರು 2023ರಲ್ಲಿ ದಾಳಿ ಮಾಡುವ ಒಂದು ವಾರ ಮೊದಲು ವಿದ್ಯಾರ್ಥಿ ಅಧ್ಯಯನ ಯೋಜನೆಯಡಿ ಇಸ್ರೇಲ್‌ಗೆ ತೆರಳಿದ್ದ. ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ತೆರಳಿದ್ದ ಬಿಪಿನ್ ಜೋಶಿ ಹಮಾಸ್ ಉಗ್ರರು ದಾಳಿ ವೇಳೆ ಯೋಧನ ರೀತಿ ಹಲವರನ್ನು ರಕ್ಷಿಸಿದ್ದ. ಗ್ರೇನೆಡ್ ದಾಳಿಯಿಂದ ಹಲವು ವಿದ್ಯಾರ್ಥಿಗಳನ್ನು ರಕ್ಷಿಸಿದ್ದ. ಪ್ರಮುಖವಾಗಿ ತನ್ನ ಜೊತೆಗಿದ್ದ ಇಸ್ರೇಲ್ ವಿದ್ಯಾರ್ಥಿಗಳನ್ನು ರಕ್ಷಿಸಿ ಸುರಕ್ಷಿತ ಕಡೆಗೆ ಸ್ಥಳಾಂತರಿಸಿದ್ದ. ಮತ್ತೊಂದು ಗುಂಪಿನ ವಿದ್ಯಾರ್ಥಿಗಳನ್ನು ರಕ್ಷಿಸಲು ತೆರಳಿದಾಗ ಹಮಾಸ್‌ಗೆ ಸೆರೆಯಾಗಿದ್ದ.
ವಿಡಿಯೋ ರಿಲೀಸ್ ಮಾಡಿದ್ದ ಹಮಾಸ್ ಉಗ್ರರು
ಒತ್ತೆಯಾಳಾಗಿದ್ದ ಇಸ್ರೇಲ್ ಸೇರಿದಂತೆ ಇತರರನ್ನು ಹಮಾಸ್ ಉಗ್ರರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಈ ವೇಳೆ ಬಿಪಿನ್ ಜೋಶಿ ವಿಡಿಯೋ ಕೂಡ ಪೋಸ್ಟ್ ಮಾಡಲಾಗಿತ್ತು. ಹಮಾಸ್ ಒತ್ತೆಯಾಳಾಗಿರುವುದನ್ನು ನೋಡಿದ ನೇಪಾಳದ ಬಿಪಿನ್ ಕುಟುಂಬ ಸಮಾಧಾನಪಟ್ಟಿತ್ತು. ಬಿಪಿನ್ ಜೋಶಿ ಬಿಡುಗಡೆ ಮಾಡುವಂತೆ ಕುಟುಂಬಸ್ಥರು ಭಾರಿ ಮನವಿ ಮಾಡಿದ್ದರು. ಇಸ್ರೇಲ್ ಸರ್ಕಾರವನ್ನು ಕೇಳಿಕೊಂಡಿತ್ತು. ಗಾಜಾ ಕದನ ವಿರಾಮ, ಒಪ್ಪಂದದ ಬೆನ್ನಲ್ಲೇ ಕುಟುಂಬಸ್ಥರು ಇಸ್ರೇಲ್ ರಾಯಭಾರಿ ಜೊತೆ ಮಾತುಕತೆ ನಡೆಸಿತ್ತು. ಮಗ ಜೀವಂತವಾಗಿ ಮರಳಿ ಬರುತ್ತಿದ್ದಾನೆ ಎಂದು ಸಂಭ್ರಮಿಸಿತ್ತು. ಆದರೆ ಬಿಡುಗಡೆ ಮಾಡಿದ ಒತ್ತೆಯಾಳುಗಳ ಪೈಕಿ ಬಿಪಿನ್ ಜೋಶಿ ಇರಲಿಲ್ಲ. ಕೆಲ ತಿಂಗಳ ಹಿಂದಯೇ ಹಮಾಸ್ ಬಿಪಿನ್ ಜೋಶಿ ಹತ್ಯೆ ಮಾಡಿತ್ತು.
ಅಕ್ಟೋಬರ್ ತಿಂಗಳಲ್ಲಿ ಬಿಪಿನ್ ಜೋಶಿಯನ್ನು ಹಮಾಸ್ ಉಗ್ರರು ಸೆರೆ ಹಿಡಿದಿದ್ದರು. ನವೆಂಬರ್ ತಿಂಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು. ಬಳಿಕ ಯಾವುದೇ ಸುಳಿವು ಇರಲಿಲ್ಲ. ಕುಟುಂಬಸ್ಥರು ಹಮಾಸ್ ಕೈಯಲ್ಲಿ ಒತ್ತೆಯಾಳಾಗಿದ್ದಾನೆ ಎಂದು ಸಮಾಧಾನಪಟ್ಟಿತ್ತು. ಆದರೆ ಕೆಲವೇ ತಿಂಗಳಲ್ಲಿ ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿಯನ್ನು ಹತ್ಯೆ ಮಾಡಲಾಗಿತ್ತು.
