ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವುದಾಗಿ ನಂಬಿಸಿ 6 ಲಕ್ಷ ರೂಪಾಯಿ ಕಳುಹಿಸಿದ ನಂತರ ಆನ್‌ಲೈನ್ ಗೆಳೆಯ 80 ವರ್ಷದ ವೃದ್ಧೆಯೊಬ್ಬರು ಮೋಸ ಮಾಡಿದ ಘಟನೆ ನಡೆದಿದೆ.

ಟೋಕಿಯೋ: ಡಿಜಿಟಲ್ ಅರೆಸ್ಟ್‌ನಿಂದ ಹಿಡಿದು ಬ್ಯಾಂಕ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಭಾಗಿಯಾಗಿರುವ ವಂಚನೆಗಳವರೆಗೆ ವಿವಿಧ ಸೈಬರ್ ಹಗರಣಗಳ ಬಗ್ಗೆ ನಾವು ಕೇಳಿದ್ದೇವೆ. 'ಪ್ರೇಮ ಬಲೆಗೆ' ಸಿಲುಕಿ ಜನರು ಮೋಸ ಹೋದ ಅನೇಕ ಪ್ರಕರಣಗಳ ಬಗ್ಗೆ ನೀವು ಕೇಳಿರಬೇಕು. ಆದರೆ ಈ ಘಟನೆಯ ಬಗ್ಗೆ ನೀವು ಎಂದಿಗೂ ಕೇಳಿರಲಿಕ್ಕಿಲ್ಲ. ಇದು 'ಬಾಹ್ಯಾಕಾಶ ಪ್ರೇಮಿ'ಯಿಂದ ಲಕ್ಷಾಂತರ ರೂಪಾಯಿ ವಂಚಿತಳಾದ ವೃದ್ಧ ಮಹಿಳೆಯ ಪ್ರಕರಣ.

80 ವರ್ಷದ ಮಹಿಳೆ ಜುಲೈನಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ತನ್ನ ಗೆಳೆಯನನ್ನು ಭೇಟಿಯಾದಳು. ವಂಚಕನು ತನ್ನ ಹೆಸರು ಇಲ್ಯಾ ಮತ್ತು ತಾನು ರಷ್ಯಾದ ಗಗನಯಾತ್ರಿ ಎಂದು ವೃದ್ಧ ಮಹಿಳೆಗೆ ಪರಿಚಯಿಸಿಕೊಂಡನು. ಅವನು ಪ್ರಸ್ತುತ ಬಾಹ್ಯಾಕಾಶ ನೌಕೆಯಲ್ಲಿದ್ದೇನೆ ಎಂದು ಹೇಳಿದ್ದಾನೆ. ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆ ಕ್ರಮೇಣ ಅವನಿಗೆ ಹತ್ತಿರವಾದಳು. ಕೆಲವು ಸಂಭಾಷಣೆಗಳ ನಂತರ, ತನ್ನ ಬಾಹ್ಯಾಕಾಶ ನೌಕೆಯ ಮೇಲೆ ದಾಳಿ ಮಾಡಲಾಗಿದೆ ಮತ್ತು ಆಮ್ಲಜನಕವನ್ನು ಖರೀದಿಸಲು ತನಗೆ ಹಣ ಬೇಕು ಎಂದು ಮಹಿಳೆಯನ್ನ ನಂಬಿಸಿದ್ದಾನೆ. ಇಂಧನ ಮತ್ತು ಲ್ಯಾಂಡಿಂಗ್ ಶುಲ್ಕಕ್ಕಾಗಿ ಹಣವನ್ನು ಕಳುಹಿಸಲು ಅವನು ಮಹಿಳೆಯನ್ನು ಕೇಳಿಕೊಂಡಿದ್ದಾನೆ. ಅಲ್ಲದೇ ಭೂಮಿಗೆ ಹಿಂತಿರುಗಿದಾಗ ಹಣವನ್ನು ಹಿಂದಿರುಗಿಸುವುದಾಗಿಯೂ ಹೇಳಿದ್ದಾನೆ. ಇದನ್ನ ನಂಬಿದ ವೃದ್ಧ ಮಹಿಳೆ ಹಣ ಕಳಿಸಿದ್ದಾಳೆ. ಬಳಿಕ ಎಲ್ಲಾ ಮಾತುಕತೆ ಸ್ಟಾಪ್ ಮಾಡಿದ್ದಾನೆ. ಹಣ ಕಳ್ಕೊಂಡ ಬಳಿಕ ತಾನು ಮೋಸ ಹೋಗಿರುವುದಾಗಿ ತಿಳಿದು ವೃದ್ಧ ಮಹಿಳೆ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಘಟನೆಯ ನಂತರ, ಆನ್‌ಲೈನ್‌ನಲ್ಲಿ ಭೇಟಿಯಾಗುವ ಯಾರಾದರೂ ಹಣ ಕೇಳಿದರೆ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಜಪಾನಿನ ರಾಷ್ಟ್ರೀಯ ಪೊಲೀಸ್ ಸಂಸ್ಥೆಯ ಪ್ರಕಾರ, 2024 ರ ಮೊದಲ 11 ತಿಂಗಳಲ್ಲಿ 3,326 ಪ್ರೇಮ ವಂಚನೆಗಳು ವರದಿಯಾಗಿವೆ. ಇದು ಹಿಂದಿನ ವರ್ಷಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ. ವಂಚನೆಗಳ ಈ ಹೆಚ್ಚಳವು ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆಗಳನ್ನು ನೀಡುವಂತೆ ಪ್ರೇರೇಪಿಸಿದೆ. ಆನ್‌ಲೈನ್‌ನಲ್ಲಿ ಭೇಟಿಯಾಗುವ ಜನರು ಇದ್ದಕ್ಕಿದ್ದಂತೆ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡು ನಂತರ ಹಣ ಕೇಳುವ ಬಗ್ಗೆ ಎಚ್ಚರದಿಂದಿರಬೇಕು ಎಂದು ಅಧಿಕಾರಿಗಳು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಯಾರಾದರೂ ಆನ್‌ಲೈನ್‌ನಲ್ಲಿ ಹಣ ಕೇಳಿದರೆ ನೀವು ಏನು ಮಾಡಬೇಕು?

ಆನ್‌ಲೈನ್‌ನಲ್ಲಿ ಅಥವಾ ಫೋನ್ ಮೂಲಕ ಯಾರಿಗೂ ಹಣ ಕಳುಹಿಸಬೇಡಿ ಅಥವಾ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಜನರನ್ನು ವಂಚಿಸಲು ವಂಚಕರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದರಿಂದ ಯಾವಾಗಲೂ ಜಾಗರೂಕರಾಗಿರಿ.