ಬೆಂಗಳೂರಿನ ಪ್ರಸಿದ್ಧ ಬಡಾವಣೆ ಮಲ್ಲೇಶ್ವರದ ಬಗ್ಗೆ ಹಾಸ್ಯನಟಿ ಸೌಮ್ಯಾ ವೇಣುಗೋಪಾಲ್ ಅವರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಮಲ್ಲೇಶ್ವರದ ಜನರ ಶಿಕ್ಷಣ, ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ತಮಾಷೆಯಾಗಿ ವಿವರಿಸಲಾಗಿದೆ.  

ಬೆಂಗಳೂರು ಎಂದರೆ ಅದೊಂದು ಸಮುದ್ರ. ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿರುವ ಬಹುತೇಕ ಮನೆಗಳ ಮಕ್ಕಳ ಪೈಕಿ ಒಬ್ಬರಾದರೂ ಬೆಂಗಳೂರಿನಲ್ಲಿ ಇದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ನಗರ ಬೆಳೆಯುತ್ತಿದೆ. ಅದರಲ್ಲಿಯೂ ಕೆಲವೊಂದು ಪ್ರದೇಶಗಳಂತೂ ಸಿಕ್ಕಾಪಟ್ಟೆ ಫೇಮಸ್​. ಅಪ್ಪ-ಅಮ್ಮ ಇಬ್ಬರನ್ನು ಬಿಟ್ಟರೆ ಇಲ್ಲಿ ಎಲ್ಲವೂ ಸಿಗುತ್ತದೆ ಎನ್ನುವ ಪ್ರದೇಶಗಳೂ ಅನೇಕ ಬೆಂಗಳೂರಿನಲ್ಲಿ ಇವೆ. ಅವುಗಳಲ್ಲಿ ಒಂದು ಮಲ್ಲೇಶ್ವರ. ವಾಣಿಜ್ಯ, ಶೈಕ್ಷಣಿಕ ಮತ್ತು ವಸತಿ ಕೇಂದ್ರವಾಗಿರೋ ಮಲ್ಲೇಶ್ವರ, 17 ನೇ ಶತಮಾನದಲ್ಲಿ ನಿರ್ಮಿಸಲಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದೆನಿಸಿರುವ ಕಾಡು ಮಲ್ಲೇಶ್ವರ ದೇವಸ್ಥಾನದಿಂದಾಗಿ ಈ ಹೆಸರು ಬಂದಿದೆ. ಬೆಂಗಳೂರಿನ ಯಾವುದೇ ಭಾಗಗಳಲ್ಲಿ ಇರುವ ದೇವಸ್ಥಾನಗಳಿಗಿಂತಲೂ ಅಧಿಕ ಪ್ರಮಾಣದ ಎಲ್ಲಾ ದೇವರ ದೇಗುಲಗಳೂ ಮಲ್ಲೇಶ್ವರದಲ್ಲಿ ಇವೆ.

ಮಲ್ಲೇಶ್ವರಕ್ಕಿದೆ ವಿಶೇಷತೆ

ಬೆಂಗಳೂರಿನ ಬೇರೆ ಬೇರೆ ಮೂಲೆಗಳಿಂದ ಜನರು ಹೆಚ್ಚಾಗಿ ಷಾಪಿಂಗ್​ಗಾಗಿ ಮಲ್ಲೇಶ್ವರಕ್ಕೆ ಬರುವುದು ಇದೆ. ಈ ಪ್ರದೇಶ ದೇವಸ್ಥಾನಗಳಿಗೂ ಅಷ್ಟೇ ಫೇಮಸ್​, ಜೊತೆಗೆ ಟೇಸ್ಟಿ ಟೇಸ್ಟಿ ಆಹಾರಗಳಿಗೂ ಫೇಮಸ್​. ಇದೀಗ ಮಲ್ಲೇಶ್ವರದ ಬಗ್ಗೆ ಕಾಮಿಡಿಯ ಮೂಲಕವೇ ಫೇಮಸ್​ ಆಗಿರೋ ಸೌಮ್ಯಾ ವೇಣುಗೋಪಾಲ್​ (Soumya Venugopal) ಅವರು ಮಾಡಿರುವ ವಿಡಿಯೋ ಒಂದು ಸಕತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಮಲ್ಲೇಶ್ವರದ ಆಸುಪಾಸಿನವರೆಲ್ಲವೂ ನಿಜಕ್ಕೂ ಇದು ಸರಿಯಾಗಿದೆ ಎನ್ನುತ್ತಿದ್ದಾರೆ.

ದೋಸೆನೂ ಪಿಎಚ್​ಡಿ ಹೋಲ್ಡರ್​

ಮಲ್ಲೇಶ್ವರದಲ್ಲಿ ಇರುವ ಹೆಚ್ಚಿನ ಜನರು ಹೆಚ್ಚು ಶಿಕ್ಷಣ ಪಡೆದಿರುವುದಾಗಿ ನಂಬಲಾಗಿದೆ. ಇದೇ ಕಾರಣಕ್ಕೆ ಸೌಮ್ಯಾ ಅವರು ನಮ್ಮ ಅಜ್ಜ, ಅಜ್ಜಿ, ಅವರ ಅಜ್ಜ, ಅಜ್ಜಿ ಎಲ್ಲರೂ ಪಿಎಚ್​ಡಿ ಹೋಲ್ಡರ್ಸ್​ ಎಂದಿರೋದು ಮಾತ್ರವಲ್ಲದೇ, ನಮ್ಮ ಮನೆಯ ದೋಸೆ ಕೂಡ ಪಿಎಚ್​ಡಿ ಎಂದಿದ್ದಾರೆ. ಪಿಎಚ್​ಡಿ ಎಂದರೆ ಪುಡಿ ಹಾಟ್ ದೋಸೆ ಎಂದು ವಿಶ್ಲೇಷಿಸಿದ್ದಾರೆ. ಬೆಂಗಳೂರಿನ ಬೇರೆ ಏರಿಯಾಕ್ಕೆ ಮಲ್ಲೇಶ್ವರವನ್ನು ಹೋಲಿಕೆ ಮಾಡಿರುವ ಅವರು, ನಮ್ಮ ಅಜ್ಜಿ ಮದುವೆ ಟೈಂನಲ್ಲಿ ಗಾಂಧಿ ಬಜಾರ್​ನಿಂದ ಹೂವು ಬಂದಿತ್ತು. ಅದರೆ ಮದುವೆನೇ ಬೇಡ ಎಂದಿದ್ದಕ್ಕೆ ಕೊನೆಗೆ ಮಲ್ಲೇಶ್ವರದಿಂದ ಹೂವನ್ನು ತರಿಸಲಾಯಿತು ಎಂದಿದ್ದಾರೆ.

ಮಕ್ಕಳು ಅಳೋದೇ ಇಲ್ಲ

ಇಲ್ಲಿರೋ ಹವಾ ಹೇಗಿದೆ ಅಂದ್ರೆ ಇಲ್ಲಿ ಇರೋರಿಗೆ ವಯಸ್ಸೇ ಆಗಲ್ಲ, ಹುಟ್ಟಿದ ತಕ್ಷಣ ದೇವಾಲಯದ ಟ್ರಸ್ಟಿ ಆಗುತ್ತೇವೆ ಎನ್ನುವ ಮೂಲಕ, ಮಲ್ಲೇಶ್ವರದ ಪ್ರತಿಯೊಂದು ಗಲ್ಲಿಗಳಲ್ಲಿ ದೇವಸ್ಥಾನ ಇರುವ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ. ಇದಕ್ಕೆ ತಕ್ಕಂತೆ ಮಕ್ಕಳು ಹುಟ್ಟಿದ ತಕ್ಷಣ ಅಳೋದೇ ಇಲ್ಲ, ನೇರವಾಗಿ ಶುಕ್ಲಾಂ ಭರದರಂ ಎಂದೇ ಹೇಳುತ್ತಾರೆ ಎಂದು ವಿವರಿಸಿದ್ದಾರೆ. ಇಲ್ಲಿರೋ ಫೇಮಸ್​ ಸಿಟಿಆರ್​ ಹೋಟೆಲ್​, ಬನ್​ವರ್ಲ್ಡ್​ ಬಗ್ಗೆಯೂ ತಮ್ಮದೇ ಆದ ತಮಾಷೆಯ ರೀತಿಯಲ್ಲಿ ವಿವರಣೆ ನೀಡಿದ್ದಾರೆ. ಇಲ್ಲಿ ಡೇಟ್​ ಹೋಗೋಕೆ ಕೂಡ ಜಾಗ ಇದೆ. ಸ್ಯಾಂಕಿ ಟ್ಯಾಂಕೂ ಇದೆ ಎಂದಿರೋ ಸೌಮ್ಯಾ ಅವರು, ಇಲ್ಲಿರೋ ನುಚ್ಚಿನುಂಡೆಯ ಬಗ್ಗೆಯೂ ವಿವರಣೆ ನೀಡಿದ್ದಾರೆ.

ಇದು ಶಬ್ದಗಳಲ್ಲಿ ಹೇಳುವುದಕ್ಕಿಂತ ಅವರ ಬಾಯಲ್ಲಿಯೇ ಕೇಳಿ. ವಿಡಿಯೋ ಇಲ್ಲಿದೆ ನೋಡಿ...

View post on Instagram