Wasting food Fines : ಹೊಟೇಲ್‌ ಗೆ ಹೋಗಿ ನೀವು ಆಹಾರ ಹಾಳು ಮಾಡ್ತೀರಾ? ಪ್ಲೇಟ್‌ ನಲ್ಲಿ ಫುಡ್‌ ಬಿಟ್ಟು ಬರುವವರು ನೀವಾಗಿದ್ರೆ ಇನ್ಮುಂದೆ ಸ್ವಲ್ಪ ಎಚ್ಚರಿಕೆವಹಿಸಿ. ಬಿಡೋ ಬದ್ಲು ಕಡಿಮೆ ಆರ್ಡರ್‌ ಮಾಡೋದನ್ನು ಕಲಿತುಕೊಳ್ಳಿ. 

ಹೊಟೇಲ್ (Hotel) ಗೆ ಹೋಗ್ತಿದ್ದಂತೆ ಹಸಿವು ಹೆಚ್ಚಾಗುತ್ತೆ. ಮೆನು ನೋಡ್ತಿದ್ದಂತೆ ಬಾಯಿಚಪಲ ಸೇರಿಕೊಳ್ಳುತ್ತೆ. ಎಷ್ಟು ತಿಂತೆವೆ ಅನ್ನೋದನ್ನು ಆಲೋಚನೆ ಮಾಡ್ದೆ ಒಂದಾದ್ಮೇಲೆ ಒಂದರಂತೆ ಆಹಾರ ಆರ್ಡರ್ ಮಾಡ್ತೇವೆ. ಫುಡ್, ಟೇಬಲ್ ಗೆ ಬರೋವರೆಗೂ ಇದ್ದ ಹಸಿವು, ಫುಡ್ ನೋಡ್ತಿದ್ದಂತೆ ಕಡಿಮೆ ಆಗುತ್ತೆ. ಅನೇಕರಿಗೆ ಸ್ಟಾರ್ಟರ್ ನಲ್ಲಿಯೇ ಹೊಟ್ಟೆ ತುಂಬಿರುತ್ತೆ. ಇನ್ನು ಮೇನ್ ಕೋರ್ಸ್ ಹಾಗೆ ಪ್ಲೇಟ್ ನಲ್ಲಿ ಉಳಿಯುತ್ತೆ. ಮತ್ತೆ ಕೆಲವರು ಅಂತೂ ಇಂತೂ ಒಂದಿಷ್ಟು ತಿಂದು ಮುಗಿಸ್ತಾರೆ. ಉಳಿದಿದ್ದನ್ನು ಹಾಗೇ ಪ್ಲೇಟ್ ನಲ್ಲಿ ಬಿಟ್ಟು ಹೊರಗೆ ಬರ್ತಾರೆ. ಆಹಾರ ಚೆನ್ನಾಗಿರಲಿಲ್ಲ, ರುಚಿಯಾಗಿರಲಿಲ್ಲ ಅಂತ ಪ್ಲೇಟ್ ಖಾಲಿ ಮಾಡದ ಜನರಿದ್ದಾರೆ. ಆರ್ಡರ್ ಮಾಡಿದ ಫುಡ್ ಗೆ ಸಂಪೂರ್ಣ ಬೆಲೆ ತೆತ್ತಾಗಿದೆ, ಇನ್ನೇನು ಎನ್ನುವ ಅಸಡ್ಡೆ ಕೆಲವರಿಗಿದ್ರೆ ಮತ್ತೆ ಕೆಲವರು, ಇನ್ಮುಂದೆ ಇಷ್ಟೊಂದು ಫುಡ್ ಆರ್ಡರ್ ಮಾಡಿ ಹಾಳು ಮಾಡ್ಬಾರದು ಅಂತ ಪಶ್ಚಾತಾಪದಲ್ಲೇ ಹೊರಗೆ ಬರ್ತಾರೆ. ನೀವೂ ಹೊಟೇಲ್ ಗೆ ಹೋಗಿ ಆಹಾರ ತಿನ್ನದೇ ಪ್ಲೇಟ್ ನಲ್ಲಿ ಬಿಟ್ಟು ಬರೋರಾಗಿದ್ರೆ ನಿಮಗೂ ಇನ್ಮುಂದೆ ದಂಡ ಬೀಳ್ಬಹುದು.

ಪುಣೆಯ ಸೌತ್ ಇಂಡಿಯಾ ರೆಸ್ಟೋರೆಂಟ್ (South India Restaurant) ಒಂದು ಇಂಥ ನಿಯಮ ಜಾರಿಗೆ ತಂದಿದೆ. ನೀವು ಪ್ಲೇಟ್ ನಲ್ಲಿ ಆಹಾರ ಬಿಟ್ರೆ ದಂಡ ತೆರಬೇಕು. ಪ್ರತಿ ಪ್ಲೇಟ್‌ ಗೆ 20 ರೂಪಾಯಿ ದಂಡ ವಿಧಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇದ್ರ ಫೋಟೋ ವೈರಲ್ ಆಗಿದ್ದು, ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. (@rons1212 ಹೆಸರಿನ ಎಕ್ಸ್ ಬಳಕೆದಾರ, ತಮ್ಮ ಖಾತೆಯಲ್ಲಿ ರೆಸ್ಟೋರೆಂಟ್ ಹ್ಯಾಂಡ್ ರೈಟಿಂಗ್ ಮೆನುವಿನ ಫೋಟೋ ಹಂಚಿಕೊಂಡಿದ್ದಾರೆ. ಮೆನು ಕೆಳಗೆ ಆಹಾರ ವ್ಯರ್ಥ ಮಾಡಿದ್ರೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುವುದು ಅಂತ ಬರೆಯಲಾಗಿದೆ. ಪುಣೆಯ ಹೋಟೆಲ್ ಆಹಾರ ವ್ಯರ್ಥ ಮಾಡಿದ್ದಕ್ಕಾಗಿ 20 ರೂಪಾಯಿ ಹೆಚ್ಚುವರಿ ದಂಡ ವಿಧಿಸುತ್ತಿದೆ. ಪ್ರತಿ ರೆಸ್ಟೋರೆಂಟ್ ಕೂಡ ಅದೇ ರೀತಿ ಮಾಡಬೇಕು, ಮದುವೆ ಮತ್ತು ಸಮಾರಂಭಗಳಲ್ಲಿ ದಂಡ (fine) ವಿಧಿಸಲು ಪ್ರಾರಂಭಿಸಿ ಅಂತ ಶೀರ್ಷಿಕೆ ಹಾಕಿದ್ದಾರೆ.

ಎಕ್ಸ್ ನಲ್ಲಿರುವ ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ರೆಸ್ಟೋರೆಂಟ್ ಈ ಕ್ರಮವನ್ನು ಶ್ಲಾಘಿಸಿದ್ದಾರೆ. ಮತ್ತೆ ಕೆಲವರು ತಮಗೆ ಇಷ್ಟವಿಲ್ಲದ ಆಹಾರವನ್ನು ಹೇಗೆ ತಿನ್ನೋದು ಅಂತ ಪ್ರಶ್ನೆ ಮಾಡಿದ್ದಾರೆ. ಒಳ್ಳೆ ಕೆಲ್ಸ, ಆಹಾರ ವ್ಯರ್ಥಕ್ಕೆ ದಂಡ ಇರಬೇಕು ಎಂದು ಎಕ್ಸ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಆಹಾರ ಎಷ್ಟು ಹಾಳು ಮಾಡಿದ್ದಾರೆ ಎಂಬ ಆಧಾರದ ಮೇಲೆ ದಂಡವನ್ನು ಪ್ರತ್ಯೇಕಿಸಿದ ಮೊದಲ ರೆಸ್ಟೋರೆಂಟ್ ದುರ್ವಾಂಕೂರ್. ಪ್ಲೇಟ್ಗಳು ಸ್ವಚ್ಛವಾಗಿದ್ದರೆ 20 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಇತರರು ಈ ರೂಲ್ಸ್ ಅಳವಡಿಸಿಕೊಂಡಿದ್ದನ್ನ ನೋಡಲು ಸಂತೋಷವಾಯಿತು ಎಂದು ಮತ್ತೊಬ್ಬರು ಬರೆದಿದ್ದಾರೆ.

ಆಹಾರ ಹೇಗಿದೆ ಅನ್ನೋದು ನನಗೆ ಮೊದಲೇ ತಿಳಿದಿರೋದಿಲ್ಲ. ಆರ್ಡರ್ ಮಾಡಿದ್ಮೇಲೆ ಆಹಾರ ರುಚಿಸಿಲ್ಲ ಅಂದ್ರೆ ಏನು ಮಾಡೋದು, ನನಗೆ ಇಷ್ಟವಿಲ್ಲದ ಆಹಾರ ನೀಡಿದ್ದಕ್ಕೆ ನಾನು 20 ರೂಪಾಯಿ ಹೆಚ್ಚುವರಿ ಕೊಡ್ಬೇಕಾ, ನಾನು ಆಹಾರ ಹಾಳು ಮಾಡೋದನ್ನು ಸಪೋರ್ಟ್ ಮಾಡ್ತಿಲ್ಲ, ಅಸಂಬದ್ಧ ನೀತಿ ವಿರೋಧಿಸುತ್ತಿದ್ದೇನೆ ಎಂದು ಒಬ್ಬರು ರೆಸ್ಟೋರೆಂಟ್ ಕ್ರಮವನ್ನು ಖಂಡಿಸಿದ್ದಾರೆ. ಆಹಾರ ವ್ಯರ್ಥ ಮಾಡಿದ್ದಕ್ಕೆ ದಂಡ ವಿಧಿಸ್ಬೇಕಾ, ಬೇಡ್ವಾ? ನೀವೇನಂತಿರಿ?